ಭಾನುವಾರ, ಮೇ 22, 2022
29 °C

ಆಲಮಟ್ಟಿ: ಒಳ ಹರಿವು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಮಹಾರಾಷ್ಟ್ರ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಲ್ಲಿನ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಅಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಆಲಮಟ್ಟಿ ಹಿನ್ನೀರಿನಲ್ಲಿ ಹೆಚ್ಚಳವಾಗಿದೆ.ಮಹಾರಾಷ್ಟ್ರ ಬಿಟ್ಟ ನೀರು ಆಲಮಟ್ಟಿಗೆ ಸೋಮವಾರ ತಲುಪುವ ನಿರೀಕ್ಷೆಯಿದ್ದು, ಇನ್ನೂ ಜಲಾಶಯ ಭರ್ತಿಯಾಗದ ಹಿನ್ನೆಲೆಯಲ್ಲಿ ಯಾವುದೇ ಆತಂಕದ ಸ್ಥಿತಿ ಇಲ್ಲ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ಹೇಳಿದ್ದಾರೆ.2 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಜಲಾಶಯಕ್ಕೆ ಹರಿದು ಬಂದರೂ ಯಾವುದೇ ಆತಂಕದ ಸ್ಥಿತಿ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದರು.519.6 ಮೀಟರ್ ಎತ್ತರದ ಆಲಮಟ್ಟಿ ಜಲಾಶಯದಲ್ಲಿ 516.10 ಮೀಟರ್‌ವರೆಗೆ ನೀರು ಸಂಗ್ರಹವಾಗಿದ್ದು, 32,326 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಶನಿವಾರ ಸಂಜೆಯ ವೇಳೆಗೆ ಒಳಹರಿವು 40 ಸಾವಿರ ಕ್ಯೂಸೆಕ್ ತಲುಪಿತ್ತು, ನಾಳೆಯ ವೇಳೆಗೆ ಒಳಹರಿವು 50 ಸಾವಿರ ಕ್ಯೂಸೆಕ್ ಏರಬಹುದು, ಭಾನುವಾರದ ಒಳಹರಿವಿನ ಪರಿಸ್ಥಿತಿ ನೋಡಿಕೊಂಡು ಹೊರಹರಿವನ್ನು ಹೆಚ್ಚಿಸಲಾಗುತ್ತದೆ  ಎಂದು ಅಧಿಕಾರಿಗಳು ಹೇಳಿದರು.123 ಟಿ.ಎಂ.ಸಿ. ಅಡಿ ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ 75 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗಿದೆ. ಇನ್ನೂ ಜಲಾಶಯ ಭರ್ತಿಯಾಗಲು 48 ಟಿ.ಎಂ.ಸಿ. ಅಡಿ ಬಾಕಿ ಇದೆ.ಆಲಮಟ್ಟಿ ಜಲಾಶಯದ ಬಲಭಾಗದ ಕೆಪಿಸಿಎಲ್‌ನಿಂದ 20 ಸಾವಿರ ಕ್ಯೂಸೆಕ್ ನೀರು ಹೊರಹೋಗುತ್ತಿದ್ದು, ಐದು ಘಟಕಗಳಿಂದ 125 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ.

ಕಾಲುವೆಗೆ ಬಾರದ ನೀರು

ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ವಿವಿಧ ಕಾಲುವೆಗೆ ಜುಲೈ 12 ಮಧ್ಯರಾತ್ರಿಯಿಂದ ನೀರು ಹರಿಸಲು ಕೃಷ್ಣಾ ನೀರಾವರಿ ಸಲಹಾ ಸಮಿತಿ ನಿರ್ಧರಿಸಿತ್ತು. ಆ ಪ್ರಕಾರ ಅಧಿಕಾರಿಗಳೂ ಕಾಲುವೆಗೆ ನೀರು ಹರಿಸಲು ಸಿದ್ಧತೆ ಮಾಡಿಕೊಂಡಿದ್ದರು.ಕಾಲುವೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ,ಕಳೆದ ಎರಡು ದಿನಗಳಿಂದ ದಿನ 23 ಗಂಟೆಯೂ ನಿರಂತರ ಜಿಟಿ, ಜಿಟಿ ಮಳೆ ಸುರಿದ ಪರಿಣಾಮ ಕಾಲುವೆಗೆ ನೀರು ಹರಿಸುವ ಬೇಡಿಕೆ ಇಲ್ಲ. ಹೀಗಾಗಿ ಕಾಲುವೆಗೆ ನೀರು ಹರಿಸಿಲ್ಲ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ.ಇನ್ನೂ ಮೂರ‌್ನಾಲ್ಕು ದಿನಗಳ ಕಾಲ ಕಾಯ್ದು ರೈತರಿಗೆ ಅಗತ್ಯವಾದಾಗ ನೀರನ್ನು ಹರಿಸಲಾಗುತ್ತದೆ. ನೀರು ಹರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆಲಮಟ್ಟಿ ಎಡದಂಡೆ ಕಾಲುವೆಯ ಅಧಿಕಾರಿಗಳು ತಿಳಿಸಿದರು.ಆದರೆ ಆಲಮಟ್ಟಿ ಬಲದಂಡೆ ಕಾಲುವೆಯ ವ್ಯಾಪ್ತಿಯ ಕಿ.ಮೀ 5 ರಲ್ಲಿ ಕಾಲುವೆಯ ದುರಸ್ತಿ ಕಾಮಗಾರಿ ದೊಡ್ಡ ಪ್ರಮಾಣದಲ್ಲಿ ನಡೆದಿದ್ದರಿಂದ ಅಲ್ಲಿ ನೀರು ಹರಿಸಲು ಇನ್ನೂ ಒಂದು ವಾರದ ತಡವಾಗಬಹುದು ಎಂದು ಮೂಲಗಳು ತಿಳಿಸಿವೆ.ವಿಜಾಪುರ, ಬಾಗಲಕೋಟೆ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳ ಕಾಲ ನಿರಂತರ ಮಳೆಯಾಗಿದ್ದರಿಂದ ಇನ್ನೂ ಒಂದು ವಾರಗಳ ಕಾಲ ರೈತರಿಗೆ ನೀರಿನ ಅಗತ್ಯತೆ ಬರುವುದಿಲ್ಲ. ಹೀಗಾಗಿ ನೀರಿನ ಬೇಡಿಕೆ ಕಡಿಮೆಯಾಗಿದೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.