ಶುಕ್ರವಾರ, ಮೇ 20, 2022
20 °C
`ವಲಸೆ' ಈ ಕಾಲದ ವಾಸ್ತವ-ಜಾರ್ಜ್ ಒಬೆಯಾ

ಆಫ್ರಿಕಾಕ್ಕೆ ಅಥ್ಲೆಟಿಕ್ಸ್ ಆತ್ಮವಿಶ್ವಾಸ ನೀಡಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ: ಪ್ರಸಕ್ತ 20ನೇ ಏಷ್ಯಾ ಅಥ್ಲೆಟಿಕ್ಸ್‌ನಲ್ಲಿ ಬಹರೇನ್, ಕತಾರ್, ಸೌದಿ ಅರೇಬಿಯಾ, ಕುವೈತ್ ದೇಶಗಳ ಅಥ್ಲೀಟ್‌ಗಳೇ ಪದಕ ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಇಲ್ಲಿ ಈ ದೇಶಗಳನ್ನು ಪ್ರತಿನಿಧಿಸಿ ಪದಕ ಗೆದ್ದ ಬಹುತೇಕ ಅಥ್ಲೀಟ್‌ಗಳ ಮೂಲ ನೆರೆಯ ನೈಜೀರಿಯಾ, ಇಥಿಯೋಪಿಯಾ, ಕೆನ್ಯಾ ಮುಂತಾದ ಆಫ್ರಿಕಾ ದೇಶಗಳೆನ್ನುವುದೊಂದು ವಿಶೇಷ.



ಪುರುಷರ 100 ಮೀಟರ್ಸ್ ಓಟದಲ್ಲಿ ಗುರುವಾರ ರಜತ (10.27ಸೆ.) ಗೆದ್ದ ಕತಾರ್‌ನ ಸ್ಯಾಮುಯೆಲ್ ಮೂಲತಃ ನೈಜೀರಿಯಾದವರು. ಇವರು 2007ರಲ್ಲಿ ಅಮಾನ್‌ನಲ್ಲಿ ನಡೆದಿದ್ದ 17ನೇ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಇದೇ ದೂರವನ್ನು 9.99ಸೆಕೆಂಡುಗಳಲ್ಲಿ ಓಡಿ ಚಿನ್ನ ಗೆದ್ದಿದ್ದರು. ಇವತ್ತಿಗೂ ಏಷ್ಯಾ ಖಂಡದ ಆ ದಾಖಲೆಯನ್ನು ಮುರಿಯಲು ಯಾರಿಗೂ ಸಾಧ್ಯವಾಗಿಲ್ಲ. ನಂತರ ಇವರು ನೂರಾರು ಅಂತರರಾಷ್ಟ್ರೀಯ ಕೂಟಗಳಲ್ಲಿ ಸ್ಪರ್ಧಿಸಿದ್ದು, ತಮ್ಮದೇ ದಾಖಲೆಯನ್ನು ಉತ್ತಮ ಪಡಿಸಲೂ ಆಗಿಲ್ಲ. ಬಹರೇನ್ ದೇಶದ ಹೆಬ್ಬೆಗೆಬ್ರೆಲ್ ಶಿತೆಯ್ ಎಶೆತೆ ಅವರು ಬುಧವಾರ ನಡೆದ ಮಹಿಳಾ 10,000ಮೀಟರ್ಸ್ ಓಟದಲ್ಲಿ ಮೊದಲಿಗರಾಗಿ (32ನಿ.17.29ಸೆ.) ಗುರಿ ತಲುಪಿದರು. ಇವರೂ ಮೂಲತಃ ಇಥಿಯೋಪಿಯಾದವರು. ಶಿತೆಯ್ ಅವರು ಜಪಾನ್‌ನ ಕೋಬೆನಲ್ಲಿ ನಡೆದಿದ್ದ 19ನೇ ಏಷ್ಯಾ ಅಥ್ಲೆಟಿಕ್ಸ್ ನಲ್ಲಿಯೂ ಚಿನ್ನ ಗೆದ್ದಿದ್ದರು. ಇವತ್ತು ಬ್ರಿಟನ್ ಸೇರಿದಂತೆ ಯೂರೊಪ್‌ನ ಬಹುತೇಕ ದೇಶ ಮತ್ತು ಅಮೆರಿಕಾದಲ್ಲಿ ಇಂತಹ `ವಲಸೆ ಅಥ್ಲೀಟ್'ಗಳದೇ ಕಾರುಬಾರು.



ಇದಕ್ಕೆ ಸಂಬಂಧಿಸಿದಂತೆ `ವಲಸೆ ಕೋಚ್' ಜಾನ್    ಜಾರ್ಜ್ ಒಬೆಯಾ ಅವರೊಂದಿಗೆ `ಪ್ರಜಾವಾಣಿ'ಗಾಗಿ ಚರ್ಚಿಸಿದಾಗ ಕೆಲವು ಕುತೂಹಲದ ಸಂಗತಿಗಳು ತಿಳಿಯಿತು. ಜಾನ್ ಅವರು ಪ್ರಸಕ್ತ ಬಹರೇನ್ ತಂಡದ ಪ್ರಮುಖ ಕೋಚ್. ಇವರಿಗೆ ಭಾರತ ಹೊಸದೇನಲ್ಲ. ತಮ್ಮ ಹರೆಯದಲ್ಲಿ ನೈಜೀರಿಯಾದ ಟ್ರ್ಯಾಕ್‌ನಲ್ಲಿ ಸಾಕಷ್ಟು ಜಿಗಿದಿದ್ದ, ಓಡಿದ್ದ ಇವರು ನಂತರ ಕೋಚಿಂಗ್ ಬಗ್ಗೆ ಆಸಕ್ತಿ ತಳೆದು ಭಾರತಕ್ಕೆ ಬಂದು 1978ರಲ್ಲಿ ಪಟಿಯಾಲದ ಎನ್‌ಐಎಸ್‌ನಲ್ಲಿ ಒಂದು ವರ್ಷ ತರಬೇತು ಪಡೆದು ನೈಜೀರಿಯಾಕ್ಕೆ ಹಿಂತಿರುಗಿದರು. ಭಾರತದ ದಿನಗಳ ಬಗ್ಗೆ ನೆನಪಿಸಿಕೊಳ್ಳುವ ಇವರು ದೇಶದ ಹಿರಿಯ ಕ್ರೀಡಾತಜ್ಞ ಕೊಡಗಿನ ಡಾ.ಸಿ.ಎಂ.ಮುತ್ತಯ್ಯ ಅವರಿಂದ ಕಲಿತದ್ದು ಬಹಳ ಎಂದು ಕೃತಜ್ಞತೆಯಿಂದ ಹೇಳುತ್ತಾರೆ. ಇವರು 1986ರಿಂದ 2009ರವರೆಗೆ ನೈಜೀರಿಯಾ ರಾಷ್ಟ್ರೀಯ ತಂಡದ ಕೋಚ್ ಆಗಿದ್ದರು. ಇವರು ಕಳೆದ ನಾಲ್ಕು ವರ್ಷಗಳಿಂದ ಬಹರೇನ್‌ನಲ್ಲಿ ನೆಲೆಸಿದ್ದು ಬಹರೇನ್ ತಂಡದ ತರಬೇತುದಾರರಲ್ಲಿ ಒಬ್ಬರಾಗಿದ್ದಾರೆ. ಜಾನ್ ಜಾರ್ಜ್ ಒಬೆಯಾ ಜತೆಗೆ ನಡೆಸಿದ ಮಾತುಕತೆಯ ವಿವರ ಇಲ್ಲಿದೆ.



ಮಧ್ಯಪ್ರಾಚ್ಯದಲ್ಲಿ ಬಹರೇನ್‌ನಲ್ಲಿ ಮಾತ್ರ ಆಫ್ರಿಕಾ ಮೂಲದ ಕೋಚ್‌ಗಳಿರುವುದಾ ?

ಆಫ್ರಿಕಾ ಮೂಲದ ಅಥ್ಲೆಟಿಕ್ಸ್ ತರಬೇತುದಾರರು ಕತಾರ್‌ನಲ್ಲಿ 20ಮಂದಿ, ಸೌದಿ ಅರೇಬಿಯಾದಲ್ಲಿ 10 ಮಂದಿ ಇದ್ದಾರೆ. ಮಧ್ಯಪ್ರಾಚ್ಯದ ಇತರ ದೇಶಗಳಲ್ಲಿಯೂ ಹೀಗೆ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.



ಬಹರೇನ್‌ನಲ್ಲಿ ಭಾರತದಲ್ಲಿರುವಷ್ಟು ಕ್ರೀಡಾ ಸೌಲಭ್ಯಗಳಿವೆಯಾ?

ಹೋಲಿಕೆ ಮಾಡುವಂತೆಯೇ ಇಲ್ಲ. ಇಲ್ಲಿ ನೂರಾರು ಕ್ರೀಡಾ ಶಾಲೆಗಳಿವೆ. ಅಲ್ಲಿ ಒಂದೂ ಇಲ್ಲ. ಕೆಲವೇ ಕೆಲವು ತರಬೇತಿ ಕೇಂದ್ರಗಳಿವೆ. ಕ್ರೀಡಾಭಿವೃದ್ಧಿಗೆ ಅಲ್ಲಿನ ಸರ್ಕಾರ ಈಚೆಗೆ ಅತೀವ ಆಸಕ್ತಿ ತೋರುತ್ತಿದೆ. ಖಾಸಗಿಯವರೂ ಕೆಲವು ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಲು ಮುಂದೆ ಬರುತ್ತಿದ್ದಾರೆ. ಅಂತಹ ತರಬೇತಿ ಕೇಂದ್ರಗಳಲ್ಲಿ ಆಫ್ರಿಕಾ ಮೂಲದ ಅಥ್ಲೀಟ್‌ಗಳೇ ತುಂಬಿರುತ್ತಾರೆ.



ಆರ್ಥಿಕ ಸಮಸ್ಯೆ, ಉದ್ಯೋಗದ ಕೊರತೆ ಇತ್ಯಾದಿ ಕಾರಣಗಳಿಂದ ಆಫ್ರಿಕಾ ದೇಶದ ಅಥ್ಲೀಟ್‌ಗಳು ಮಧ್ಯಪ್ರಾಚ್ಯಕ್ಕೆ ವಲಸೆ ಹೋಗುತ್ತಿದ್ದಾರಲ್ಲವೇ ?

ಆ ಪರಿಕಲ್ಪನೆಯೇ ತಪ್ಪು. ಆಫ್ರಿಕಾ ಖಂಡದ ಪ್ರತಿ ದೇಶಗಳಲ್ಲಿಯೂ ಅಸಂಖ್ಯ ಕ್ರೀಡಾ ಪ್ರತಿಭಾವಂತರಿದ್ದಾರೆ. ಉದಾಹರಣೆಗೆ ಇಥಿಯೋಪಿಯಾದಲ್ಲಿ ಹತ್ತು ಸಾವಿರ ಮೀಟರ್ಸ್ ಓಡುವವರು ಸಾವಿರಾರು ಮಂದಿ ಕಾಣ ಸಿಗುತ್ತಾರೆ. ಒಬ್ಬರಿಗಿಂತ ಒಬ್ಬರು ಅಪ್ರತಿಮರು. ಆದರೆ ಅಂತರರಾಷ್ಟ್ರೀಯ ಕೂಟಗಳಲ್ಲಿ ಆ ದೇಶವನ್ನು ಪ್ರತಿನಿಧಿಸಲು ಮೂವರಿಗೆ ಮಾತ್ರ ಸಾಧ್ಯ ತಾನೆ. ಹೀಗಾಗಿ ಉಳಿದವರು ಅವಕಾಶಕ್ಕಾಗಿ ಇತರ ದೇಶಗಳತ್ತ ಕಣ್ಣು ಹಾಯಿಸುತ್ತಾರೆ, ಅಷ್ಟೇ.



ಹಾಗಿದ್ದರೆ `ವಲಸೆ' ಕ್ರೀಡಾ ಚಟುವಟಿಕೆಯಿಂದ ಸಂಬಂಧಪಟ್ಟ ಅಥ್ಲೀಟ್‌ಗಳ ದೇಶಗಳಿಗೆ ನಷ್ಟವಾಗಿದೆ ಎನ್ನುತ್ತೀರಾ ?

ಇಲ್ಲ. ಬಹಳ ಅನುಕೂಲವಾಗಿದೆ. ಮಧ್ಯಪ್ರಾಚ್ಯ, ಯೂರೊಪ್ ಮತ್ತು ಅಮೆರಿಕಾಗಳಲ್ಲಿ ಆಫ್ರಿಕಾದ ಅಥ್ಲೀಟ್‌ಗಳು ಹೋಗಿ ನೆಲೆಸಿದ್ದರಿಂದ ಆಫ್ರಿಕಾದ ದೇಶಗಳಿಗೆ ಆರ್ಥಿಕವಾಗಿ ನೆರವಾಗಿದೆ. ಆಫ್ರಿಕನ್ನರಲ್ಲಿ ಕ್ರೀಡೆಯಿಂದಾಗಿ ಈಗ ಕಂಡು ಬರುತ್ತಿರುವ ಆತ್ಮವಿಶ್ವಾಸ ಅರ್ಧ ಶತಮಾನದ ಹಿಂದೆ ಇರಲಿಲ್ಲ ಎನ್ನುವುದೂ ಮುಖ್ಯವಾಗುತ್ತದೆ.



ಕೆನ್ಯಾ ಅಥವಾ ಇಥಿಯೋಪಿಯ ದೇಶಗಳು ಮತ್ತು ಬಹರೇನ್ ಅಥವಾ ಕತಾರ್‌ನ ಅಥ್ಲೆಟಿಕ್ಸ್ ಚಟುವಟಿಕೆಗಳಿಗಿರುವ ವ್ಯತ್ಯಾಸ ?

ಇಥಿಯೋಪಿಯ ಮುಂತಾದ ಆಫ್ರಿಕಾದ ದೇಶಗಳಲ್ಲಿ ಒಬ್ಬ ಅಥ್ಲೀಟ್‌ಗೆ ಅಗತ್ಯವಾದ ಮೂಲ ಸೌಲಭ್ಯಗಳಿಲ್ಲ. ಆರ್ಥಿಕ ಶಕ್ತಿಯೂ ಇಲ್ಲ. ಹೀಗಾಗಿ ಅಲ್ಲಿಯ ಮಂದಿ ಸ್ವಾಭಾವಿಕ ಪರಿಸರದಲ್ಲಿ ಓಡುತ್ತಾ ಅಭ್ಯಾಸ ನಡೆಸಲಷ್ಟೇ ಸಾಧ್ಯ. ವೇಗದ ಓಟಕ್ಕೆ ಬೇಕಾದ ಅತ್ಯುತ್ತಮ ಟ್ರ್ಯಾಕ್‌ನ ನಿತ್ಯಲಭ್ಯತೆ, ಪರಿಣಿತ ಕೋಚ್‌ಗಳ ಮಾರ್ಗದರ್ಶನದ ಕೊರತೆ ಇದೆ. ಆದರೆ ಅದೇ ದೇಶಗಳಿಂದ ಬಹರೇನ್, ಕುವೈತ್, ಕತಾರ್‌ಗಳಿಗೆ ಹೋದವರಿಗೆ ಅಗತ್ಯ ಮೂಲಸೌಲಭ್ಯಗಳೆಲ್ಲಾ ಸಿಗುತ್ತವೆ. ಅಲ್ಲಿ ವೇಗದ ಓಟಗಾರರೂ, ಲಾಂಗ್‌ಜಂಪ್ ಹೈಜಂಪ್ ಜಿಗಿತಗಾರರು, ಎಸೆತಗಾರರೂ ಸಿಗುತ್ತಾರೆ. ಆದರೆ ಇಥಿಯೋಪಿಯಾದಂತಹ ದೇಶಗಳನ್ನು ಪ್ರತಿನಿಧಿಸುವವರು ದೂರ ಅಂತರ ಓಟದಲ್ಲಿ ನೈಪುಣ್ಯತೆ ಹೊಂದಿರುವವರಷ್ಟೇ ಆಗಿರುತ್ತಾರೆ.



ಬಹರೇನ್‌ನಲ್ಲಿ ಆಫ್ರಿಕಾ ಅಥ್ಲೀಟ್‌ಗಳಿಗೆ ನೀಡಲಾಗುವ ತರಬೇತಿ ಇತರ ದೇಶಗಳಿಗಿಂತ ಭಿನ್ನವೇ ?

ಏನಿಲ್ಲ, ತರಬೇತಿ ಜಗತ್ತಿನಾದ್ಯಂತ ಒಂದೇ ರೀತಿ. ಅಂದರೆ ಎಲ್ಲಾ ಕೋಚ್‌ಗಳೂ `ಫಿಟ್‌ನೆಸ್'ಗೇ ಮೊದಲ ಆದ್ಯತೆಯನ್ನು ನೀಡುತ್ತಾರೆ. ನಂತರ ತಂತ್ರಗಳು ಬೇರೆ ಬೇರೆ ಇರುತ್ತವೆ. ಆಫ್ರಿಕಾ ದೇಶಗಳ ಅಥ್ಲೀಟ್‌ಗಳ ಬಗ್ಗೆ ಹೇಳುವುದಿದ್ದರೆ ಕಡಿಮೆ ಶ್ರಮ ಹಾಕಿ ಹೆಚ್ಚಿನ ಫಲಿತಾಂಶ ಪಡೆಯಬಹುದು. ಆಫ್ರಿಕಾ ಅಥ್ಲೀಟ್‌ಗಳಲ್ಲಿ ಶಕ್ತಿ, ಸಹಿಷ್ಣುತೆ ಇತರ ಖಂಡದವರಿಗಿಂತ ಸ್ವಲ್ಪ ಹೆಚ್ಚೇ ಇರುತ್ತದೆ ಎಂದು ವಿಜ್ಞಾನಿಗಳೇ ಹೇಳಿದ್ದಾರಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.