ಭಾನುವಾರ, ಜೂನ್ 20, 2021
26 °C

ಆರ್‌ಎಸ್‌ಎಸ್ ಆತ್ಮವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಗೆಲುವಿಗೆ ನೂರಾರು ಅಪ್ಪಂದಿರು, ಸೋಲು ಅನಾಥ~ ಎಂಬುದನ್ನು ಪ್ರತಿ ಚುನಾವಣಾ ಫಲಿತಾಂಶದ ನಂತರ ರಾಜಕೀಯ ಪಕ್ಷಗಳು ತಮ್ಮ ಪ್ರತಿಕ್ರಿಯೆಗಳ ಮೂಲಕ ಸಾಬೀತುಪಡಿಸುತ್ತವೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿನ ಸೋಲಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ `ಅಲ್ಲಿ ಮಿತಿಮೀರಿದ ಸಂಖ್ಯೆಯಲ್ಲಿ ನಾಯಕರಿದ್ದದ್ದು ಕಾರಣ~ ಎಂದರು. ಈಗ ಹೆಚ್ಚುಕಡಿಮೆ ಅದೇ ಧಾಟಿಯಲ್ಲಿ ಬಿಜೆಪಿಯ `ಮಾತೃಸಂಸ್ಥೆ~ಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರತಿಕ್ರಿಯೆ ನೀಡಿದೆ. `ಮತದಾರರ ಜತೆ ಸಂಪರ್ಕವನ್ನು ಕಳೆದುಕೊಳ್ಳುವ ಮೂಲಕ ಉತ್ತರಪ್ರದೇಶದಲ್ಲಿ ಬಿಜೆಪಿ ಕೂಡಾ ಕಾಂಗ್ರೆಸ್ ಹಾದಿ ಹಿಡಿದಿದೆ. ಮತದಾರರನ್ನು ಒಲಿಸಿಕೊಳ್ಳಲು  ತತ್ವನಿಷ್ಠ ಮತ್ತು ವಿಶ್ವಾಸಾರ್ಹ ನಾಯಕರು ಬೇಕು, ಬಿಜೆಪಿಯಲ್ಲಿ ಇಂತಹ ನಾಯಕರ ಕೊರತೆ ಇದೆ..~ಎಂದು ಆರ್‌ಎಸ್‌ಎಸ್ ತನ್ನ ಮುಖವಾಣಿ ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿದೆ. `ದೇಶದ ಸಮಸ್ತ ಹಿಂದೂಗಳ ಪ್ರಾತಿನಿಧಿಕ ಸಂಸ್ಥೆ~ ಎಂದು ತನ್ನನ್ನು ಬಣ್ಣಿಸಿಕೊಳ್ಳುತ್ತಿರುವ ಆರ್‌ಎಸ್‌ಎಸ್, ಬುದ್ಧಿ ಹೇಳಲು ಬಿಜೆಪಿಯನ್ನು ಮಾತ್ರ ಯಾಕೆ ಆರಿಸಿಕೊಂಡಿದೆ ಎನ್ನುವುದು ಪ್ರತ್ಯೇಕವಾಗಿ ಚರ್ಚೆಯಾಗಬೇಕಾಗಿರುವ ಪ್ರಶ್ನೆ. ಇದರ ಹೊರತಾಗಿಯೂ, ಆರ್‌ಎಸ್‌ಎಸ್ ಪ್ರತಿಕ್ರಿಯೆಯಲ್ಲಿರುವ ಆತ್ಮವಂಚನೆ ಢಾಳಾಗಿ ಕಾಣಿಸುತ್ತಿದೆ. ಅಟಲಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿಯವರಂತಹ ಹಿರಿಯರು ಹಿಂದಕ್ಕೆ ಸರಿದ ನಂತರ ಬಿಜೆಪಿಯನ್ನು ಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಆರ್‌ಎಸ್‌ಎಸ್, ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ತನ್ನ ಆಯ್ಕೆಯ ನಾಯಕನನ್ನೇ ಕೂರಿಸಿದೆ. ಉತ್ತರಪ್ರದೇಶದ ಚುನಾವಣಾ ಉಸ್ತುವಾರಿ ವಹಿಸಿಕೊಂಡವರು ಕೂಡ ಒಂದು ಕಾಲದಲ್ಲಿ ಸಂಘದ ಪ್ರಚಾರಕರಾಗಿದ್ದವರು. ಹೀಗಿದ್ದಾಗ ಸಮರ್ಥ ನಾಯಕರನ್ನು ಗುರುತಿಸಿ ಚುನಾವಣೆಯ ಹೊಣೆಯನ್ನು ವಹಿಸಿಕೊಡಲು ಆರ್‌ಎಸ್‌ಎಸ್‌ಗೆ ಯಾರು ಅಡ್ಡಿಯಾಗಿದ್ದರು ಎಂದು ಕೇಳಬೇಕಾಗುತ್ತದೆ.

ಉತ್ತರಪ್ರದೇಶದ ಚುನಾವಣಾ ಕಣದಲ್ಲಿ ಸಮಾಜವಾದಿ ಪಕ್ಷದ ನಂತರ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಮಿನಲ್ ಆರೋಪ ಹೊತ್ತ ಅಭ್ಯರ್ಥಿಗಳಿದ್ದದ್ದು ಬಿಜೆಪಿಯಲ್ಲಿ. ಇದನ್ನು ತಡೆಯಲು ಆರ್‌ಎಸ್‌ಎಸ್‌ಗೆ ಯಾಕೆ ಸಾಧ್ಯ ಆಗಿಲ್ಲ? ಜನಾಭಿಪ್ರಾಯದ ಒತ್ತಡದಿಂದಾಗಿ ಭ್ರಷ್ಟ ಸಚಿವ ಬಾಬುಸಿಂಗ್ ಕುಶಾವಾಹ ಸೇರ್ಪಡೆಯನ್ನು ಪಕ್ಷ ಅಮಾನತ್‌ನಲ್ಲಿ ಇರಿಸಿದ್ದರೂ, ಅವರು ರಾಜ್ಯದಾದ್ಯಂತ ಪ್ರವಾಸ ಮಾಡಿ ಬಿಜೆಪಿ ಪರ ಮತಯಾಚಿಸಿದ್ದನ್ನು ಆರ್‌ಎಸ್‌ಎಸ್ ಯಾಕೆ ವಿರೋಧಿಸಲಿಲ್ಲ? ಈಗ ಬಿಜೆಪಿಯಲ್ಲಿರುವ ಬಹುತೇಕ ಪ್ರಮುಖ ನಾಯಕರು ಆರ್‌ಎಸ್‌ಎಸ್ ಶಾಖೆಗಳಲ್ಲಿ ತರಬೇತಿ ಪಡೆದು ಬಂದವರು. ಇಂತಹ ನಾಯಕರ ವೈಫಲ್ಯದ ಹೊಣೆಯನ್ನು ಆರ್‌ಎಸ್‌ಎಸ್ ಅಲ್ಲದೆ ಬೇರೆ ಯಾರು ಹೊರಬೇಕು? ರಾಜಕೀಯ ಅಧಿಕಾರ ಪಡೆಯುವ ಏಕೈಕ ಉದ್ದೇಶದಿಂದ ಭ್ರಷ್ಟರು-ದುಷ್ಟರೆನ್ನದೆ ಎಲ್ಲರನ್ನೂ ಬಿಜೆಪಿ ಒಳಗೆ ಬರಮಾಡಿಕೊಂಡಾಗ ಬಾಯಿ ಮುಚ್ಚಿಕೊಂಡು ಅಧಿಕಾರದ ಸವಿಯನ್ನು ಅನುಭವಿಸುವ ಆರ್‌ಎಸ್‌ಎಸ್, ಪಕ್ಷ ಸೋತಾಗ ಮಾತ್ರ ಚಡಪಡಿಸುತ್ತಿರುವುದು ಯಾಕೆಂದು ಗೊತ್ತಾಗುತ್ತಿಲ್ಲ. ಭ್ರಷ್ಟರು ಮತ್ತು ಅಪರಾಧಿಗಳು ಗೆದ್ದು ಬಿಜೆಪಿಗೆ ಬಲ ತಂದುಕೊಟ್ಟಿದ್ದರೆ ಆಗಲೂ ಆರ್‌ಎಸ್‌ಎಸ್ ಇದೇ ರೀತಿಯ ಪ್ರತಿಕ್ರಿಯೆ ನೀಡುತ್ತಿತ್ತೇ? ಸಮಾಜದಲ್ಲಿ ನೈತಿಕತೆಯನ್ನು ಎತ್ತಿಹಿಡಿಯುವುದೇ ತಮ್ಮ ಉದ್ದೇಶ ಎಂದೆಲ್ಲ ಹೇಳಿಕೊಳ್ಳುವ ಆರ್‌ಎಸ್‌ಎಸ್, ಒಂದು ರಾಜಕೀಯ ಪಕ್ಷದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿರುವುದು ಆಶ್ಚರ್ಯವೆನಿಸುತ್ತದೆ. ಬಿಜೆಪಿಯನ್ನು ಶುಚಿಗೊಳಿಸಿ ಸಮರ್ಥ ನಾಯಕತ್ವದ ಮೂಲಕ ಅದರ ಬಲವರ್ಧನೆಗೊಳಿಸುವ ಪ್ರಾಮಾಣಿಕ ಉದ್ದೇಶವನ್ನು ಆರ್‌ಎಸ್‌ಎಸ್ ಹೊಂದಿದ್ದರೆ ಆ ಕಾರ್ಯ ಪ್ರಾರಂಭಿಸಲು ಕರ್ನಾಟಕಕ್ಕಿಂತ ಸೂಕ್ತ ರಾಜ್ಯ ಬೇರೊಂದಿರಲಾರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.