ಮಂಗಳವಾರ, ಏಪ್ರಿಲ್ 20, 2021
29 °C

ಆಗ ತೊಡೆ ತಟ್ಟಿದ್ದರು; ಈಗ ಕೈಜೋಡಿಸಿದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಉತ್ತರ ಕರ್ನಾಟಕದ ಗಂಡು ಮೆಟ್ಟಿದ ನೆಲವೆಂದೇ ಪ್ರಖ್ಯಾತವಾದ ಹುಬ್ಬಳ್ಳಿ 24 ವರ್ಷಗಳ ಸುಧೀರ್ಘ ಬಿಡುವಿನ ನಂತರ ತನ್ನ ಅಂಗಳದಲ್ಲಿ ಬೆಳೆದ `ಹುಡುಗ~ನನ್ನು ಜಗದೀಶ ಶೆಟ್ಟರ್ ಅವರ ರೂಪದಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಕಾಣುತ್ತಿದೆ.ಈ ಹಿಂದೆ ಹುಬ್ಬಳ್ಳಿಯ ಎಸ್.ಆರ್. ಬೊಮ್ಮಾಯಿ (13-8-1988ರಿಂದ 21-4-1989) ರಾಜ್ಯದ ಮುಖ್ಯಮಂತ್ರಿಯಾಗಿ ಉತ್ತರ ಕರ್ನಾಟಕ -ಅದರಲ್ಲೂ ಹುಬ್ಬಳ್ಳಿ ಭಾಗದಲ್ಲಿ- ಸಂಭ್ರಮ ಉಕ್ಕಿ ಹರಿಯುವಂತೆ ಮಾಡಿದ್ದರು. ಬಳಿಕ ಮುಂಬೈ-ಕರ್ನಾಟಕದಲ್ಲಿ ಅಂತಹ ಜನನಾಯಕರು ಹೊರಹೊಮ್ಮದೇ ಹೋಗಿದ್ದರಿಂದ ಆ ಹುದ್ದೆಯ ಹತ್ತಿರಕ್ಕೆ ಇಲ್ಲಿಯ ಯಾವ ರಾಜಕಾರಣಿಗಳೂ ಬಂದಿರಲಿಲ್ಲ.ಎನ್. ಧರ್ಮ್‌ಸಿಂಗ್ (28-5-2004ರಿಂದ 3-2-2006) ಕರ್ನಾಟಕದ ಉತ್ತರ ಭಾಗವು ಕಂಡಿದ್ದ ಕೊನೆಯ ಮುಖ್ಯಮಂತ್ರಿಯಾಗಿದ್ದರು. ಬಿ.ಡಿ. ಜತ್ತಿ, ಎಸ್.ಆರ್. ಕಂಠಿ, ವೀರೇಂದ್ರ ಪಾಟೀಲ ಹಾಗೂ ರಾಮಕೃಷ್ಣ ಹೆಗಡೆ ಉತ್ತರ ಕರ್ನಾಟಕ ಇದುವರೆಗೆ ಕಂಡಿರುವ ಇತರ ಮುಖ್ಯಮಂತ್ರಿಗಳಾಗಿದ್ದಾರೆ.ಶೆಟ್ಟರ್ ಮೊದಲ ಬಾರಿಗೆ ಶಾಸಕರಾಗಿದ್ದು 1994ರಲ್ಲಿ. ಆಗ ಜನತಾ ದಳದಿಂದ ಶೆಟ್ಟರ್ ವಿರುದ್ಧ ಸ್ಪರ್ಧಿಸಿದವರು ಬಸವರಾಜ ಬೊಮ್ಮಾಯಿ. ಆಗಿನ್ನೂ ಶೆಟ್ಟರ್ ಅಷ್ಟಾಗಿ ಹೆಸರು ಮಾಡಿರಲಿಲ್ಲ. ಆದರೆ, ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಮಗನಾಗಿ ಪ್ರಚಾರದಲ್ಲಿ ಮುಂದಿದ್ದರು. ಶೆಟ್ಟರ್ ಪಟ್ಟು ಎಷ್ಟು ಬಿಗಿಯಾಗಿತ್ತೆಂದರೆ 16,000 ಮತಗಳ ಅಂತರದಿಂದ ಗೆದ್ದೂಬಿಟ್ಟರು.ವರ್ಷದ ಹಿಂದೆ ಶೆಟ್ಟರ್ ಮುಖ್ಯಮಂತ್ರಿ ಆಗುವ ಅವಕಾಶ ಒದಗಿದ್ದಾಗ ಅವರನ್ನು ಸೋಲಿನ ಅಖಾಡಕ್ಕೆ ಕೆಡುವವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು ಅದೇ ಬೊಮ್ಮಾಯಿ. ಆ ಮೂಲಕ 18 ವರ್ಷಗಳ ಹಿಂದಿನ ಸೋಲಿನ ಸೇಡನ್ನು ಅವರು ತೀರಿಸಿಕೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅದೇ ಬೊಮ್ಮಾಯಿ ಈಗ ಶೆಟ್ಟರ್ ಮುಖ್ಯಮಂತ್ರಿ ಹುದ್ದೆಗೆ ಏರುವಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಮಾಡಿದೆ.ಕೇವಲ 12 ತಿಂಗಳ ಹಿಂದೆ ಡಿ.ವಿ. ಸದಾನಂದಗೌಡರಿಗೆ ಜೈಕಾರ ಹಾಕಿದ್ದ ಅಖಂಡ ಧಾರವಾಡ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು ಇದೀಗ ಶೆಟ್ಟರ್ ಜಪ ಆರಂಭಿಸಿದ್ದಾರೆ. ರಾಜಕೀಯ ಹಿನ್ನೆಲೆಯ ಕುಟುಂಬವನ್ನು ಹೊಂದಿದ್ದರೂ ಶೆಟ್ಟರ್ ಅವರಿಗೆ ಆರಂಭದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಅಷ್ಟಾಗಿ ಅಭಿರುಚಿ ಇರಲಿಲ್ಲ. 1990ರಲ್ಲಿ ಶಹರ ಬಿಜೆಪಿ ಘಟಕದ ಅಧ್ಯಕ್ಷರಾಗುವ ಮೂಲಕ ಅವರು `ಎಂಟ್ರಿ~ ಕೊಟ್ಟರು. ಪಕ್ಷದ ಸಭೆಗಳಿದ್ದಾಗ ಗೆಳೆಯ ಮಲ್ಲಿಕಾರ್ಜುನ ಸಾವಕಾರ ಅವರನ್ನು ಒತ್ತಾಯ ಮಾಡಿ ಸಭೆಗೆ ಕರೆತರುತ್ತಿದ್ದರು.1991ರಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾದಾಗ ಸೂಕ್ತ ಅಭ್ಯರ್ಥಿಗೆ ಹುಡುಕಾಟ ನಡೆಸಿದ ಬಿಜೆಪಿ ಮುಖಂಡರು ಶೆಟ್ಟರ್ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದರು. ಮೆರವಣಿಗೆಯಲ್ಲಿ ಹೋಗಿ ಶೆಟ್ಟರ್ ನಾಮಪತ್ರ ಸಲ್ಲಿಸಿ ಬಂದಿದ್ದೂ ಆಯಿತು. ಬಳಿಕ ಚಂದ್ರಕಾಂತ ಬೆಲ್ಲದ ಅವರ ರಂಗಪ್ರವೇಶವಾಯಿತು. ಮುಖಂಡರು ಶೆಟ್ಟರ್ ಬದಲು ಬೆಲ್ಲದ್ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದಾಗ ಮನಸ್ಸು ಕಹಿ ಮಾಡಿಕೊಳ್ಳದೆ ಶೆಟ್ಟರ್ ನಾಮಪತ್ರ ಹಿಂದಕ್ಕೆ ಪಡೆದರು ಎಂದು ನೆನೆಯುತ್ತಾರೆ ಸಾವಕಾರ.ಈದ್ಗಾ ಹೋರಾಟದ ಮೂಲಕ ಶೆಟ್ಟರ್ ನಾಯಕರಾಗಿ ಬೆಳೆದರು. ಲಾಟಿ ಏಟು ತಿಂದಿದ್ದಲ್ಲದೆ ಜೈಲಿಗೂ ಹೋಗಿ ಬಂದ ಅವರು, ಬಳಿಕ ಹೈಕೋರ್ಟ್ ಪೀಠ, ಕಳಸಾ-ಬಂಡೂರಿ ನಾಲಾ ಜೋಡಣೆ, ನೈಋತ್ಯ ರೈಲ್ವೆ ವಲಯ ಮೊದಲಾದ ವಿಷಯಗಳನ್ನು ಮುಂದಿಟ್ಟುಕೊಂಡು ಸಕ್ರಿಯ ಹೋರಾಟ ನಡೆಸಿದರು. ಶಾಸಕರಾಗಿ ಆಯ್ಕೆಯಾಗುತ್ತಲೇ ಹೋದರು. ಮುಂದೆ 1999ರಲ್ಲಿ ಶೆಟ್ಟರ್ ವಿರೋಧ ಪಕ್ಷದ ನಾಯಕರಾದಾಗ, ಡಿ.ವಿ. ಸದಾನಂದಗೌಡರು ಉಪ ನಾಯಕರಾಗಿದ್ದರು!ಈಗ ಅದೇ ಗೌಡರು ತಮ್ಮ ಆಗಿನ ನಾಯಕನಿಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡುತ್ತಿದ್ದಾರೆ. `ಏನೇ ಅವಕಾಶ ತಪ್ಪಿದರೂ ಅವರೆಂದೂ ಬೇಜಾರು ಮಾಡಿಕೊಳ್ಳಲಿಲ್ಲ. ಬದಲಾಗಿ ತಮ್ಮ ಸರದಿಗೆ ತಾಳ್ಮೆಯಿಂದ ಕಾಯ್ದರು. ಈಗ ಅದಕ್ಕೆ ತಕ್ಕ ಫಲ ಸಿಕ್ಕಿದೆ ಎನ್ನುತ್ತಾರೆ ಸಾವಕಾರ.

`ನಾನೇ ಮುಖ್ಯಮಂತ್ರಿ ಆದಂತಾಗಿದೆ~

ನನ್ನ ಬಹುಕಾಲದ ಹಿರಿಯ ಗೆಳೆಯ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗುತ್ತಿರುವುದು ನಾನೇ ಸಿ.ಎಂ. ಆದಷ್ಟು ಸಂತಸ ತಂದಿದೆ ಎನ್ನುತ್ತಾರೆ ಸಂಸದ ಪ್ರಹ್ಲಾದ ಜೋಶಿ. ರಾಷ್ಟ್ರಧ್ವಜ ಹಾರಿಸುವ ಹೋರಾಟದಿಂದಲೂ ನಾವು ಒಟ್ಟಿಗೇ ಕೆಲಸ ಮಾಡಿದ್ದೇವೆ.ಜನಪ್ರತಿನಿಧಿಗಳಾಗಿಯೂ ಜೊತೆಯಾಗಿ ಕೆಲಸ ಮಾಡಿದ್ದೇವೆ. ನನ್ನ ಕ್ಷೇತ್ರದ ಸಮಸ್ಯೆಗೆ ಅವರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ ಎಂದು ಅವರು ಹೇಳುತ್ತಾರೆ. ಶೆಟ್ಟರ್ ತಮ್ಮ ನೇತೃತ್ವದಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯಬೇಕು. ಗೊಂದಲಗಳನ್ನೆಲ್ಲ ಬಗೆಹರಿಸಬೇಕು.

 

ಮತ್ತೆ ಇಂತಹ ಸನ್ನಿವೇಶ ಎದುರಾಗದಂತೆ ಎಚ್ಚರವಹಿಸಬೇಕು ಎನ್ನುವ ಸಲಹೆ ನೀಡುವ ಅವರು, ಆ ನೈಪುಣ್ಯ, ಅನುಭವ ಅವರಲ್ಲಿದೆ ಎನ್ನುತ್ತಾರೆ. ಬರಗಾಲದ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಬೇಕು. ಉತ್ತರ ಕರ್ನಾಟಕದ ನಿರೀಕ್ಷೆಗಳನ್ನೂ ಗಮನಿಸಬೇಕು ಎಂದು ಹೇಳುವ ಅವರು, ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎನ್ನುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.