ಭಾನುವಾರ, ಮೇ 22, 2022
21 °C

ಆರ್ಥಿಕ ವೃದ್ಧಿ: ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣ,ಮೂಲಸೌಕರ್ಯ, ಆರೋಗ್ಯ, ಕೌಶಲ್ಯವೃದ್ಧಿ ಸೇರಿದಂತೆ ಆದ್ಯತಾ ಕ್ಷೇತ್ರಗಳಿಗೆ ಹೆಚ್ಚಿನ ಹಣ ವಿನಿಯೋಗಿಸಬೇಕು ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ.

12ನೇ ಪಂಚವಾರ್ಷಿಕ ಯೋಜನೆಗೆ (2012-17)  ಸಂಬಂಧಿಸಿದಂತೆ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ಶನಿವಾರ ಇಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮೊಂಟೆಕ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.

`ಮೂಲಸೌಕರ್ಯ ವೃದ್ಧಿಗಾಗಿ ಬಜೆಟ್‌ನಲ್ಲಿ ಮೀಸಲಿರಿಸಿರುವ  ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಬೇಕು. ಅಲ್ಲದೆ, ಖರ್ಚು ಮತ್ತು ವರಮಾನದ ನಡುವಿನ ಅಂತರ ತಗ್ಗಿಸಬೇಕು ಎಂದರು. ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ತಂತ್ರಜ್ಞಾನ ಆಧಾರಿತ ಸೇವೆಗಳನ್ನೂ ಸಮರ್ಥವಾಗಿ ಬಳಸಿಕೊಳ್ಳಬೇಕು. ರಾಷ್ಟ್ರೀಯ ವಿಶಿಷ್ಠ ಗುರುತಿನ ಸಂಖ್ಯೆ `ಆಧಾರ್~ ಅಭಿವೃದ್ಧಿ ಪಥದಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಸರ್ಕಾರಿ ಯೋಜನೆಗಳ ಜಾರಿ ಮತ್ತು ನಿಯಂತ್ರಣದಲ್ಲಿ ಇದನ್ನು ಬಳಸಿಕೊಳ್ಳಬಹುದು ಎಂದರು.

`ತೆರಿಗೆ ಸಂಗ್ರಹದ ಮೂಲಕ ಹೆಚ್ಚಿನ ವರಮಾನ ಸಂಗ್ರಹಿಸುವುದು ಮತ್ತು ಆ ಮೂಲಕ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಹೆಚ್ಚುವಂತೆ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಅನಗತ್ಯ ಸಬ್ಸಿಡಿಗಳನ್ನು  ಕಡಿತಗೊಳಿಸುವ ಮೂಲಕ ಆದ್ಯತಾ ವಲಯಗಳಿಗೆ ಹೆಚ್ಚಿನ ಗಮನ ಹರಿಸಬಹುದು. ಸಾಲದ ಬಿಕ್ಕಟ್ಟು ತೆಲೆದೊರಿರುವ ಹಿನ್ನೆಲೆಯಲ್ಲಿ, ರಾಜ್ಯಗಳು ವಿತ್ತೀಯ ಕೊರತೆಯನ್ನು ಗಣನೀಯವಾಗಿ ತಗ್ಗಿಸಬೇಕು. ಕೇಂದ್ರ ಸೀಮಿತ ಪ್ರಮಾಣದಲ್ಲಿ ಮಾತ್ರ ಹಣಕಾಸಿನ ನೆರವು ನೀಡುತ್ತದೆ. ರಾಜ್ಯಗಳೇ ಸಬ್ಸಿಡಿ  ಕಡಿತಗೊಳಿಸುವ ಮೂಲಕ ವರಮಾನ ಹೆಚ್ಚಿಸಿಕೊಳ್ಳಬೇಕು ಎಂದರು.

ಸದ್ಯ ವಿದ್ಯುತ್  ಕ್ಷೇತ್ರದಲ್ಲೇ ಗರಿಷ್ಠ  ನಷ್ಟ ಅನುಭಿಸುತ್ತಿದ್ದೇವೆ. ವಿತರಣಾ ನಷ್ಟವೇ 70 ಸಾವಿರ ಕೋಟಿಗಳಷ್ಟಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.