ಭಾನುವಾರ, ಏಪ್ರಿಲ್ 11, 2021
30 °C

ಆಗುಂಬೆಯಲ್ಲೇ ಮಳೆ ಕೊರತೆ!

ಶಿವಾನಂದ ಕರ್ಕಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ಮಲೆನಾಡಿನಲ್ಲೂ ಮುಂಗಾರು ಇನ್ನಿಲ್ಲದಂತೆ ಕೈಕೊಟ್ಟಿದೆ. `ಉಧೋ...ಉಧೋ...~ ಎಂದು ಸುರಿಯಬೇಕಿದ್ದ ಮಳೆ ಸುರಿಯದೇ ಈ ಹೊತ್ತಲ್ಲಿ ನೆಲಕ್ಕೆ ಬಿಸಿಲಿನ ಸಿಂಚನವಾಗುತ್ತಿದೆ. ಏನಿದು ವಿಸ್ಮಯ ಎಂದು ಆಗಸದತ್ತ ವಯೋ ವೃದ್ಧರಾದಿಯಾಗಿ ಮುಖಮಾಡಿ ಕಳವಳ ವ್ಯಕ್ತಪಡಿಸುತ್ತಿದ್ದಾರೆ!ಇಂಥ ವಾತಾವರಣಕ್ಕೆ ತೀರ್ಥಹಳ್ಳಿ ತಾಲ್ಲೂಕು ಸಾಕ್ಷಿಯಾಗಿದ್ದು, ತಾಲ್ಲೂಕಿನ ಆಗುಂಬೆ ಹೋಬಳಿಯನ್ನು ಹೊರತುಪಡಿಸಿ ಉಳಿದೆಲ್ಲಾ ಹೋಬಳಿಗಳು ವಾಡಿಕೆ ಮಳೆ ಕಾಣದೇ ಉಳಿದಿವೆ. ಈಗಾಗಲೇ, ಸುರಿದ ಮಳೆ ಪ್ರಮಾಣ ತೀರಾ ಕಡಿಮೆ. ಇನ್ನೂ ಮುಕ್ಕಾಲು ಪಾಲು ಮಳೆ ಬಿದ್ದರೆ ಮಾತ್ರ ವಾಡಿಕೆ ಮಳೆಯ ಸಮೀಪ ತಲುಪುವಂತಾಗುತ್ತದೆ. ಆದರೆ, ಆಗಸ್ಟ್ ತಿಂಗಳು ಆರಂಭವಾದರೂ ಅಂಥ ಮಳೆಯ ವರತೆ ಕಾಣದೇ ಇರುವುದು ರೈತರನ್ನು ಆತಂಕಕ್ಕೆ ನೂಕಿದೆ.ಮಕ್ಕಿಗದ್ದೆ (ಸಂಪೂರ್ಣ ಮಳೆಯಾಶ್ರಿತ) ರೈತರಿಗೆ ಮಳೆ ಕೊರತೆ ಶಾಪವಾಗಿದೆ. ಕಳೆದ ತಿಂಗಳ ಕೊನೆಯಲ್ಲಿ ಚಿಗುರಿದ ಮಳೆ ಕೊಂಚ ಆಸೆ, ಭರವಸೆಯನ್ನು ಮೂಡಿಸಿತ್ತು. ಆದರೆ, ಈಗ ಸಂಪೂರ್ಣ ಮಳೆ ಮಾಯವಾದಂತಾಗಿದೆ. ಹಾಗಾಗಿ, ಮಂಡಗದ್ದೆ, ಅಗ್ರಹಾರ, ಮುತ್ತೂರು ಹೋಬಳಿಗಳ ಬಹುತೇಕ ಪ್ರದೇಶದ ಬತ್ತದ ಗದ್ದೆಗಳು ಬಿಸಿಲನ್ನೇ ಹೊದ್ದು ಮಲಗಿವೆ. ಇಲ್ಲಿನ ಗದ್ದೆಗಳ ಉಳುಮೆಗೆ ಇದುವರೆವಿಗೂ ಸಾಧ್ಯವಾಗಿಲ್ಲ.ಅಲ್ಪಸ್ವಲ್ಪ ನೀರನ್ನು ಬಳಸಿಕೊಂಡು ಸಸಿ ಮಡಿಗಳನ್ನು ಸಿದ್ಧಪಡಿಸಿಕೊಂಡ ರೈತರಿಗೆ ಈಗ ನಾಟಿ ಮಾಡಲು ನೀರಿಲ್ಲದಂತಾಗಿದೆ. 22 ದಿನಗಳ ಸುತ್ತಮುತ್ತಲಲ್ಲಿ ನಾಟಿ ಮಾಡಬೇಕಿದ್ದ ಸಸಿ ಮಡಿಗಳು ಬಲಿಯತೊಡಗಿವೆ.ಬಲಿತ ಸಸಿ ನಾಟಿ ಮಾಡಲು ಬರುವುದಿಲ್ಲ. ಇಂಥ ಸಸಿಯನ್ನು ಬಳಕೆ ಮಾಡಿ ನಾಟಿ ಮಾಡಿದರೂ ಹೆಚ್ಚು ಇಳುವರಿ ಸಾಧ್ಯವಿಲ್ಲ. ಅದು ತಪ್ಪು ಕ್ರಮವಾಗಲಿದೆ ಎಂದು ತಾಲ್ಲೂಕು ಕೃಷಿ ಅಧಿಕಾರಿ ಪಾಂಡು ತಿಳಿಸುತ್ತಾರೆ.ಆಗುಂಬೆ ಹೋಬಳಿಯಲ್ಲಿ ಶೇ 15ರಷ್ಟು ಮಳೆ ಕೊರತೆ ಕಂಡುಬಂದಿದ್ದು, ಕಸಬಾ, ಅಗ್ರಹಾರ, ಮುತ್ತೂರು, ಮಂಡಗದ್ದೆ ಹೋಬಳಿಗಳಲ್ಲಿ ಶೇ 42ರಷ್ಟು ಮಳೆ ಕೊರತೆ ಉಂಟಾಗಿದೆ. ಅಗ್ರಹಾರ ಹೋಬಳಿಯಲ್ಲಿ 60 ಇಂಚಿಗಿಂತ ಹೆಚ್ಚು ಮಳೆಯಾಗುತ್ತಿತ್ತು. ಆದರೆ, ಈವರೆವಿಗೆ 20 ಇಂಚು ಮಳೆಯಾಗಿದೆ.ಮಂಡಗದ್ದೆ ಹೋಬಳಿಯಲ್ಲಿ ಈ ಹೊತ್ತಿಗೆ 50 ಇಂಚು ಮಳೆಯಾಗಬೇಕಿತ್ತು. ಈಗ 12 ಇಂಚು ಕೂಡ ಮಳೆಯಾಗಿಲ್ಲ. ಹೀಗಾದರೆ ರೈತರು ನಾಟಿ ಮಾಡುವುದಾದರೂ ಹೇಗೆ? ಬತ್ತದ ಸಸಿಮಡಿಗಳು ನೀರಿಲ್ಲದೇ ಒಣಗುತ್ತಿವೆ ಎಂದು ರೈತ ಕುಣಜೆ ಕಿರಣ್ ಪ್ರಭಾಕರ್ ತಿಳಿಸಿದ್ದಾರೆ.ತಾಲ್ಲೂಕಿನಲ್ಲಿ ಶೇ 40ರಷ್ಟು ನಾಟಿ ಕಾರ್ಯ ನಡೆದಿದೆ. ಶೇ 70 ಭಾಗ ನಾಟಿಯಾಗಿಲ್ಲ. ನಾಟಿ ಕಾರ್ಯ ಸುಮಾರು ಎರಡು ವಾರಗಳ ಕಾಲ ಮುಂದೆ ಸರಿದಂತಾಗಿದೆ. ಮಕ್ಕಿಗದ್ದೆಗಳನ್ನು ಇನ್ನೂ ಉಳುಮೆ ಮಾಡಿಲ್ಲ. ಮಳೆ ಆಗಸ್ಟ್ ತಿಂಗಳಿನಲ್ಲಿ ಬಿದ್ದರೆ ಮಾತ್ರ ಮಕ್ಕಿಗದ್ದೆಗಳನ್ನು ನಾಟಿ ಮಾಡಬಹುದಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.ಮಕ್ಕಿಗದ್ದೆಗಳನ್ನು ನಂಬಿಕೊಂಡ ಕನ್ನಂಗಿ, ಹಣಗೆರೆ, ಕುಣಜೆ, ಕಲ್ಲುಕೊಪ್ಪ, ಶಿರನಲ್ಲಿ, ಕೆರೆಹಳ್ಳಿ, ಕೋಣಂದೂರು ಭಾಗದ ದೇಮ್ಲಾಪುರ, ಕಲ್ಲಳ್ಳಿ, ಹೊಸಕೊಪ್ಪ, ಮಳಲೀಮಕ್ಕಿ ಮುಂತಾದ ಭಾಗದ ರೈತರು ನಾಟಿ ಮಾಡಲು ಮಳೆಗಾಗಿ ಕಾಯುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.