ಸೋಮವಾರ, ಜೂನ್ 21, 2021
21 °C

ಆಟವೇನು ನೋಟವೇನು...

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಆಟವೇನು ನೋಟವೇನು...

`ಕೆಲವು ವರ್ಷಗಳಿಂದ ಬ್ಯಾಡ್ಮಿಂಟನ್ ಪಂದ್ಯಗಳನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಾ ಬಂದಿರುವುದರಿಂದ ಪ್ರತಿಷ್ಠಿತ ಟೂರ್ನಿಗಳಲ್ಲಿ ಆಡುವ ಆಟಗಾರ್ತಿಯರು ಸ್ಕರ್ಟ್, ಮೈಗಂಟಿದ ಟಿ-ಶರ್ಟ್‌ಗಳನ್ನೇ ತೊಟ್ಟು ತಮ್ಮ ದೇಹಸಿರಿ ತೋರಬೇಕು. ಆಗ ಅವರ ಸೌಂದರ್ಯದ ಆಕರ್ಷಣೆಯಿಂದ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಬ್ಯಾಡ್ಮಿಂಟನ್ ಆಟದ ಉದ್ಧಾರಕ್ಕೆ ಆಟಗಾರ್ತಿಯರು ಇಂಥ ವಸ್ತ್ರಗಳನ್ನು ತೊಟ್ಟು ಸಹಕರಿಸಬೇಕು~.ಕಳೆದ ವರ್ಷ ಮೇ ತಿಂಗಳಲ್ಲಿ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಅಧಿಕಾರಿಗಳು ತೆಗೆದುಕೊಂಡ ಈ ತೀರ್ಮಾನವನ್ನು `ನ್ಯೂಯಾರ್ಕ್ ಟೈಮ್ಸ~ ವರದಿ ಮಾಡಿತು.ಬ್ಯಾಡ್ಮಿಂಟನ್ ಆಟದ ಬಗ್ಗೆ ತಲಸ್ಪರ್ಶಿಯಾಗಿ ಬರೆಯುವ ಟ್ರೇಸ್ಲಿ ಲೊಮ್‌ರ‌್ಯಾಂಟ್ಜ್ `ಸ್ಕೋರ್ ಒನ್ ಫಾರ್ ವುಮೆನ್: ಸೆಕ್ಸಿಯೆಸ್ಟ್ ಬ್ಯಾಡ್ಮಿಂಟನ್ ಯೂನಿಫಾರ್ಮ್ ರೂಲ್ಸ್ ಹ್ಯಾಸ್ ಬೀನ್ ಶೆಲ್ವ್ಡ್~ ಎಂಬ ಶೀರ್ಷಿಕೆಯ ಲೇಖನ ಬರೆದು ಆಟಗಾರ್ತಿಯರನ್ನು ಆಟದಿಂದ ಆಕರ್ಷಿಸಿ ಎಂದು ಹೇಳದೆ ವಸ್ತ್ರದಿಂದ ಸೆಳೆಯಿರಿ ಎಂದು ಅಪ್ಪಣೆ ಕೊಡಿಸಿರುವ ಫೆಡರೇಷನ್ ಧೋರಣೆಯನ್ನು ಲೇವಡಿ ಮಾಡಿದರು. ಏಷ್ಯಾ ಖಂಡದ ಎಷ್ಟೋ ದೇಶದ ಹೆಣ್ಣುಮಕ್ಕಳು ಮಂಡಿ ಮೇಲೆ ಬಟ್ಟೆ ತೊಡುವ ಕಷ್ಟಗಳನ್ನೆಲ್ಲಾ ಅವರು ಪ್ರಸ್ತಾಪ ಮಾಡಿದರು.ಅಷ್ಟು ಹೊತ್ತಿಗೆ ಸಾನಿಯಾ ಮಿರ್ಜಾ ಟೆನಿಸ್ ಆಟ ತೀವ್ರತೆ ಕಳೆದುಕೊಂಡಾಗಿತ್ತು. ಭಾರತದವರೇ ಆದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ಹೊಂಬಣ್ಣದಿಂದಾಗಿ ಫ್ಯಾಷನ್ ಶೋ ರ‌್ಯಾಂಪ್‌ಗೆ ಹಳಬರಾಗಿದ್ದರು. ಮಂದಿರಾ ಬೇಡಿಯ ಸುಂದರ ಉತ್ತರಾಧಿಕಾರಿಣಿಯರು ಮೈಕ್ ಹಿಡಿದು ಆಟದ ವಿಶ್ಲೇಷಣೆಯಲ್ಲಿ ತೊಡಗುವುದೂ ಮಾಮೂಲಾಗಿತ್ತು. ಆಟಕ್ಕೂ ಗ್ಲಾಮರ್‌ಗೂ ಸ್ಪಷ್ಟ ಚೌಕಟ್ಟು ತಂತಾನೇ ರೂಪುಗೊಂಡಿತ್ತು.ಸಾನಿಯಾ ಮಿರ್ಜಾ ಟೆನಿಸ್ ಆಟ ಕಾವು ಉಳಿಸಿಕೊಂಡಿದ್ದ ಕಾಲದಲ್ಲಿ ಈ ಗ್ಲಾಮರ್ ಪಾರುಪತ್ಯ ಶುರುವಾದದ್ದು. ಸಾನಿಯಾ ಸರ್ವ್ ಮಾಡುವಾಗ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣುಗಳೆಲ್ಲಾ ಚುರುಕಾಗುತ್ತಿದ್ದವು. ಬಲಗೈ ಮೇಲೆತ್ತುವಾಗ ಅವರ ಟಿ-ಶರ್ಟ್ ಮೇಲಕ್ಕೆ ಹೋಗಿ, ಕಾಣುತ್ತಿದ್ದ ಉದರ ಭಾಗವನ್ನು ಚಿತ್ರವಾಗಿಸುವ ಉಮೇದನ್ನು ಸ್ವೀಕರಿಸಲು ದೊಡ್ಡ ಮಾರುಕಟ್ಟೆಯೇ ತಯಾರಾಗಿತ್ತು. ಮೂಗುತಿ ಸುಂದರಿ ಎಂಬ ಗುಣವಿಶೇಷಣವಂತೂ ಸಾನಿಯಾ ವಿಷಯದಲ್ಲಿ ಕ್ಲೀಷೆ ಎನ್ನುವಷ್ಟು ಬಳಕೆಯಾಯಿತು.`ನೋಡಿ, ಟೆನಿಸ್‌ನಲ್ಲಿ ಸಾನಿಯಾ ಅವರಷ್ಟು ಭಾರತದ ಯಾವ ಹೆಣ್ಣುಮಗಳೂ ಅಚೀವ್ ಮಾಡಿರಲಿಲ್ಲ. ಆದರೆ ಟೀವಿಯವರು ಅವರ ಗ್ಲಾಮರ್ ಮುಂದುಮಾಡುತ್ತಾರೆ.ಲೇಖನಗಳಲ್ಲೂ ಅವರ ಸೌಂದರ್ಯದ ಗುಣವಿಶೇಷಣಗಳು. ಸುಮ್ಮನೆ ಅವರನ್ನು ಅವರ ಪಾಡಿಗೆ ಆಡಲು ಬಿಡದೆ ಅವರ ಸ್ಕರ್ಟ್, ಮೂಗುತಿ ಎಂದೆಲ್ಲಾ ಚರ್ಚೆಯಲ್ಲಿ ತೊಡಗುತ್ತಾರೆ. ನಾವೆಲ್ಲಾ ಆಟದ ಬಗ್ಗೆ ಮಾತಾಡೋದನ್ನ ಕಲಿಯಬೇಕು. ಸದ್ಯ, ನನಗೆ ಆ ತಾಪತ್ರಯವಿಲ್ಲ. ನಾನು ಹುಡುಗ~ ಎಂದು ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ಒಂದೊಮ್ಮೆ ಹೇಳಿದ್ದರು. ಪ್ರಜಾವಾಣಿ ಕಚೇರಿಗೆ ಬಂದಿದ್ದ ಅವರು ಆ ದಿನ ಅನೌಪಚಾರಿಕವಾಗಿ ಮಾತನಾಡುತ್ತಾ ಇಂಥ ವಿಷಯಗಳನ್ನೆಲ್ಲಾ ಹಂಚಿಕೊಂಡು ಹೊರಗೆ ಹೋದಾಗ ಅವರನ್ನು ಯಾರೊಬ್ಬರೂ ಗುರುತು ಹಿಡಿಯಲಿಲ್ಲ. ಅಷ್ಟು ಹೊತ್ತಿಗೆ ಅವರು ಬಿಲಿಯರ್ಡ್ಸ್‌ನಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಬೆಂಗಳೂರಿನ ಎಂ.ಜಿ. ರಸ್ತೆಯಿಂದ ಬ್ರಿಗೇಡ್ ಜಂಕ್ಷನ್‌ವರೆಗೆ ಎಲ್ಲರಂತೆ ಹೆಜ್ಜೆಹಾಕುತ್ತಾ ಹೊರಟ ಅವರು `ಸಾನಿಯಾಗೆ ಈ ಸುಖವಿಲ್ಲ~ ಎಂದು ನಕ್ಕು, ಕಣ್ಣು ಹೊಡೆದಿದ್ದರು.ಅಂತರರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್‌ನಲ್ಲಿ ಕರ್ನಾಟಕ ಮೆಚ್ಚುವಂಥ ಸಾಧನೆ ಮಾಡಿದ ಅನೂಪ್ ಶ್ರೀಧರ್ ಸಹ ಒಮ್ಮೆ ಸಂದರ್ಶನ ನೀಡಿದ್ದಾಗ ಸಾನಿಯಾ ಗ್ಲಾಮರ್ ಕುರಿತ ಪ್ರಶ್ನೆಗೆ ಬೆನ್ನುಹಾಕಿದ್ದರು. `ಆಟದ ಬಗ್ಗೆ ಮಾತ್ರ ಮಾತಾಡೋಣ~ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದರು.ಸಚಿನ್ ತೆಂಡೂಲ್ಕರ್ ಕೂಡ ಆಟಗಾರ್ತಿಯರ ಸೌಂದರ್ಯದ ಪ್ರಸ್ತಾಪವಾದಾಗಲೆಲ್ಲಾ, `ನೆಕ್ಸ್ಟ್ ಕ್ವೆಶ್ಚನ್~ ಎಂದವರೇ. ಆಟಗಾರರ ಈ ಅಭಿಪ್ರಾಯ ಏನೇ ಆಗಿದ್ದರೂ ಗ್ಲಾಮರ್‌ನಿಂದಾಗಿಯೇ ಮೆರೆದ ಹಲವಾರು ಆಟಗಾರ್ತಿಯರು ನಮ್ಮ ನಡುವೆ ಇದ್ದಾರೆ. ಅಂಥ ಕೆಲವರನ್ನು ಈಗ ನೆನೆಯೋಣ.ದೀಪಿಕಾ ಪಲ್ಲಿಕಾಲ್ ಚೆನ್ನೈನ ಪ್ರತಿಭಾವಂತ ಸ್ಕ್ವಾಷ್ ಆಟಗಾರ್ತಿ; ಕರ್ನಾಟಕದ ಜೋಶ್ನಾ ಚಿನ್ನಪ್ಪ ಮಾಡಿದ ಸಾಧನೆಯ ಹಾದಿಯಲ್ಲೇ ನಡೆದಾಕೆ. ಇಪ್ಪತ್ತೊಂದರ ಹರೆಯದ ಈ ಹುಡುಗಿ ಆರನೇ ಇಯತ್ತೆಯಲ್ಲಿದ್ದಾಗಲೇ ಮೊದಲ ಅಂತರರಾಷ್ಟ್ರೀಯ ಟೂರ್ನಿ ಆಡಿದ ಪ್ರತಿಭಾವಂತೆ. ಆದರೆ ನಿಯತಕಾಲಿಕೆಗಳಲ್ಲಿ ದೀಪಿಕಾ ಹೊಳೆದದ್ದು ಗ್ಲೋಬಸ್ ಲಿಮಿಟೆಡ್ ಜೊತೆಗಿನ ಮಾಡೆಲಿಂಗ್ ಕಾಂಟ್ರಾಕ್ಟ್‌ನಿಂದ.ಭಾರತ ಮಹಿಳಾ ಬ್ಯಾಸ್ಕೆಟ್‌ಬಾಲ್ ರಾಷ್ಟ್ರೀಯ ತಂಡದ ಸದಸ್ಯೆ ಪ್ರತಿಮಾ ಸಿಂಗ್ ದೆಹಲಿ ಹುಡುಗಿ. ಅಖಿಲ ಭಾರತ ವಿಶ್ವವಿದ್ಯಾಲಯ ಬ್ಯಾಸ್ಕೆಟ್‌ಬಾಲ್‌ನಲ್ಲಿ ತಂಡ ಚಾಂಪಿಯನ್ ಆದಾಗ ಅವರ ಕೊರಳಲ್ಲಿ ಚಿನ್ನದ ಪದಕ ಹೊಳೆದಿತ್ತು. ದೆಹಲಿ ಕಾಲೇಜುಗಳ ಅನೇಕ ಪಡ್ಡೆಗಳಿಗೆ ಇದ್ದಕ್ಕಿದ್ದಂತೆ ಬ್ಯಾಸ್ಕೆಟ್‌ಬಾಲ್ ವ್ಯಾಮೋಹ ಯಾಕೆ ಬಂದಿತು ಎಂದು ಅಧ್ಯಾಪಕರೆಲ್ಲಾ ಪ್ರಶ್ನೆ ಹಾಕಿಕೊಂಡರು. ಅದಕ್ಕೆ ಸಿಕ್ಕ ಉತ್ತರ ಪ್ರತಿಮಾ ಸಿಂಗ್ ಸೌಂದರ್ಯ. ಪ್ರತಿಮಾ ಸಿನಿಮಾ ನಟಿಯಾಗುವ ಕನಸು ಕಾಣುತ್ತಿದ್ದಾರಂತೆ.ಫ್ರೀಸ್ಟ್ರೋಕ್, ಬ್ಯಾಕ್‌ಸ್ಟ್ರೋಕ್, ಬಟರ್‌ಫ್ಲೈ ಹೀಗೆ ತರಹೇವಾರಿ ಈಜಿನಲ್ಲಿ ಪಳಗಿರುವ ಶಿಖಾ ಟಂಡನ್ 2005ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ಸಾಧಕಿ. ಅವರ ಸಾಧನೆಗೆ ಸಹಜ ಸೌಂದರ್ಯದ ಮೆರುಗೂ ಇದೆ. ಅದಕ್ಕೇ ಶಿಖಾ ಅವರನ್ನೂ ಕೆಲವು ಜಾಹೀರಾತುಗಳು ಹುಡುಕಿಕೊಂಡು ಬಂದದ್ದು.ತಾನಿಯಾ ಸಚ್‌ದೇವ ಬುದ್ಧಿವಂತ ಹೆಣ್ಣುಮಗಳು. 1986ರಲ್ಲಿ ಹುಟ್ಟಿದ ದೆಹಲಿಯ ಈ ಹುಡುಗಿ ಹದಿನಾಲ್ಕು ವರ್ಷದೊಳಗಿನವರ ಏಷ್ಯಾ ಮಟ್ಟದ ಜೂನಿಯರ್ ಹಾಗೂ ಸೀನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದಾಕೆ. 2006-07ರಲ್ಲಿ ರಾಷ್ಟ್ರ ಮಟ್ಟದ ಚಾಂಪಿಯನ್ ಎನಿಸಿದ ತಾನಿಯಾ 2009ರಲ್ಲಿ ಅರ್ಜುನ ಪ್ರಶಸ್ತಿಗೂ ಭಾಜನರಾದರು.ಅದೇ ವರ್ಷ ವಿಲ್ಸ್ ಲೈಫ್‌ಸ್ಟೈಲ್ ಇಂಡಿಯಾ ಫ್ಯಾಷನ್ ವೀಕ್‌ನಲ್ಲಿ ರ‌್ಯಾಂಪ್ ಮೇಲೆ ಅಡಿಯಿಟ್ಟು ಸಂಜನಾ ಜಾನ್ ವಿನ್ಯಾಸಗೊಳಿಸಿದ್ದ ವಸ್ತ್ರ ತೊಟ್ಟು ಮೆರೆದಾಗ ಅನೇಕರು ದಂಗಾದದ್ದುಂಟು.2010ರಲ್ಲಿ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿ ಪಡೆದ ಸೈನಾ ನೆಹ್ವಾಲ್ ಆಟಪ್ರೀತಿಯ ಹೆಣ್ಣುಮಗಳು. ಒಲಿಂಪಿಕ್ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಮೊದಲ ಭಾರತೀಯಳು, ವಿಶ್ವ ಜೂನಿಯರ್ ಬ್ಯಾಂಡ್ಮಿಂಟನ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಹುಡುಗಿ ಎಂದೆಲ್ಲಾ ಹೆಸರು ಪಡೆದ ಸೈನಾ ಕೂಡ ಹೈದರಾಬಾದ್ ಫ್ಯಾಷನ್ ವೀಕ್‌ನ ಪ್ರಮುಖ ಆಕರ್ಷಣೆ ಎಂದೆನಿಸಿಕೊಂಡರು. ಮಾರುಕಟ್ಟೆ ಅವರನ್ನೂ ರ‌್ಯಾಂಪ್ ಹತ್ತಿಸಿ ಕೃತಾರ್ಥವಾಯಿತು. ಈಗ ಕೆಲವು ಜಾಹೀರಾತುಗಳ ರೂಪದರ್ಶಿಯಾಗಿಯೂ ಸೈನಾ ಒಂದಿಷ್ಟು ಹಣವನ್ನು ಖಾತೆಗೆ ಜಮಾ ಮಾಡಿಕೊಂಡಿದ್ದಾರೆ.ಗಾಲ್ಫ್ ಆಟದಲ್ಲಿ ಒಂದಿಷ್ಟು ಸದ್ದು ಮಾಡಿರುವ ಶರ್ಮಿಳಾ ನಿಕೊಲೆಟ್, ಏಷ್ಯನ್ ಗೇಮ್ಸನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಏಕೈಕ ಕುಸ್ತಿಪಟು ಸೋನಿಕಾ ಕಾಲಿರಾಮನ್ ಕೂಡ ಸೌಂದರ್ಯದಿಂದಲೇ ಹೆಚ್ಚು ಗುರುತಾದವರು. ಸೋನಿಕಾ ಅಂತೂ `ಖತ್ರೋಂ ಕೆ ಖಿಲಾಡಿ~ ರಿಯಾಲಿಟಿ ಶೋನಲ್ಲಿ ಅಕ್ಷಯ್ ಕುಮಾರ್ ಜೊತೆ ಪಾಲ್ಗೊಂಡು ಖುಷಿಪಟ್ಟ ಹುಡುಗಿ. ತನ್ನ ಉತ್ಸಾಹ ಹಾಗೂ ಕೆಚ್ಚಿನಿಂದಾಗಿ ಗಮನ ಸೆಳೆದ ಬ್ಯಾಡ್ಮಿಂಟನ್ ಪ್ರತಿಭೆ ಜ್ವಾಲಾ ಗುಟ್ಟಾ, ಇಂಡೋ-ಅಮೆರಿಕನ್ ಟೆನಿಸ್ ಆಟಗಾರ್ತಿ ಶಿಖಾ ಒಬೆರಾಯ್ ಹಾಗೂ ಇಷ್ಟೆಲ್ಲಾ ಆಟದ ಸೌಂದರ್ಯವರ್ಧನೆಗೆ ಕಾರಣವಾದ ಸಾನಿಯಾ ಮಿರ್ಜಾ ಈಗಲೂ ಸುದ್ದಿಯಲ್ಲಿದ್ದಾರೆ.ವಿಶ್ವ ಮಟ್ಟದಲ್ಲಿ ಕೂಡ ಆಟಗಾರ್ತಿಯರಿಗೆ ಸೌಂದರ್ಯವೇ ದೊಡ್ಡ ಮಾರುಕಟ್ಟೆ. ಆಟವನ್ನಷ್ಟೇ ಆಡುವ ವೀನಸ್ ವಿಲಿಯಮ್ಸಗಿಂತ ಅವರ ತಂಗಿ ಸೆರೆನಾ ವಿಲಿಯಮ್ಸ ಗಮನ ಸೆಳೆದದ್ದು ಫ್ಯಾಷನ್ ಗೀಳಿನಿಂದ, ಅವರು ತೊಡುತ್ತಿದ್ದ ಚಿತ್ರ ವಿಚಿತ್ರ ವಸ್ತ್ರಗಳಿಂದ, ತಮ್ಮ ಅಂಗಸೌಷ್ಠವ ಪ್ರದರ್ಶನದಿಂದ!ಹರೆಯದ ಹುಡುಗರ ದೇಹ ರಚನೆ ಇದ್ದ ಜಸ್ಟಿನ್ ಹೆನಿನ್ ಹಾರ್ಡಿನ್ ಆಗಲೀ, ಮುಖದ ತುಂಬಾ ಸಣ್ಣ ಕಪ್ಪು ಚುಕ್ಕೆಗಳಿದ್ದ ಕಿಮ್ ಕ್ಲೈಸ್ಟರ್ಸ್‌ ಆಗಲೀ ಆಟದಿಂದಷ್ಟೇ ಹೆಸರು ಮಾಡಿದರೇ ವಿನಾ ದೇಹಾಕಾರದಿಂದಲ್ಲ. ತನ್ನ ದಾಖಲೆಗಳನ್ನು ತಾನೇ ಸರಿಗಟ್ಟುತ್ತಾ, ಹರೆಯದ ಬಹುಪಾಲು ವರ್ಷಗಳನ್ನು ಎರಡು ಉಡುಗೆಗಳಲ್ಲೇ ಕಳೆದಿದ್ದ ಪೋಲ್‌ವಾಲ್ಡ್ ಹಾಗೂ ಹೈಜಂಪ್ ಸ್ಪರ್ಧಿ ಎಲೆನಾ ಇಸನ್ಬಯೇವಾ ಕೂಡ ಸ್ಪರ್ಧೆಯಿಂದಷ್ಟೇ ಗೆದ್ದವರು. `ನನ್ನ ನೀಲಿ ಕಣ್ಣುಗಳನ್ನು ನೋಡಿ ಲೆಕ್ಕವಿಲ್ಲದಷ್ಟು ಫ್ಯಾಷನ್ ಪರಿಣತರು ಹಿಂದೆಬಿದ್ದರು.ಅವರನ್ನೆಲ್ಲಾ ನಾನು ಅಲ್ಲಿಯೇ ಬಿಟ್ಟು ಜಿಗಿಯುತ್ತಾ ಹೋದೆ. ಅದಕ್ಕೇ ಹೀಗಾದೆ~ ಎಂದು ಇಸನ್ಬಯೇವಾ ಒಂದು ಅಂಕಣದಲ್ಲಿ ಬರೆದುಕೊಂಡಿದ್ದರು. ರಷ್ಯಾದ ಆ ಹೆಣ್ಣುಮಗಳಿಗೂ, ಅದೇ ದೇಶದ ಟೆನಿಸ್ ಆಟಗಾರ್ತಿಯರಾದ ಮರಿಯಾ ಶೆರಪೊವಾ ಹಾಗೂ ಅನ್ನಾ ಕೊರ್ನಿಕೋವಾಗೂ ವ್ಯತ್ಯಾಸವಿದೆ. ಅನ್ನಾ ಕೊರ್ನಿಕೋವಾ ಅಂತೂ ಮಾಡೆಲಿಂಗ್‌ನಲ್ಲಿ ಮಾಡಿದಷ್ಟು ಹೆಸರನ್ನು ಆಟದಲ್ಲಿ ಮಾಡಲಾಗಲಿಲ್ಲ. ಒಂದು ಮಗುವನ್ನು ಹೆತ್ತು, ಅದು ಮಾತಾಡುವಂತಾದ ಮೇಲೂ ಬಂದು ಕಣದಲ್ಲಿ ಆಡುವ ಕಿಮ್ ಕ್ಲೈಸ್ಟರ್ಸ್‌ ಸೌದರ್ಯದಿಂದ ಜಗತ್ತನ್ನು ಗೆಲ್ಲುವವರ ಪೈಕಿ ಅಲ್ಲ. ಆಟಪ್ರೀತಿಯಷ್ಟೇ ಅವರ ಬಂಡವಾಳ.ಅಪ್ಪನ ಬಡತನ ನೀಗಲೆಂದು ನಾಲ್ಕು ವರ್ಷ ಬೆವರು ಹರಿಸಿ ಒಂದೇ ಒಂದು ಒಲಿಂಪಿಕ್ ಚಿನ್ನ ಗೆದ್ದು ದೂರದೋಟದ ರಾಣಿಯಾಗಿ ಮೆರೆಯುವ ಕೀನ್ಯಾ, ಇಥಿಯೋಪಿಯಾ ಹುಡುಗಿಯರಿಗೆ ಸ್ಪರ್ಧೆಯೇ ಸೌಂದರ್ಯ. ಹೊಲ ಉಳಲು ಅಪ್ಪನಿಗೊಂದು ಟ್ರ್ಯಾಕ್ಟರ್ ಕೊಡಿಸಲೆಂದು ದೂರದೋಟದ ಮೋಹಕ್ಕೆ ಬಿದ್ದ ಆಫ್ರಿಕಾ ಹುಡುಗಿಯರಿದ್ದಾರೆ.`ಕ್ರಿಕೆಟ್, ಬಾಲಿವುಡ್, ಫ್ಯಾಷನ್ ಶೋ, ಜಾಹೀರಾತು ಜಗತ್ತು- ಇವಿಷ್ಟನ್ನೂ ಯಾವುದಕ್ಕೆ ಬೆಸೆದರೂ ಒಂದು ಸೌಂದರ್ಯಲೋಕ ಹುಟ್ಟಿಕೊಳ್ಳುತ್ತದೆ. ಈಗ ಆಟದಲ್ಲಿ, ಆಟಗಾರ್ತಿಯರ ವಿಷಯದಲ್ಲಿ ಆಗುತ್ತಿರುವುದು ಅದೇ~ ಎಂದು ಪಿ.ಟಿ. ಉಷಾ ಒಮ್ಮೆ ಹೇಳಿದ್ದರು. ಅಥ್ಲೀಟ್‌ಗಳನ್ನು ಪಳಗಿಸುವ ಉಮೇದು ಇಟ್ಟುಕೊಂಡ ಅಂಥ ಸುಂದರವಲ್ಲದ ಹೆಣ್ಣುಮಕ್ಕಳ ಮಾತು ಕೂಡ ಇಂದಿನ ಮಾರುಕಟ್ಟೆಗೆ ನಗಣ್ಯವೆನಿಸುತ್ತಿರಬೇಕು!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.