ಶನಿವಾರ, ಮೇ 8, 2021
26 °C

ಅಸಮರ್ಪಕ ವಿದ್ಯುತ್ ಪೂರೈಕೆ: ಹೆಸ್ಕಾಂ ಕಚೇರಿಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ: ಎರಡು ವರ್ಷಗಳಿಂದ ಅಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿರುವ ಹೆಸ್ಕಾಂ ಸಿಬ್ಬಂದಿಯ ಮಲತಾಯಿ ಧೋರಣೆಯನ್ನು ಖಂಡಿಸಿ ತಾಲ್ಲೂಕಿನ ಸತ್ತಿ ಗ್ರಾಮದ ನೂರಾರು ರೈತರು ಸೋಮವಾರ ಇಲ್ಲಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಈ ವೇಳೆ ಮಾತನಾಡಿದ ಬಾಹುಸಾಬ ಪಾಟೀಲ, ಅಕ್ಕಪಕ್ಕದ ಎಲ್ಲ ಹಳ್ಳಿಗಳಿಗೆ ನಿಯಮಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿರುವ ಹೆಸ್ಕಾಂ ಅಧಿಕಾರಿಗಳು ಸತ್ತಿ ಗ್ರಾಮದ ವಿಷಯದಲ್ಲಿ ಮಾತ್ರ ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿದರು.ಈ ಅವ್ಯವಸ್ಥೆ ಖಂಡಿಸಿ ಈಗಾಗಲೇ ಸಾಕಷ್ಟು ಸಲ ಪ್ರತಿಭಟನೆಗೆ ಮುಂದಾದಗಲೆಲ್ಲಾ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ಕೈತೊಳೆದುಕೊಳ್ಳುತ್ತಿರುವ ಹೆಸ್ಕಾಂ ಅಧಿಕಾರಿಗಳು ಮುಂದೆ ಈ ಕಡೆ ಅಪ್ಪಿತಪ್ಪಿಯೂ ತಿರುಗಿ ನೋಡುತ್ತಿಲ್ಲ,  ಸವದಿ, ನಂದೇಶ್ವರ, ಶೇಗುಣಸಿ, ದೊಡವಾಡ, ರಡ್ಡೇರಹಟ್ಟಿ, ಪಿ.ಕೆ. ನಾಗನೂರ, ಜನವಾಡ, ಮಹಿಷವಾಡಗಿ ಸೇರಿದಂತೆ ಪಕ್ಕದ ಅನೇಕ ಗ್ರಾಮಗಳಿಗೆ ತ್ರಿಫೇಸ್ ಮತ್ತು ಸಿಂಗಲ್ ಫೇಸ್ ಸೇರಿ ನಿತ್ಯ ಒಟ್ಟು 12 ತಾಸುಗಳವರೆಗೆ ನಿಯಮಿತವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೆ ಸತ್ತಿ ಗ್ರಾಮಕ್ಕೆ ಮಾತ್ರ ಕೇವಲ 6 ತಾಸು ವಿದ್ಯುತ್ ಪೂರೈಸಲಾಗುತ್ತಿದೆ. ಈ ವೇಳೆಯಲ್ಲೂ ಹಲವಾರು ಬಾರಿ ಮುನ್ಸೂಚನೆ ಇಲ್ಲದೆ ಸ್ಥಗಿತಗೊಳಿಸುತ್ತಿರುವುದರಿಂದ ರೈತರು ನಿತ್ಯ ಸಂಕಷ್ಟ ಅನುಭವಿಸಬೇಕಾಗಿದೆ ಎಂದರು.ಮನವಿಗೆ ಪ್ರತಿಯಾಗಿ ನಾಳೆಯಿಂದಲೇ ನಿತ್ಯ 12 ತಾಸು ನಿಯಮಿತ ವಿದ್ಯುತ್ ಪೂರೈಸುವುದಾಗಿ ಭರವಸೆ ನೀಡಿದರೂ ಕೂಡ ಅದನ್ನು ಲಿಖಿತ ರೂಪದಲ್ಲಿ ನೀಡಲು ಅಧಿಕಾರಿಗಳು ಒಪ್ಪಲಿಲ್ಲ. ಇದರಿಂದಾಗಿ ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.ಬಸಪ್ಪ ವಾಲಿ, ಸತ್ಯಪ್ಪ ಠಕ್ಕಣ್ಣವರ, ಬಂದೇನವಾಜ್ ಅತ್ತಾರ, ಮಲಗೌಡ ಪಾಟೀಲ, ಅಣ್ಣಾಸಾಬ ಹುದ್ದಾರ, ಮಲ್ಲಪ್ಪ ಹಂಚಿನಾಳ, ಅನಂತಕುಮಾರ ಪಾಟೀಲ, ಬಸವರಾಜ ಹಂಚನಾಳ, ಗುರಪ್ಪಾ ಭೂಷಣ್ಣವರ, ವೆಂಕಪ್ಪ ಮಳಲಿ, ಶಿವಯ್ಯಾ ಮಠಪತಿ, ರಾವಸಾಬ ಪಾಟೀಲ, ಅಶೋಕ ಕೋರಿ, ಮಹಾದೇವ ಜಕ್ಕಪ್ಪನವರ, ಮಲ್ಲಪ್ಪ ಪ್ರತಿಭಟನೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.