ಬುಧವಾರ, ಏಪ್ರಿಲ್ 21, 2021
25 °C

ಆಯ್ಕೆದಾರರ ಮನವೊಲಿಕೆಯಲ್ಲಿ ಸಚಿನ್ ವಿಫಲ: ಕಪಿಲ್ ದೇವ್ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಸಚಿನ್ ತೆಂಡೂಲ್ಕರ್ ನಾಯಕರಾಗಿದ್ದ ಸಂದರ್ಭದಲ್ಲಿ ತಮ್ಮ ತಂಡದ ಆಟಗಾರರನ್ನು ಆರಿಸುವಲ್ಲಿ ಆಯ್ಕೆದಾರರಿಗೆ ಮನವರಿಕೆ ಮಾಡುವಲ್ಲಿ ಸಫಲರಾಗದ ಸಚಿನ್  ನಾಯಕನಾಗಿ ವಿಫಲವಾಗಲು ಕಾರಣ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್‌ದೇವ್ ಹೇಳಿದ್ದಾರೆ.

‘ಸಚಿನ್ ನಾಯಕತ್ವ ವಹಿಸಿದ್ದಾಗ ತಮ್ಮ ತಂಡಕ್ಕೆ ಇಂತಹ ಆಟಗಾರರು ಬೇಕು ಎಂದು ಬೇಡಿಕೆಯನ್ನು ಆಯ್ಕೆದಾರರಿಗೆ ತಿಳಿಸಬೇಕು. ಆದರೆ, ಅವರು ಈ ಕೆಲಸವನ್ನು ಮಾಡುವಲ್ಲಿ ಹಿಂದೆ ಬಿದ್ದರು’ ಎಂದು ಆಲ್‌ರೌಂಡರ್ ಕಪಿಲ್ ಹೇಳಿದರು.

ಮಂಗಳವಾರ ರಾತ್ರಿ ನಾಯಕತ್ವ ಗುಣಗಳ ಕುರಿತು ನಡೆದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಸಚಿನ್ ನಾಯಕತ್ವದಲ್ಲಿ ವಿಫಲರಾಗಲು ಕಾರಣವೇನು ಎಂಬ ಪ್ರಶ್ನೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಚಿನ್ 25 ಟೆಸ್ಟ್‌ಗಳಲ್ಲಿ ನಾಯಕತ್ವ ವಹಿಸಿದ್ದರು. ಅದರಲ್ಲಿ ಭಾರತ ನಾಲ್ಕು ಗೆದ್ದು, ಒಂಬತ್ತರಲ್ಲಿ ಸೋತಿತ್ತು. 1999ರಲ್ಲಿ ಆಸ್ಟ್ರೇಲಿಯ ವಿರುದ್ಧ 3-0ಯಿಂದ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 2-0ಯಿಂದ ಭಾರತವು ಹೀನಾಯ ಸೋಲು ಅನುಭವಿಸಿತ್ತು.

ಅವರು ನಾಯಕತ್ವ ವಹಿಸಿದ್ದ 73 ಏಕದಿನ ಪಂದ್ಯಗಳಿಲ್ಲ ಭಾರತವು ಗೆದ್ದಿದ್ದು 23 ಮತ್ತು ಸೋತಿದ್ದು 42. ಒಂದು ಟೈ ಮತ್ತು ಆರು ಪಂದ್ಯಗಳು ಫಲಿತಾಂಶವಿಲ್ಲದೇ ಕೊನೆಗೊಂಡಿದ್ದವು.  ಸಚಿನ್ ನಾಯಕನಾಗಿದ್ದ ಸಂದರ್ಭದಲ್ಲಿ ಕಪಿಲ್ ತಂಡದ ತರಬೇತುದಾರರಾಗಿದ್ದರು. ತಮ್ಮ ನಾಯಕತ್ವದ ಅನುಭವವನ್ನೂ ವಿವರಿಸಿದ ಅವರು, ‘ನಾನು ತಂಡದ ನಾಯಕನಾಗಿದ್ದ ಸಂದರ್ಭದಲ್ಲಿ ಆಟದ ಅನುಭವದಲ್ಲಿ ನನ್ನ ಅಜ್ಜಂದಿರಂತೆ ಇದ್ದ ಸುನೀಲ್ ಗಾವಸ್ಕರ್, ಮೊಹಿಂದರ್ ಅಮರನಾಥ, ಸೈಯ್ಯದ್ ಕಿರ್ಮಾನಿ ಇದ್ದರು. ಅವರಂತಹ ಉತ್ತಮ ಹಿರಿಯರು ಇದ್ದಾಗಲೂ ತಂಡವನ್ನು ನಿಭಾಯಿಸುವುದು ಕೆಲವೊಮ್ಮೆ ಕಠಿಣವಾಗುತ್ತಿತ್ತು.  ಆಟದ ಸಂದರ್ಭದಲ್ಲಿ ಕೆಲವೊಮ್ಮೆ ಅವರ ಮೇಲೆ ರೇಗಾಡಿದರೆ, ಅವರ ಮುಂದೆ ನಿಂತು ಕ್ಷಮೆ ಕೇಳಿಬಿಡುತ್ತಿದ್ದೆ ಎಂದು ಕಪಿಲ್ ಹೇಳಿದ್ದಾರೆ.

ಆಟದ ಸಂದರ್ಭದಲ್ಲಿ ನಿಮಗೆ ಮುಜುಗರವಾಗುವಂತೆ ನಡೆದುಕೊಂಡರೆ ದಯವಿಟ್ಟು ಕ್ಷಮಿಸಿ ಎಂದು ಸನ್ನಿ ಮತ್ತು ಮೊಹಿಂದರ್ ಅವರನ್ನು ಹಲವು ಬಾರಿ ಕೇಳಿಕೊಂಡಿದ್ದೆ.

ಸಣ್ಣ ಪಟ್ಟಣದಿಂದ ಬಂದಿದ್ದ ಹುಡುಗನಾಗಿದ್ದ ನನ್ನ ಮುಗ್ಧ ಸ್ವಭಾವ ನನಗೆ ಬಹಳ ಸಹಕಾರಿಯಾಗಿತ್ತು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.