ಶನಿವಾರ, ಜನವರಿ 25, 2020
28 °C

ಆಫ್ಘನ್ ಮಾಹಿತಿ ಕೇಂದ್ರದಿಂದ ಅಮೆರಿಕ ವಿಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ವಾರದವರೆಗೆ ಅಮೆರಿಕ ಆರ್ಥಿಕ ನೆರವು ನೀಡಿದ್ದ ಕಾಬೂಲ್‌ನ ಸರ್ಕಾರಿ ಮಾಹಿತಿ ಕೇಂದ್ರದಲ್ಲಿ ಆಫ್ಘನ್ ಅಧಿಕಾರಿಗಳಿಗೆ ಸಾರ್ವಜನಿಕ ಸಂಪರ್ಕದ ಪಾಠ ನಡೆಯುತ್ತಿತ್ತು. ಅದರಲ್ಲೂ ವಿಶೇಷವಾಗಿ ಸುದ್ದಿಗೋಷ್ಠಿಯಲ್ಲಿ ಏನು ಮಾತನಾಡಬೇಕು ಎಂಬ ಬೋಧನೆ.ಅಮೆರಿಕದ ಅಷ್ಟೇನೂ ಗಣನೆಗೆ ಬಾರದ ಯುದ್ಧ ಯತ್ನದ ಭಾಗವಾಗಿ ಇಷ್ಟೆಲ್ಲಾ ನಡೆಯುತ್ತಿತ್ತು. ಆದರೆ, ಅಮೆರಿಕದ ಸೇನಾ ಹಾಗೂ ನಾಗರಿಕ ಸಲಹೆಗಾರರು ದಿಢೀರನೆ ಆಫ್ಘನ್ ಕೇಂದ್ರವನ್ನು ಬಿಟ್ಟು ಹೊರಡಲನುವಾಗಿದ್ದಾರೆಂಬ ಸಂಗತಿ ಹರಡಿದ್ದೇ, ಅಮೆರಿಕ ಹಾಗೂ ಆಫ್ಘನ್ ಅಧಿಕಾರಿಗಳ ನಡುವೆ ಸಾರ್ವಜನಿಕ ಸಂಪರ್ಕದ ವಿಷಯದಲ್ಲಿ ಸೌಹಾರ್ದಯುತ ಸಂಬಂಧ ಸಾಧ್ಯವಿಲ್ಲ ಎಂಬ ಅಭಿಪ್ರಾಯ ಮೂಡಿತು.ನಿಧನಿಧಾನವಾಗಿ ಅಮೆರಿಕ ಇಲ್ಲಿಂದ ಕಾಲುತೆಗೆಯುತ್ತಿರುವುದರಿಂದ ಆಫ್ಘಾನಿಸ್ತಾನ ತಂತಾನೇ ಸುದ್ದಿಯನ್ನು ಒದಗಿಸುವ ಕಾಲ ಸನ್ನಿಹಿತವಾಗಿದೆ ಎಂಬುದು ಅಮೆರಿಕನ್ನರ ಅಭಿಪ್ರಾಯವಾಗಿತ್ತು.ಹಾಗಾಗಿಯೇ ಸಾರ್ವಜನಿಕ ಸಂಪರ್ಕದ ಪಾಠ ಅವಿರತವಾಗಿ ನಡೆಯುತ್ತಿದ್ದದ್ದು. ಕಳೆದ ಶನಿವಾರ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಈ ನ್ಯಾಟೊ ದಾಳಿಗಳಿಂದಾದ ನಾಗರಿಕ ಹತ್ಯೆಗಳ ಪ್ರಸ್ತಾಪವಾಗಿದ್ದು, ಇದರಿಂದ ಅಮೆರಿಕ ಸುದ್ದಿ ವಿತರಣೆಯ ವಿಷಯದಲ್ಲಿ ಪೀಡಿಸಲಾರಂಭಿಸಿದೆ ಎಂಬ ನಿಲುವು ಆಫ್ಘನ್ನರದ್ದು.ಅಮೆರಿಕದ ದೊಡ್ಡ ಯುದ್ಧ ಯೋಜನೆಯಲ್ಲಿ ಉಂಟಾಗಿರುವ ಈ ಸಣ್ಣ ಭಿನ್ನಾಭಿಪ್ರಾಯದ ಸುದ್ದಿ ಕಾಬೂಲ್ ವರ್ತುಲದಿಂದ ಹೊರಗಿರುವವರಿಗೆ ಸ್ವಲ್ಪ ಮಟ್ಟಿಗೆ ಮಾತ್ರ ಗೊತ್ತು. ಆದರೆ, ಅಮೆರಿಕನ್ನರು ಸುದ್ದಿಗೋಷ್ಠಿಯಿಂದಲೇ ಸಭಾತ್ಯಾಗ ಮಾಡಿದ್ದಾರೆಂದರೆ, ಅದು ಆಫ್ಘನ್ನರು ಟೀಕಾ ನಗಾರಿಯನ್ನು ಜೋರಾಗಿ ಬಡಿಯುತ್ತಿರುವುದಕ್ಕೆ ಅವರಲ್ಲಿ ಉಂಟಾಗಿರುವ ಅಸಹನೆಯನ್ನು ಬಿಂಬಿಸುತ್ತದೆ. ತನಗೆ ಅಸಹನೆ ಉಂಟಾಗಿರುವ ಆಫ್ಘನ್ ಸಂಸ್ಥೆಗಳಿಂದ ಹೊರಬರಲು ಅದು ತುದಿಗಾಲಲ್ಲಿ ನಿಂತಿರುವುದೂ ಸ್ಪಷ್ಟ.ಇದು ಒಂದು ವರ್ಷದಿಂದ ಆಗುತ್ತಿರುವ ಬದಲಾವಣೆಗೆ ಫಲ. ಅಮೆರಿಕನ್ ಅಧಿಕಾರಿಗಳು ಆಫ್ಘಾನಿಸ್ತಾನದ ಪುನರ್‌ನಿರ್ಮಾಣದ ವಿಷಯದಲ್ಲಿ ಉದಾಸೀನದಿಂದ ವರ್ತಿಸಿದ್ದಾರೆಂಬ ಭಾವನೆಯಿದೆ. ಹಾಗಾಗಿ ಪಾಶ್ಚಿಮಾತ್ಯ ಸ್ವರೂಪದಲ್ಲಿ ಪುನರ್‌ನಿರ್ಮಾಣ ಆಗುತ್ತದೆಂಬ ಸಂಗತಿಯೂ ಈಗ ಅರ್ಥ ಕಳೆದುಕೊಂಡಿದೆ.ಕಂದಹಾರ್, ಕಪೀಸಾ ಹಾಗು ಪಾಕ್ತಿಯಾದಲ್ಲಿ ಆದ ನಾಗರಿಕ ಸಾವುಗಳ ಆರೋಪಿಗಳು ಯಾರು ಎಂದು ಪತ್ತೆಮಾಡಲು ಅಧ್ಯಕ್ಷ ಹಮೀದ್ ಕರ್ಜೈ ನೇಮಕ ಮಾಡಿದ್ದ ನಿಯೋಗವು ನೀಡಿದ್ದ ವರದಿಯು ಕ್ರಿಸ್ಮಸ್‌ಗಿಂತ ಒಂದು ದಿನ ಮುಂಚೆ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯವಾಗಿ ಚರ್ಚಿತವಾಯಿತು.

 

ನಿಯೋಗವು ನ್ಯಾಟೊ ಪಡೆಯು ನಿರ್ದಯಿಯಾಗಿ ಹಾಗೂ ಉದಾಸೀನದಿಂದ ವರ್ತಿಸುತ್ತಿದೆ ಎಂಬ ತೀರ್ಮಾನಕ್ಕೆ ಬಂದಿತ್ತು. ಇದು ಅಪರೂಪದ ನಿರ್ಧಾರವೇನೂ ಅಲ್ಲ. ಕರ್ಜೈ ಕೂಡ ವರ್ಷಗಳಿಂದ ಇದೇ ಅಭಿಪ್ರಾಯ ಹೇಳಿಕೊಂಡು ಬಂದಿದ್ದಾರೆ. ಬಹುತೇಕ ನಾಗರಿಕ ಹತ್ಯೆಗೆ ತಾಲಿಬಾನ್ ಕಾರಣವೇ ಹೊರತು ನ್ಯಾಟೊ ಅಲ್ಲ ಎನ್ನುತ್ತಿರುವ ಅಮೆರಿಕ, ಈ ಬೆಳವಣಿಗೆಯಿಂದ ಹತಾಶಗೊಂಡಿದೆ.ಆಫ್ಘಾನಿಸ್ತಾನದ ಮಾಧ್ಯಮ ಆಗೂ ವಾರ್ತಾ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಆಫ್ಘನ್ನರಿಗೆ ಯಾವುದೇ ಯೋಜಿತ ಸ್ಥಿತ್ಯಂತರದ ಸೂಚನೆಯೇನೂ ಹೋಗಿಲ್ಲ. ಇದನ್ನು ಅವರೇ ಹೇಳಿಕೊಂಡಿದ್ದಾರೆ.

 

ಕೇಂದ್ರದಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಆಫ್ಘನ್ನರ ಬಗ್ಗೆ ಅಮೆರಿಕಕ್ಕೆ ಹೆಚ್ಚು ಅಸಹನೆ ಉಂಟಾಗಿದೆ ಎನ್ನುವ ವಾರ್ತಾ ಇಲಾಖೆಯ ನೌಕರರು ಅದಕ್ಕೆ ಕಾರಣವನ್ನೂ ಕೊಡುತ್ತಾರೆ. ಹಿಂದೆ ಕೆಲಸಕ್ಕಿದ್ದವರಂತೆ ಇರದ ಇವರೆಲ್ಲಾ ಅಮೆರಿಕನ್ ವಿರೋಧಿ ಭಾವನೆಯನ್ನು ಬೇರೂರಿಕೊಂಡೇ ಅಭಿಪ್ರಾಯ ರೂಪಿಸುತ್ತಿದ್ದಾರಂತೆ.ಡಿಸೆಂಬರ್ 25ರ ನಂತರವಷ್ಟೆ ಅಮೆರಿಕನ್ನರು ಮಾಹಿತಿ ಕೇಂದ್ರಕ್ಕೆ ವಾಪಸಾಗಿದ್ದಾರೆ. ಸೋಮವಾರ ರಾತ್ರಿ ತಮ್ಮ ಉಪಕರಣಗಳನ್ನೆಲ್ಲಾ ಲಾರಿಗೆ ಹಾಕಿಕೊಂಡು ಗಂಟುಮೂಟೆ ಕಟ್ಟಿರುವುದನ್ನು ಅಮೆರಿಕನ್ನರು ತೋರಿಸಿದರು ಎಂದು ಒಬ್ಬ ಅಧಿಕಾರಿ ಹೇಳುತ್ತಾರೆ. ಈ ಬೆಳವಣಿಗೆಯಿಂದ ಆಫ್ಘನ್ ಅಧಿಕಾರಿಗಳು ತೊಂದರೆಗೆ ಒಳಗಾಗಿರುವಂತೇನೂ ಕಾಣುತ್ತಿಲ್ಲ.

`ನಮ್ಮನ್ನು ಅವರು ತೊರೆಯ ಬಯಸಿದರೆ ಅದರಿಂದ ನಮಗೆ ಬೇಸರವೇನೂ ಇಲ್ಲ~ ಎನ್ನುತ್ತಾರೆ ಮಾಹಿತಿ ಕೇಂದ್ರದ ಉಪ ನಿರ್ದೇಶಕ ಎಜಾತುಲ್ಲಾ ಸಾಫಿ.ಕಾಬೂಲ್‌ನಲ್ಲಿ ಪಶ್ಚಿಮದ ಚಿಂತಕರೇ ಸರ್ಕಾರದ ಮಂತ್ರಿಗಳು ಹಾಗೂ ವಿದೇಶಿಯರ ನಡುವೆ ಸಂವಾದ ನಡೆಸುತ್ತಿದ್ದದ್ದು ಹೆಚ್ಚು. ಕೆಲವು ದಿನಗಳ ಹಿಂದೆ ಕೂಡ ಇದೇ ಪರಿಸ್ಥಿತಿ ಇತ್ತು. ಆಫ್ಘನ್ ಪುನರ್‌ನಿರ್ಮಾಣವು ಹೆಚ್ಚು ನಾಗರಿಕಪರವೂ ಕಡಿಮೆ ಸೇನಾ ಸ್ವರೂಪದ್ದೂ ಆಗಿರಬೇಕೆಂಬ ಪಶ್ಚಿಮದ ಧೋರಣೆಯೇ ಇಲ್ಲೂ ಕಾಣುತ್ತಿತ್ತು.ಆಗೀಗ ಪಶ್ಚಿಮದವರ ಪ್ರಾಮಾಣಿಕತೆಯ ಬಗ್ಗೆಯೂ ಸಂಶಯ ಮೂಡಿದೆ. ಕಾಬೂಲ್ ಬ್ಯಾಂಕ್‌ನ ಹಣವನ್ನು ರಾಜಕೀಯ ಧುರೀಣರು ತಮ್ಮ ಅನುಕೂಲಕ್ಕಾಗಿ ಗುಳುಂ ಮಾಡಿ, ಆ ಬ್ಯಾಂಕ್ ಹೆಚ್ಚೂಕಡಿಮೆ ಮುಚ್ಚುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆಗ ಕೇಂದ್ರದ ಮಾರ್ಗದರ್ಶಕರು ನಿದ್ದೆ ಮಾಡುತ್ತಿದ್ದರು. ಈಗ ಅವರೆಲ್ಲಾ ಗುಳೇ ಎದ್ದಿದ್ದಾರೆ.ಕಳೆದ ವರ್ಷ ಆಫ್ಘನ್ ಅಟಾರ್ನಿ ಜನರಲ್ ತಮ್ಮ ಕಚೇರಿಯಿಂದ ಕೆಲವು ಮಾರ್ಗದರ್ಶಕರನ್ನು ಹೊರಹಾಕಿದ್ದರು. ಅವರೆಲ್ಲಾ ಸರ್ಕಾರಿ ಅಧಿಕಾರಿಗಳ ವಿರುದ್ಧ ಲಂಚ ಪ್ರಕರಣಗಳನ್ನು ಹೊರಿಸುವ ಹುನ್ನಾರ ಹೂಡಿದ್ದರೆನ್ನಲಾಗಿತ್ತು.ಆಫ್ಘನ್ ಮಾಹಿತಿ ಕೇಂದ್ರದಿಂದ ಅಮೆರಿಕ ಮಾರ್ಗದರ್ಶಕರು ಮರಳುತ್ತಿರುವುದು ತನ್ನ ವಾಪಸಾತಿ ನಿರ್ಧಾರದ ಪ್ರಕ್ರಿಯೆಯ ಭಾಗವಷ್ಟೆ ಎಂದು ಕಳೆದ ಬುಧವಾರ ಅಮೆರಿಕ ರಾಯಭಾರಿ ಸಂಕ್ಷಿಪ್ತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. `ಆಫ್ಘನ್ ಸರ್ಕಾರ ಹಾಗೂ ಅದರ ಮಾಹಿತಿ ಕೇಂದ್ರದ ಜೊತೆಗಿನ ತನ್ನ ಸಂಬಂಧವನ್ನು ಅಮೆರಿಕ ಪುನರ್‌ಪರಿಶೀಲಿಸುತ್ತಿದೆ.ಅಮೆರಿಕದ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳುವುದೇ ಸೂಕ್ತವೆಂಬುದು ನಿಜವಾದರೂ ಅದರ ಕುರಿತು ಯೋಚನೆ ನಡೆದಿದೆ~ ಎಂಬರ್ಥದ ಹೇಳಿಕೆ ಅದು.ಆಫ್ಘಾನಿಸ್ತಾನದಲ್ಲಿನ ಅಮೆರಿಕ ರಾಯಭಾರಿ ಕಚೇರಿಯ ವಕ್ತಾರ ಗೆವಿನ್ ಸ್ಯಾಂಡ್‌ವಿಲ್ ದೂರವಾಣಿ ಮೂಲಕ ನೀಡಿದ ಸಂದರ್ಶನದಲ್ಲಿ, `ಸುದ್ದಿಗೋಷ್ಠಿಯಿಂದ ಅಮೆರಿಕ ಅಧಿಕಾರಿಗಳು ಹೊರನಡೆದದ್ದು ಸಮಯದ ಕಾರಣಕ್ಕಾದ ಕಾಕತಾಳೀಯ ಬೆಳವಣಿಗೆಯಷ್ಟೆ.

ಅಮೆರಿಕ ಈಗಲೂ ಆಫ್ಘಾನಿಸ್ತಾನಕ್ಕೆ ಆರ್ಥಿಕ ನೆರವು ನೀಡುವುದನ್ನು ಮುಂದುವರಿಸಲಿದೆ. ಈ ವರ್ಷ 30 ಲಕ್ಷ ಡಾಲರ್ ನೆರವು ನೀಡಲಾಗಿದ್ದು, ಕಳೆದ ವರ್ಷ 40 ಲಕ್ಷ ಡಾಲರ್ ಹಣಕಾಸಿನ ಸಹಾಯ ಸಂದಾಯವಾಗಿದೆ~ ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)