ಗುರುವಾರ , ಮೇ 19, 2022
21 °C

ಆಸ್ಪತ್ರೆಯಲ್ಲಿ ಮಹಿಳೆ ಸಾವು: ದಾಂದಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಅನಾರೋಗ್ಯದ ಕಾರಣದಿಂದ ಕಲ್ಯಾಣನಗರ ಎರಡನೇ ಹಂತದ ಸುಶ್ರುತ ನರ್ಸಿಂಗ್ ಹೋಂಗೆ ದಾಖಲಾಗಿದ್ದ ಪಾರ್ವತಿ (50) ಎಂಬ ಮಹಿಳೆ ಸಾವನ್ನಪ್ಪಿದ್ದರಿಂದ ಕೋಪಗೊಂಡ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಆಸ್ಪತ್ರೆಗೆ ನುಗ್ಗಿ ದಾಂದಲೆ ನಡೆಸಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.ವೈದ್ಯರು ಮಿತಿಗಿಂತ ಹೆಚ್ಚಿನ ಅರಿವಳಿಕೆ ನೀಡಿದ ಕಾರಣದಿಂದಲೇ ಪಾರ್ವತಿ ಅವರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ ಕುಟುಂಬ ಸದಸ್ಯರು, ಆಸ್ಪತ್ರೆಗೆ ನುಗ್ಗಿ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಅಲ್ಲದೇ, ಆಸ್ಪತ್ರೆಯ ಕಿಟಕಿ ಬಾಗಿಲುಗಳ ಗಾಜು ಒಡೆದು ಮತ್ತು ಪೀಠೋಪಕರಣಗಳನ್ನು ಜಖಂಗೊಳಿಸಿ ದಾಂದಲೆ ನಡೆಸಿದರು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಮತ್ತು  ಕುಟುಂಬ ಸದಸ್ಯರ ನಡುವೆ ವಾಗ್ವಾದ ನಡೆದಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಹೆಣ್ಣೂರು ಪೊಲೀಸರು ಮೃತರ ಕುಟುಂಬ ಸದಸ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ನಡುವೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.ಅಗರ ಮುಖ್ಯರಸ್ತೆ ಬಳಿಯ ಜ್ಯೋತಿನಗರ ನಿವಾಸಿ ಮುನಿಸ್ವಾಮಿ ಎಂಬುವರ ಪತ್ನಿಯಾದ ಪಾರ್ವತಿ ಅವರ ಪಿತ್ತಕೋಶದಲ್ಲಿ ಕಲ್ಲು ಇತ್ತು. ಈ ಕಾರಣಕ್ಕಾಗಿ ಅವರನ್ನು ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಶಸ್ತ್ರಚಿಕಿತ್ಸೆ ಮಾಡಿ ಪಿತ್ತಕೋಶದಲ್ಲಿನ ಕಲ್ಲು ತೆಗೆಯುವುದಾಗಿ ಹೇಳಿದ್ದ ವೈದ್ಯರು ಸಂಜೆ ಐದು ಗಂಟೆ ಸುಮಾರಿಗೆ ಪಾರ್ವತಿ ಅವರನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ದಿದ್ದರು. ಆದರೆ, ಶಸ್ತ್ರಚಿಕಿತ್ಸೆ ಮಾಡುವ ಮುನ್ನವೇ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.`ನಿಗದಿತ ಮಿತಿಗಿಂತ ಹೆಚ್ಚಿನ ಅರಿವಳಿಕೆ ನೀಡಿದ ಕಾರಣದಿಂದಲೇ ಪತ್ನಿ ಸಾವನ್ನಪ್ಪಿದ್ದಾಳೆ. ಡಾ.ನಾಗರಾಜ್ ಮತ್ತು ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯವೇ ಪತ್ನಿ ಸಾವಿಗೆ ಕಾರಣ' ಎಂದು ಮುನಿಸ್ವಾಮಿ ದೂರು ಕೊಟ್ಟಿದ್ದಾರೆ. ನಿರ್ಲಕ್ಷ್ಯದಿಂದ ಸಂಭವಿಸಿದ ಸಾವು ಆರೋಪದಡಿ (ಐಪಿಸಿ-304ಎ) ನಾಗರಾಜ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಅರಿವಳಿಕೆಯನ್ನೇ ಕೊಟ್ಟಿಲ್ಲ: ವೈದ್ಯರ ಸ್ಪಷ್ಟನೆ

`ಪಾರ್ವತಿ ಅವರು ಬೆಳಿಗ್ಗೆ ಆಸ್ಪತ್ರೆಗೆ ದಾಖಲಾದಾಗ ಅವರ ರಕ್ತದೊತ್ತಡ ಸಹಜ ಸ್ಥಿತಿಯಲ್ಲಿತ್ತು. ಆದರೆ, ಸಂಜೆ ಶಸ್ತ್ರಚಿಕಿತ್ಸೆಗೆ ಕರೆದೊಯ್ಯುವ ಒಂದು ತಾಸಿಗೂ ಮುನ್ನ ರಕ್ತದೊತ್ತಡ ಹೆಚ್ಚಳವಾಯಿತು, ರಕ್ತದೊತ್ತಡವನ್ನು ಸಹಜ ಸ್ಥಿತಿಗೆ ತರುವ ಉದ್ದೇಶದಿಂದ ಕೆಲ ಔಷಧಗಳನ್ನು ನೀಡಲಾಯಿತು. ಆಗ ಅವರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಸ್ವಲ್ಪ ಹೊತ್ತಿನಲ್ಲೇ ಹೃದಯಾಘಾತವಾಗಿ ಸಾವನ್ನಪ್ಪಿದರು' ಎಂದು ವೈದ್ಯ ಡಾ.ನಾಗರಾಜ್ `ಪ್ರಜಾವಾಣಿ'ಗೆ ತಿಳಿಸಿದರು.`ಕುಟುಂಬ ಸದಸ್ಯರು ಆರೋಪಿಸಿರುವಂತೆ ಪಾರ್ವತಿ ಅವರು ನಮ್ಮ ನಿರ್ಲಕ್ಷ್ಯದಿಂದ ಸಾವನ್ನಪ್ಪಿಲ್ಲ. ಅಲ್ಲದೇ, ಅವರಿಗೆ ಅರಿವಳಿಕೆಯನ್ನೇ ಕೊಟ್ಟಿಲ್ಲ' ಎಂದು ನಾಗರಾಜ್ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.