ಭಾನುವಾರ, ಮಾರ್ಚ್ 26, 2023
31 °C

ಆರೋಗ್ಯದೆಡೆ ನಿರ್ಲಕ್ಷ್ಯ ಸಲ್ಲ : ಕಾಜೊಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರೋಗ್ಯದೆಡೆ ನಿರ್ಲಕ್ಷ್ಯ ಸಲ್ಲ : ಕಾಜೊಲ್

ಸಾಮಾನ್ಯವಾಗಿ ಸಬಲೀಕರಣದ ಬಗ್ಗೆ ಮಾತನಾಡುವಾಗ ಮಹಿಳೆಯರ ಆರ್ಥಿಕ ಅಥವಾ ಸಾಮಾಜಿಕ ಸ್ಥಾನಮಾನವನ್ನು ಮಾತ್ರ ಗಮನದಲ್ಲಿರಿಸಿಕೊಳ್ಳುತ್ತೇವೆ. ಆದರೆ ಮಹಿಳೆಯ ಕ್ಷೇಮಕುಶಲವನ್ನೂ ಈ ಸಬಲೀಕರಣದ ಸೀಮೆಯೊಳಗೆ ತರಬೇಕು. ಆರೋಗ್ಯದೆಡೆ ದಿವ್ಯ ನಿರ್ಲಕ್ಷ್ಯ ತಾಳುವುದು ಭಾರತೀಯ ಮಹಿಳೆಯರ ಜಾಯಮಾನವಾಗಿದೆ ಎಂದು ಕಾಜೊಲ್‌ ಹೇಳಿದ್ದಾರೆ.ಒಮ್ಮೆ ತಾಯ್ತನದ ಖುಷಿಯಲ್ಲಿ ಮುಳುಗಿದರೆ ಮಹಿಳೆಯರು ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಾರೆ. ಇಡೀ ಕುಟುಂಬದ ಕೇಂದ್ರಬಿಂದುವಾಗಿದ್ದು, ಪ್ರತಿಯೊಂದು ಸಣ್ಣ ಸಣ್ಣ ಮಾಹಿತಿಯನ್ನೂ ಗಮನದಲ್ಲಿರಿಸಿಕೊಳ್ಳುವ ಮಹಿಳೆ ತನ್ನ ಆರೋಗ್ಯದ ವಿಷಯದಲ್ಲಿ ಮಾತ್ರ ನಿರ್ಲಕ್ಷ್ಯ ತೋರುತ್ತಾರೆ. ಯಾವುದಾದರೂ ಸಮಸ್ಯೆಗಳಿದ್ದರೆ ಮನೆಮದ್ದಿಗೆ ಮೊರೆ ಹೋಗುತ್ತಾರೆ. ವೈದ್ಯರ ಬಳಿ ಹೋಗುವುದನ್ನು ಮುಂದೂಡುತ್ತಾರೆ.ಕುಟುಂಬದ ಸದಸ್ಯರು ತಮ್ಮ ಕುಟುಂಬದ ಮಹಿಳೆಯರ ಆರೋಗ್ಯದೆಡೆ ವಿಶೇಷ ಗಮನವಹಿಸಬೇಕು. ನಾವಿಲ್ಲದಿದ್ದರೆ ಈ ಕುಟುಂಬ ಏನಾಗಬಹುದು ಎಂದು ಒಮ್ಮೆ ಪ್ರಶ್ನಿಸಿಕೊಳ್ಳಿ. ನೀವೇ ಅನಾರೋಗ್ಯದ ಕೂಪದೊಳಗಿದ್ದರೆ ಅದು ಇಡೀ ಕುಟುಂಬವನ್ನು ಬಾಧಿಸುವುದಿಲ್ಲವೇ? ಹಾಗಾಗಿ ಮಹಿಳೆಯರು ಮೊದಲು ತಮಗೆ ಯಾವುದೇ ಸಮಸ್ಯೆಗಳು ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಸಾಧ್ಯವಿರುವ ಎಲ್ಲ ತಪಾಸಣೆಗಳನ್ನೂ ನಿಯಮಿತವಾಗಿ ಮಾಡಿಸಿಕೊಳ್ಳುತ್ತಿರಬೇಕು. ಆಕಸ್ಮಿಕವಾಗಿ ಯಾವುದಾದರೂ ತೊಂದರೆ ಇದ್ದರೆ ಸಕಾಲಿಕ ಚಿಕಿತ್ಸೆ ಅಗತ್ಯವಾಗಿದೆ ಎಂದು ಕಾಜೊಲ್‌ ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ.ಸ್ತನ ಕ್ಯಾನ್ಸರ್‌ ಮೊದಲ ಹಂತದಲ್ಲಿಯೇ ಪತ್ತೆ ಮಾಡಬಹುದು. ಸ್ವಯಂ ಪರೀಕ್ಷೆಗೆ ಮುಂದಾಗಿ. ಸಂಕೋಚದ ಪರದೆಯನ್ನು ದೂರ ತಳ್ಳಿ. ಗರ್ಭಕೋಶದ ಕ್ಯಾನ್ಸರ್‌ ಸಾಧ್ಯತೆಯನ್ನು ಪ್ಯಾಪ್‌ಸ್ಮಿಯರ್‌ ಪರೀಕ್ಷೆಯಿಂದ ಪತ್ತೆ ಮಾಡಬಹುದಾಗಿದೆ. ಇನ್ನೂ ಹಲವು ಬಗೆಯ ಗಂಭೀರ ಸಮಸ್ಯೆಗಳನ್ನು ಮೊದಲ ಹಂತದಲ್ಲಿಯೇ ಕಂಡುಹಿಡಿಯಬಹುದು. ಹಾಗಾಗಿ ಸಬಲೀಕರಣವೆಂದರೆ ಸದೃಢವಾಗುವುದೂ ಅಷ್ಟೇ ಮುಖ್ಯ. ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಿ ಎನ್ನುವುದು ಅವರ ಕರೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.