ಬುಧವಾರ, ಮೇ 25, 2022
31 °C
ಹೊಳಲ್ಕೆರೆ: ಬಯಲು ಶೌಚಾಲಯವಾಗಿ ಮಾರ್ಪಟ್ಟ ಶಾಲಾ ಆವರಣ

ಅವ್ಯವಸ್ಥೆ ಸುಳಿಯಲ್ಲಿ ಬಸ್‌ನಿಲ್ದಾಣ ಮುಂಭಾಗದ ಶಾಲೆ

ಪ್ರಜಾವಾಣಿ ವಾರ್ತೆ / -ಸಾಂತೇನಹಳ್ಳಿ ಕಾಂತರಾಜ್. Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಪಟ್ಟಣದ ಖಾಸಗಿ ಬಸ್‌ನಿಲ್ದಾಣದ ಮುಂಭಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವ್ಯವಸ್ಥೆಯ ಆಗರವಾಗಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸರಸ್ವತಿ ಮಂದಿರದ ಆವರಣ ಪ್ರವೇಶಿಸಿದರೆ ಮೂತ್ರದ ದುರ್ವಾಸನೆ, ಕೆಸರು, ಕೊಳಚೆಯ ದುರ್ವಾಸನೆ ಮೂಗಿಗೆ ಅಡರುತ್ತದೆ. ಶಾಲಾ ಆವರಣ ಕೆಸರಿನಿಂದ ತುಂಬಿದ್ದು, ಮಕ್ಕಳು ಶಾಲಾ ಕೊಠಡಿ ಪ್ರವೇಶಿಸಲು ಹರಸಾಹಸ ಪಡುವಂತಾಗಿದೆ.ಬಸ್ ನಿಲ್ದಾಣದ ಎದುರಿಗೆ ಇದ್ದ ಶಾಲಾ ಕಟ್ಟಡ ಶಿಥಿಲಗೊಂಡಿದ್ದು, ಈ ಕಟ್ಟಡದ ಹಿಂಭಾಗ ಹೊಸ ಕೊಠಡಿಗಳನ್ನು ಕಟ್ಟಲಾಗಿದೆ. ಶಾಲೆಯಲ್ಲಿ ಒಟ್ಟು 16 ಕೊಠಡಿಗಳಿದ್ದು, ಇನ್ನೂ ನೂತನ ಕೊಠಡಿಗಳ ಕಾಮಗಾರಿ ನಡೆಯುತ್ತಿರುವುದರಿಂದ ಮರಳು, ಜಲ್ಲಿ, ಅಡಿಪಾಯ ನಿರ್ಮಿಸಲು ಬಳಸುವ ಕಲ್ಲುಗಳ ರಾಶಿ ಹಾಕಲಾಗಿದೆ.

ಸಾಮಗ್ರಿಗಳನ್ನು ಸಾಗಿಸಲು ಟ್ಯಾಕ್ಟರ್, ಆಟೊ, ಲಾರಿಗಳು ಶಾಲಾ ಆವರಣದಲ್ಲಿ ಸಂಚರಿಸಿವೆ. ಇದರಿಂದ ಕೆಸರು ಇನ್ನೂ ಹೆಚ್ಚಾಗಿ ವಿದ್ಯಾರ್ಥಿಗಳು ಬಿದ್ದು, ಎದ್ದು ಒಳ ಪ್ರವೇಶಿಸುವ ಸ್ಥಿತಿ ನಿರ್ಮಾಣವಾಗಿದೆ. 1947ರಲ್ಲಿ ಪ್ರಾರಂಭವಾಗಿದ್ದ ಈ ಶಾಲೆಯಲ್ಲಿ ಪ್ರಸ್ತುತ 200 ವಿದ್ಯಾರ್ಥಿಗಳು ಓದುತ್ತಿದ್ದಾರೆ. 9 ಶಿಕ್ಷಕರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪಟ್ಟಣದ ಲೋಕೋಪಯೋಗಿ ಶಾಲೆಯನ್ನೂ ಇದೇ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇಂಗ್ಲಿಷ್ ಮಾಧ್ಯಮದ ಶಾಲೆ ಕೂಡ ಇದೇ ಕಟ್ಟಡದಲ್ಲಿ ಆರಂಭಿಸಿದ್ದು, ಹಳ್ಳಿಗಳಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ.ಶಾಲಾ ಆವರಣವೇ ಬಯಲು ಶೌಚಾಲಯ: ಬಸ್ ನಿಲ್ದಾಣದ ಎದುರಿಗೇ ಇರುವುದರಿಂದ ಅವಸರದಲ್ಲಿರುವ ಪ್ರಯಾಣಿಕರು, ಬಸ್ ಏಜೆಂಟರು, ಚಾಲಕರು, ವ್ಯಾಪಾರಿಗಳಿಗೆ ಇದೇ ಬಯಲು ಶೌಚಾಲಯ. ಸಾರ್ವಜನಿಕ ಶೌಚಾಲಯ ಬಸ್ ನಿಲ್ದಾಣದಿಂದ ಹಿಂದೆ ಮರೆಯಲ್ಲಿ ಇರುವುದರಿಂದ ಸಾರ್ವಜನಿಕರೂ ಶಾಲಾ ಆವರಣದ ಪ್ರವೇಶದ್ವಾರದ ಒಳಗಡೆಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇಡೀ ಪ್ರದೇಶ ದುರ್ವಾಸನೆಯಿಂದ ಕೂಡಿದ್ದು, ಶಿಕ್ಷಕರು, ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡೇ ಶಾಲೆ ಪ್ರವೇಶಿಸುವ ಸ್ಥಿತಿ ಅನಿವಾರ್ಯವಾಗಿದೆ.ಸಾರ್ವಜನಿಕ ಶೌಚಾಲಯ ನಿರ್ಮಿಸಲು ಒತ್ತಾಯ

ಪಟ್ಟಣದಲ್ಲಿ ಸಾರ್ವಜನಿಕರಿಗೆ ಅಗತ್ಯ ಇರುವ ಸ್ಥಳಗಳಲ್ಲಿ ಶೌಚಾಲಯಗಳಿಲ್ಲ. ಬಸ್‌ನಿಲ್ದಾಣದ ಹಿಂಭಾಗ ಯಾರಿಗೂ ಕಾಣದಂತೆ ಇರುವ ಒಂದು ಶೌಚಾಲಯ ಬಿಟ್ಟರೆ ಮುಖ್ಯರಸ್ತೆಯ ಪಕ್ಕದಲ್ಲಿ ಒಂದೂ ಶೌಚಾಲಯವಿಲ್ಲ. ಇದರಿಂದ ಅನಿವಾರ್ಯವಾಗಿ ಜನ ಶಾಲಾ ಆವರಣದ ಕಾಂಪೌಂಡ್ ಮರೆಯಲ್ಲಿ ಮೂತ್ರವಿಸರ್ಜನೆ ಮಾಡುತ್ತಾರೆ.

ಪಟ್ಟಣ ಪಂಚಾಯ್ತಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪಟ್ಟಣದ ಹೊರಗೆ ಶೌಚಾಲಯಗಳನ್ನು ನಿರ್ಮಿಸಿದೆ. ಇವು ಯಾರಿಗೂ ಉಪಯೋಗ ಆಗದೆ ಸರ್ಕಾರದ ಹಣ ಮಣ್ಣುಪಾಲಾಗಿದೆ. ಜನರಿಗೆ ಅಗತ್ಯ ಇರುವ ಕಡೆ ಶೌಚಾಲಯ ನಿರ್ಮಿಸಬೇಕು ಎನ್ನುವುದು ಶ್ರೀರಂಗ ಸ್ಟುಡಿಯೊದ ಜಿ.ಎಚ್.ಶಿವಪ್ರಕಾಶ್ ಅವರ ಒತ್ತಾಯ.ಕಾಂಪೌಂಡ್ ನಿರ್ಮಿಸಲು ಆಗ್ರಹ

ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಸಾಮಗ್ರಿ  ಸಂಗ್ರಹಿಸಲಾಗಿದೆ. ಶಾಲಾ ಆವರಣಕ್ಕೆ ಮಣ್ಣು ಹಾಕಿ ನೆಲವನ್ನು ಸಮತಟ್ಟು ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಹೇಳಿದ್ದೇನೆ. ಶಾಲೆಯ ಆವರಣದಲ್ಲಿ ಮೂತ್ರವಿಸರ್ಜನೆ ಮಾಡುವುದನ್ನು ತಡೆಯಲಾಗುವುದಿಲ್ಲ. ಆವರಣದ ಒಳಗೆ ಯಾರೂ ಬರದಂತೆ ದೊಡ್ಡ ಕಾಂಪೌಂಡ್ ನಿರ್ಮಿಸಿ ಗೇಟ್ ಹಾಕಿದರೆ ಸಮಸ್ಯೆ ಬಗೆಹರಿಯುತ್ತದೆ ಎನ್ನುವುದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್ ಅವರ ಅಭಿಪ್ರಾಯ.

-ಸಾಂತೇನಹಳ್ಳಿ ಕಾಂತರಾಜ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.