ಶುಕ್ರವಾರ, ಫೆಬ್ರವರಿ 26, 2021
18 °C

ಆಡಳಿತಗಾರರೇ ನೆಲದೆಡೆಗೆ ನೋಡಿ: ದೊರೆಸ್ವಾಮಿ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಡಳಿತಗಾರರೇ ನೆಲದೆಡೆಗೆ ನೋಡಿ: ದೊರೆಸ್ವಾಮಿ ಕಿವಿಮಾತು

ಬೆಂಗಳೂರು:  ‘ಇಂದಿನ ಆಡಳಿತಗಾರರು ಫ್ಲೋರಿಂಗ್‌ (ನೆಲಹಾಸು)ನಂತಿರುವ ಕೆಳವರ್ಗದವರಿಗಿಂತ  ಸೀಲಿಂಗ್‌ (ಚಾವಣಿ)ನಂತಿರುವ ಮೇಲ್ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ’ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.ನಗರದಲ್ಲಿ ಭಾನುವಾರ ಗವಿಪುರ ಜೈಭೀಮ್‌ ದಲಿತ ಸೇವಾ ಸಂಘ, ಬಸವನಗುಡಿ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗಾನಸುಧಾ ಬೆಳ್ಳಿ ಮಂಡಲದಿಂದ ಬಿ.ಆರ್‌. ಅಂಬೇಡ್ಕರ್‌ ಅವರ 125ನೇ ಜನ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ‘ಸಮಾನತೆ ಕಡೆ–ನಮ್ಮ ನಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ದೇಶ ಸ್ವತಂತ್ರಗೊಂಡು 70 ವರ್ಷ ಕಳೆದರೂ ಶೇ 30ರಷ್ಟು ಜನ ಒಂದೊತ್ತಿನ ಊಟ, ವಿದ್ಯಾಭ್ಯಾಸ, ಉದ್ಯೋಗವಿಲ್ಲದೆ ಜೀವಿಸುತ್ತಿದ್ದಾರೆ. ಮತ್ತೊಂದೆಡೆ ಕೋಟ್ಯಾಧೀಶರ ಆಸ್ತಿ ಮೌಲ್ಯ ಹೆಚ್ಚುತ್ತಿದೆ. ಸಮುದಾಯಗಳ ನಡುವಿನಿಂದ ಭೇದಭಾವಗಳು ಇನ್ನೂ ದೂರವಾಗಿಲ್ಲ. ಅಂಬೇಡ್ಕರ್‌ ತಮಗಾದ ಅಪಮಾನವನ್ನೇ ಸಮುದಾಯಕ್ಕಾದ ಅವಮಾನವೆಂದು ಎಣಿಸಿ ಸಮಾನತೆಗಾಗಿ ಶ್ರಮಿಸಿದರು’ ಎಂದು ಹೇಳಿದರು.‘ರಾಜ್ಯದ ಜನರ ನಡುವಿನ ಆರ್ಥಿಕ ಅಸಮಾನತೆಯನ್ನು ತೊಲಗಿಸಲು, ಪ್ರತಿ ನಿರ್ಗತಿಕ ಕುಟುಂಬಕ್ಕೂ 5 ಎಕರೆ ಜಮೀನನ್ನು ಹಂಚುವಂತೆ ಆಗಸ್ಟ್ 20ರಂದು ಜಾಥಾ ಹಮ್ಮಿಕೊಂಡು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.ನಿಡುಮಾಮಿಡಿ ಪೀಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಮಾತನಾಡಿ, ‘ಭಾರತೀಯರೆಲ್ಲರನ್ನು ಒಟ್ಟುಗೂಡಿಸಿದ ಕೀರ್ತಿ ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ. ಅವರನ್ನು ಗೌರವಿಸಿದರೆ ಜಗತ್ತಿನ ಶ್ರೇಷ್ಠ ಸಂತರನ್ನು ಗೌರವಿಸಿದಂತೆ’ ಎಂದು ಅಭಿಪ್ರಾಯಪಟ್ಟರು.‘ರಾಜಕಾಲುವೆ ಪ್ರದೇಶದಲ್ಲಿ ಮನೆ ಕಟ್ಟಿಕೊಂಡು ಬದುಕುತ್ತಿದ್ದ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಸರ್ಕಾರ ಅಮಾನವೀಯವಾಗಿ ಬೀದಿಪಾಲು ಮಾಡಿದೆ. ಆ ಪ್ರದೇಶದಲ್ಲಿ ವಸತಿಗಳನ್ನು ನಿರ್ಮಿಸಲು ಅನುಮತಿಸಿದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.