ಆಗಸ್ಟ್ 26ರಿಂದ ಕೆಪಿಎಲ್ ನಾಲ್ಕನೇ ಆವೃತ್ತಿ

ಬೆಂಗಳೂರು: ಸ್ಥಳೀಯ ಆಟಗಾರರ ಪ್ರತಿಭೆಗೆ ವೇದಿಕೆಯೆನಿಸಿರುವ ಒಡೆಯರ್ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನಾಲ್ಕನೇ ಆವೃತ್ತಿ ಆಗಸ್ಟ್ 26ರಿಂದ ಸೆಪ್ಟೆಂಬರ್ 13ರ ವರೆಗೆ ನಡೆಯಲಿದೆ. ಆದರೆ, ಈ ಬಾರಿ ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ಪಂದ್ಯಗಳು ಆಯೋಜನೆಯಾಗಿವೆ.
ಕೆಪಿಎಲ್ ಮೂರನೇ ಆವೃತ್ತಿಯಲ್ಲಿ ಏಳು ತಂಡಗಳು ಪೈಪೋಟಿ ನಡೆಸಿದ್ದವು. ಆದರೆ, ಈ ಬಾರಿ ‘ನಮ್ಮ ಶಿವಮೊಗ್ಗ’ ಹೊಸ ತಂಡವಾಗಿದೆ. ಉಮಾಪತಿ ಎಂಬುವವರು ಶಿವಮೊಗ್ಗ ತಂಡವನ್ನು ಖರೀದಿಸಿದ್ದು, ನಟ ಸುದೀಪ್ ಕೂಡಾ ನೆರವಾಗಿದ್ದಾರೆ. 2014ರ ಆವೃತ್ತಿಯಲ್ಲಿ ಆಡಿದ್ದ ರಾಕ್ಸ್ಟಾರ್ಸ್ ತಂಡ ಈ ಬಾರಿ ಆಲ್ಸ್ಟಾರ್ಸ್ ಎನ್ನುವ ಹೊಸ ಹೆಸರಿನೊಂದಿಗೆ ಕಣಕ್ಕಿಳಿಯಲಿದೆ.
ಈ ಬಗ್ಗೆ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಎಸ್ಸಿಎ ಕಾರ್ಯದರ್ಶಿ ಬ್ರಿಜೇಶ್ ಪಾಟೀಲ್ ಮಾಹಿತಿ ನೀಡಿದರು.
‘ಹಿಂದಿನ ಆವೃತ್ತಿಯಲ್ಲಿ ಯಶಸ್ಸು ಸಿಕ್ಕಿದೆ. ಪಂದ್ಯಗಳು ಸೋನಿ ಸಿಕ್ಸ್ ವಾಹಿನಿಯಲ್ಲಿ ನೇರ ಪ್ರಸಾರವಾಗಿ ದ್ದರಿಂದ ಉತ್ತಮ ಟಿಆರ್ಪಿಯೂ ಲಭಿಸಿದೆ. ಈ ಬಾರಿ ಹೊಸದಾಗಿ ಒಂದು ತಂಡ ಹೆಚ್ಚಿರುವುದು ಟೂರ್ನಿ ವರ್ಷದಿಂದ ವರ್ಷಕ್ಕೆ ಖ್ಯಾತಿ ಪಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ’ ಎಂದು ಬ್ರಿಜೇಶ್ ಪಟೇಲ್ ನುಡಿದರು.
‘ಈ ವರ್ಷದಿಂದ ಐಪಿಎಲ್ ಮಾದರಿಯಲ್ಲಿಯೇ ಕೆಪಿಎಲ್ ಜರುಗಲಿದೆ. ಎಲಿಮಿನೇಟರ್ ಹಾಗೂ ಕ್ವಾಲಿಫೈರ್ ಪದ್ಧತಿಯನ್ನೂ ಅಳವಡಿಸ ಲಾಗಿದೆ. ಮಂಗಳೂರು ಸೇರಿದಂತೆ ರಾಜ್ಯದ ಬೇರೆಡೆಯೂ ಪಂದ್ಯಗಳನ್ನು ಆಯೋಜಿಸುವ ವಿಚಾರವಿತ್ತು. ಆದರೆ, ಸತತ ಮಳೆ ಬೀಳುತ್ತಿರುವ ಕಾರಣ ಆ ವಿಚಾರವನ್ನು ಕೈ ಬಿಟ್ಟೆವು. ಬೆಂಗ ಳೂರಿನಲ್ಲಿ ಪಂದ್ಯ ನಡೆದರೆ ಜನ ಸೇರುವುದೇ ಕಷ್ಟ. ಆದ್ದರಿಂದ ರಾಜಧಾನಿಯಿಂದ ಹೊರಗಡೆ ಪಂದ್ಯ ಆಯೋಜಿಸಲಾಗಿದೆ’ ಎಂದು ಬ್ರಿಜೇಶ್ ವಿವರಿಸಿದರು.
ಹೋದ ವರ್ಷದ ಕೆಪಿಎಲ್ ವೇಳೆಗೆ ಚಾಂಪಿಯನ್ಸ್ ಲೀಗ್ ಟೂರ್ನಿ ಕೂಡಾ ನಡೆದಿತ್ತು. ಆದ್ದರಿಂದ ರಾಜ್ಯದ ಕೆಲ ಆಟಗಾರರು ಪಾಲ್ಗೊಂಡಿರಲಿಲ್ಲ. ಆ ಆಟಗಾರರೂ ನಾಲ್ಕನೇ ಆವೃತ್ತಿಗೆ ಲಭ್ಯರಿದ್ದಾರೆ.
ರಾಜ್ಯ ರಣಜಿ ತಂಡದ ನಾಯಕ ವಿನಯ್ ಕುಮಾರ್, ಆಲ್ರೌಂಡರ್ ಸ್ಟುವರ್ಟ್ ಬಿನ್ನಿ, ರಾಬಿನ್ ಉತ್ತಪ್ಪ, ಕೆ.ಎಲ್. ರಾಹುಲ್ ಅಭಿಮನ್ಯು ಮಿಥುನ್, ಮನೀಷ್ ಪಾಂಡೆ, ಎಸ್. ಅರವಿಂದ್, ಕರುಣ್ ನಾಯರ್, ಜೆ. ಸುಚಿತ್, ಕೆ.ಸಿ. ಕಾರಿಯಪ್ಪ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.
ಕಣಕ್ಕಿಳಿಯಲಿದ್ದಾರೆ ಹಿರಿಯ ಆಟಗಾರರು: ಈ ಬಾರಿಯ ಐಪಿಎಲ್ ಯುವ ಪ್ರತಿಭೆಗಳಿಗಷ್ಟೇ ಅಲ್ಲದೇ ಹಿರಿಯರ ಸಾಮರ್ಥ್ಯ ಪರೀಕ್ಷೆಗೂ ವೇದಿಕೆಯಾಗಲಿದೆ. ಭಾರತ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್, ಸ್ಪಿನ್ನರ್ ಸುನಿಲ್ ಜೋಶಿ, ಡೇವಿಡ್ ಜಾನ್ಸನ್ ಸೇರಿದಂತೆ ಪ್ರಮುಖ ಆಟಗಾರರು ನಾಲ್ಕನೇ ಆವೃತ್ತಿಯಲ್ಲಿ ಕಣಕ್ಕಿಳಿಯಲಿದ್ದಾರೆ.
33 ಟೆಸ್ಟ್ ಹಾಗೂ 161 ಏಕದಿನ ಪಂದ್ಯಗಳನ್ನು ಆಡಿರುವ ವೆಂಕಟೇಶ್ ಪ್ರಸಾದ್ ಅವರಿಗೆ ಈಗ 45ರ ಹರೆಯ. ಇವರು ಸದ್ಯ ಉತ್ತರ ಪ್ರದೇಶ ತಂಡದ ಕೋಚ್ ಆಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ರಣಜಿ ತಂಡದ ತರಬೇತುದಾರ ಗದಗನ ಸುನಿಲ್ ಜೋಶಿ ನಾಲ್ಕು ವರ್ಷಗಳ ಹಿಂದೆ ಪ್ರಥಮ ದರ್ಜೆ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರು.
45 ವರ್ಷದ ಜೋಶಿ 15 ಟೆಸ್ಟ್ ಹಾಗೂ 69 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಎರಡು ಟೆಸ್ಟ್ ಮತ್ತು 39 ಪ್ರಥಮ ದರ್ಜೆ ಪಂದ್ಯ ಆಡಿರುವ ಡೇವಿಡ್ ಜಾನ್ಸನ್ ಮೊದಲು ಬೆಳಗಾವಿ ಪ್ಯಾಂಥರ್ಸ್ ತಂಡದಲ್ಲಿ ಆಡಿದ್ದರು.
ಲಾಂಛನ ಅನಾವರಣ: ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡದ ಮಾಲೀಕರಾದ ಅರ್ಜುನ್ ರಂಗ ಮತ್ತು ಪವನ್ ರಂಗ ಅವರು 2015ರ ಋತುವಿನ ಕೆಪಿಎಲ್ ಲಾಂಛನವನ್ನು ಅನಾವರಣ ಮಾಡಿದರು.
ಕೆಎಸ್ಸಿಎ ಅಧ್ಯಕ್ಷ ಪಿ.ಆರ್. ಅಶೋಕ್ ಆನಂದ್, ಉಪಾಧ್ಯಕ್ಷ ಸಂಜಯ್ ದೇಸಾಯಿ, ಸಹಾಯಕ ಕಾರ್ಯದರ್ಶಿ ಸಂತೋಷ್ ಮೆನನ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಜುಲೈ 25ಕ್ಕೆ ಹರಾಜು
ನಾಲ್ಕನೇ ಆವೃತ್ತಿಗೆ ಕೆಎಸ್ಸಿಎಯಲ್ಲಿ ಜುಲೈ 25ರಂದು ಆಟಗಾರರ ಹರಾಜು ನಡೆಯಲಿದೆ. ಹಿಂದಿನ ಕೆಪಿಎಲ್ನಲ್ಲಿ ಆಡಿದ್ದ ತಂಡವು ತನ್ನಲ್ಲಿ ಇಬ್ಬರು ಆಟಗಾರರನ್ನು ಮಾತ್ರ ಉಳಿಸಿ ಕೊಳ್ಳಲು ಅವಕಾಶವಿದೆ. ಉಳಿದ ಆಟಗಾರರನ್ನು ಹರಾಜಿನ ಮೂಲಕವೇ ಖರೀದಿಸಬೇಕು. ಜುಲೈ 20ರ ಒಳಗೆ ಫ್ರಾಂಚೈಸ್ ಗಳು ತಾವು ಆಯ್ಕೆ ಮಾಡಿಕೊಂಡ ಆಟಗಾರರ ಮಾಹಿತಿ ನೀಡ ಬೇಕಿದೆ. ಒಂದು ತಂಡ ಕಡ್ಡಾಯ ವಾಗಿ ಇಬ್ಬರು ಸ್ಥಳೀಯ ಆಟ ಗಾರರನ್ನು ಖರೀದಿಸಬೇಕು.
‘ಆಟಗಾರರ ಜೊತೆಗಿನ ಒಪ್ಪಂದ ಒಂದು ವರ್ಷ ದ್ದಾಗಿರುತ್ತದೆ. ಪ್ರತಿ ತಂಡಕ್ಕೂ ತಮ್ಮಲ್ಲಿರುವ ಇಬ್ಬರು ಆಟ ಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ಹೋದ ಆವೃತ್ತಿಯಲ್ಲಿ ನೀಡಿದ ಹಣವನ್ನೇ ಈ ಬಾರಿ ನೀಡಲಾಗುತ್ತದೆ. ಹರಾಜು ವೇಳೆ ಬ್ಯಾಟ್ಸ್ಮನ್ ಹಾಗೂ ಬೌಲರ್ ಹೀಗೆ ಪ್ರತ್ಯೇಕ ಗುಂಪು ಮಾಡ ಲಾಗುತ್ತದೆ’ ಎಂದು ವಿನಯ್ ಮೃತ್ಯುಂಜಯ್ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.