ಶನಿವಾರ, ಜನವರಿ 18, 2020
20 °C

ಆಸ್ಟ್ರೇಲಿಯಾ ಓಪನ್ ಟೆನಿಸ್: ಪ್ರಶಸ್ತಿಗೆ ಅಜರೆಂಕಾ- ಶರ್ಪೋವಾ ಸೆಣಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಮೆಲ್ಬರ್ನ್ (ರಾಯಿಟರ್ಸ್): ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಅವರನ್ನು ಮಣಿಸಿದ ಸ್ಪೇನ್‌ನ ರಫೆಲ್ ನಡಾಲ್ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದರು. ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಮತ್ತು ರಷ್ಯಾದ ಮರಿಯಾ ಶರ್ಪೋವಾ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಎದುರಾಗಲಿದ್ದಾರೆ.ರಾಡ್ ಲೇವರ್ ಅರೆನಾದಲ್ಲಿ ಗುರುವಾರ ರಾತ್ರಿ ನೆರೆದ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಸೆಮಿಫೈನಲ್ ಪಂದ್ಯದಲ್ಲಿ ನಡಾಲ್ 6-7, 6-2, 7-6, 6-4 ರಲ್ಲಿ 16 ಬಾರಿಯ ಗ್ರ್ಯಾನ್ ಸ್ಲಾಮ್ ವಿಜೇತ ಫೆಡರರ್ ಅವರನ್ನು ಸೋಲಿಸಿದರು.ಮೂರು ಗಂಟೆ 42 ನಿಮಿಷಗಳ ಕಾಲ ನಡೆದ ಪಂದ್ಯದ ವೇಳೆ ನಡಾಲ್ ಬಾಹುಗಳಲ್ಲಿ ಅಡಗಿರುವ ಶಕ್ತಿಯ ಮುಂದೆ ಫೆಡರರ್ ಅವರ ಕಲಾತ್ಮಕ ಆಟ ಮರೆಯಾಗಿ ಹೋಯಿತು. 63 ಅನಗತ್ಯ ತಪ್ಪುಗಳನ್ನೆಸಗಿದ್ದು ಕೂಡಾ ಸ್ವಿಸ್ ಆಟಗಾರನಿಗೆ ಮುಳುವಾಗಿ ಪರಿಣಮಿಸಿತು.ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಫೆಡರರ್ ಎದುರು ನಡಾಲ್‌ಗೆ ದೊರೆತ ಎಂಟನೇ ಗೆಲುವು ಇದು. ಇವರಿಬ್ಬರು ಒಟ್ಟು 10 ಸಲ ಪರಸ್ಪರ ಎದುರಾಗಿ ದ್ದಾರೆ. 2007ರ ವಿಂಬಲ್ಡನ್ ಬಳಿಕ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಫೆಡರರ್‌ಗೆ ಸ್ಪೇನ್ ಆಟಗಾರರನ್ನು ಸೋಲಿಸಲು ಸಾಧ್ಯವಾಗಿಲ್ಲ.ನೊವಾಕ್ ಜೊಕೊವಿಚ್ ಮತ್ತು ಆ್ಯಂಡಿ ಮರ‌್ರೆ ನಡುವಿನ ಇನ್ನೊಂದು ಸೆಮಿಫೈನಲ್ ಪಂದ್ಯದ ವಿಜೇತರನ್ನು ನಡಾಲ್ ಫೈನಲ್‌ನಲ್ಲಿ ಎದುರಿಸಲಿದ್ದಾರೆ.ಫೈನಲ್‌ಗೆ ಶರ್ಪೋವಾ, ಅಜರೆಂಕಾ: ಮಹಿಳೆಯರ ಸಿಂಗಲ್ಸ್‌ನಲ್ಲಿ ಫೈನಲ್‌ನಲ್ಲಿ ಶರ್ಪೋವಾ ಮತ್ತು ಅಜರೆಂಕಾ ಎದುರಾಗುವರು. ಸೆಮಿಫೈನಲ್‌ನಲ್ಲಿ 3ನೇ ಶ್ರೇಯಾಂಕದ ಅಜರೆಂಕಾ 6-4, 1-6, 6-3 ರಲ್ಲಿ ಕಳೆದ ಬಾರಿಯ ಚಾಂಪಿಯನ್ ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ ವಿರುದ್ಧ ಜಯ ಸಾಧಿಸಿದರು.ಎರಡು ಗಂಟೆ 12 ನಿಮಿಷಗಳ ಹೋರಾಟದ ಬಳಿಕ ಗೆಲುವು ಪಡೆಯುತ್ತಿದ್ದಂತೆಯೇ ಅಜರೆಂಕಾ ಆನಂದಭಾಷ್ಪ ಸುರಿಸಿದರು. 22ರ ಹರೆಯದ ಆಟಗಾರ್ತಿಗೆ ಇದು ಚೊಚ್ಚಲ ಗ್ರ್ಯಾನ್ ಸ್ಲಾಮ್ ನಲ್ ಎನಿಸಿದೆ.ನಾಲ್ಕರಘಟ್ಟದ ಪಂದ್ಯದಲ್ಲಿ ಶರ್ಪೋವಾ 6-2, 3-6, 6-4 ರಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರನ್ನು ಮಣಿಸಿದರು. ಈ ಮೂಲಕ ಕಳೆದ ವರ್ಷದ ವಿಂಬಲ್ಡನ್ ಟೂರ್ನಿ ಯಲ್ಲಿ ತಮಗೆ ಎದುರಾದ ಸೋಲಿಗೆ ಮುಯ್ಯಿ ತೀರಿಸಿಕೊಂಡರು. ವಿಂಬಲ್ಡನ್ ಫೈನಲ್‌ನಲ್ಲಿ ಕ್ವಿಟೋವಾ ರಷ್ಯಾದ ಆಟಗಾರ್ತಿಯ ವಿರುದ್ಧ ಜಯ ಗಳಿಸಿದ್ದರು.

ಪ್ರತಿಕ್ರಿಯಿಸಿ (+)