ಗುರುವಾರ , ಜೂನ್ 24, 2021
23 °C

ಆರ್ಥಿಕ ವೃದ್ಧಿಗೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರದ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯು, ದೇಶದ ಅರ್ಥ ವ್ಯವಸ್ಥೆಯ 2011-12ನೇ ಸಾಲಿನ ಸಾಧನೆ- ವೈಫಲ್ಯಗಳನ್ನು ಪಟ್ಟಿ ಮಾಡಿರುವುದರ ಜತೆಗೆ, ಆಶಾದಾಯಕವಾದ ಮುನ್ನೋಟವನ್ನೂ ನೀಡಿದೆ.

 

2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರದ ಅತಿ ಕಡಿಮೆಮಟ್ಟದ ವೃದ್ಧಿ ದರ ದಾಖಲಿಸಿರುವ ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡುವ ಅಗತ್ಯ ಮತ್ತು ಮಾರ್ಗೋಪಾಯಗಳನ್ನು ಪ್ರತಿಪಾದಿಸಿರುವುದು ಸರಿಯಾದ ನಿಲುವಾಗಿದೆ. ಮುಂದಿನ ಎರಡು ಹಣಕಾಸು ವರ್ಷಗಳಲ್ಲಿ ವೃದ್ಧಿ ದರವು ಕ್ರಮವಾಗಿ ಶೇ 7.6 ಮತ್ತು 8.6 ಸಾಧಿಸಲಿದೆ ಎಂದು ಆತ್ಮವಿಶ್ವಾಸ ವ್ಯಕ್ತವಾಗಿರುವುದು ಸಮಾಧಾನಕರ ಸಂಗತಿ.ಗರಿಷ್ಠ ಮಟ್ಟದ ಹಣದುಬ್ಬರ, ಮಂದಗತಿಯ ಆರ್ಥಿಕ ಬೆಳವಣಿಗೆ, ಕಠಿಣ ಹಣಕಾಸು ನೀತಿ, ವಿತ್ತೀಯ ಕೊರತೆ ಹೆಚ್ಚಳ ಮತ್ತಿತರ ಸಮಸ್ಯೆಗಳು ದೂರವಾಗಲು ಸುಧಾರಣೆಗಳಿಗೆ ಆದ್ಯತೆ ನೀಡಬೇಕೆನ್ನುವ ಮಂತ್ರ ಜಪಿಸಲಾಗಿದೆ.ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ಎದುರಿಗೆ ಇರುವ ಸವಾಲುಗಳ ದೊಡ್ಡ ಪಟ್ಟಿಯನ್ನೇ ಮಾಡಿರುವ ಸಮೀಕ್ಷೆಯು, ಆರ್ಥಿಕ ಸುಧಾರಣೆಗಳಿಗೆ ಇನ್ನಷ್ಟು ಒತ್ತು ನೀಡಲು ಸಲಹೆ ನೀಡಿರುವುದು ನಿರೀಕ್ಷಿತವೇ.ನಿಧಾನಗತಿಯ ಆರ್ಥಿಕ ವೃದ್ಧಿ ದರ, ಸರ್ಕಾರದ ಸಾಲ ಮತ್ತು ವೆಚ್ಚ ಹೆಚ್ಚಳ, ಜನಸಾಮಾನ್ಯರಿಗೆ ಬಿಸಿ ಮುಟ್ಟಿಸಿರುವ ಬೆಲೆ ಏರಿಕೆ, ತೈಲೋತ್ಪನ್ನಗಳು ಇನ್ನಷ್ಟು ದುಬಾರಿಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಬಜೆಟ್ ಪ್ರಸ್ತಾವಗಳು ಕಠಿಣವಾಗಿರಬೇಕು ಮತ್ತು ಇನ್ನಷ್ಟು ಆರ್ಥಿಕ ಸುಧಾರಣಾ ಕ್ರಮಗಳ ಜಾರಿ ನಿಟ್ಟಿನಲ್ಲಿ ಸಾಗಬೇಕು ಎಂಬುದು ಸಮೀಕ್ಷೆಯ ಒಟ್ಟಾರೆಯ ಆಶಯವಾಗಿದೆ. ಸದ್ಯದ ನಿರಾಶಾದಾಯಕ ಆರ್ಥಿಕ ಚಟುವಟಿಕೆಗಳಿಗೆ ಜೀವ ತುಂಬಲು, ಇದುವರೆಗೆ ನಿರ್ಲಕ್ಷಿಸಿರುವ ಸುಧಾರಣಾ ಕ್ರಮಗಳಿಗೆ ಸಾಕಷ್ಟು ಒತ್ತು ನೀಡಬೇಕು ಎನ್ನುವುದರಲ್ಲಿ ತಪ್ಪೇನೂ ಇಲ್ಲ.ಅದರಲ್ಲೂ ಬೆಲೆ ಏರಿಕೆಯ ಬಿಸಿಯಿಂದ ಜನಸಾಮಾನ್ಯರನ್ನು ಪಾರು ಮಾಡಲು, ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ಸಿಗುವಂತಾಗಲು ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ  ಹೂಡಿಕೆಗೆ (ಎಫ್‌ಡಿಐ) ಅವಕಾಶ ಮಾಡಿಕೊಡಬೇಕೆಂದು ಸಮೀಕ್ಷೆಯಲ್ಲಿ ಬಲವಾಗಿ ಪ್ರತಿಪಾದಿಸಲಾಗಿದೆ.ಈ ವಿವಾದಿತ ನಿರ್ಧಾರಕ್ಕೆ ಸರ್ಕಾರ ದೃಢ ಮನಸ್ಸು ಮಾಡುವುದೇ ಕಾದು ನೋಡಬೇಕು. ರಾಜಕೀಯ ಒತ್ತಡಗಳು ಸುಧಾರಣೆಗಳ ಜಾರಿಗೆ ಅಡಚಣೆ ಉಂಟು ಮಾಡಬಾರದು. ಜಾಗತಿಕ ಅರ್ಥ ವ್ಯವಸ್ಥೆಯ ಅನಿಶ್ಚಿತತೆ ಮತ್ತು ರಾಜಕೀಯ ಒತ್ತಡಗಳ ಕಾರಣಕ್ಕೆ ಸುಧಾರಣಾ ಕ್ರಮಗಳನ್ನು ಜಾರಿಗೆ ತರದ ಸರ್ಕಾರದ ಅಸಹಾಯಕತೆಯೇ ಅರ್ಥ ವ್ಯವಸ್ಥೆಯ ಸದ್ಯದ ನಿರಾಶಾದಾಯಕ ಪರಿಸ್ಥಿತಿಗೆ ಕಾರಣವಾಗಿದೆ.ವಿತ್ತೀಯ ಕೊರತೆ ಹೆಚ್ಚಳ, ಹಣದುಬ್ಬರ ಏರಿಕೆ ತಡೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ.  ತ್ವರಿತ ಮತ್ತು ಸದೃಢ ಆರ್ಥಿಕ ಉನ್ನತಿಗಾಗಿ  ವಿಶ್ವಾಸಾರ್ಹ ಮತ್ತು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದರೂ, ಆ ನಿಟ್ಟಿನಲ್ಲಿ ಸಾಗಿದ ಪ್ರಯತ್ನಗಳು ಕಡಿಮೆ ಇವೆ. ಮುಂದೆಯೂ  ಹಾಗೆ ಆಗಬಾರದಷ್ಟೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.