ಸೋಮವಾರ, ಮೇ 17, 2021
25 °C
ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವ ರಮಾನಾಥ್‌ರೈ

ಆಹಾರ ಪದಾರ್ಥ ವ್ಯರ್ಥವಾಗದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯನ್ನು ಜನಸ್ನೇಹಿಯಾಗಿ ಮಾಡಲಾಗುವುದು. ರಾಜ್ಯದಾದ್ಯಂತ ಸಸಿ ನೆಡುವ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗುವುದು' ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ್ ರೈ ಹೇಳಿದರು.ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮಂಗಳವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.`ವಿಶ್ವ ಸಂಸ್ಥೆಯ ಈ ವರ್ಷದ ಘೋಷವಾಕ್ಯವಾದ `ಯೋಚಿಸಿ, ಸೇವಿಸಿ, ಉಳಿಸಿ' ಅನ್ವರ್ಥವಾಗಿದೆ. ಈಗ ಆಹಾರದ ಮೂರನೇ ಒಂದು ಭಾಗ ವ್ಯರ್ಥವಾಗುತ್ತದೆ. ಶ್ರೀಮಂತರು ಅದ್ದೂರಿ ಕಾರ್ಯಕ್ರಮವನ್ನು ಮಾಡಿ ಆಹಾರವನ್ನು ವ್ಯರ್ಥಗೊಳಿಸುತ್ತಾರೆ. ಒಂದೆಡೆ ಆಹಾರ ಹೆಚ್ಚಾಗಿ ಬೊಜ್ಜು ಕರಗಿಸುವವರಿದ್ದಾರೆ. ಇನ್ನೊಂದೆಡೆ ಆಹಾರಕ್ಕಾಗಿ ಪರಿತಪಿಸುವ ಜನರಿದ್ದಾರೆ' ಎಂದು ವಿಷಾದಿಸಿದರು.`ನಾವು ಇಂದು ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಬೇಕಾದ ಅಗತ್ಯವಿದೆ. ಈಗಲಾದರೂ ಎಚ್ಚೆತ್ತುಕೊಂಡು ಪರಿಸರವನ್ನು ಸಂರಕ್ಷಿಸಬೇಕಾಗಿದೆ' ಎಂದು ಹೇಳಿದರು.ಮಂಡಳಿ ಅಧ್ಯಕ್ಷ ಡಾ.ವಾಮನ ಆಚಾರ್ಯ ಮಾತನಾಡಿ, `ಹಳ್ಳಿಗಾಡಿನಲ್ಲಿಯೂ ಪರಿಸರದ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ.  ಈಗ ಪಟ್ಟಣಗಳಾಗಿ ಪರಿವರ್ತನೆಯಾಗುತ್ತಿರುವ ಹಳ್ಳಿಗಳಲ್ಲಿಯೂ ಸ್ವಚ್ಛತೆಯನ್ನು ಕಾಪಾಡಲು ಯೋಜನೆಗಳನ್ನು ರೂಪಿಸಬೇಕು' ಎಂದರು.`ಉತ್ತರ ಕರ್ನಾಟಕದ ಚಿಕ್ಕ ಪಟ್ಟಣಗಳಲ್ಲಿ ಗಿಡಗಳನ್ನು ಬೆಳೆಸಿ ಚಿಕ್ಕ ಅರಣ್ಯ ನಿರ್ಮಾಣ ಮಾಡುವ ಕುರಿತು ಚಿಂತನೆ ನಡೆಸಬೇಕು. ರಾಜ್ಯದಲ್ಲಿರುವ ಚಿಕ್ಕ ಚಿಕ್ಕ ಕೆರೆಗಳನ್ನು ಪುನಶ್ಚೇತನಗೊಳಿಸಿ, ಸಂರಕ್ಷಿಸಲು ಸರ್ಕಾರ ಯೋಜನೆಗಳನ್ನು ರೂಪಿಸಬೇಕು' ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪರಿಸರ ಮಿತ್ರ ಶಾಲೆ ಪ್ರಶಸ್ತಿಯನ್ನು ಶಾಲೆಗಳಿಗೆ ಪ್ರದಾನ ಮಾಡಲಾಯಿತು. ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆ ಚೀಲ ಉಪಯೋಗಿಸಲು ಉತ್ತೇಜನ ನೀಡುವುದಕ್ಕಾಗಿ ಬಟ್ಟೆ ಚೀಲಗಳ ಬಿಡುಗಡೆ, `ಭಗೀರಥ ಡಿವಿಡಿ' ಬಿಡುಗಡೆ, ಶಬ್ದಮಾಲಿನ್ಯ, ವಿಶ್ವ ಪರಿಸರ ದಿನಾಚರಣೆ, ಪರಿಸರ ಮಿತ್ರ ಶಾಲೆ ಕುರಿತು ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.