ಬುಧವಾರ, ಏಪ್ರಿಲ್ 14, 2021
23 °C

ಆಸ್ಪತ್ರೆಗೆ ಜಿಪಂ ಅಧ್ಯಕ್ಷ ದಿಢೀರ್ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲನಗರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬುಧವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಬುರಾವ್ ಕಾರಬಾರಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಆರೋಗ್ಯ ವಿಚಾರಿಸಿ, ಸರ್ಕಾರಿ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿದೆಯೇ ಇಲ್ಲವೋ ಎನ್ನುವುದರ ಕುರಿತು ಮಾಹಿತಿ ಸಂಗ್ರಹಿಸಿದರು.ಆಸ್ಪತ್ರೆ ಕಟ್ಟಡದ ಸ್ಥಿತಿ-ಗತಿ ಕುರಿತು ವೈದ್ಯಾಧಿಕಾರಿ ಡಾ.ಭಗವಾನ ಮಳದರ್ ಅವರಿಂದ ಮಾಹಿತಿ ಪಡೆದರು.

ಅಧ್ಯಕ್ಷರು ಬಂದ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಗ್ರಾಮದ ನಾಗರಿಕರು ತಮ್ಮ ಸಮಸ್ಯೆಗಳನ್ನು ಒಂದೊಂದಾಗಿ ತಿಳಿಸಿದರು.ಎರಡು ದಶಕಗಳ ಹಿಂದೆ ಕಮಲನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರಬೇಕಾದ ಯಾವ ಮೂಲ ಸೌಲಭ್ಯಗಳು ಇಲ್ಲಿಲ್ಲ.ಐದು ಜನ ವೈದ್ಯರಿರಬೇಕಾದ ಆಸ್ಪತ್ರೆಯಲ್ಲಿ ಇರುವವರು ಇಬ್ಬರು ಮಾತ್ರ. ಅವರಲ್ಲಿ ಓರ್ವ ಮಕ್ಕಳ ತಜ್ಞ ವೈದ್ಯರು ತಿಂಗಳಿನಿಂದ ರಜೆ ಮೇಲಿದ್ದಾರೆ. ದಿನಾಲು ಸುತ್ತಲಿನ ಗ್ರಾಮದ ಸುಮಾರು 400 ಬಡ ರೋಗಿಗಳಿಗೆ ಒಬ್ಬರೇ ವೈದ್ಯ ಚಿಕಿತ್ಸೆ ನೀಡುತ್ತಿದ್ದಾರೆ.ಇಲ್ಲಿ ಅಗತ್ಯ ವೈದ್ಯರು ಇಲ್ಲ. ಕ್ಷ ಕಿರಣ ಯಂತ್ರ, ದಂತ ವೈದ್ಯಕೀಯ ಆಸನ, ರಕ್ತ ನಿಧಿ ಹೀಗೆ ಇಲ್ಲಗಳ ಪಟ್ಟಿಯೇ ದೊಡ್ಡದಾಗಿದೆ.  ಈ ಕುರಿತು ಅನೇಕ ಸಲ ಜನಪ್ರತಿನಿಧಿಗಳ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಕೂಡಲೇ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಅಗತ್ಯ ಸಿಬ್ಬಂದಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುವುದರ ಮೂಲಕ ಗ್ರಾಮೀಣರ ಸಮಸ್ಯೆಗೆ ಸ್ಪಂದಿಸಬೇಕು ಎಂದು ನಾಗರಿಕರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಆಗ್ರಹಿಸಿದರು.ಆಸ್ಪತ್ರೆಗೆ ಅಗತ್ಯ ಸೌಲಭ್ಯ ಒದಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರವಾಣಿ ಮೂಲಕ ಆದೇಶಿಸಿದ ಜಿಪಂ ಅಧ್ಯಕ್ಷರು, ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬೋರವೆಲ್ ಕೊರೆಯಿಸಲಾಗುವುದು. ನೂತನ ಶೌಚಾಲಯ ಕಟ್ಟಡ ನಿರ್ಮಿಸಿಕೊಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಶೈಲೇಂದ್ರ ಬೆಲ್ದಾಳೆ, ಕಾಶಿನಾಥ ಜಾಧವ್, ಮುಖಂಡ ಸಚಿನ ರಾಠೋಡ್, ಶಿವಾನಂದ ವಡ್ಡೆ, ಸಂತೋಷ ಸೋಲ್ಲಾಪುರೆ, ಪ್ರವೀಣ ಬಿರಾದಾರ್, ಶಿವಕುಮಾರ ಝುಲ್ಪೆ, ರವಿ ಮದನೂರ್, ದಯಾನಂದ ವಡ್ಡೆ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.