ಶನಿವಾರ, ಮೇ 28, 2022
27 °C

ಆದಿವಾಸಿಗಳ ಹಕ್ಕು ಅನುಷ್ಠಾನಕ್ಕೆ ಫೆ.25 ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ ಅಧಿನಿಯಮ-2006ರ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ ಧೋರಣೆಯನ್ನು ಖಂಡಿಸಿ ಬುಡಕಟ್ಟು ಕೃಷಿಕರ ಸಂಘ ಈ ತಿಂಗಳ 25ರಂದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೃಷಿಕರ ಸಂಘದ ಅಧ್ಯಕ್ಷ ಜೆ.ಪಿ. ರಾಜು ಹಾಗೂ ಇತರರು, ಸ್ವಾತಂತ್ರ್ಯ ಪೂರ್ವದಿಂದಲೂ ಆದಿವಾಸಿಗಳಿಗೆ ಆಗುತ್ತಿದ್ದ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2006ರಲ್ಲಿ ಜಾರಿಗೆ ತಂದಿರುವ ಅರಣ್ಯ ಹಕ್ಕುಗಳ ಕಾನೂನು ಕಳೆದ ಸಾಲಿನಲ್ಲಿಯೇ ಅನುಷ್ಠಾನಗೊಳ್ಳಬೇಕಿತ್ತು. ಆದರೆ, ಇನ್ನೂ ವಿನಾಕಾರಣ ಕುಂಟುತ್ತಾ ಸಾಗುತ್ತಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.‘ತಲೆತಲಾಂತರಗಳಿಂದ ಅರಣ್ಯವನ್ನೇ ನಂಬಿ ಜೀವನ ಸಾಗಿಸುತ್ತಿರುವ ಆದಿವಾಸಿಗಳ ಬದುಕಿಗೆ ಅಭಿವೃದ್ಧಿಯ ಆಶಾಕಿರಣವಾಗಿ ಬಂದೊದಗಿದ ಈ ಕಾನೂನಿನ ಫಲವನ್ನು ಪಡೆಯುವ ಮೊದಲೇ ನಾವು ಹೆಜ್ಜೆ-ಹೆಜ್ಜೆಗೂ ಕಹಿಯನ್ನೇ ಅನುಭವಿಸುತ್ತಿದ್ದೇವೆ. ಶತಮಾನಗಳ ನಮ್ಮ ಹೋರಾಟಕ್ಕೆ ಸಂದ ಜಯವನ್ನು ಸಂವಿಧಾನಾತ್ಮಕವಾಗಿ ಪಡೆದು ಸಮಾಜದ ಎಲ್ಲಾ ವರ್ಗಗಳಂತೆ ನಾವು ಕೂಡ ನಮ್ಮ ಹಕ್ಕುಗಳನ್ನು ಪಡೆಯುವುದು ಸಾಧ್ಯವಾಗುವುದೇ ಎಂಬ ಪ್ರಶ್ನೆ ನಮ್ಮದು. ಭಾರತ ಪ್ರಜಾಸತ್ತಾತ್ಮಕ, ಸಂವಿಧಾನಾತ್ಮಕ ರಾಷ್ಟ್ರೀಯವಾಗಿ ಪರಿಗಣಿಸಲ್ಪಟ್ಟಿದ್ದರೂ ನಾವು ಮಾತ್ರ ಹಕ್ಕುಗಳಿಂದಲೇ ವಂಚಿತರಾಗುತ್ತಿದ್ದೇವೆ’ ಎಂದು ನೊಂದು ನುಡಿದರು.‘1972ರಲ್ಲಿ ರಾಜ್ಯ ಸರ್ಕಾರಿ 180 ಕಿ.ಮೀ. ಅರಣ್ಯವನ್ನು ನಾಗರಹೊಳೆ ಅಭಯಾರಣ್ಯ ಎಂದು ಘೋಷಿಸಿತು. ಅದರ ಜೊತೆಗೆ, ಭಾರತದಲ್ಲಿ ಇನ್ನಿತರ ಏಳು ಅರಣ್ಯ ವಲಯಗಳನ್ನು ರಾಷ್ಟ್ರೀಯ ಅಭಯಾರಣ್ಯಗಳೆಂದು ಘೋಷಿಸುವ ಸಂದರ್ಭದಲ್ಲಿ ಅರಣ್ಯ ಇಲಾಖೆ ನಿಖರವಾಗಿ ತನ್ನ ಗಡಿ ಗುರುತು ಮಾಡಿಲ್ಲ. ಆದಿವಾಸಿಗಳು ಸಾಂಪ್ರದಾಯಿಕವಾಗಿ ಬಳಸಿಕೊಳ್ಳುತ್ತಿದ್ದ ಸ್ಥಳಗಳನ್ನು ಕೂಡ ಅರಣ್ಯ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಸೇರಿಸಿಕೊಂಡಿದೆ. ಅರಣ್ಯ ಹಕ್ಕುಗಳ ಕಾನೂನಿನ ಅನುಷ್ಠಾನದ ಜವಾಬ್ದಾರಿ ಹೊಂದಿರುವ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಹಾಗೂ ಸಮಾಜ ಇಲಾಖೆಗಳಿಗೆ ಅರಣ್ಯ ಇಲಾಖೆ ನಕ್ಷೆ ನೀಡುವುದರೊಂದಿಗೆ ಸಹಕರಿಸಿ ಆದಿವಾಸಿಗಳ ಸಾಂಪ್ರದಾಯಿಕ ಗಡಿಗಳನ್ನು ಗುರುತಿಸಬೇಕು’ ಎಂದು ಒತ್ತಾಯಿಸಿದರು.‘ಆದಿವಾಸಿಗಳ ಅರಣ್ಯ ಹಕ್ಕುಗಳ ಕಾನೂನು ಶೀಘ್ರ ಅನುಷ್ಠಾನಕ್ಕಾಗಿ ಗ್ರಾಮ ಸಭೆಗಳನ್ನು ಪ್ರತಿ ಹಾಡಿಗಳಲ್ಲಿಯೂ ನಡೆಸುವುದರ ಮೂಲಕ ಸರ್ಕಾರ ನಿಗದಿಪಡಿಸಿರುವ ಕ್ಲೇಮ್ ನಮೂನೆಗಳನ್ನು ಆದಿವಾಸಿ ಅರಣ್ಯ ಹಕ್ಕುಗಳ ಕಾನೂನಿನ ನಿಯಮಗಳ ಅನುಸಾರ ಭರ್ತಿ ಮಾಡಿ ಸಲ್ಲಿಸಿ ಎರಡು ವರ್ಷಗಳಾದರೂ ಆದಿವಾಸಿಗಳಿಗೆ ಹಕ್ಕು ಸಿಗದೇ ಇರುವುದಕ್ಕೆ ಸರ್ಕಾರವೇ ಹೊಣೆ ಹೊರಬೇಕು’ ಎಂದು ಆಗ್ರಹಿಸಿದರು.‘ಆದಿವಾಸಿಗಳ ಸಮುದಾಯ ಹಾಗೂ ವೈಯಕ್ತಿಕ ಹಕ್ಕುಗಳು ಯಥಾವತ್ತು ಜಾರಿಯಾಗುವವರೆಗೆ ಯಾರನ್ನೂ ಅರಣ್ಯದಿಂದ ಎತ್ತಂಗಡಿ ಮಾಡಬಾರದು. ತಾಲ್ಲೂಕು, ವಿಭಾಗ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳಿಗೆ ಫಲಾನುಭವಿಗಳನ್ನೇ ಸದಸ್ಯರನ್ನಾಗಿ ನೇಮಕ ಮಾಡಬೇಕು. ಈ ಬೇಡಿಕೆ ಈಡೇರಿಸಲು ಫೆ. 25ರವರೆಗೆ ಜಿಲ್ಲಾಡಳಿತಕ್ಕೆ ಗಡುವು ನೀಡಲಾಗುವುದು. ಅಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ 25ರಂದು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು. ಬುಡಕಟ್ಟು ಕೃಷಿಕರ ಸಂಘದ ಪದಾಧಿಕಾರಿಗಳಾದ ಜೆ.ಕೆ. ರಾಮು, ಆರ್.ಕೆ. ಚಂದ್ರ, ಪಿ.ಸಿ. ರಾಮು, ಪಿ.ಎಸ್. ಮುತ್ತ, ಸಿದ್ದಪ್ಪ, ಸಣ್ಣಯ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.