ಶುಕ್ರವಾರ, ಜೂನ್ 18, 2021
28 °C

ಆಲಿಕಲ್ಲು ಮಳೆ: ರೂ 1 ಕೋಟಿಗೂ ಹೆಚ್ಚು ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ತಾಲ್ಲೂಕಿನಲ್ಲಿ ಈಚೆಗೆ ಸುರಿದ ಆಲಿಕಲ್ಲು ಸಹಿತ ಭಾರೀ ಮಳೆಗೆ ಸುಮಾರು ಒಂದು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬೆಳೆ ನಷ್ಟ ಸಂಭವಿಸಿದೆ ಎಂದು ತಹಶೀಲ್ದಾರ್ ಬಸವರಾಜ್ ತಿಳಿಸಿದ್ದಾರೆ.ನಷ್ಟದ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಸಿಕ್ಕಿಲ್ಲ. ಕೃಷಿ, ತೋಟಗಾರಿಕೆ ಮತ್ತು ಪಶುಪಾಲನಾ ಇಲಾಖೆ ಅಧಿಕಾರಿಗಳು ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದು, ಒಂದೆರಡು ದಿನದಲ್ಲಿ ಖಚಿತ ಮಾಹಿತಿ ಸಿಗಲಿದೆ. ಪ್ರಾಥಮಿಕ ವರದಿಗಳ ಪ್ರಕಾರ 380 ಕುಟುಂಬಗಳ 1,551 ಎಕರೆ ಪ್ರದೇಶದಲ್ಲಿನ ಬೆಳೆಗೆ ಹಾನಿಯಾಗಿದೆ. ಈ ಪ್ರಮಾಣ ಇನ್ನೂ ಹೆಚ್ಚಬಹುದು ಎಂದು ಅವರು ಹೇಳಿದ್ದಾರೆ.ಸೋಮವಾರ ಮಳೆಯಿಂದ ಹೆಚ್ಚಿನ ಹಾನಿಗೆ ಒಳಗಾಗಿದ್ದ ಕಂದಿಕೆರೆ ಗ್ರಾಮಕ್ಕೆ ಶಾಸಕ ಡಿ.ಸುಧಾಕರ್ ಭೇಟಿ ನೀಡಿದರು. ಎಲ್.ತಿಪ್ಪೇಸ್ವಾಮಿ ಎನ್ನುವವರ ಆರು ಎಕರೆ, ನಾಗರಾಜ್ ಹಾಗೂ ಮತ್ತೊಬ್ಬ ರೈತರ ಐದು ಎಕರೆ ಪಪ್ಪಾಯಿ ಸಂಪೂರ್ಣ ನೆಲಕಚ್ಚಿದೆ. ಇದೊಂದೇ ಗ್ರಾಮದಲ್ಲಿ ಅಡಿಕೆ, ಬೇವು, ಪಪ್ಪಾಯಿ, ಕುರಿ, ಮನೆಗಳಿಗೆ ಆಗಿರುವ ಹಾನಿ ಲೆಕ್ಕ ₨ 50–60 ಲಕ್ಷ ಆಗುತ್ತದೆ ಎಂದು ಗ್ರಾಮದ ಮುಖಂಡ ಸುರೇಶ್ ಬಾಬು ಶಾಸಕರಿಗೆ ವಿವರಿಸಿದರು.ತಾಲ್ಲೂಕಿನಲ್ಲಿ ಮಳೆಯಿಂದ ಆಗಿರುವ ಹಾನಿ ಕುರಿತು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಸುಧಾಕರ್ ತಿಳಿಸಿದರು. ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ನಾಗೇಂದ್ರನಾಯ್ಕ, ಈರಲಿಂಗೇಗೌಡ, ಕಲ್ಲಹಟ್ಟಿ ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.