ಸೋಮವಾರ, ಮೇ 17, 2021
31 °C

ಆಧಾರರಹಿತ ವರದಿ- ಸಿಂಗ್,ಆಂಟನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ ವಿಶಾಖಪಟ್ಟಣ (ಪಿಟಿಐ/ ಐಎಎನ್‌ಎಸ್):  ಭಾರತೀಯ ಸೇನೆಯ ಎರಡು ಪ್ರಮುಖ ತುಕಡಿಗಳು ಸರ್ಕಾರಕ್ಕೆ ಪೂರ್ವಭಾವಿಯಾಗಿ ತಿಳಿಸದೆ ಜನವರಿ 16-17ರ ಮಧ್ಯರಾತ್ರಿ  ರಾಜಧಾನಿ ನವದೆಹಲಿಯೆಡೆಗೆ ಅನುಮಾನಾಸ್ಪದವಾಗಿ ಧಾವಿಸುತ್ತಿದ್ದವು ಎಂಬ ಮಾಧ್ಯಮ ವರದಿಯು ಸಂಪೂರ್ಣ ಆಧಾರರಹಿತ ಹಾಗೂ ಅನಗತ್ಯವಾಗಿ ಗಾಬರಿ ಹುಟ್ಟಿಸುವಂಥದ್ದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಕ್ಷಣಾ ಸಚಿವ ಎ.ಕೆ.ಆಂಟನಿ ಹೇಳಿದ್ದಾರೆ.ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಸುದ್ದಿಗಾರರ ಜತೆ ಮಾತನಾಡಿ, ಕ್ಷಿಪ್ರಕ್ರಾಂತಿ ನಡೆಸುವ ಉದ್ದೇಶದಿಂದ ಸೇನಾಪಡೆಯ ತುಕಡಿಗಳು ರಾಷ್ಟ್ರದ ಅಧಿಕಾರ ಶಕ್ತಿಕೇಂದ್ರವಾದ ರಾಜಧಾನಿಯೆಡೆಗೆ ಹೀಗೆ ಧಾವಿಸುತ್ತಿದ್ದವು ಎಂಬ ಅರ್ಥ ಮೂಡಿಸಿರುವ ಈ ವರದಿಯನ್ನು ಜನತೆ ಯಥಾವತ್ ನಂಬಬಾರದು ಎಂದೂ ಕೋರಿದ್ದಾರೆ.ಇದೇ ವೇಳೆ ಪ್ರಧಾನಿಯವರು ಸರ್ಕಾರ ಹಾಗೂ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರ ನಡುವಿನ ಸಂಘರ್ಷದ ಬಗ್ಗೆಯೂ ಮಾತನಾಡಿದರು.`ಸೇನಾ ಮುಖ್ಯಸ್ಥರ ಕಚೇರಿಗೆ ತನ್ನದೇ ಹಿರಿಮೆ ಇದೆ. ಅದರ ಘನತೆಗೆ ಚ್ಯುತಿ ಬಾರದಂತೆ ನೋಡಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲೂ ಇದೆ~ ಎಂದರು.ವಿಶಾಖಪಟ್ಟಣದಲ್ಲಿ ಅಣ್ವಸ್ತ್ರ ಚಾಲಿತ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸಮರ್ಪಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಕ್ಷಣಾ ಸಚಿವ ಎ.ಕೆ.ಆಂಟನಿ,  ವರದಿಯನ್ನು ಸಂಪೂರ್ಣ ಆಧಾರರಹಿತ ಎಂದಿದ್ದಾರೆ.`ಸೇನಾ ಪಡೆಗಳು ಹೀಗೆ ಧಾವಿಸುವುದು ಸಾಮಾನ್ಯ. ಇದರಲ್ಲಿ ವಿಶೇಷವೇನೂ ಇಲ್ಲ. ನಮ್ಮ ಸಶಸ್ತ್ರ ಪಡೆಗಳ ರಾಷ್ಟ್ರಪ್ರೇಮದ ಬಗ್ಗೆ ಅನುಮಾನ ಪಡುವ ಅಗತ್ಯವೇ ಇಲ್ಲ~ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.ರಾಷ್ಟ್ರಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಯೋಧರ ರಾಷ್ಟ್ರಪ್ರೇಮವನ್ನು ಪ್ರಶ್ನಿಸಬಾರದು ಎಂದು ಆಂಟನಿ ಇದೇ ವೇಳೆ ಮಾಧ್ಯಮಗಳಿಗೆ ಮನವಿ ಮಾಡಿದರು.ಇದಕ್ಕೆ ಮುನ್ನ ರಕ್ಷಣಾ ಇಲಾಖೆ ವಕ್ತಾರ ಸೀತಾಂಶು ಕೌರ್ ಕೂಡ ವರದಿಯನ್ನು ಆಧಾರರಹಿತ ಹಾಗೂ ದೋಷಪೂರ್ಣ ಎಂದು ತಳ್ಳಿಹಾಕಿದ್ದರು.ಇದಕ್ಕೆ ಮುನ್ನ, ಬಿಜೆಪಿಯ ಪ್ರಧಾನಿಯವರನ್ನು, ಜ16-17ರ ನಡುವಿನ ರಾತ್ರಿ ನಿಜವಾಗಿ ಏನು ನಡೆಯಿತೆಂಬುದರ ಬಗ್ಗೆ ವಿವರಿಸಲು ಒತ್ತಾಯಿಸಿತು.ಬಿಜೆಪಿ ನಾಯಕ ಬಲಬೀರ್ ಪುಂಜ್ ಅವರು, ಸೇನೆ ಹಾಗೂ ಸರ್ಕಾರದ ನಡುವೆ ವಿಶ್ವಾಸಕ್ಕೆ ಭಂಗ ಬಂದಿದೆ ಎಂದು ಟೀಕಿಸಿದರು.ವರದಿಯಲ್ಲಿ ಇದ್ದದ್ದು ಏನು?: ಹರಿಯಾಣದ ಹಿಸಾರ್ ನೆಲೆಯ ವಾಹನ ಸಜ್ಜಿತ ಪದಾತಿದಳ ಹಾಗೂ ಆಗ್ರಾದಲ್ಲಿ ನೆಲೆಯಾಗಿರುವ ಪ್ಯಾರಾ ಬ್ರಿಗೇಡ್ ವೈಮಾನಿಕ ತುಕಡಿಗಳು ರಕ್ಷಣಾ ಸಚಿವಾಲಯಕ್ಕೆ ಮುಂಚಿತವಾಗಿ ತಿಳಿಸದೇ ರಾಜಧಾನಿಯತ್ತ ಧಾವಿಸುತ್ತಿದ್ದವು ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು.ಅದೇ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರು ತಮ್ಮ ಜನ್ಮದಿನಾಂಕ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರಿಂದ, ಸೇನಾ ಪಡೆಗಳ ಈ ಚಲನೆಯು ದೆಹಲಿಯಲ್ಲಿ ಶಂಕೆ ಹಾಗೂ ಆತಂಕವನ್ನು ಹುಟ್ಟುಹಾಕಿತ್ತು ಎಂದು ವರದಿ ವಿವರಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.