ಸೋಮವಾರ, ಮೇ 23, 2022
24 °C

ಆಸ್ಟ್ರೇಲಿಯದಲ್ಲಿ ಮತ್ತೆ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ಟ್ರೇಲಿಯದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಕಳೆದ ಎರಡು ವರ್ಷಗಳಿಂದ ಸ್ಥಳೀಯರು ನಡೆಸುತ್ತಿದ್ದ ಹಲ್ಲೆಯ ಸ್ವರೂಪದಲ್ಲಿ ಉಗ್ರತೆ ಪ್ರಕಟವಾಗುತ್ತಿದೆ. ಹೊಸವರ್ಷದ ದಿನದಂದು ಎಂಬಿಎ ವಿದ್ಯಾರ್ಥಿಯೊಬ್ಬ ಕೊಲೆಯಾಗಿದ್ದ. ಈ ಸಲ ಇನ್ನೊಬ್ಬ ವಿದ್ಯಾರ್ಥಿನಿ ಅತ್ಯಾಚಾರಕ್ಕೆ ಒಳಗಾಗಿ ದಾರುಣವಾಗಿ ಹತ್ಯೆಯಾಗಿದ್ದಾಳೆ.ಭಾರತೀಯ ವಿದ್ಯಾರ್ಥಿಗಳ ಮೇಲೆ ಸ್ಥಳೀಯರು ಸತತವಾಗಿ ನಡೆಸುತ್ತಿದ್ದ ಹಲ್ಲೆಗಳ ಸಂಬಂಧದಲ್ಲಿ ಭಾರತ ಸರ್ಕಾರ ಎರಡು ವರ್ಷಗಳಿಂದ ಹಾಕುತ್ತಿದ್ದ ರಾಜತಾಂತ್ರಿಕ ಒತ್ತಡಗಳನ್ನು ಆಸ್ಟ್ರೇಲಿಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಘಟನೆ ನಡೆದಾಗ ಪ್ರತಿಕ್ರಿಯೆ ನೀಡಿ ನಂತರ ಅದನ್ನು ಮರೆತುಬಿಡುವ ಉದಾಸೀನ ಭಾವ ಆಸ್ಟ್ರೇಲಿಯದಲ್ಲಿಯೂ ಇರುವಂತೆ ತೋರುತ್ತದೆ.ಈ ಹಲ್ಲೆಯ ಪ್ರಕರಣಗಳಿಗೆ ಜನಾಂಗೀಯ ಅಸಹನೆ ಕಾರಣವೆಂದು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದ ಆಸ್ಟ್ರೇಲಿಯ ಈ ಸಲದ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದಲ್ಲಿ ತಕ್ಷಣವೇ ಸ್ಪಂದಿಸಿದೆ. ಆರೋಪಿಯನ್ನು ಬಂಧಿಸಲಾಗಿದೆ. ಮತ್ತು ನ್ಯಾಯಾಲಯ ಆತನಿಗೆ ಜಾಮೀನು ನೀಡಿಲ್ಲ. ಕೊಲೆಯಂಥ ಗಂಭೀರ ಅರೋಪ ಆಗಿರುವುದರಿಂದ ಸರ್ಕಾರ ಹೆಚ್ಚಿನ ಹೊಣೆಯಿಂದ ವರ್ತಿಸುವ ನಿರೀಕ್ಷೆ ಇದೆ.ಆದರೆ ಇಷ್ಟರಿಂದಲೇ ಅಲ್ಲಿನ ಸರ್ಕಾರದ ಧೋರಣೆಯಲ್ಲಿ ಸಕಾರಾತ್ಮಕ ಬದಲಾವಣೆ ಆಗಿದೆ ಎನ್ನುವಂತಿಲ್ಲ. ಭಾರತೀಯ ವಿದ್ಯಾರ್ಥಿಗಳಿಗೆ ಸ್ಥಳೀಯರಿಂದ ಯಾವ ತೊಂದರೆಯೂ ಆಗುವುದಿಲ್ಲ; ಅವರು ಎಲ್ಲರಂತೆ ಇರಬಹುದು ಎಂಬ ಭರವಸೆ ಮೂಡುವಂಥ ಕ್ರಮಗಳನ್ನು ಆಸ್ಟ್ರೇಲಿಯ ಸರ್ಕಾರ ಇನ್ನೂ ಕೈಗೊಳ್ಳಬೇಕಿದೆ.ವಿದ್ಯಾರ್ಥಿನಿಯ ಹತ್ಯೆಯ ಪ್ರಕರಣ ವರದಿಯಾಗುತ್ತಲೇ ವಿದೇಶಾಂಗ ಸಚಿವರು ‘ದುರದೃಷ್ಟಕರ’ ವೆಂದು ಬಣ್ಣಿಸಿ ರಾಯಭಾರ ಕಚೇರಿಯಿಂದ ವರದಿಯನ್ನು ಕೇಳಿದ್ದಾರೆ. ಆಸ್ಟ್ರೇಲಿಯದ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪಡೆದಿರುವ ಒಂದು ಲಕ್ಷದಷ್ಟು ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳಿಗೆ ಭದ್ರತೆಯ ಭರವಸೆ ಮೂಡುವಂತೆ ಭಾರತ ಸರ್ಕಾರ ಆಸ್ಟ್ರೇಲಿಯದ ಮೇಲೆ ಒತ್ತಡ ತರುವುದು ಈಗ ಅವಶ್ಯಕವಾಗಿದೆ.ಜನಾಂಗೀಯ ಹಲ್ಲೆಯ ಪ್ರಕರಣಗಳಿಗೆ ಕಠಿಣ ಶಿಕ್ಷೆಯ ಜೊತೆಗೆ ಭಾರತೀಯರೂ ಸೇರಿದಂತೆ ವಿದೇಶಿ ವಿದ್ಯಾರ್ಥಿಗಳ ಕುರಿತಾಗಿ ಸ್ಥಳೀಯ ಯುವಕರಲ್ಲಿ ಇರುವ ಅಸಹನೆಯ ನಿವಾರಣೆ ಮಾಡಬೇಕಾದ ಹೊಣೆಯೂ ಆಸ್ಟ್ರೇಲಿಯ ಸರ್ಕಾರದ್ದಾಗಿದೆ. ಉನ್ನತ ಶೈಕ್ಷಣಿಕ ಅರ್ಹತೆಯ ಕಾರಣ ಆಸ್ಟ್ರೇಲಿಯದಲ್ಲಿ ಭಾರತೀಯರು ಉದ್ಯೋಗಗಳನ್ನು ಪಡೆದಿದ್ದರೂ ಉತ್ತಮ ಉದ್ಯೋಗಗಳಲ್ಲಿ ಅವರಿಗೆ ಅವಕಾಶ ನೀಡಿಲ್ಲ. ಇದು ಆಸ್ಟ್ರೇಲಿಯ ಮಾತ್ರವಲ್ಲ, ಭಾರತೀಯರು ಉದ್ಯೋಗ ಪಡೆದಿರುವ ಇತರ ದೇಶಗಳಿಗೂ ಅನ್ವಯವಾಗುವ ಸಂಗತಿ.ಹೊರದೇಶಗಳಲ್ಲಿರುವ ಭಾರತೀಯರ ಕ್ಷೇಮಚಿಂತನೆ ನಡೆಸುವುದಕ್ಕೆ ಭಾರತ ಸರ್ಕಾರ ಪ್ರತ್ಯೇಕ ಸಚಿವ ಖಾತೆಯನ್ನೇ ತೆರೆದಿದೆ. ಈ ಖಾತೆ ವಿದೇಶಾಂಗ ಇಲಾಖೆಯ ಜೊತೆಗೂಡಿ ವಿದೇಶಗಳಲ್ಲಿರುವ ಭಾರತೀಯರು ಎದುರಿಸುವ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ಮಾಡಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.