ಶುಕ್ರವಾರ, ಜೂನ್ 18, 2021
27 °C

ಆರ್ಥಿಕ ನೀತಿ: ಕೇಜ್ರಿವಾಲ್ ಮೌನ ಸರಿಯಲ್ಲ

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್,ಬೆಂಗಳೂರು Updated:

ಅಕ್ಷರ ಗಾತ್ರ : | |

ಭಾ ರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಸಭೆಯನ್ನು ಉದ್ದೇಶಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ ಕೇಜ್ರಿವಾಲ್ ಅವರು ಇತ್ತೀಚೆಗೆ ಭಾಷಣ ಮಾಡಿದಾಗ, ಅಲ್ಲಿ ಸೇರಿದ್ದವರಲ್ಲಿ ಆತಂಕದ ಭಾವ ಇದ್ದದ್ದು ಕಾಣುತ್ತಿತ್ತು.ಕೇಜ್ರಿವಾಲ್ ಅವರು ಎಡಪಂಥೀಯ ಚಿಂತನೆ ಹೊಂದಿರುವ, ದೊಡ್ಡ ಉದ್ದಿಮೆಗಳ ವಿರುದ್ಧ ವಿಷಕಾರುವ, ಯುದ್ಧೋತ್ಸಾಹಿ ಅರಾಜಕತಾ­ವಾದಿಯೇ? ಅಥವಾ ಅವರದ್ದು ಕೇವಲ ಮತ ಬ್ಯಾಂಕ್ ರಾಜಕೀಯ ದಾಳವೇ? ಕೇಜ್ರಿವಾಲ್ ಅಂದು ಸರಳ ಪದಗಳನ್ನು ಬಳಸಿ ಮಾತನಾ ಡಿದರು. ಆರ್ಥಿಕ ಹಿಂಜರಿತ ಮತ್ತು ಚಾಲ್ತಿ ಖಾತೆ ಕೊರತೆಯನ್ನು ತಾನು ಹೇಗೆ ಇಲ್ಲವಾಗಿಸುತ್ತೇನೆ ಎಂಬ ಬಗ್ಗೆ ಕೇಜ್ರಿವಾಲ್ ಅವರು ಅರ್ಥಶಾಸ್ತ್ರದ ದೊಡ್ಡ ಪದಗಳನ್ನು ಬಳಸಿ ಏನನ್ನೂ ಹೇಳಲಿಲ್ಲ. ಎಎಪಿ ಹೊಂದಿರುವ ಆರ್ಥಿಕ ನೋಟಗಳ ಬಗ್ಗೆಯೂ ಹೇಳಲಿಲ್ಲ. ಆಮ್ ಆದ್ಮಿಗೆ (ಜನ ಸಾಮಾನ್ಯ) ಅರ್ಥವಾಗುವ ಭಾಷೆಯಲ್ಲೇ ಅವರು ಮಾತನಾಡಿದರು.ಕೇಜ್ರಿವಾಲ್ ಅಂದು ಹೇಳಿದ್ದು ಇಷ್ಟು: ‘ನಾವು ಉದ್ದಿಮೆಗಳ ವಿರುದ್ಧ ಇಲ್ಲ. ನಾವು ವಿರೋಧಿ ಸುವುದು ಉದ್ದಿಮೆ ಮತ್ತು ಸರ್ಕಾರಿ ಯಂತ್ರದ ಒಳ ಒಪ್ಪಂದವನ್ನು ಮಾತ್ರ. ಬಲಾಢ್ಯ ಖಾಸಗಿ ಕ್ಷೇತ್ರ ಬೇಕು ಎಂಬುದನ್ನು ಒಪ್ಪುತ್ತೇವೆ. ಆದರೆ ಖಾಸಗಿ ಉದ್ದಿಮೆಗಳ ಗುಂಪು ಮಾರುಕಟ್ಟೆ ಯನ್ನು ನಿಯಂತ್ರಿಸುವುದನ್ನು ವಿರೋಧಿಸುತ್ತೇವೆ. ಹೊಸ ಉದ್ಯಮ ಆರಂಭಿಸುವಾಗ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಓಲೈಸಬೇಕಾದ ವ್ಯವಸ್ಥೆಯನ್ನು ಇಲ್ಲವಾಗಿಸಬೇಕು. ಭ್ರಷ್ಟಾಚಾರ­ವನ್ನು ತೊಡೆದರೆ ಉತ್ಪಾದನಾ ವೆಚ್ಚ ತಗ್ಗುತ್ತದೆ. ಇದರ ಲಾಭ ಗ್ರಾಹಕರಿಗೂ ದೊರೆಯುತ್ತದೆ. ಬೆಲೆ ಏರಿಕೆಗೆ ಭ್ರಷ್ಟಾಚಾರವೇ ಮೂಲ ಕಾರಣ. ಉದ್ಯಮ ಕ್ಷೇತ್ರದಲ್ಲಿ ಇರಬೇಕಾದದ್ದು ಸರ್ಕಾರದ ಕೆಲಸವಲ್ಲ’ಈ ವಿಚಾರದಲ್ಲಿ ತಕರಾರು ಎತ್ತಲು ಯಾರಿಂದ ಸಾಧ್ಯ? ಆರ್ಥಿಕ ಬೆಳವಣಿಗೆಗೆ ಕೇಜ್ರಿ ವಾಲ್ ಮುಂದಿಟ್ಟಿರುವ ಈ ಸರಳ ಸೂತ್ರವನ್ನು ಒಪ್ಪದಿರಲು ಸಾಧ್ಯವೇ? ಈ ಮಾತುಗಳು ಹೊಸ ಕಾಲದ ಉದ್ಯಮಿಗಳಿಗೆ ಮಧುರವಾಗಿ ಕಂಡವು. ಆದರೆ ಉದ್ಯಮ ಕ್ಷೇತ್ರದ ನಾಯಕರ ನಿರೀಕ್ಷೆ ಇನ್ನೂ ಹೆಚ್ಚಿತ್ತು. ಹಲವಾರು ಸಂಗತಿಗಳ ಕುರಿತು ಕೇಜ್ರಿವಾಲ್ ನಿಲುವು ಏನು ಎಂಬುದು ಅವರಿಗೆ ಸ್ಪಷ್ಟವಾಗಲಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಹೊರತುಪಡಿಸಿದರೆ ಬೇರೆ ಸಂಗತಿಗಳ ಕುರಿತು ಕೇಜ್ರಿವಾಲ್ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಅವರು ನಿರಾಸೆ ಹೊಂದಿದರು.ಇತ್ತೀಚೆಗೆ ಬಿಜೆಪಿಯ ನರೇಂದ್ರ ಮೋದಿ ಕೂಡ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಅಭಿವೃದ್ಧಿ ಮಾದರಿಯ ಕುರಿತು ತಮ್ಮಲ್ಲಿ ಸ್ಪಷ್ಟತೆ ಇದೆ ಎಂಬುದನ್ನು ತೋರ್ಪಡಿಸಿದರು. ದೃಢ ನಿರ್ಣಯಗಳನ್ನು ಕೈಗೊಳ್ಳುವ ನಾಯಕ ಎಂಬ ಹೆಗ್ಗಳಿಕೆ ಮೋದಿ ಅವರಿಗೆ ಇದೆ. ದೊಡ್ಡ ಉದ್ಯಮಿಗಳು ಅವರನ್ನು ಇಷ್ಟಪಡುತ್ತಾರೆ.ಆದರೆ ಚಿಲ್ಲರೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ವಿಚಾರದಲ್ಲಿ ಮೋದಿ ಸ್ಪಷ್ಟ ನಿಲುವು ವ್ಯಕ್ತಪಡಿಸಲಿಲ್ಲ. ಬಿಜೆಪಿ ಸಾಂಪ್ರ ದಾಯಿಕ ಮತಗಳಾದ ಸಣ್ಣ ವ್ಯಾಪಾರಿಗಳು ಇದಕ್ಕೆ ಕಾರಣವಿರಬಹುದು. ಹಣಕಾಸು ವಿಚಾರದಲ್ಲಿ ಶುದ್ಧ ಚಾರಿತ್ರ್ಯ ಹೊಂದಿರುವ ಖ್ಯಾತಿ ಮೋದಿ ಅವರಿಗೆ ಇದೆ. ಆದರೆ ಸರ್ಕಾರ ಮತ್ತು ಇತರೆಡೆ ಇರುವ ಭ್ರಷ್ಟಾಚಾರ ನಿರ್ಮೂ ಲನೆಗೆ ತನಿಖಾ ಸಂಸ್ಥೆಗಳಿಗೆ ಸ್ವಾಯತ್ತ ಅಧಿಕಾರ ನೀಡುವ ವಿಚಾರದಲ್ಲಿ ಮೋದಿ ಹುರುಪಿನಿಂದ ಕೆಲಸ ಮಾಡಿಲ್ಲ. ವ್ಯಕ್ತಿಯೊಬ್ಬನ ಚರಿಷ್ಮಾ ಮತ್ತು ಶುದ್ಧ ಚಾರಿತ್ರ್ಯವೊಂದರಿಂದಲೇ ತಳಮಟ್ಟದ ಸುಧಾರಣೆಗಳನ್ನು ತರಲು ಸಾಧ್ಯವಿಲ್ಲ. ಸಾಂಸ್ಥಿಕ ಸುಧಾರಣೆ, ಪರಿಣಾಮಕಾರಿ ಆಡಳಿತ ಮತ್ತು ಉತ್ತರದಾಯಿತ್ವ ಅದಕ್ಕೆ ಬೇಕು.ಮೋದಿ ಅವರಿಗೆ ಇನ್ನೂ ಒಂದು ಸಮಸ್ಯೆ ಇದೆ: ಒಳ್ಳೆಯ ಹೆಸರು ಸಂಪಾದಿಸದ ಕೆಲವು ಉದ್ಯಮಿಗಳಿಗೆ ಮೋದಿ ಅವರು ಆಪ್ತರಾಗಿದ್ದಾರೆ ಎನ್ನಲಾಗಿದೆ.ದೇಶದ ಎರಡು ಬೃಹತ್ ಉದ್ಯಮಗಳಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರು ಮುಂದಿಟ್ಟಿರುವ ಪ್ರಶ್ನೆಗಳಿಗೆ ಮೋದಿ ಉತ್ತರ ನೀಡಿಲ್ಲ. ಅಲ್ಲದೆ ಅಧಿಕಾರಶಾಹಿ, ರಾಜಕಾರಣಿ ಮತ್ತು ಬೃಹತ್ ಉದ್ಯಮಿಗಳ ನಡುವಿನ ಒಳ ಒಪ್ಪಂದಗಳನ್ನು ಇಲ್ಲವಾಗಿಸುವ ಬಗೆ ಹೇಗೆ ಎಂಬ ಬಗ್ಗೆ ಮೋದಿ ಏನನ್ನೂ ಹೇಳಿಲ್ಲ.ಆರ್ಥಿಕ ಕಲ್ಮಷಗಳನ್ನು ಮೋದಿ ಹೇಗೆ ನಿವಾರಿಸುತ್ತಾರೆ? ಇದು ಯುಪಿಎ-– 2 ಸರ್ಕಾ ರದ ಅವಧಿಯಲ್ಲಿ ಮಾತ್ರ ಇರುವಂಥದ್ದಲ್ಲ. ಕರ್ನಾ ಟಕದಲ್ಲಿ ಬಿಜೆಪಿ ಆಡಳಿತ ಇರುವಾಗಲೂ ಇದು ಇತ್ತು. ಅದರಿಂದಾಗಿಯೇ ಬಿಜೆಪಿ ಅಧಿಕಾರ ಕಳೆದುಕೊಂಡಿತು.ಮೋದಿ ಅವರು ಆಡಿದ ಮಾತುಗಳಿಂದ ಕೆಲವರಲ್ಲಿ ಉತ್ಸಾಹ ಮೂಡಿತು ಎಂಬುದನ್ನು ಒಪ್ಪಬೇಕು. ವಾರದ ಎಲ್ಲ ದಿನವೂ ವಿದ್ಯುತ್ ಪೂರೈಸುವ ಭರವಸೆಯನ್ನು ಅವರು ನೀಡಿದರು. ವಾಜಪೇಯಿ ಅವಧಿಯಲ್ಲಿ ಚಾಲನೆ ಕಂಡ ಉತ್ತಮ ಹೆದ್ದಾರಿಗಳ ನಿರ್ಮಾಣ ಕಾರ್ಯಕ್ಕೆ ಮೋದಿ ಆದ್ಯತೆ ನೀಡುತ್ತಾರೆ. ಕೌಶಲ ಅಭಿವೃದ್ಧಿ, ತಯಾರಿಕಾ ಕ್ಷೇತ್ರ, ಕೃಷಿಕ್ಷೇತ್ರದ ಉತ್ಪಾದನೆ ಹೆಚ್ಚಿಸುವ ಕುರಿತು ಅವರು ಚೆನ್ನಾಗಿ ಮಾತ ನಾಡಿದರು. ಗುಜರಾತಿ ಆಗಿರುವ ಕಾರಣ, ಉದ್ಯ ಮದ ಬೆಳವಣಿಗೆಗೆ ಬೇಕಿರುವ ವಾತಾವರಣ ರೂಪಿಸುವ ಬಗ್ಗೆ ಅವರಿಗೆ ಹೆಚ್ಚಿನ ತಿಳಿವಳಿಕೆ ಇರ­ಬಹುದು. ಉದ್ಯಮ ಕ್ಷೇತ್ರದ ಬೆಳವಣಿಗೆಯನ್ನು ಕೊಂದು ಹಾಕುವ ಶಕ್ತಿ ಅಧಿಕಾರಶಾಹಿಗೆ ಇದೆ ಎಂಬುದೂ ಮೋದಿ ಅವರಿಗೆ ಗೊತ್ತು.ಬೃಹತ್ ಉದ್ಯಮ ಆರಂಭಿಸಲು ಇದ್ದ ಅಡೆತಡೆಗಳನ್ನು ಮೋದಿ ಅವರು ನಿವಾರಿಸಿರುವ ಕುರಿತು ಸಾಕಷ್ಟು ಕತೆಗಳಿವೆ. ಆದರೆ ಸಣ್ಣ ಮತ್ತು ಯುವ ಉದ್ಯಮಿಗಳಿಗೆ ಇಂಥದ್ದೇ ಸೌಲಭ್ಯವನ್ನು ಕಲ್ಪಿಸುವುದು ಹೇಗೆ ಎಂಬ ಕುರಿತು ಮೋದಿ ವಿವರಿಸಬೇಕಿದೆ.ಮೋದಿ ಮತ್ತು ಕೇಜ್ರಿವಾಲ್ ಅವರ ಆರ್ಥಿಕ ನೋಟಗಳಲ್ಲಿ ಮಹತ್ವದ ವ್ಯತ್ಯಾಸ ಇದೆ. ಭ್ರಷ್ಟಾಚಾರ ನಿರ್ಮೂಲನೆಯಿಂದ ನಮ್ಮೆಲ್ಲ ಕಷ್ಟಗಳು ಇಲ್ಲವಾಗುತ್ತವೆ ಎಂಬುದು ಸುಳ್ಳೆನ್ನುವ ವಿಚಾರ ಕೇಜ್ರಿವಾಲ್ ಅವರಿಗೆ ಅರ್ಥವಾಗ ಬೇಕು. ಭ್ರಷ್ಟಾಚಾರ ಇಲ್ಲದ ಬಡ ಭಾರತ ಯಾರಿಗೂ ಬೇಕಿಲ್ಲ. ನಮಗೆ ಭ್ರಷ್ಟಾಚಾರ ರಹಿತ ಶಕ್ತಿಯುತ ಭಾರತ ಬೇಕು. ಸಮಾನತೆ ಸಮಾಜ ಕಟ್ಟಲು ದೃಢವಾದ ಆರ್ಥಿಕ ಚಿಂತನೆಗಳು, ಆಡಳಿತ ಸುಧಾರಣೆ ಬೇಕು.ರಾಷ್ಟ್ರೀಯ ಪಕ್ಷವಾಗುವ ಮಹತ್ವಾಕಾಂಕ್ಷೆ ಎಎಪಿಗೆ ಇದೆ. ಆ ಪಕ್ಷ ಕೇಜ್ರಿವಾಲ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿದೆ. ಆದರೆ ಆ ಪಕ್ಷದ ಆರ್ಥಿಕ ನೀತಿ ಮಸುಕಾಗಿದೆ. ಒಂದು ಒಳ್ಳೆಯ ಅವಕಾಶವನ್ನು ಕೇಜ್ರಿವಾಲ್ ಅವರು ಕಳೆದುಕೊಂಡಂತಿದೆ. ಭ್ರಷ್ಟಾಚಾರ ವಿರೋಧಿ ನಿಲುವಿನ ಜೊತೆಗೇ, ಎಫ್ ಡಿ  ಐ, ಸಬ್ಸಿಡಿಗಳು, ಇಂಧನ ಭದ್ರತೆ ಕುರಿತು ಎಎಪಿ ನಿಲುವು ಏನೆಂಬುದನ್ನು ತಿಳಿಯಲು ಜನ ಬಯಸುತ್ತಾರೆ.ಎಎಪಿ ಯ ಒಂದು ತಂಡ ಆರ್ಥಿಕ ನೀತಿ ನಿರೂಪಣೆ ಕುರಿತು ಕೆಲಸ ಮಾಡುತ್ತಿದೆ. ಯುವ ಜನರಿಗೆ ಕೇಜ್ರಿವಾಲ್ ಉದ್ಯೋಗ ಹೇಗೆ ಸೃಷ್ಟಿಸುತ್ತಾರೆ ಎಂಬುದನ್ನು ತಿಳಿಯಲು ಜನ ಬಯಸಿದ್ದಾರೆ. ಎಲ್ಲ ಕ್ಷೇತ್ರ ಮತ್ತು ಪ್ರದೇಶಗಳಲ್ಲಿ ಆರ್ಥಿಕ ಪ್ರಗತಿಯ ದರ ಶೇಕಡ 10ರಷ್ಟಿದ್ದರೆ ಉದ್ಯೋಗ ಸೃಷ್ಟಿ ಸಾಧ್ಯ. ಖಾಸಗಿ ಕ್ಷೇತ್ರ ಮಾತ್ರ ಉದ್ಯೋಗಗಳನ್ನು ಸೃಷ್ಟಿಸಬಲ್ಲದು.ಕೇಜ್ರಿವಾಲ್ ಅವರಿಂದ ಜನಬಹಳ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಅವರು ಇತರ ವಿಚಾರಗಳ ಕುರಿತು ಮೌನವಾಗಿದ್ದಾರೆ ಎಂಬ ಮಾತೂ ಬಲವಾಗುತ್ತಿದೆ.ಹಾಗೆಯೇ, ಬೃಹತ್ ಉದ್ದಿಮೆಗಳ ವಿರುದ್ಧ ಕೇಜ್ರಿವಾಲ್ ಮಾಡಿರುವ ಆರೋಪಗಳ ಕುರಿತು ಮೋದಿ ಮೌನವಹಿಸುವಂತಿಲ್ಲ. ರಾಜಕಾರಣಿ-ಅಧಿಕಾರಶಾಹಿ- ಉದ್ದಿಮೆ ನಡುವಿನ ಒಳ ಒಪ್ಪಂದ ತಡೆಯಲು ತಮ್ಮಲ್ಲಿರುವ ಯೋಜನೆ ಏನು ಎಂಬುದನ್ನು ಮೋದಿ ವಿವರಿಸಬೇಕು. ಇಂತಹ ಸಮಸ್ಯೆಗಳ ಬಗ್ಗೆ ಮೋದಿ ಮೌನ ಸರಿಯಲ್ಲ, ಆರ್ಥಿಕ ನೀತಿ ಕುರಿತು ಕೇಜ್ರಿವಾಲ್ ಮೌನವೂ ಸರಿಯಲ್ಲ. ಇಡೀ ದೇಶ ನಿಮ್ಮನ್ನು ನೋಡುತ್ತಿದೆ. ಉತ್ತರ ಬೇಕಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.