ಭಾನುವಾರ, ಮೇ 22, 2022
28 °C

ಆಧ್ಯಾತ್ಮಿಕತೆಯಿಂದ ದೇಶ ಸದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ನಮ್ಮ ದೇಶ ಯಾವತ್ತಿಗೂ ಆರ್ಥಿಕತೆಯಿಂದ ಸದೃಢವಾದದ್ದಲ್ಲ, ಆಧ್ಯಾತ್ಮಿಕತೆಯಿಂದ ಬಲಿಷ್ಠವಾಗಿತ್ತು ಎಂದು ಬಾಳೆಕುದ್ರು ಮಠದ ಶ್ರೀನೃಸಿಂಹಾಶ್ರಮ ಸ್ವಾಮೀಜಿ ಇಲ್ಲಿ ಹೇಳಿದರು.ಸ್ವಿಸ್ ಬ್ಯಾಂಕ್‌ನಿಂದ ಕಪ್ಪುಹಣ ವಾಪಸ್ ತರುವಂತೆ ಒತ್ತಾಯಿಸಿ ಯೋಗಗುರು ಬಾಬಾ ರಾಮ್‌ದೇವ್ ಅವರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ಭಾರತ ಸ್ವಾಭಿಮಾನ್ ಯುವ ಸಂಘಟನೆಯ ಉಡುಪಿ ಜಿಲ್ಲಾ ಘಟಕ ಬುಧವಾರ ಆಯೋಜಿಸಿದ್ದ ರಕ್ತ ಹಸ್ತಾಕ್ಷರ ಚಳವಳಿ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ದೇಶ ವಿಶ್ವಮಟ್ಟದಲ್ಲಿ ಪ್ರಸಿದ್ಧವಾಗಿದ್ದು ನಮ್ಮ ಭವ್ಯವಾದ ಸಂಸ್ಕೃತಿಯಿಂದ, ಸದೃಢವಾದ ಶಾಂತಿ ಸಂದೇಶವನ್ನು ವಿಶ್ವಕ್ಕೆ ಸಾರುವ ಮೂಲಕ ಪ್ರಪಂಚದ ಗಮನ ಸೆಳೆದಿದೆ. ಪ್ರಸ್ತುತ ನಮ್ಮ ಜನರಿಗೆ ಬದುಕಿನಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಅದರಲ್ಲೂ ಯುವ ಜನರು ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿದ್ದಾರೆ. ಯುವ ಪೀಳಿಗೆ ಶಾರೀರಿಕ ಹಾಗೂ ಮಾನಸಿಕವಾಗಿ ತೊಂದರೆಯಾಗುವ ಗುಣಗಳನ್ನು ಕೈಬಿಟ್ಟು ಒಳ್ಳೆಯದನ್ನು ಸ್ವೀಕರಿಸಬೇಕು. ಯುವ ಶಕ್ತಿಯ ಮೇಲೆ ಇಟ್ಟ ನಂಬಿಕೆ ಉಳಿಸಿಕೊಂಡು ಗುಣ ನಡತೆಗಳಲ್ಲಿ ಪರಿವರ್ತನೆ ಮಾಡಬೇಕಾದ ಅಗತ್ಯ ಹಿಂದಿಗಿಂತಲೂ ಇಂದು ಹೆಚ್ಚು ಎಂದರು.ವಕೀಲ ಪಿ.ಪಿ.ಹೆಗ್ಡೆ ಮಾತನಾಡಿ, ದೇಶದಲ್ಲಿ ಎಲ್ಲಿಯೂ ಈ ತನಕ ನಡೆಯದ ರಕ್ತದಲ್ಲಿ ಹಸ್ತಾಕ್ಷರ ಮಾಡುವ ಮೂಲಕ  ಭ್ರಷ್ಟಾಚಾರ ವಿರೋಧಿ ಆಂದೋಲನ ನಮ್ಮಲ್ಲಿ ಈಗ ನಡೆದಿದೆ. ಇದು ಮುಂಬರುವ ದಿನಗಳಲ್ಲಿ ದೇಶವ್ಯಾಪಿ ಹರಡಿ ಭ್ರಷ್ಟಾಚಾರ ನಿರ್ಮೂಲನೆ ದೇಶವ್ಯಾಪಿ ಆಂದೋಲನವಾಗಲಿ ಎಂದರು.ಭಾರತೀಯ ಸಂಪತ್ತು ವಿದೇಶಿ ಬ್ಯಾಂಕ್‌ನಲ್ಲಿದೆ ಎನ್ನುವ ಆಕ್ರೋಶ ನಮ್ಮೆಲ್ಲರಲ್ಲಿದೆ. ಅದನ್ನು ಮರಳಿ ತಂದರೆ ಮುಂದಿನ 10 ವರ್ಷಗಳ ಕಾಲ ಆ ಹಣದಲ್ಲಿ ನಮ್ಮ ದೇಶದ ಅಭಿವೃದ್ಧಿ ಮಾಡಬಹುದು. ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ದೋಚಿದ ಹಣ ಎನ್ನುವುದನ್ನು ಲೆಕ್ಕ ಹಾಕಿದಾಗ ನಮ್ಮ ದೇಶ ಸೂಪರ್ ಪವರ್ ದೇಶ ಎನ್ನುವುದನ್ನು ತೋರ್ಪಡಿಸುತ್ತದೆ ಎಂದರು.ನಮ್ಮ ಇಂದಿನ ಯುವ ಜನರಿಗೆ ಚಲನಚಿತ್ರ ನಟ/ನಟಿಯರು ಆದರ್ಶಪ್ರಾಯರಾಗುತ್ತಾರೆ. ಬದಲಿಗೆ ವಿವೇಕಾನಂದ, ಸರ್ದಾರ್ ವಲ್ಲಭಬಾಯಿ ಪಟೇಲ್, ನೇತಾಜಿ ಸುಭಾಶ್ಚಂದ್ರ ಬೋಸ್ ರಂತಹ ನಾಯಕರು ಆದರ್ಶವಾಗಬೇಕು ಎಂದರು.ಸ್ವಾಭಿಮಾನ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಹರೀಶ್ ಪಡುಕೆರೆ, ಶಿವರಾಮ ಶೆಟ್ಟಿ, ಉಮೇಶ್ ಕೋಟ್ಯಾನ್, ರಾಘವೇಂದ್ರ ಆಚಾರ್ಯ, ಲೀಲಾಧರ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಎಂಜಿಎಂ ಕಾಲೇಜಿನಿಂದ ಸ್ವಾಭಿಮಾನ್ ಸಮಾವೇಶದ ಮೆರವಣಿಗೆ ಕಿದಿಯೂರು ಶೇಷಶಯನ ಸಭಾಂಗಣದವರೆಗೆ ಸಾಗಿ ಬಂತು. ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.