ಗುರುವಾರ , ಏಪ್ರಿಲ್ 22, 2021
29 °C

ಆಶ್ರಯ: ಭೂಸ್ವಾಧೀನಕ್ಕೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಬಡ ಜನತೆಗೆ ನಿವೇಶನ ನೀಡುವ ಉದ್ದೇಶಕ್ಕಾಗಿ ನಗರದ ಸುತ್ತಮುತ್ತ ಲಭ್ಯವಿರುವ ಸರ್ಕಾರಿ ಜಮೀನನ್ನು ನಗರಸಭೆಗೆ ಸ್ವಾಧೀನಪಡಿಸಿಕೊಳ್ಳುವ ಚಿಂತನೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ತಿಳಿಸಿದರು.ಇಲ್ಲಿನ ನಗರಸಭೆ ವತಿಯಿಂದ 2007-08ನೇ ಸಾಲಿನ ಆಶ್ರಯ ಯೋಜನೆಯ ಅಡಿ ಆಯ್ಕೆಯಾದ 151 ಫಲಾನುಭವಿಗಳಿಗೆ ಭಾನುವಾರ ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಬೆಳೆಯುತ್ತಿರುವ ನಗರದಲ್ಲಿ ಬಡವರಿಗೆ ನಿವೇಶನ ನೀಡುವ ಅವಶ್ಯಕತೆ ಹೆಚ್ಚಾಗಿದ್ದು, ಸುಮಾರು 5000 ನಿವೇಶನಗಳನ್ನು ರಚಿಸಲು ಬೇಕಾಗುವಷ್ಟು ಜಮೀನು ಸ್ವಾಧೀನ ಪಡೆದುಕೊಳ್ಳಲಾಗುವುದು ಎಂದರು.ನಗರದಿಂದ ದೇವಗಿರಿವರೆಗೆ ದ್ವಿಪಥ ರಸ್ತೆ ಹಾಗೂ ಹಾವೇರಿ ಮಧ್ಯದ ಪಿ.ಬಿ. ರಸ್ತೆಯನ್ನು ನಗರ ಮಿತಿಯಲ್ಲಿ ದ್ವಿಪಥ ರಸ್ತೆ ಮಾಡಲಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ತೆಗೆದುಕೊಂಡ ಮೊದಲ ಕಾಮಗಾರಿ ಇದಾಗಿದೆ. ಹಾವೇರಿ-ಗುತ್ತಲ ಮಧ್ಯದ ರಸ್ತೆಯನ್ನು 23 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಅಂಡರ ಪಾಸಿಂಗ್ ರಸ್ತೆ ಅಭಿವೃದ್ಧಿಗೂ 60 ಲಕ್ಷ ರೂ. ಒದಗಿಸಲಾಗಿದೆ ಎಂದು ಹೇಳಿದರು.ನಗರದ ಸದ್ಯದ ಬಸ್ ನಿಲ್ದಾಣವನ್ನು 5 ಕೋಟಿ ರೂ. ವೆಚ್ಚದಲ್ಲಿ ದೊಡ್ಡದಾದ ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮಾಡುವ ದೃಷ್ಟಿಯಿಂದ ಸದ್ಯದ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಬಸ್ ಡಿಪೋವನ್ನು ನಗರ ಹೊರವಲಯದ ಆರ್.ಟಿ.ಓ. ಆಫೀಸ್ ಬಳಿಗೆ ಸ್ಥಳಾಂತರಿಸಲಾಗುವುದು. ನರ್ಸಿಂಗ್ ತರಬೇತಿ ಕೇಂದ್ರ, ಎಂಜಿನಿಯರಿಂಗ್ ಕಾಲೇಜು ಆರಂಭ, ಇದೀಗ ಕೃಷಿ ಕಾಲೇಜು ಮಂಜೂರಾತಿ ಘೋಷಣೆಯಾಗಿರುವುದನ್ನು ನೋಡಿದರೆ, ಈ ಜಿಲ್ಲಾ ಕೇಂದ್ರಕ್ಕೆ ನಿರೀಕ್ಷೆಗೂ ಮೀರಿದ ವೇಗದಲ್ಲಿ ಮೂಲಭೂತ ಸೌಲಭ್ಯಗಳು ಬರುತ್ತಿವೆ ಎಂದರು.

ಶಾಸಕ ಶಿವರಾಜ ಸಜ್ಜನರ ,ಆತಮಾತನಾಡಿ, ನಗರದಲ್ಲಿ ಆರಂಭಿಸಿರುವ ನೀರು ಪೂರೈಕೆ ಹಾಗೂ ಒಳ ಚರಂಡಿ, ರಸ್ತೆ ಕಾಮಗಾರಿಗಳಿಗೆ ವಿವಿಧ ಯೋಜನೆಗಳಲ್ಲಿ 60 ಕೋಟಿಗೂ ಅಧಿಕ ಅನುದಾನ ಲಭ್ಯವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ನೆಹರೂ ಓಲೇಕಾರ ಮಾತನಾಡಿ, ಈಗ ಪಟ್ಟಾ ನೀಡಿಕೆ ಕಾರ್ಯ ಮುಗಿದ ನಂತರ ಇನ್ನೂ 600 ಬಡ ಕುಟುಂಬಗಳಿಗೆ ಪಟ್ಟಾ ನೀಡಲಾಗುವುದು. ನಗರದ ಸುತ್ತ ಯತ್ನಳ್ಳಿ ಸೇರಿದಂತೆ ವಿವಿಧೆಡೆ ಆಶ್ರಯ ಬಡಾವಣೆಗಾಗಿ ಭೂಮಿಯನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ನಗರಸಭಾ ಆಯುಕ್ತ ರುದ್ರಪ್ಪ ಮಾತನಾಡಿ, ‘2010-11ರ ಸಾಲಿಗೆ ನಗರಕ್ಕೆ ‘ನಮ್ಮ ಮನೆ’ ಯೋಜನೆ ಅಡಿ ಸ್ವಂತ ನಿವೇಶನ ಹೊಂದಿದವರಿಗೆ ಮನೆ ನಿರ್ಮಿಸಲು 600 ಗುರಿ ನಿಗದಿಯಾಗಿದ್ದು, 138 ಅರ್ಜಿಗಳು ಬಂದಿವೆ. ಈ ಅರ್ಜಿಗಳನ್ನು ವಿವಿಧ ಬ್ಯಾಂಕ್‌ಗಳಿಗೆ ಸಾಲ ಮಂಜೂರಾತಿಗಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ನಗರಸಭಾ ಅಧ್ಯಕ್ಷ ಜಗದೀಶ ಮಲಗೋಡ, ಉಪಾಧ್ಯಕ್ಷೆ ಲಲಿತಾ ಗುಂಡೇನಹಳ್ಳಿ, ಮಾಜಿ ಉಪಾಧ್ಯಕ್ಷ ವಿಜಯಕುಮಾರ ಚಿನ್ನಿಕಟ್ಟಿ, ಆಶ್ರಯ ಸಮಿತಿ ಸದಸ್ಯರಾದ ತಹಸೀಲ್ದಾರ್ ಶಿವಲಿಂಗ, ನಗರಸಭಾ ಸದಸ್ಯ ಪ್ರಭು ಹಿಟ್ನಳ್ಳಿ ಮತ್ತು ಹಲವಾರು ಆಶ್ರಯ ಸಮಿತಿ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ನಗರಸಭಾ ಸದಸ್ಯರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.