ಜಾತಿಪದ್ಧತಿ ಭಾರತಕ್ಕೆ ಅಂಟಿದ ಒಂದು ಅನಿಷ್ಟ. ತಾರತಮ್ಯದ ಅನೇಕ ಮಾದರಿಗಳನ್ನು ಪ್ರಪಂಚದ ಇತರ ಭಾಗಗಳಲ್ಲಿ ಕಾಣಬಹುದಾದರೂ ಹುಟ್ಟಿನಿಂದಲೇ ವ್ಯಕ್ತಿಯ ಸಾಮಾಜಿಕ ಅಂತಸ್ತು, ಅವನ ಕೆಲಸ, ಜೀವಿಸುವ ರೀತಿ, ಸಾಮಾಜಿಕ ಸಂಬಂಧಗಳು ಎಲ್ಲವನ್ನೂ ನಿರ್ಧರಿಸಿ ಎಲ್ಲ ರೀತಿಯ ಮೌಢ್ಯಗಳನ್ನೂ ಭಿತ್ತಿ, ಭಯಭೀತಿಗಳನ್ನು ಹುಟ್ಟಿಸಿ ವ್ಯಕ್ತಿ, ಸಮಾಜ, ಕೊನೆಗೆ ದೇಶವನ್ನೇ ಕುಬ್ಜವಾಗಿಸಿದ್ದು ಜಾತಿ ವ್ಯವಸ್ಥೆ ಎಂಬ ಕುತಂತ್ರ.
ಇಂದು ಜಾತಿ ಬಹಳಷ್ಟು ಬದಲಾಗಿದೆ.

ಕೀಳು ಜಾತಿಯವರೆನಿಸಿಕೊಂಡವರೂ ಶಿಕ್ಷಣ ಪಡೆದು ದೊಡ್ಡದೊಡ್ಡ ಹುದ್ದೆಗಳಿಗೆ ಏರಬಹುದಾಗಿದೆ. ಉದ್ಯಮ, ವ್ಯಾಪಾರಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಪ್ರಪಂಚ ಪರ್ಯಟನೆ ಮಾಡಿ ಸಭೆ ಸಮಾರಂಭಗಳಲ್ಲಿ ಸಮಸಮವಾಗಿ ಭಾಗವಹಿಸಬಹುದಾಗಿದೆ. ವಿವಿಧ ರಂಗಗಳಲ್ಲಿ ನಾಯಕರೂ ಆಗಬಹುದಾಗಿದೆ.

ಹಾಗೆಂದಾಕ್ಷಣ ಜಾತಿ ಆಚರಣೆ ಸಂಪೂರ್ಣವಾಗಿ ನಾಶವಾಗಿದೆ ಎಂದಲ್ಲ. ತಂತ್ರಜ್ಞಾನ, ಸಂಪರ್ಕಸಾಧನಗಳು, ಅಭಿವೃದ್ಧಿ, ಶಿಕ್ಷಣ, ಉದ್ಯೋಗಾವಕಾಶಗಳು, ಅಸ್ಪೃಶ್ಯತಾ ವಿರೋಧಿ ಕಾನೂನು, ಪ್ರಜ್ಞಾವಂತರ ಹೋರಾಟ ಇವೆಲ್ಲವುಗಳಿಂದ ಜಾತಿ ಪ್ರಜ್ಞೆ ಕೆಲವರಲ್ಲಿ ತೆಳುವಾಗಿದೆ. ಮತ್ತೆ ಕೆಲವರಿಗೆ ಅದರ ಆಚರಣೆ ದುಸ್ತರವಾಗಿದೆ. ಹೀಗಾಗಿ ಜಾತಿ ತನ್ನ ಹರಿತವನ್ನು ಹೆಚ್ಚು ಕಡಿಮೆ ಕಳೆದುಕೊಂಡಿದೆ.

ಆದರೂ ಆಗಾಗ, ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಿಂದ ಜಾತಿ ತಾರತಮ್ಯದ ಅನೇಕ ಘಟನೆಗಳು ವರದಿಯಾಗುತ್ತಿವೆ. ಮಂಡ್ಯದ ಒಂದು ಹಳ್ಳಿಯಲ್ಲಿ ಯುವಕನೊಬ್ಬ ಗುಡಿಯೊಂದನ್ನು ಪ್ರವೇಶಿಸಲು ಯತ್ನಿಸಿದಾಗ ಅವನನ್ನು ಥಳಿಸಿ ಹೊರ ಹಾಕಿದ ಘಟನೆ ವರದಿಯಾಗಿದೆ. ಅನೇಕ ಪ್ರಜ್ಞಾವಂತರು ಘಟನೆಯನ್ನು ಖಂಡಿಸಿದ್ದಾರೆ. ಆದರೂ ಇಂತಹ ಘಟನೆಗಳು ಮುಂದೆಯೂ ನಡೆಯುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಜಾತಿಯ ಬೇರುಗಳು ನಮ್ಮ ಸಮಾಜದಲ್ಲಿ ಅಷ್ಟು ಆಳವಾಗಿ ಇಳಿದಿವೆ.

ಸಂವಿಧಾನ ಅಸ್ಪೃಶ್ಯತೆಯನ್ನು ಶಿಕ್ಷಾರ್ಹ ಮಾಡಿದೆ. ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಆದುದರಿಂದ ಜಾತಿ ಪಿಡುಗನ್ನು ಹತ್ತಿಕ್ಕಲು ಸರ್ಕಾರದ ಕಡೆ ನೋಡುವುದು ಸಹಜ. ಆದರೂ ಜಾತಿಸಮಸ್ಯೆಯನ್ನು ಕೇವಲ ಹಕ್ಕು ರಕ್ಷಣೆಯ ಪ್ರಶ್ನೆಯಾಗಿ ನೋಡುವುದು ಸರಿಯೇ?

ಜಾತಿ ವಿನಾಶದ ವಿಚಾರ ಬಂದಾಗ ನಮ್ಮನ್ನು ಎದುರಾಗುವುದು ಇಷ್ಟೆಲ್ಲಾ ಬದಲಾವಣೆಗಳ ನಡುವೆಯೂ ಜಾತಿ ಉಳಿದುಕೊಂಡಿರುವುದಕ್ಕೆ ಕಾರಣಗಳೇನು? ಎಂಬ ಪ್ರಶ್ನೆ. ಜಾತಿ ಕೆಲವರಿಗೆ ಲಾಭವನ್ನೂ, ಬಹುಜನರಿಗೆ ಕಷ್ಟ ನಷ್ಟಗಳನ್ನೂ ತಂದದ್ದು ಎಲ್ಲರ ಅರಿವಿನಲ್ಲಿರುವ ಅಂಶ. ಆದರೂ ಕಷ್ಟನಷ್ಟಗಳನ್ನನುಭವಿಸಿದ ಕೆಳವರ್ಗದವರೂ ಜಾತಿಯನ್ನು ತೀವ್ರವಾಗಿ ಆಚರಿಸುತ್ತಿರುವುದಕ್ಕೆ ಕಾರಣವೇನು? ಸತತವಾಗಿ ಜಾತಿ ಬಿಡಿ, ಜಾತಿಬಿಡಿ ಎಂದು ಘೋಷಣೆ ಕೂಗುತ್ತಾ ಓಡಾಡುತ್ತಿರುವ ಕೆಳಜಾತಿಯವರೂ ಏಕೆ ಜಾತಿಪ್ರಜ್ಞೆಯಿಂದ ತುಂಬಿಹೋಗಿದ್ದಾರೆ?

ಇದಕ್ಕೆ ಅನೇಕ ಕಾರಣಗಳಿವೆ. ಶತಮಾನಗಳಿಂದ ತಮ್ಮ ಮೇಲೆ ಹಿಡಿತ ಹೊಂದಿರುವ ಈ ಅನಿಷ್ಟವನ್ನು ಬಿಡುವುದು ಅವರಿಗೆ ಕಷ್ಟ. ತಮ್ಮ ಪ್ರಜ್ಞೆಯೊಳಗೇ ಕೂಡಿ ಹಾಕಿಕೊಂಡಿರುವ ಅಂಥ ದೇವರುಗಳ ಭಯವೂ ಇದೆ. ಎಲ್ಲ ಬಂಧನಗಳನ್ನೂ ಕಿತ್ತೊಗೆದು ಮುಕ್ತವಾಗಿ ಹೆಜ್ಜೆ ಹಾಕಬಲ್ಲ ಶಕ್ತಿ, ನಾಯಕತ್ವ ಎರಡೂ ಇಲ್ಲ. ಜಾತಿ ಸಹಜವಾಗಿ ಕಲ್ಪಿಸಿರುವ ಗುಂಪುಗೂಡುವ ಅವಕಾಶ ಬೇರೆ ಕಡೆ ದೊರೆಯಲಾರದು.

ಅಲ್ಲದೆ ತಮ್ಮ ಸಮಸ್ಯೆಯ ಮೂಲದವರೆಗೆ ಶೋಧಿಸಬಲ್ಲ ಶಕ್ತಿಯಾಗಲಿ, ಮಾನಸಿಕ ಸಿದ್ಧತೆಯಾಗಲೀ ಅನೇಕರಿಗೆ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ, ಸದ್ಯಕ್ಕೆ ದೊರೆಯಬಹುದಾದ ಸವಲತ್ತುಗಳು ಮತ್ತು ಅವು ನೀಡುವ ನಿರ್ವಿಘ್ನತೆ ಜಾತಿಯನ್ನು ಕೆಲವರಿಗೆ ಬಂಡವಾಳವಾಗಿ ಮಾಡಿದೆ.

ಅದೇನೇ ಇರಲಿ, ಜಾತಿ ಆಚರಣೆಯಲ್ಲಿರುವುದಕ್ಕೆ ಮೇಲ್ಜಾತಿಗಳಷ್ಟೇ ಕೆಳಜಾತಿಗಳೂ ಜವಾಬ್ದಾರರು ಎನ್ನುವುದನ್ನು ಒಪ್ಪಿಕೊಳ್ಳದಿರಲು ಸಾಧ್ಯವಿಲ್ಲ. ಮನುವನ್ನು ಸತತವಾಗಿ ದೂಷಿಸುತ್ತಾ, ಆದರೆ, ಅವನು ರೂಪಿಸಿದ ವ್ಯವಸ್ಥೆಯಲ್ಲಿಯೇ ಮುಳುಗಿ, ಅದೇ ಗುಡಿಗುಂಡಾರಗಳ ಸುತ್ತಾ ಗಿರಿಕಿ ಹೊಡೆಯುತ್ತಾ, ವೈದಿಕನ ಮಧ್ಯಸ್ಥಿಕೆಯಲ್ಲಿ ಅವೇ ದೇವರುಗಳನ್ನು ಓಲೈಸಿ ನಮ್ಮ ಸುಖ ಸಂಪತ್ತುಗಳನ್ನು ಕಾಪಾಡಿಕೊಳ್ಳಲು ಇಚ್ಛಿಸುವ ನಮಗೆ ಗುಡಿಗುಂಡಾರಗಳಿಂದ ಹೊರ ಹಾಕುವ ಬಗ್ಗೆ ಹುಯಿಲಿಡಲು ಯಾವ ನೈತಿಕ ಹಕ್ಕಿದೆ? ಎಂದು ಕೇಳದೆ ಬೇರೆ ದಾರಿಯಿಲ್ಲ.

ದಲಿತ ಜನಾಂಗ ಸಹ ಶಿಕ್ಷಣ ಹೊಂದಿ ಹೊಸಹೊಸ ಕ್ಷೇತ್ರಗಳಿಗೆ ಲಗ್ಗೆ ಇಡುತ್ತಿದೆ. ದಲಿತ ವಾಣಿಜ್ಯೋದ್ಯಮಿಗಳ ಒಕ್ಕೂಟದ (ಡಿಐಸಿಸಿಐ) ಸ್ಥಾಪನೆ ಮತ್ತು ಅದರ ಯಶಸ್ಸು ಇದಕ್ಕೊಂದು ನಿದರ್ಶನ. ಬೇರೆ ಬೇರೆ ರಂಗಗಳಲ್ಲಿ ದಲಿತರು ಉನ್ನತ ಹುದ್ದೆಗಳನ್ನು ಹಿಡಿದು ತಮ್ಮ ಛಾಪು ಮೂಡಿಸುತ್ತಿದ್ದಾರೆ. ದಲಿತರ ಮಕ್ಕಳು ಸಹ ಶಿಕ್ಷಣದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಆತ್ಮಸ್ಥೈರ್ಯದಿಂದ ಮುನ್ನಡೆಯುವವರಿಗೆ ಅವಕಾಶಗಳಿಗೇನೂ ಕೊರತೆಯಿಲ್ಲ.

ಆದರೆ ಹೊತ್ತು ಕೂಳಿಗೂ ಅಂಗಲಾಚಿ ಬೇಡುತ್ತಾ ಬಂದ ದಲಿತರಿಗೆ ಒಮ್ಮೆಗೇ ಸ್ವಂತಿಕೆ, ಆತ್ಮಸ್ಥೈರ್ಯ ಬೆಳೆಸಿಕೊಳ್ಳುವುದು ಕಷ್ಟವಾದರೂ ಅಸಾಧ್ಯವೇನಲ್ಲ. ಇತರರ ಅನುಕಂಪದಿಂದಲೇ ಬದುಕಬೇಕೆನ್ನುವವರು ಕಳೆದುಕೊಳ್ಳುವುದು ಕೇವಲ ಸ್ವ ಪ್ರತಿಷ್ಠೆಯನ್ನಲ್ಲ. ಮುಂದೆ ನಡೆಯಬಲ್ಲೆ ಎಂಬ ಆತ್ಮವಿಶ್ವಾಸವನ್ನೂ. ಅದು ವ್ಯಕ್ತಿಯನ್ನು ಸೀಮಿತಗೊಳಿಸುತ್ತದೆ. ಇದರಿಂದಾಗುವ ಅನಾಹುತ ಅಷ್ಟಿಷ್ಟಲ್ಲ.

ಜೀವನದಲ್ಲಿ ನಮ್ಮ ಮುಂದೆ ಆಯ್ಕೆಗಿರುವುದು ಮಿಶ್ರಫಲದ ಬೇರೆ ಬೇರೆ ಗಂಟುಗಳು. ಸುಖ ಸಂತೋಷದಿಂದಲೇ ತುಂಬಿರುವ ಯಾವುದೇ ಗಂಟು ಅಲ್ಲಿಲ್ಲ. ಸ್ವಲ್ಪ ಕಷ್ಟ ನಷ್ಟದ ಅಂಶವೂ ಅವುಗಳಲ್ಲಿ ಇರುತ್ತದೆ. ಆದರೆ, ನಾವು ಅವುಗಳಲ್ಲೊಂದನ್ನು ಆರಿಸಿಕೊಳ್ಳುವಾಗ ಅದು ನಮಗೆ ಸ್ವಾತಂತ್ರ್ಯ, ಹೆಮ್ಮೆ, ಆತ್ಮಸ್ಥೈರ್ಯ ತರುತ್ತದೆಯೇ ಎಂದು ಖಾತರಿಪಡಿಸಿಕೊಳ್ಳಬೇಕಾಗುತ್ತದೆ.

ನಮ್ಮ ಆಯ್ಕೆ ಲಾಭವೊಂದೇ ತುಂಬಿರುವ ಗಂಟಿಗಾಗಿಯಾದರೆ ಅದಕ್ಕಾಗಿ ನಾವು ಬಹಳಷ್ಟನ್ನು ಕಳೆದುಕೊಳ್ಳಬೇಕಾಗುತ್ತದೆ.ಸಮಸ್ಯೆಯನ್ನು ಅಮೂಲಾಗ್ರವಾಗಿ ಅಭ್ಯಸಿಸಿದ ಅಂಬೇಡ್ಕರ್ ನಮಗೆ ಸಮಾನತೆ ಸಿಗುವ ಕಡೆ ಹೋಗಲು ಹೇಳಿದರು. ನಾವು ಅಂಬೇಡ್ಕರ್ ಚಿತ್ರವನ್ನು ಹೊತ್ತು ಮೆರೆಯುತ್ತೇವೆ. ಅವರ ದ್ವೇಷಿಗಳೊಡನೆ ಕೈಜೋಡಿಸುತ್ತೇವೆ.

ಅಧಿಕಾರಕ್ಕಾಗಿ ಯಾರ್ಯಾರ ಕಾಲನ್ನೊ ಮುಟ್ಟುತ್ತೇವೆ. ಜನಾಂಗದ ಜತೆ ಮಾತ್ರ ನಮ್ಮ ಸಂಬಂಧ ಅಷ್ಟಕ್ಕಷ್ಟೆ. ಅಂಬೇಡ್ಕರ್ ಹೇಳಿದ್ದೂ ನಮಗೆ ಮರೆತು ಹೋಗಿದೆ. ನಾವು ಒದೆಯುವ ಕಾಲುಗಳನ್ನೇ ಅಪ್ಪಿಕೊಂಡಿದ್ದೇವೆ. ಅದರ ಪರಿಣಾಮವನ್ನು ನಾವೇ ಅನುಭವಿಸಬೇಕೇ ವಿನಾ ಇತರರನ್ನು ದೂರಿ ಪ್ರಯೋಜನವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.