ಭಾನುವಾರ, ಮಾರ್ಚ್ 7, 2021
22 °C

ಅವ್ಯವಸ್ಥೆಯ ಆಗರ ಈ ಆಟದ ಮೈದಾನ

ಪ್ರಜಾವಾಣಿ ವಾರ್ತೆ ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಅವ್ಯವಸ್ಥೆಯ ಆಗರ ಈ ಆಟದ ಮೈದಾನ

ಬಳ್ಳಾರಿ: ನಗರದ ಹೃದಯ ಭಾಗದಲ್ಲಿರುವ ಮುನಿಸಿಪಲ್ ಕಾಲೇಜಿನ ಹಿಂಭಾಗದಲ್ಲಿರುವ ಆಟದ ಮೈದಾನವು, ಕೇವಲ ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ನಗರದ ಅನೇಕ ಬಡಾವಣೆಗಳ ಯುವಕರಿಗೆ ಆಟವಾಡಲು ಇರುವ ಏಕೈಕ ಮೈದಾನವಾಗಿದೆ. ಆದರೆ, ಇರುವ ಒಂದು ಆಟದ ಮೈದಾನದಲ್ಲಿ ಕ್ರೀಡಾಪಟುಗಳಿಗೆ ಆಟವಾಡಲೂ ಭಯದ ವಾತಾವರಣ ಇದೆ.ಮದ್ಯವ್ಯಸನಿಗಳ ತಾಣವಾಗಿರುವ ಈ ಆಟದ ಮೈದಾನದಲ್ಲಿ ರಾತ್ರಿ ನಡೆಯುವ ಅನೈತಿಕ ಚಟುವಟಿಕೆಗಳೇ ಇದಕ್ಕೆ ಕಾರಣ. ಮದ್ಯ ಕುಡಿದು ಖಾಲಿ ಬಾಟಲುಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗುವ ಕುಡುಕರಿಂದಾಗಿ ಕಾಲಲ್ಲಿ ಚಪ್ಪಲಿ ಅಥವಾ ಶೂಗಳಿಲ್ಲದೆ ಆಟವಾಡದಂತಹ ಸ್ಥಿತಿ ಇಲ್ಲಿದೆ.ನಿತ್ಯ ಬೆಳಿಗ್ಗೆ ಈ ಆಟದ ಮೈದಾನಕ್ಕೆ ಕ್ರಿಕೆಟ್ ಮತ್ತಿತರ ಆಟವಾಡಲು ಆಗಮಿಸಿ ಬರಿಗಾಲಲ್ಲಿ ಆಟವಾಡುವ ನೂರಾರು ಜನ ಯುವಕರಿಗೆ ರಾಶಿ ರಾಶಿಯಾಗಿ ಬಿದ್ದಿರುವ ಗಾಜಿನ ಚೂರುಗಳು ಗಾಯಗೊಳ್ಳುವಂತೆ ಮಾಡುತ್ತಿವೆ.ಬೆಳಗಿನ ಜಾವ ಎಳೆ ಬಿಸಿಲಲ್ಲಿ ವ್ಯಾಯಾಮ ಮಾಡಲು ಆಗಮಿಸುವ ಜನತೆ ಅತ್ಯಂತ ಎಚ್ಚರಿಕೆಯಿಂದಲೇ ಹೆಜ್ಜೆ ಇರಿಸುವಂತಹ ದುಃಸ್ಥಿತಿ ಇದೆ. ಚಿಕ್ಕ ಮಕ್ಕಳಿಂದ ಹಿಡಿದು, ಯುವಕರು ಹಾಗೂ ವೃದ್ಧರು ಬೆಳಿಗ್ಗೆ ಮತ್ತು ಸಂಜೆ ಜಾಗಿಂಗ್ ಮಾಡಲು ಈ ಮೈದಾನಕ್ಕೇ ಆಗಮಿಸುತ್ತಾರೆ. ಮೈದಾನದ ತುಂಬ ಬಿದ್ದಿರುವ ಖಾಲಿ ಮಧ್ಯದ ಬಾಟಲಿಗಳು ಮುಜುಗರಕ್ಕೆ ಒಳಗಾಗುವಂತೆ ಮಾಡಿವೆಯಲ್ಲದೆ, ಗಾಯಗೊಳ್ಳಲೂ ಕಾರಣವಾಗುತ್ತಿವೆ.ಮುನಿಸಿಪಾಲ್ ಪ್ರೌಢಶಾಲೆ ಹಾಗೂ ಸರಳಾದೇವಿ ಸತೀಶ್ಚಂದ್ರ ಅಗರ್‌ವಾಲ್ ಸರ್ಕಾರಿ ಪದವಿ ಕಾಲೇಜಿನ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲೇ ಆಟವಾಡುತ್ತಾರೆ. ಅಷ್ಟೇ ಅಲ್ಲದೆ, ನಗರದ ವಿವಿಧೆಡೆ ಇರುವ ಬಡಾವಣೆಗಳ ಯುವಕರಿಗೂ ಇದೇ ಮೈದಾನ ಆಟಕ್ಕೆ ಆಸರೆ.ಈ ಮೈದಾನದ ಸುತ್ತ ಕಂಪೌಂಡ್ ಕಟ್ಟಲಾಗಿದ್ದು, ಸುತ್ತಲೂ ಗೇಟ್ ಅಳವಡಿಸಿ, ಕೀಲಿ ಜಡಿದರೂ ಅವುಗಳನ್ನು ಎಗರಿ ಬರುವ ಕುಡುಕರ ಪಡೆ  ರಾತ್ರಿಯಾಯಿತೆಂದರೆ ಮದ್ಯದ ಬಾಟಲಿ ಸಮೇತ ಇಲ್ಲಿಗೆ ಹಾಜರಾಗಿ ಕುಡಿದು ಮೋಜುಮಾಡಿ ಎಲ್ಲೆಂದರಲ್ಲಿ ಖಾಲಿ ಬಾಟಲಿ ಎಸೆದು ಹೋಗುತ್ತದೆ.ಮೈದಾನದಲ್ಲಿ ಬೆಳಿಗ್ಗೆಯೇ ಬರುವ ಕೆಲವು ಕಿಡಿಗೇಡಿ ಯುವಕರು ಖಾಲಿ ಬಾಟಲುಗಳನ್ನು ಎಲ್ಲೆಂದರಲ್ಲಿ ತೂರುತ್ತ ಪುಡಿಪುಡಿ ಮಾಡುವುದರಿಂದ ಕಾಲಿಗೆ ಗಾಜಿನ ಚೂರುಗಳು ಚುಚ್ಚುವ ಅಪಾಯವಿದೆ. ಹೀಗಾಗಿ ಅತಿ ಎಚ್ಚರದಿಂದಲೇ ಆಟವಾಡುವ ಅನಿವಾರ್ಯತೆ ಇದೆ ಎಂದು ನಿತ್ಯವೂ ಕ್ರಿಕೆಟ್ ಆಡಲು ಬರುವ ಶಶಿಧರ ಅವರು `ಪ್ರಜಾವಾಣಿ~ಗೆ ವಿವರಿಸಿದರು.ಬೆಳಿಗ್ಗೆಯೇ ಖಾಲಿ ಬಾಟಲು ಆಯುವ ಚಿಕ್ಕಮಕ್ಕಳೂ ಇಲ್ಲಿಗೆ ಬಂದು ಕೈಗೆ ಸಿಕ್ಕಷ್ಟು ಬಾಟಲುಗಳನ್ನು ಆಯ್ದು ಕೊಂಡೊಯ್ಯುತ್ತಾರಾದರೂ ಅಲ್ಲೇ ಉಳಿಯುವ ಗಾಜಿನ ಚೂರುಗಳಿಂದ ಅಪಾಯ ಹೆಚ್ಚು ಎಂಬುದು ಅವರ ಅನಿಸಿಕೆ.ನಗರದ ಮಧ್ಯ ಭಾಗದಲ್ಲಿರುವ ಈ ಏಕೈಕ ಆಟದ ಮೈದಾನಕ್ಕೆ ಸಾಕಷ್ಟು ಭದ್ರತೆ ಕಲ್ಪಿಸಿ, ಸ್ವಚ್ಛತೆಗೆ ಆದ್ಯತೆ ನೀಡಿ, ಯುವಕರು ನಿರ್ಭೀತಿಯಿಂದ ಆಟವಾಡುವಂತೆ ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ಶರಣಯ್ಯ, ವೆಂಕಟೇಶ, ನೂರ್ ಅಹಮದ್ ಮತ್ತಿತರರು ಆಗ್ರಹಿಸುತ್ತಾರೆ.ಈ ಆಟದ ಮೈದಾನದಲ್ಲಿ ತಿಂಗಳಿಗೊಮ್ಮೆ ವಿವಿಧ ಮಾರಾಟ ಮಳಿಗೆಗಳಿಗೆ ಅವಕಾಶ ಕಲ್ಪಿಸುವುದರಿಂದ ವ್ಯಾಪಾರ ವಹಿವಾಟು ನಡೆಸಲಾಗುತ್ತದೆ. ಇದರಿಂದ ಯುವಕರಿಗೆ ಆಟಕ್ಕೆ ಮೈದಾನವೇ ಇಲ್ಲದಂತಾಗುತ್ತದೆ. ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿರುವ ಈ ಆಟದ ಮೈದಾನದಲ್ಲಿ ಅನಗತ್ಯವಾಗಿ ವಾಣಿಜ್ಯ ಸಂಬಂಧಿ ಚಟುವಟಿಕೆಗೆ ಅವಕಾಶ ನೀಡಬಾರದು ಎಂಬುದು ಅನೇಕರ ಕೋರಿಕೆಯಾಗಿದೆ.ಅಲ್ಲದೆ, ಪಕ್ಕದಲ್ಲಿರುವ ಬಿಡಿಎಎ ಆಟದ ಮೈದಾನದಲ್ಲೂ ಮಳೆ ಸುರಿದರೆ ಸಾಕಷ್ಟು ನೀರು ನಿಂತು ಫುಟ್‌ಬಾಲ್ ಆಡುವುದಕ್ಕೂ ಸಾಧ್ಯವಾಗುವುದಿಲ್ಲ. ಎರಡು ತಿಂಗಳ ಹಿಂದೆಯೇ ಈ ಕ್ರೀಡಾಂಗಣದ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರೂ ಈವರೆಗೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎಂಬುದೂ ಫುಟ್‌ಬಾಲ್ ಪ್ರೇಮಿಗಳ ಆರೋಪವಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.