ಸೋಮವಾರ, ಜನವರಿ 20, 2020
20 °C
ಮಾಜಿ ಕ್ರಿಕೆಟಿಗ ವಿಜಯ್ ಆರ್.ಭಾರದ್ವಾಜ್ ಪತ್ನಿ ಸರ ಕಳವು ಪ್ರಕರಣ

ಆರೋಪಿ ಸುನಿಲ್, ಮಣಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಕ್ರಿಕೆಟಿಗ ವಿಜಯ್ ಆರ್.ಭಾರದ್ವಾಜ್ ಅವರ ಪತ್ನಿ ಟಿ.ವಿ.ಸೌಮ್ಯ ಅವರ ಚಿನ್ನದ ಸರ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ಹನುಮಂತನಗರ ಪೊಲೀಸರು, ಸುಮಾರು ್ಙ15.93 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ನಗರದ ಮೈಸೂರು ರಸ್ತೆಯ ಆನಂದಪುರ ನಿವಾಸಿಗಳಾದ ಸುನಿಲ್ ಕುಮಾರ್ (19) ಮತ್ತು ಮಣಿ ಅಲಿಯಾಸ್ ಪಾಲ್ (21) ಬಂಧಿತರು. ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 12 ಸರಗಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದೂವರೆ ವರ್ಷ ದಿಂದ ಈ ಕೃತ್ಯದಲ್ಲಿ ತೊಡಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಭಾರದ್ವಾಜ್ ದಂಪತಿ ಗಿರಿನಗರದಲ್ಲಿ ವಾಸವಾಗಿದ್ದಾರೆ. ಮೇ 6ರಂದು ಮಕ್ಕಳನ್ನು ಹನುಮಂತನಗರ ಸಮೀಪದ ಪ್ಲೇಹೋಮ್‌ಗೆ ಬಿಟ್ಟು ಬಂದಿದ್ದ ಸೌಮ್ಯ, ಮಧ್ಯಾಹ್ನ 3.30ರ ಸುಮಾರಿಗೆ ಮಕ್ಕಳನ್ನು ಮನೆಗೆ ಕರೆದುಕೊಂಡು ಬರಲು ಹೋಗಿದ್ದರು. ಈ ವೇಳೆ ಬೈಕ್‌ನಲ್ಲಿ ಅವರನ್ನು ಹಿಂಬಾಲಿಸಿದ್ದ ದುಷ್ಕರ್ಮಿಗಳು, 20 ಗ್ರಾಂ ತೂಕದ ಚಿನ್ನದ ಸರ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಸೌಮ್ಯ ಹನುಮಂತನಗರ ಠಾಣೆಗೆ ದೂರು ಕೊಟ್ಟಿದ್ದರು.ಆರೋಪಿ ಸುನಿಲ್, ಹನುಮಂತನಗರದಲ್ಲಿ ಕಳೆದ ವಾರ ವೃದ್ಧೆಯೊಬ್ಬರ ಚಿನ್ನದ ಸರ ದೋಚಿದ್ದ. ಆ ವೃದ್ಧೆ ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ನಿಯಂತ್ರಣ ಕೊಠಡಿಯ ಸಿಬ್ಬಂದಿ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಮಾಹಿತಿ ಆಧರಿಸಿ ಕಾರ್ಯಾನ್ಮೋಖರಾದ ಗಸ್ತಿನ ಸಿಬ್ಬಂದಿ, ಚೀತಾದಲ್ಲಿ ಆರೋಪಿಯನ್ನು ಹಿಂಬಾಲಿಸಿದ್ದರು. ಆದರೆ, ಸುನೀಲ್ ಪರಾರಿಯಾಗಿದ್ದರಿಂದ ಸಿಬ್ಬಂದಿ ಬೈಕ್‌ನ ನೋಂದಣಿ ಸಂಖ್ಯೆಯನ್ನು ದಾಖಲಿಸಿಕೊಂಡಿದ್ದರು.ನೋಂದಣಿ ಸಂಖ್ಯೆ ಮೂಲಕ ತನಿಖೆ ಆರಂಭಿಸಿದಾಗ ಕೃತ್ಯಕ್ಕೆ ಬಳಸಿದ್ದ ಬೈಕ್, ಸುನೀಲ್‌ನ ಭಾವ ಸುರೇಶ್ ಅವರಿಗೆ ಸೇರಿದ್ದು ಎಂಬುದು ಗೊತ್ತಾಯಿತು. ಅನಂತಪುರದಲ್ಲಿ ವಾಸವಾಗಿರುವ ಸುರೇಶ್ ಅವರ ವಿಚಾರಣೆ ನಡೆಸಿದಾಗ ಅವರು ಬೈಕ್ ಅನ್ನು ನಾಲ್ಕು ತಿಂಗಳ ಹಿಂದೆಯೇ ಸುನೀಲ್‌ಗೆ ಕೊಟ್ಟಿರುವುದಾಗಿ ಹೇಳಿದರು. ಹೀಗಾಗಿ ಸುನೀಲ್‌ನನ್ನು ವಶಕ್ಕೆ ಪಡೆದಾಗ ಹಲವು ಪ್ರಕರಣ ಬೆಳಕಿಗೆ ಬಂದವು. ಆತ ನೀಡಿದ ಮಾಹಿತಿ ಆಧರಿಸಿ ಮತ್ತೊಬ್ಬ ಆರೋಪಿ ಮಣಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)