ಶುಕ್ರವಾರ, ಮೇ 20, 2022
18 °C

ಆಕಾಶಕ್ಕೂ ಲಗ್ಗೆ ಇಟ್ಟ ಭ್ರಷ್ಟತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಕಾಶಕ್ಕೂ ಲಗ್ಗೆ ಇಟ್ಟ ಭ್ರಷ್ಟತೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಾಣಿಜ್ಯ ವಿಭಾಗವಾದ ಅಂತರಿಕ್ಷ್ ಜತೆಗೆ ಮಾಡಿಕೊಂಡ ವ್ಯವಹಾರ ಹೀಗೆ ಮುರಿದು ಬೀಳುತ್ತದೆ ಎಂದು ದೇವಾಸ್ ಕಂಪೆನಿ ಕನಸು, ಮನಸಿನಲ್ಲೂ ಅಂದಾಜಿಸಿರಲಿಕ್ಕಿಲ್ಲ.ಯಾಕೆಂದರೆ ಅದು ಭಾರಿ ಲೆಕ್ಕಾಚಾರದಲ್ಲಿ ಮಾಡಿದಂತಹ ವ್ಯವಹಾರವಾಗಿತ್ತು. ಭಾರತದ ಆಂತರಿಕ ಭದ್ರತೆಗೆ ಒದಗಿರುವ ಅತ್ಯಂತ ದೊಡ್ಡ ಬೆದರಿಕೆ ಮತ್ತು ನೆರೆಯ ದೇಶದಲ್ಲಿನ ಸೇನಾ ಬೆಳವಣಿಗೆಗಳೇ ಈ ವ್ಯವಹಾರ ಮುರಿದು ಬೀಳಲು ಕಾರಣ ಎಂದು ಕಂಪೆನಿ ಈಗ ದೂರುತ್ತಿರಬಹುದು. ಅತಂತ್ರ ಸ್ಥಿತಿಯಲ್ಲಿರುವ ದೇಶದ ಭದ್ರತಾ ಚಿತ್ರಣ ಮತ್ತು ನಕ್ಸಲ್ ಪಿಡುಗನ್ನು ತೊಡೆದು ಹಾಕುವಲ್ಲಿ ಸರ್ಕಾರ ವಿಫಲವಾದುದರಿಂದ ವಿನೂತನ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಸಂಸ್ಥೆಗಳು ಆಕಾಶದತ್ತ ನೋಡತೊಡಗಿದವು. ಇದರಿಂದಾಗಿ ಇಸ್ರೊ 2009ರಲ್ಲಿ ತಾನು ಮಾಡಿಕೊಂಡಿದ್ದ ಎಸ್-ಬ್ಯಾಂಡ್ ವಾಣಿಜ್ಯ ಗುತ್ತಿಗೆಗಳನ್ನು ಪುನರ್ ಪರಿಶೀಲಿಸುವಂತಾಯಿತು. ಪರಿಣಾಮ ಎಸ್-ಬಾಂಡ್ ಟ್ರಾನ್ಸ್‌ಪಾಂಡರ್‌ಗಳನ್ನು (ಗ್ರಾಹಕ ಪ್ರೇಷಕ) ವಾಣಿಜ್ಯ ಚಟುವಟಿಕೆಗಳಿಗೆ ಬಳಸುವುದನ್ನು ತಡೆಗಟ್ಟುವ ನೀತಿ ಕೈಗೊಳ್ಳಲಾಯಿತು.1990ರ ದಶಕದ ಕೊನೆಯಲ್ಲಿ ಸರ್ಕಾರವು ‘ಸ್ಯಾಟ್‌ಕಾಂ’ (ಸೆಟಲೈಟ್ ಕಮ್ಯುನಿಕೇಷನ್-ಉಪಗ್ರಹ ಸಂಪರ್ಕ) ನೀತಿ ರೂಪಿಸಿದಾಗ ಈ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂದು ಅದು ಭಾವಿಸಲು ಸಾಧ್ಯವೇ ಇರಲಿಲ್ಲ. ಆರಂಭದಲ್ಲಿ ಉಪಗ್ರಹ ತಂತ್ರಜ್ಞಾನದ ಮುಖ್ಯ ಬಳಕೆದಾರ ಸರ್ಕಾರ ಮಾತ್ರವೇ ಆಗಿತ್ತು. ದೂರಸಂಪರ್ಕ, ಪ್ರಸಾರ ಮತ್ತು ದೂರ ಸಂವೇದಿ ಕಾರ್ಯಗಳಿಗೆ ಮಾತ್ರ ಈ ತಂತ್ರಜ್ಞಾನ ಮೀಸಲಾಗಿತ್ತು. 1990ರ ದಶಕದಲ್ಲಿ ಜನಸಾಮಾನ್ಯರಿಗೂ ಸಂಪರ್ಕ ಕ್ರಾಂತಿಯ ಲಾಭ ಸಿಗುವಂತೆ ಮಾಡಲು ಖಾಸಗಿ ಕಂಪೆನಿಗಳು ಮುಂದಾದವು. ಆಗ ಉಪಗ್ರಹ ಆಧರಿತ ತಂತ್ರಜ್ಞಾನಕ್ಕೆ ಹೆಚ್ಚಿನ ಬೇಡಿಕೆ ಬಂತು. ಹೀಗಾಗಿ ಹೊಸ ನೀತಿಗಳು ಮತ್ತು ನಿಯಂತ್ರಣಗಳನ್ನು ಆರಂಭಿಸಲಾಯಿತು.2000ನೇ ಇಸವಿಯ ಜನವರಿ 12ರಂದು ಕೇಂದ್ರ ಸಚಿವ ಸಂಪುಟವು ’ಸ್ಯಾಟ್‌ಕಾಂ’ ನೀತಿ ಜಾರಿಗೆ ತರುವುದಕ್ಕೆ ತನ್ನ ಸಮ್ಮತಿ ಸೂಚಿಸಿತು. ಆಗ ಉಪಗ್ರಹ ಆಧರಿತ ಸಂಪರ್ಕ ವ್ಯವಸ್ಥೆ ಸಾಕಷ್ಟು ಸುಧಾರಣೆ ಕಂಡಿತ್ತು ಮತ್ತು ಇದರಲ್ಲಿ ಖಾಸಗಿ ಕ್ಷೇತ್ರ ಸಹ ದೊಡ್ಡ ಪ್ರಮಾಣದಲ್ಲಿ ಪಾತ್ರ ವಹಿಸುವ ಅಗತ್ಯ ಇತ್ತು. ಅದಕ್ಕಾಗಿಯೇ ಈ ನೀತಿಯನ್ನು ಜಾರಿಗೆ ತರಲಾಯಿತು. ದೂರಸಂಪರ್ಕ ಕ್ಷೇತ್ರದಲ್ಲಿನ ಉದಾರೀಕರಣ ಮತ್ತು ಜಾಗತಿಕ ಸನ್ನಿವೇಶಗಳಿಗೆ ಪೂರಕವಾಗಿ ಈ ನೀತಿ ರೂಪುಗೊಂಡಿತ್ತು. ಈ ನೀತಿ ಖಾಸಗಿ ಕ್ಷೇತ್ರಕ್ಕೆ ಉಪಗ್ರಹ ಆಧರಿತ ತಂತ್ರಜ್ಞಾನ ಬಳಕೆಯಲ್ಲಿ ಹಲವು ಅವಕಾಶಗಳನ್ನು ಒದಗಿಸಿಕೊಟ್ಟಿತು. ಮೊದಲನೆಯದಾಗಿ ಸರ್ಕಾರೇತರ ಬಳಕೆದಾರರಿಗೆ ವಾಣಿಜ್ಯದ ದೃಷ್ಟಿಯೊಂದಿಗೆ ಭಾರತೀಯ ಉಪಗ್ರಹಗಳ (ಇನ್‌ಸ್ಯಾಟ್) ಸಾಮರ್ಥ್ಯಗಳನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ಒದಗಿಸಲಾಗಿತ್ತು. ಎರಡನೆಯದಾಗಿ ಖಾಸಗಿ ಕಂಪೆನಿಗಳು ಭಾರತೀಯ ಉಪಗ್ರಹಗಳನ್ನು ಸ್ಥಾಪಿಸಿಕೊಂಡು ಅವುಗಳಿಂದ ಕಾರ್ಯಾಚರಣೆ ಮಾಡಬಹುದಾಗಿತ್ತು. ಭಾರತದಲ್ಲಿ ನೋಂದಣಿಯಾದ ಕಂಪೆನಿಗಳು ವಿದೇಶಿ ಬಂಡವಾಳದೊಂದಿಗೆ (ಶೇ 74ಕ್ಕಿಂತ ಅಧಿಕ ಇಲ್ಲದಂತೆ ನೋಡಿಕೊಂಡು) ಉಪಗ್ರಹ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಅವಕಾಶ ನೀಡಲಾಗಿತ್ತು. ವಿಶೇಷ ಪ್ರಸಂಗಗಳಲ್ಲಿ ಭಾರತೀಯ ಉಪಗ್ರಹದಿಂದ ಅಂತಹ ಸೇವೆ ಒದಗಿಸುವ ತನಕ ವಿದೇಶಿ ಉಪಗ್ರಹಗಳ ನೆರವು ಪಡೆಯಲು ಸಹ ಅವಕಾಶ ಒದಗಿಸಲಾಗಿತ್ತು.ಹೊಸ ತಂತ್ರಜ್ಞಾನದ ಭರವಸೆ:  ಭಾರತದ ಹೊಸ ಉಪಗ್ರಹ ನೀತಿಗೆ ಮನಸೋತು ದೇಶಕ್ಕೆ ಹಾರಿಬಂದ ಮೊದಲ ಕಂಪೆನಿಗಳಲ್ಲಿ ದೇವಾಸ್ ಕಂಪೆನಿಯ ಪೋಷಕ ಸಂಸ್ಥೆಯಾದ ಅಮೆರಿಕ ಮೂಲದ ಫೋರ್ಜ್ ಅಡ್ವೈಸರ್ ಸಹ ಒಂದು. ಇಸ್ರೊದ ಉಪಗ್ರಹ ತಂತ್ರಜ್ಞಾನವನ್ನು ಮಾರುಕಟ್ಟೆ ಮಾಡುವ ಸಲುವಾಗಿಯೇ 1990ರ ದಶಕದಲ್ಲಿ ಸ್ಥಾಪನೆಯಾದ ಕಂಪೆನಿ ಅಂತರಿಕ್ಷ್. ಡಿಜಿಟಲ್ ಬಹು ಮಾಧ್ಯಮ ಸೇವೆಯಲ್ಲಿನ ಅವಕಾಶಗಳನ್ನು ಬಳಸಿಕೊಳ್ಳುವುದಕ್ಕಾಗಿ 2003ರ ಮಾರ್ಚ್‌ನಲ್ಲಿ ಅಂತರಿಕ್ಷ್ ಮತ್ತು ಫೋರ್ಜ್ ಅಡ್ವೈಸರ್ಸ್‌ ನಡುವೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು. ಬಳಿಕ ಫೋರ್ಜ್ ಅಡ್ವೈಸರ್ಸ್‌ ಕಂಪೆನಿ ದೇವಾಸ್‌ಮಲ್ಟಿಮೀಡಿಯಾ ಪ್ರೈ.ಲಿ. ಹೆಸರಿನ ಭಾರತೀಯ ಕಂಪೆನಿಯನ್ನು ಸ್ಥಾಪಿಸಿತು.

ದೇವಾಸ್ ಕಂಪೆನಿ ಆಗಲೇ ಭಾರತೀಯ ಉಪಗ್ರಹದ ಶಕ್ತಿ, ಸಾಮರ್ಥ್ಯವನ್ನು ಅಳೆದುಬಿಟ್ಟತ್ತು ಮತ್ತು ನೂತನ ನೀತಿಯಡಿಯಲ್ಲಿ ಅದನ್ನು ಸೂಕ್ತ ರೀತಿಯಿಂದ ಬಳಸಿಕೊಳ್ಳುವ ಯೋಜನೆ ರೂಪಿಸಿಕೊಂಡಿತ್ತು. ಸರ್ಕಾರಿ ಸ್ವಾಮ್ಯದ ದೂರದರ್ಶನ ಆಗ ತಾನೇ ಎಸ್-ಬ್ಯಾಂಡ್ ಸೇವೆಯನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಿತ್ತು. ಇದೇ ಎಸ್-ಬ್ಯಾಂಡ್ ಬಳಸಿಕೊಂಡು ಅಪಾರ ಅವಕಾಶ ಇರುವ ಬಹು ಮಾಧ್ಯಮ ಸೇವೆ ಒದಗಿಸುವ ಭರವಸೆಯನ್ನು ಕಂಪೆನಿ ನೀಡಿತು. ಆಗ ಟೆಲಿವಿಷನ್ ಮತ್ತು ಪ್ರಸಾರ ಸೇವಾ ಕಂಪೆನಿಗಳು ಸಿ ಮತ್ತು ಕೆಯು-ಬ್ಯಾಂಡ್‌ಗಳತ್ತ ತೆರಳಿದ್ದವು. ಆ ಹಂತದಲ್ಲೂ ಭದ್ರತಾ ಪಡೆಗಳು ಇಂತಹ ಉಪಗ್ರಹ ಸೇವೆಯನ್ನು ಬಳಸಿಕೊಳ್ಳುವ ಅಗತ್ಯವನ್ನು ಗುರುತಿಸಲೇ ಇಲ್ಲ.‘ಇಸ್ರೊ ಆಗ ತನ್ನದೇ ಬಳಕೆಗಾಗಿ 5 ಮೀಟರ್ ವ್ಯಾಸದ ದೊಡ್ಡ ಗಾತ್ರದ ಎಸ್-ಬ್ಯಾಂಡ್ ಅಭಿವೃದ್ಧಿಪಡಿಸುತ್ತಿತ್ತು. ಆಗ ದೇವಾಸ್ ಕಂಪೆನಿ ನಮ್ಮನ್ನು ಸಂಪರ್ಕಿಸಿದಾಗ ಸಮಾಜದ ಉಪಯೋಗಕ್ಕಾಗಿ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಬಗ್ಗೆ ನಾವು ಚಿಂತನೆ ನಡೆಸಿದೆವು. ಎಸ್-ಬ್ಯಾಂಡ್‌ನಲ್ಲಿ ಬಹು ಮಾಧ್ಯಮ ಸೇವೆ ಒದಗಿಸುವ ಬಗ್ಗೆ ಜಗತ್ತಿನಲ್ಲಿ ಅದುವರೆಗೆ ಯಾರೂ ಚಿಂತಿಸಿರಲೇ ಇಲ್ಲ’ ಎಂದು ಬೆಂಗಳೂರಿನ ಇಸ್ರೊ ಉಪಗ್ರಹ ಕೇಂದ್ರದ ಮಾಜಿ ನಿರ್ದೇಶಕ ಪ್ರೇಮ್ ಶಂಕರ್ ಗೋಯಲ್ ‘ಪ್ರಜಾವಾಣಿ’ಗೆ ತಿಳಿಸಿದರು.ಅತ್ಯಧಿಕ ಶಕ್ತಿಯ ಎಸ್-ಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳನ್ನು ಭಾರಿ ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳಲು ದೇವಾಸ್ ಕಂಪೆನಿ ಯೋಜನೆ ರೂಪಿಸಿಕೊಂಡಿತು. ಇದರ ವ್ಯಾಪ್ತಿ ಬಹಳ ದೊಡ್ಡದಾಗಿತ್ತು. ಸಮಾಜಕ್ಕೆ ನೆರವಾಗುವ ತಂತ್ರಜ್ಞಾನದಿಂದ ಹಿಡಿದು ದೇಶದ ರಕ್ಷಣೆಗೆ ಸಂಬಂಧಿಸಿದ ತಂತ್ರಜ್ಞಾನದ ತನಕ ಇದರ ವ್ಯಾಪ್ತಿ ಬಹಳ ವಿಶಾಲವಾಗಿತ್ತು.‘ಇಂತಹ ವ್ಯವಹಾರದಲ್ಲಿ ತಪ್ಪಾಗಿದೆ ಎಂದು ಯಾರಾದರೂ ಹೇಳಬಹುದು, ಆದರೆ ನೂತನ ತಂತ್ರಜ್ಞಾನಗಳ ಬಗ್ಗೆ ನಾವು ಪ್ರಯತ್ನಿಸದಿದ್ದರೆ ಭಾರತ ಹಿಂದೆ ಬೀಳುವ ಸಾಧ್ಯತೆ ಇದೆ. ಅಮೆರಿಕ ಮತ್ತು ಚೀನಾಗಳು ಇಂದು ಇಂತಹದೇ ತಂತ್ರಜ್ಞಾನವನ್ನು ಬಳಸುವ ಸನ್ನಾಹದಲ್ಲಿವೆ’ ಎಂದು ಗೋಯಲ್ ಹೇಳುತ್ತಾರೆ. ದೇವಾಸ್‌ನ ಪ್ರಸ್ತಾವವನ್ನು ಸಮ್ಮತಿಸಿದ ಅಂತರಿಕ್ಷ್ ಮಂಡಳಿಯಲ್ಲಿ ಇವರೂ ಒಬ್ಬ ಸದಸ್ಯರಾಗಿದ್ದರು.ಭದ್ರತಾ ಅಗತ್ಯಗಳು: 2004ರ ಡಿಸೆಂಬರ್ 24ರಂದು ಅಂತರಿಕ್ಷ್ ಮಂಡಳಿ ಕರಡು ಒಪ್ಪಂದಕ್ಕೆ ಸಮ್ಮತಿ ಸೂಚಿಸಿತು. 2005ರ ಜನವರಿ 28ರಂದು ಅಂತಿಮ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದ ಮತ್ತು 2007ರಲ್ಲಿ ದೇವಾಸ್ ಕಂಪೆನಿ ಮಾಡಿಕೊಂಡ ಆಯ್ಕೆಯೊಂದರ ಮೇರೆಗೆ ಎರಡು ಉಪಗ್ರಹಗಳ ಟ್ರಾನ್ಸ್‌ಪಾಂಡರ್ ಸಾಮರ್ಥ್ಯದ ಶೇ 90ರಷ್ಟನ್ನು 12 ವರ್ಷಗಳ ಕಾಲ ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಲಾಯಿತು. ಈ ಹಂತದಲ್ಲಿ ಇಸ್ರೊ ದಾರಿ ತಪ್ಪಿಸುವಂತಹ ಕೆಲಸ ಮಾಡಿಬಿಟ್ಟಿತು. ನಿಯಮದಂತೆ ಈ ಒಪ್ಪಂದದ ಪ್ರತಿಯೊಂದು ಅಂಶವನ್ನೂ ಬಾಹ್ಯಾಕಾಶ ಆಯೋಗ ಅಥವಾ ಕೇಂದ್ರ ಸಚಿವ ಸಂಪುಟಕ್ಕೆ ತಿಳಿಸಬೇಕು. ಯಾಕೆಂದರೆ ಎರಡೂ ಉಪಗ್ರಹಗಳನ್ನು ಈ ಕಂಪೆನಿಯ ಉದ್ದೇಶಕ್ಕಾಗಿಯೇ ನಿರ್ಮಿಸಲಾಗಿತ್ತು. ಆದರೆ ಇಸ್ರೊ ಈ ಬಗ್ಗೆ ಬಾಹ್ಯಾಕಾಶ ಇಲಾಖೆ ಅಥವಾ ಸಚಿವ ಸಂಪುಟಕ್ಕೆ ಮಾಹಿತಿಯನ್ನೇ ನೀಡಲಿಲ್ಲ.ಈ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ ಬಳಿಕ 2005ರ ಡಿಸೆಂಬರ್‌ನಲ್ಲಿ ಸಂಪುಟವು ಅಧಿಕೃತ ಹೇಳಿಕೆಯೊಂದನ್ನು ಹೊರಡಿಸಿತು. ಜಿಸ್ಯಾಟ್-6 ಉಪಗ್ರಹವು ವಾಹನಗಳಲ್ಲಿ ಮೊಬೈಲ್ ಫೋನ್‌ಗಳು ಮತ್ತು ಮೊಬೈಲ್ ವಿಡಿಯೊ-ಆಡಿಯೊ ರಿಸೀವರ್‌ಗಳ ಮೂಲಕ ಉಪಗ್ರಹ ಡಿಜಿಟಲ್ ಬಹುಮಾಧ್ಯಮ ಪ್ರಸಾರ ಸೇವೆ (ಎಸ್-ಡಿಎಂಬಿ) ಒದಗಿಸಲಿದೆ ಎಂದು ಆ ಹೇಳಿಕೆಯಲ್ಲಿ ತಿಳಿಸಲಾಗಿತ್ತು.ಇಂತಹ ಸೇವೆ ನೀಡಲು ಖಾಸಗಿ ಕಂಪೆನಿಯೊಂದು ಸಜ್ಜಾಗಿದೆ ಎಂಬ ಬಗ್ಗೆ ರಾಜಧಾನಿಯಲ್ಲಿದ್ದ ಸಚಿವರಿಗಾಗಲೀ, ಅಧಿಕಾರಿಗಳಿಗಾಗಲೀ ತಿಳಿವಳಿಕೆ ಇದ್ದ ಬಗ್ಗೆ ಸಂಪುಟದ ಈ ಹೇಳಿಕೆಯಲ್ಲಿ ಯಾವುದೇ ಸುಳಿವೂ ಇರಲಿಲ್ಲ. ಎಸ್-ಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳಿಗೆ ದೇಶದ ರಕ್ಷಣಾ ಕ್ಷೇತ್ರದಲ್ಲಿ ಅಂತಹ ಮಹತ್ವದ ಇದೆ ಎಂಬ ಬಗ್ಗೆ ಸರ್ಕಾರಕ್ಕೆ ಅರಿವಿರುವ ಬಗ್ಗೆ ಸಹ ಈ ಹೇಳಿಕೆಯಲ್ಲಿ ಯಾವುದೇ ಸೂಚನೆ ಇರಲಿಲ್ಲ.ಆ ಸಮಯದಲ್ಲೇ ದೇಶದಲ್ಲಿ ಭದ್ರತಾ ಪರಿಸ್ಥಿತಿ ಗಂಭೀರವಾಗಿತ್ತು. ನಕ್ಸಲೀಯರು ದೇಶದೊಳಗಿನ ಅತ್ಯಂತ ದೊಡ್ಡ ಅಪಾಯವಾಗಿ ಬೆಳೆದು ನಿಂತಿದ್ದರು. ಹೊರಗಡೆ ಚೀನಾವು ಸೇನಾ ಉದ್ದೇಶದೊಂದಿಗೆ ಉಪಗ್ರಹ ತಂತ್ರಜ್ಞಾನವನ್ನು ಪರೀಕ್ಷಿಸಲು ಮುಂದಾಗಿತ್ತು. ಅರೆಸೈನಿಕ ಪಡೆಗಳೂ ತಮ್ಮ ಸಂಪರ್ಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಆಗಸದತ್ತ ನೋಡತೊಡಗಿದ್ದವು.ಇಂದು ಜಾಲ (ನೆಟ್‌ವರ್ಕ್) ಆಧರಿತ ಕಾರ್ಯಾಚರಣೆಗೆ ಭಾರಿ ಮಹತ್ವ ಬಂದಿದೆ. ರಕ್ಷಣಾ ಪಡೆಗಳ ತಕ್ಷಣದ ಸುರಕ್ಷಿತ ಸಂಪರ್ಕ ಮತ್ತು ಕಾರ್ಯಾಚರಣೆ ಬಳಕೆಗಾಗಿ ಎಸ್-ಬ್ಯಾಂಡ್‌ನಲ್ಲಿ 17.5 ಮೆಗಾಹರ್ಟ್ಸ್ ಸಾಮರ್ಥ್ಯವನ್ನು ಒದಗಿಸಬೇಕು ಎಂದು ರಕ್ಷಣಾ ಸಚಿವಾಲಯದಲ್ಲಿನ ಸಮಗ್ರ ರಕ್ಷಣಾ ಸಿಬ್ಬಂದಿಯ (ಐಡಿಎಸ್) ಬಾಹ್ಯಾಕಾಶ ಘಟಕವು ಅಂದಾಜು ಮಾಡಿತು. ಸಂಪರ್ಕ ಸಾಧನಕ್ಕಾಗಿ 12ನೇ ಪಂಚವಾರ್ಷಿಕ ಯೋಜನಾ ಅವಧಿಯಲ್ಲಿ 40 ಮೆಗಾಹರ್ಟ್ಸ್ ಮತ್ತು 13ನೇ ಪಂಚವಾರ್ಷಿಕ ಯೋಜನೆಯಲ್ಲಿ 50 ಮೆಗಾಹರ್ಟ್ಸ್ ಸಾಮರ್ಥ್ಯ ಬೇಕಾಗಬಹುದು ಎಂದು ಅಂದಾಜಿಸಲಾಯಿತು.ಬಿಎಸ್‌ಎಫ್, ಸಿಐಎಸ್‌ಎಫ್, ಸಿಆರ್‌ಪಿಎಫ್ ಮತ್ತು ಪೊಲೀಸ್‌ನಂತಹ ಅರೆ ಸೇನಾ ಪಡೆಗಳಿಗೆ ಸುರಕ್ಷಿತ ಸಂಪರ್ಕ ವ್ಯವಸ್ಥೆಯನ್ನೂ ಬಲಪಡಿಸಬೇಕಿರುವುದರಿಂದ ಅವುಗಳಿಂದಲೂ ಈ ಎಸ್-ಬ್ಯಾಂಡ್‌ಗೆ ಬೇಡಿಕೆ ಬಂದಿತ್ತು. ರೈಲುಗಳ ಚಲನವಲನವನ್ನು ಗುರುತಿಸುವುದಕ್ಕಾಗಿ ಈ ತಂತ್ರಜ್ಞಾನಕ್ಕೆ ಭಾರತೀಯ ರೈಲ್ವೆಯಿಂದಲೂ ಬೇಡಿಕೆ ಬಂದಿತ್ತು.‘ಕಳೆದ ಐದು ವರ್ಷಗಳಿಂದೀಚೆಗೆ ಭದ್ರತಾ ಏಜೆನ್ಸಿಗಳಿಂದ ಟ್ರಾನ್ಸ್‌ಪಾಂಡರ್‌ಗಳಿಗಾಗಿ ಐದು ಪಟ್ಟು ಅಧಿಕ ಬೇಡಿಕೆ ಬಂದಿದೆ’ ಎಂದು ಇಸ್ರೊ ಉಪಗ್ರಹ ಕೇಂದ್ರದ ಹಾಲಿ ನಿರ್ದೇಶಕ ಟಿ. ಕೆ. ಅಲೆಕ್ಸ್ ಹೇಳುತ್ತಾರೆ. ಎಸ್-ಬ್ಯಾಂಡ್‌ಗೆ ವ್ಯಾಪಕ ಪ್ರದೇಶ ಅಂದರೆ ಇಡೀ ದೇಶವಲ್ಲದೆ ಸಾಗರವನ್ನೂ ವ್ಯಾಪಿಸುವ ಸಾಮರ್ಥ್ಯ ಇದೆ. ಉಳಿದ ಟ್ರಾನ್ಸ್‌ಪಾಂಡರ್‌ಗಳಿಗೆ ಇಷ್ಟು ದೊಡ್ಡ ವ್ಯಾಪ್ತಿ ಇಲ್ಲ. ಹೀಗಾಗಿಯೇ ಎಸ್-ಬ್ಯಾಂಡ್‌ಗೆ ಭಾರಿ ಬೇಡಿಕೆ ಇದೆ.ಎಸ್-ಬ್ಯಾಂಡ್ ಟ್ರಾನ್ಸ್‌ಪಾಂಡರ್ ಬಳಸಿ ಅತ್ಯಂತ ದೂರದ ದುರ್ಗಮ ಗುಡ್ಡಗಾಡು ಪ್ರದೇಶಗಳು ಸಹಿತ ದೇಶದಾದ್ಯಂತ ರಾಷ್ಟ್ರೀಯ ಬಿಕ್ಕಟ್ಟು ಸಂವಹನ ವೇದಿಕೆಯನ್ನು ನಿರ್ಮಿಸುವ ಯೋಜನೆಯನ್ನು ದೇವಾಸ್ ಕಂಪೆನಿ ಹಾಕಿಕೊಂಡಿತ್ತು. ಈ ಎಲ್ಲ ವ್ಯವಸ್ಥೆಗಳೂ ಸುಭದ್ರವಾಗಿದ್ದು, ದೇಶದ ಒಳಗಿನಿಂದಲೇ ನಿರ್ವಹಿಸುವಂತಿವೆ. ಈ ಮೂಲಕ ರಾಷ್ಟ್ರೀಯ ಭದ್ರತಾ ವ್ಯವಸ್ಥೆಗಳಿಗೆ ಇವುಗಳನ್ನು ಬಳಸಿಕೊಳ್ಳುವುದಕ್ಕೆ ಸಹ ಸಾಧ್ಯವಿತ್ತು.ಸರ್ಕಾರ ಇದೀಗ ತನ್ನ ಬಾಹ್ಯಾಕಾಶ ನೀತಿಯಲ್ಲಿ ಬದಲಾವಣೆ ಮಾಡಿಕೊಂಡಿದೆ ಮತ್ತು ಅಂತರಿಕ್ಷ್-ದೇವಾಸ್ ನಡುವಿನ ವ್ಯವಹಾರವನ್ನು ರದ್ದುಪಡಿಸಿದೆ. ಇನ್ನು ಮುಂದೆ ಎಸ್-ಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳು ವಾಣಿಜ್ಯ ಬಳಕೆಗೆ ಸಿಗುವುದಿಲ್ಲ. ವಿಜ್ಞಾನಿಗಳು ಹಾಗೂ ಬಾಹ್ಯಾಕಾಶ ಮತ್ತು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಗಳ ಎಂಜಿನಿಯರ್‌ಗಳು ಇದೀಗ ಎಸ್-ಬ್ಯಾಂಡ್ ಆಂಟೆನಾ (8 ಮೀಟರ್ ವ್ಯಾಸದ್ದು) ಮತ್ತು ಭೂಮಿಯ ಮೇಲೆ ಸಜ್ಜುಗೊಳಿಸಬೇಕಾದ ಇತರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಈ ಅಭಿವೃದ್ಧಿ ಕೆಲಸಗಳಿಗೆ 8ರಿಂದ 10 ವರ್ಷ ಬೇಕಾಗಬಹುದು. ‘ಅಲ್ಲಿಯ ತನಕ ಈ ಟ್ರಾನ್ಸ್‌ಪಾಂಡರ್‌ಗಳಿಂದ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಸಂಸ್ಥೆಗಳಿಗೆ ಅಂತಹ ಹೆಚ್ಚಿನ ಯಾವುದೇ ನೆರವು ಸಿಗುವುದಿಲ್ಲ’ ಎಂದು ಗೋಯಲ್ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.