ಗುರುವಾರ , ಜೂನ್ 17, 2021
23 °C

ಆರೋಗ್ಯಕ್ಕೂ, ಲಾಭಕ್ಕೂ ಅಶ್ವಗಂಧ

ವಿಜಯ್ ನಿಚ್ಚಾಪುರ್ Updated:

ಅಕ್ಷರ ಗಾತ್ರ : | |

ಅಂತರ್ಜಲ ಕುಸಿತ, ಅಪರೂಪವಾಗುತ್ತಿರುವ ಮಳೆಯಿಂದಾಗಿ ರೈತರಿಗೆ ಬಿತ್ತನೆಯ ಫಸಲು ಕೈಸೇರುತ್ತದೆ ಎನ್ನುವ ಖಾತ್ರಿ ಇಲ್ಲ. ಒಂದು ವೇಳೆ ಫಸಲು ಕೈ ಸೇರಿದರೂ ಮಾರುಕಟ್ಟೆ ಕೈ ಹಿಡಿಯುವುದಿಲ್ಲ. ಹೀಗಾಗಿ ಇದಕ್ಕೂ ರೈತರು ಬೆಂಬಲ ಬೆಲೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ಬೀದಿಗಿಳಿಯುವ ಅನಿವಾರ್ಯತೆ ಇದೆ. ಇದರಿಂದ ಬೆಳೆ ಬೆಳೆಯುವ ಲೆಕ್ಕಾಚಾರದಲ್ಲಿ ರೈತ ಗೊಂದಲಕ್ಕೀಡಾಗಿದ್ದಾನೆ. ಇಂತಹ ಆತಂಕವನ್ನು ಅಶ್ವಗಂಧ ನೀಗಿಸಬಹುದು.ಅಶ್ವಗಂಧವನ್ನು ಹೀರೆಮದ್ದಿನಗಿಡ ಅಥವಾ ಕೀರೆಮಲ್ಲಿನಗಿಡ ಎಂದೂ ಕರೆಯುತ್ತಾರೆ. ಇದು ಔಷಧಿ ಬೆಳೆಯಾಗಿದ್ದು, ಇದನ್ನು ಬೆಳೆದರೆ ಗರಿಷ್ಠ ಮಟ್ಟದಲ್ಲಿ ಲಾಭ ಗಳಿಸಲು ಸಾಧ್ಯವಿದೆ. ಇನ್ನು, ಇದು ಮಳೆಯಾಶ್ರಿತ ಬೆಳೆಯಾಗಿರುವುದರಿಂದ ಹೆಚ್ಚು ನೀರು ಬಯಸುವುದಿಲ್ಲ.ಮಳೆಯ ಕೊರತೆಯಾದರೂ ನಿರುಪಯುಕ್ತವಾಗದೇ, ಇದರಲ್ಲಿರುವ ಔಷಧಿ ಅಂಶಗಳಿಂದ ಬೇಡಿಕೆ ಕಾಪಿಟ್ಟುಕೊಳ್ಳುತ್ತದೆ. ಇದಕ್ಕೆ ರೋಗ-, ಕೀಟ ಬಾಧೆ ವಿರಳ. ಅತೀ ಕಡಿಮೆ ಖರ್ಚು, ಕೆಲಸಗಾರರನ್ನು ಬಯಸುವ ಬೆಳೆ. ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರ ನೀಡಿದರೆ ಸಾಕು ಅಧಿಕ ಇಳುವರಿ ಪಡೆಯಬಹುದು. ಹೀಗಾಗಿ ಈ ಬೆಳೆ ಗದಗ, ಮೈಸೂರು, ಬಳ್ಳಾರಿ, ಕೊಪ್ಪಳದಲ್ಲಿ ಬೆಳೆಯಲಾಗುತ್ತಿದೆ.

ಬೆಳೆಯುವುದು ಹೀಗೆ

ಅಶ್ವಗಂಧವನ್ನು ನೀರು ಬಸಿದು ಹೋಗುವ ಗೋಡು ಅಥಾವ ಕೆಂಪು ಮತ್ತು ಕಪ್ಪು ಮಣ್ಣಿನಲ್ಲಿ ಬೆಳೆಯಬಹುದು. ಸುಧಾರಿತ ತಳಿಗಳಾದ ಜವಹಾರ್ -೨೦ ಅಥವಾ ಪೋಷಿತ ತಳಿಗಳನ್ನು ಜುಲೈ ಅಥವಾ ಆಗಸ್ಟ್‌ನಲ್ಲಿ ಬಿತ್ತನೆ ಮಾಡಬಹುದು. ಒಂದು ಎಕರೆಗೆ ಅಂದಾಜು ೪-೫ ಕಿ.ಗ್ರಾಂ ಬೀಜ ಬೇಕಾಗುತ್ತದೆ. ಭೂಮಿ ಹದ ಮಾಡಿದ ನಂತರ ಬೀಜ ಚೆಲ್ಲುವುದು ಅಥವಾ ಸಾಲು ಬೆಳೆ ವಿಧಾನದಲ್ಲಿ ಬೆಳೆಯಬಹುದು. ಸಸಿಗಳ ನಡುವೆ ೩೦ x೧೦ ಸೆಂ.ಮೀ ಅಂತರವನ್ನು ಕಾಪಾಡಿದರೆ ಉತ್ತಮ ಇಳುವರಿ ಸಿಗುತ್ತದೆ. ಬಿತ್ತನೆಯಾಗಿ ಸುಮಾರು ೧೫೦-–೧೭೦ ದಿವಸಗಳ ನಂತರ  ಕೊಯ್ಲಿಗೆ ಬರುತ್ತದೆ.ಯಾವ ಭಾಗಕ್ಕೆ ಬೇಡಿಕೆ?

ಈ ಗಿಡದಲ್ಲಿ ಲಭ್ಯವಿರುವ ಸಸ್ಯಕ್ಷಾರಗಳಾದ ವೈಥಾನಿನ್ ಮತ್ತು ಸೋಮ್ನಿಫೆರಿನ್‌ಗಳನ್ನು ಅನೇಕ ಬಾಧೆಗಳನ್ನು ನಿವಾರಿಸಲು ಆಯುರ್ವೇದ ಮತ್ತು ಯುನಾನಿ ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಅಶ್ವಗಂಧದ ಬೇರು, ಬೀಜ, ಎಲೆಗಳ ರಸ... ಹೀಗೆ ಇದರ ಪ್ರತಿ ಭಾಗಕ್ಕೂ ಬೇಡಿಕೆ ಇದೆ. ಆದರೆ ಈ ಬೆಳೆಯಲ್ಲಿ ಇದರ ಬೇರು ಮುಖ್ಯವಾದ ಭಾಗವಾಗಿದ್ದು, ಗಿಡದಿಂದ ಬೇರನ್ನು ಬೇರ್ಪಡಿಸಿ ಒಣಗಿಸಬೇಕಾಗುತ್ತದೆ. ಅದೇ ರೀತಿ ಹಣ್ಣುಗಳಿಂದ ಬೀಜವನ್ನು ಸಂಗ್ರಹಿಸಬೇಕು.ಪ್ರತಿ ಎಕರೆಗೆ ಅಂದಾಜು ೧.೫-೨ ಕ್ವಿಂಟಾಲ್ ಒಣಗಿದ ಬೇರು ಮತ್ತು ೧೫-–೨೦ ಕಿ.ಗ್ರಾಂ ಬೀಜದ ಇಳುವರಿಗೆ ಅಡ್ಡಿಯಿಲ್ಲ!. ಹೀಗಾಗಿ ಪ್ರತಿ ಎಕರೆಗೆ ಅಂದಾಜು ೧.೫-೨ ಕ್ವಿಂಟಾಲ್ ಒಣಗಿದ ಬೇರು ಮತ್ತು ೧೫–-೨೦ ಕಿ.ಗ್ರಾಂ ಬೀಜದ ಇಳುವರಿಯನ್ನು ಪಡೆಯಬಹುದು. ಆದರೆ ಇಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ರೈತರಿಗೆ ಗರಿಷ್ಠ ಲಾಭ ಸಿಗುತ್ತಿಲ್ಲ. ಹೀಗಾಗಿ ಔಷಧಿ ಬೆಳೆಗಳಿಗೆ ಸರ್ಕಾರದಿಂದ ಅಧಿಕೃತ ಮಾರುಕಟ್ಟೆ ಹಾಗೂ ಮರು ಖರೀದಿ ಒಪ್ಪಂದ ತರುವುದರಿಂದ ಅಶ್ವಗಂಧ ಬೆಳೆಗೆ ಒಳ್ಳೆಯ ಭವಿಷ್ಯವಿದೆ. ಹೆಚ್ಚಿನ ಮಾಹಿತಿಗಾಗಿ ೯೯೦೦೭೭೫೮೯೪.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.