ಶುಕ್ರವಾರ, ಮೇ 7, 2021
26 °C

ಆರ್ಯ ಈಡಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯ ಆರ್ಯ ಈಡಿಗ ಸಮಾಜದವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದು, ಈ ಜನಾಂಗದವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಆರ್ಯ ಈಡಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.ಜಿಲ್ಲೆಯಲ್ಲಿ ನಮ್ಮ ಜನಾಂಗದವರು 60-70 ಸಾವಿರದಷ್ಟಿದ್ದು, ಈ ಜನಾಂಗದವರ ಕುಲ ಕಸುಬಾದ ಈಚಲು ಮರದಿಂದ ಹೆಂಡ ತೆಗೆಯುವ ಕೆಲಸ ಮಾಡುತ್ತಾ ಬಂದಿದ್ದಾರೆ.ಆದರೆ ಸರ್ಕಾರ ಈ ಕೆಲಸ ನಿಲ್ಲಿಸಿದ್ದು, ಜನಾಂಗದವರು ಕೂಲಿ ಕೆಲಸ ಮಾಡಿ ಬದುಕುವಂತಾಗಿದೆ. ಇದರಿಂದಾಗಿ ಕೆಲವರು ಬೇರೆ ಕಡೆ ಗುಳೆ ಹೋಗಿದ್ದು, ಜನಾಂಗದವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರು.ಆರ್ಥಿಕವಾಗಿ ಹಿಂದುಳಿದ ನಮ್ಮ ಜನಾಂಗದವರಿಗೆ ಸೌಲಭ್ಯಗಳನ್ನು ಒದಗಿಸಿ ಸಾಮಾಜಿಕ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಿದರು.ಈಡಿಗ ಜನಾಂಗದವರು ಕುಲ ಕಸುಬು ಇಲ್ಲದಂತಾಗಿದ್ದು, ಸರ್ಕಾರದಿಂದ ಪಿಂಚಣಿ ಅಥವಾ ನಿರುದ್ಯೋಗ ಭತ್ಯೆ ನೀಡಬೇಕು. ಈಡಿಗ ಜನಾಂಗದ ನಿವೇಶನರಹಿತ, ವಸತಿರಹಿತರಿಗೆ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆಗಳ ನೇರ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.ಸರ್ಕಾರದಿಂದ ಈಡಿಗ ಸಮಾಜದವರಿಗೆ ನಿರುದ್ಯೋಗಿ ಯುವಕರು, ಮಹಿಳೆಯರಿಗೆ ನೇರ ಸಾಲ ಮಂಜೂರು ಮಾಡಬೇಕು.  ಕೃಷಿ ಮಾಡಲು ಅನುಕೂಲ ಮಾಡಿ ಕೊಡಬೇಕು. ಸಮಾಜದವರಿಗೆ ಉಚಿತ ಶಿಕ್ಷಣ ಕೊಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು.ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಶ್ರೀನಿವಾಸಗೌಡ ಕಟ್ಟಿಮನಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳಾದ ಸೈದಪ್ಪ ಗುತ್ತೆದಾರ, ಎನ್. ಕುಮಾರಸ್ವಾಮಿ ಕಲಾಲ, ಅಬ್ದುಲಾಯ ದೊರನಹಳ್ಳಿ, ಬಸಲಿಂಗಪ್ಪ ಹಳಿಗೇರಾ, ಮಲ್ಲಯ್ಯ ನಾಯ್ಕಲ್, ಶರಣಯ್ಯ ಕುಯಿಲೂರ, ತಿಮ್ಮಾರಡ್ಡಿ ಹಾಲಗೇರಾ, ಮಹೇಶ ಗುತ್ತೇದಾರ, ರಾಘವೇಂದ್ರ ಗುತ್ತೇದಾರ, ಹಣಮೇಶ ಗುತ್ತೇದಾರ, ಬಸಯ್ಯ ಬೆಳಗೇರಾ ಮತ್ತಿತರರು ಮನವಿ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.