ಸೋಮವಾರ, ಮೇ 17, 2021
31 °C

ಆಲಮಟ್ಟಿ ಜಲಾಶಯ: ಒಳಹರಿವು ಭಾರಿ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ ಜಲಾಶಯ: ಒಳಹರಿವು ಭಾರಿ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಶುಕ್ರವಾರ ಕ್ಷಿಣಿಸಿದೆ. ಆದರೆ, ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಮಳೆ ಕಾರಣ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ. ಜಲಾಶಯದ ನೀರಿನ ಮಟ್ಟ ಒಂದೇ ದಿನದಲ್ಲಿ ಒಂದು ಮೀಟರ್‌ನಷ್ಟು ಹೆಚ್ಚಾಗಿದೆ.ಶುಕ್ರವಾರ ಜಲಾಶಯದ ಒಳಹರಿವು 47,088 ಕ್ಯೂಸೆಕ್ ಇತ್ತು (ಗುರುವಾರ 25,133 ಕ್ಯೂಸೆಕ್). 519.6 ಮೀ. ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಶುಕ್ರವಾರ 509.2 ಮೀ. ನೀರು ಸಂಗ್ರಹವಾಗಿದೆ.ಪ್ರವಾಹ ಭೀತಿ ಸದ್ಯಕ್ಕಿಲ್ಲ: `ಮಹಾರಾಷ್ಟ್ರದ ಕೊಯ್ನಾ ಮತ್ತು ಕಾಳಮ್ಮವಾಡಿ ಜಲಾಶಯಗಳಲ್ಲಿ ಸಾಮರ್ಥ್ಯದ ಅರ್ಧದಷ್ಟೂ ನೀರು ಸಂಗ್ರಹವಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ  ಪ್ರವಾಹ ಎದುರಾಗುವ ಯಾವುದೇ ಲಕ್ಷಣಗಳಿಲ್ಲ' ಎಂದು ಉಪ ವಿಭಾಗಾಧಿಕಾರಿ ಡಾ.ರುದ್ರೇಶ ಘಾಳಿ ತಿಳಿಸಿದ್ದಾರೆ.ಕೃಷ್ಣೆಗೆ ಹರಿದು ಬರುತ್ತಿರುವ ನೀರು ಕಡಿಮೆಯಾಗಿರುವುದರಿಂದ ತಾಲ್ಲೂಕಿನ ನದಿ ತೀರದ ಗ್ರಾಮಸ್ಥರು ಯಾವುದೇ ಭಯ ಪಡುವ ಅಗತ್ಯ ಇಲ್ಲ ಎಂದು ಅಥಣಿ ತಹಶೀಲ್ದಾರ್ ಜಿ.ಆರ್. ಶೀಲವಂತರ ತಿಳಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಶುಕ್ರವಾರ ತುಂತುರು ಮಳೆಯಾಗಿದ್ದು, ಇತರ ಜಿಲ್ಲೆಗಳಲ್ಲಿ ಮಳೆ ಕ್ಷೀಣಿಸಿದೆ.ಕೊಡಗಿನಾದ್ಯಂತ ಮಳೆ ತುಂಬ ಕಡಿಮೆಯಾಗಿದೆ. ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಕೇವಲ 4.78 ಮಿ.ಮೀ. ಮಳೆಯಾಗಿದೆ. ಭಾಗಮಂಡಲದಲ್ಲಿ ಕೇವಲ 15.2 ಮಿ.ಮೀ. ಮಳೆಯಾಗಿದೆ.ಹಾರಂಗಿ ನೀರಿನಮಟ್ಟ:  ಕುಶಾಲನಗರ ಸಮೀಪದ  ಹಾರಂಗಿ ಜಲಾಶಯಕ್ಕೆ 919 ಕ್ಯೂಸೆಕ್ ನೀರು ಹರಿದುಬಂದಿದೆ. ಜಲಾಶಯದಲ್ಲಿ 2,826.75 ಅಡಿವರೆಗೆ ನೀರು ಸಂಗ್ರಹವಾಗಿದೆ (ಗರಿಷ್ಠ ಮಟ್ಟ 2,859 ಅಡಿ). ಕಳೆದ ವರ್ಷ ಇದೇ ದಿನ 2,808.27 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು.ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಅಣೆಕಟ್ಟೆಯ ಒಳಹರಿವಿನಲ್ಲಿ ಶುಕ್ರವಾರ ಮತ್ತಷ್ಟು ಇಳಿಕೆಯಾಗಿದೆ. ಅಣೆಕಟ್ಟೆಯ ನೀರಿನಮಟ್ಟ 78.1 ಅಡಿಗೆ ಮುಟ್ಟಿದೆ.

ಒಳಹರಿವು 7,543 ಕ್ಯೂಸೆಕ್ ಇದ್ದು, ಹೊರಹರಿವು 1,163 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ ನೀರಿನ ಮಟ್ಟವು 72.55 ಅಡಿ ಇತ್ತು. ಒಳಹರಿವು 628 ಇದ್ದರೆ, ಹೊರಹರಿವು 205 ಕ್ಯೂಸೆಕ್ ಇತ್ತು.

ಎಚ್.ಡಿ. ಕೋಟೆ  ತಾಲ್ಲೂಕಿನ ಕಬಿನಿ ಜಲಾಶಯದ ನೀರಿನ ಮಟ್ಟವು 24 ಗಂಟೆಗಳಲ್ಲಿ 2 ಅಡಿ ಏರಿಕೆಯಾಗಿ 2,271 ಅಡಿಗೇರಿದೆ. ಜಲಾಶಯ ಭರ್ತಿಗೆ 13 ಅಡಿ ಬಾಕಿ ಇದೆ. ಜಲಾಶಯದ ಒಳಹರಿವಿನ ಪ್ರಮಾಣ 14 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಕುಡಿಯಲು 100 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.ಹೊಸನಗರದಲ್ಲಿ ಉತ್ತಮ ಮಳೆ ಆಗುತ್ತಿರುವು ದರಿಂದ ಲಿಂಗನಮಕ್ಕಿ ಜಲಾಶಯಕ್ಕೆಒಳಹರಿವು  ತುಸು ಹೆಚ್ಚಿದೆ. ಜಲಾಶಯಕ್ಕೆ 6,360 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಗುರುವಾರ ಜಲಾಶಯದ ಒಳಹರಿವು 5,351 ಕ್ಯೂಸೆಕ್ ಇತ್ತು. ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಜಲಾಶಯದ ನೀರಿನಮಟ್ಟ 1,760.10 ಅಡಿ  (ಗರಿಷ್ಠ ಮಟ್ಟ 1,819 ಅಡಿ) ಇತ್ತು.ಭದ್ರಾ ಜಲಾಶಯದ ನೀರಿನಮಟ್ಟ 123.90 (ಗರಿಷ್ಠ 186) ಅಡಿ ಇದ್ದು, ಒಳಹರಿವು 2,938 ಕ್ಯೂಸೆಕ್‌ಗೆ ಇಳಿದಿದೆ.  ಹಾಗೆಯೇ ತುಂಗಾ ಜಲಾಶಯದ ಒಳಹರಿವಿನಲ್ಲೂ ಗಣನೀಯ ಇಳಿಕೆ ಆಗಿದ್ದು, ಒಳಹರಿವು 5,800 ಕ್ಯೂಸೆಕ್‌ಗೆ ಕುಸಿದಿದೆ.ತೀರ್ಥಹಳ್ಳಿಯಲ್ಲಿ 25.4 ಮಿ.ಮೀ, ಹೊಸನಗರದಲ್ಲಿ 22.2 ಮಿ.ಮೀ, ಸಾಗರ 20.2 ಮಿ.ಮೀ, ಸೊರಬ 13.6 ಮಿ.ಮೀ, ಶಿಕಾರಿಪುರ 8 ಮಿ.ಮೀ ಮತ್ತು ಶಿವಮೊಗ್ಗ 0.6 ಮಿ.ಮೀ ಹಾಗೂ ಭದ್ರಾವತಿಯಲ್ಲಿ 0.5 ಮಿ.ಮೀ ಮಳೆ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.