ಗುರುವಾರ , ಏಪ್ರಿಲ್ 15, 2021
24 °C

ಆದಿಲ್‌ಶಾಹಿ ಕಾಲದ ನೀರಿನ ಕಾಲುವೆ ಪತ್ತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಆನಂದ ಮಹಲ್ ಸಮೀಪ ಒಳಚರಂಡಿ ಕಾಮಗಾರಿಗೆ ನೆಲ ಅಗೆಯುವ ಸಂದರ್ಭದಲ್ಲಿ ಆದಿಲ್‌ಶಾಹಿ ಕಾಲದ ನೀರಿನ ಕಾಲುವೆ (ಸುರಂಗ ಮಾರ್ಗ) ಪತ್ತೆಯಾಗಿದೆ.ಈಗಿರುವ ರಸ್ತೆಯ ತಳಭಾಗದಲ್ಲಿ ಅಡ್ಡಲಾಗಿ ಇರುವ ಈ ಸುರಂಗ ಮಾರ್ಗ ಅಂದಾಜು ಐದು ಅಡಿಯಷ್ಟು ಅಗಲ, 2-3 ಅಡಿಯಷ್ಟು ಎತ್ತರವಿದೆ. ಜೆಸಿಬಿ ಯಂತ್ರದ ಸಹಾಯದಿಂದ ನೆಲ ಅಗೆಯುವ ಸಂದರ್ಭದಲ್ಲಿ ಪತ್ತೆಯಾದ ಈ ಸುರಂಗ ಮಾರ್ಗ ನೋಡಲು ಜನ ಮುಗಿಬಿದ್ದರು. ಕೆಲವರು ನಿಧಿ ಇದೆಯೇ? ನಿಧಿ ದೊರೆತಿದೆಯೇ? ಎಂದು ಇಣುಕಿ ಇಣುಕಿ ನೋಡುತ್ತಿದ್ದರು.`ಮೊದಲ ಅಲಿ ಆದಿಲ್‌ಶಾಹಿ ಕಾಲದಲ್ಲಿ ಅಂದರೆ 1570ರಿಂದ 1580ರ ಅವಧಿಯಲ್ಲಿ ನಿರ್ಮಾಣ ಗೊಂಡ ನೀರಿನ ಕಾಲುವೆ (ಸುರಂಗ ಮಾರ್ಗ) ಇದು. ಆಗ ಪೈಪ್‌ಲೈನ್‌ನ ಪರಿಕಲ್ಪನೆ ಇರಲಿಲ್ಲ. ಹೀಗಾಗಿ ಭೂಮಿಯಲ್ಲಿ ಸುರಂಗ ಮಾರ್ಗ ಕೊರೆದು ಕಾಲುವೆ ನಿರ್ಮಿಸಿ ಅದರಿಂದ ನೀರು ತರುತ್ತಿದ್ದರು~ ಎಂದು ಇಲ್ಲಿಯ ಹಿರಿಯ ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಹೇಳಿದರು.`ಈಗಿನ ಆನಂದ ಮಹಲ್ ಆಗ ಅರಸರ ಅರಮನೆಯಾಗಿತ್ತು. ತೊರವಿಯಿಂದ ನೀರಿನ ಒಂದು ಮಾರ್ಗ ಅರಮನೆಯ ವರೆಗೆ ಬಂದಿದೆ. ಇನ್ನೊಂದು ಮಾರ್ಗ ಚಾಂದ್ ಬಾವಡಿ ವರೆಗೆ ಬಂದಿದೆ. ಈಗ ಪತ್ತೆಯಾಗಿರುವ ಸುರಂಗ ಕಾಲುವೆ ಅರಮನೆಗೆ ನೀರು ಪೂರೈಸಲು ನಿರ್ಮಸಲಾಗಿತ್ತು~ ಎಂಬುದು ಅವರ ವಿವರಣೆ.`1650ರ ನಂತರ ಬೇಗಂ ತಾಲಾಬ್‌ನಿಂದ ನೀರು ಪೂರೈಕೆ ವ್ಯವಸ್ಥೆ ಮಾಡುವ ಹೊತ್ತಿಗೆ ಮಣ್ಣಿನ ಪೈಪ್‌ಗಳನ್ನು ತಯಾರಿಸುವ ಪರಿಕಲ್ಪನೆ ಬಂದಿತ್ತು. ಈ ಸಂದರ್ಭದಲ್ಲಿ ಮಣ್ಣಿನಿಂದ ತಯಾರಿಸಿದ ಪೈಪ್‌ಗಳನ್ನು ಅಳವಡಿಸಲಾಗಿದೆ~ ಎಂದು ಡಾ.ಕುಲಕರ್ಣಿ ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.