ಶನಿವಾರ, ಸೆಪ್ಟೆಂಬರ್ 26, 2020
21 °C

ಆ್ಯಸಿಡ್ ದಾಳಿಗೆ ತುತ್ತಾದವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆ್ಯಸಿಡ್ ದಾಳಿಗೆ ತುತ್ತಾದವರು

ಹಸೀನಾ

ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದ. ಅದಕ್ಕೆ ಒಪ್ಪಿಕೊಳ್ಳದೇ ಹೋದಾಗ, `ನನಗೆ ಸಿಗದ ನೀನು ಯಾರಿಗೂ ಸಿಗಬಾರದು~ ಎಂಬ ದುಷ್ಟ ಪ್ರೀತಿಯಿಂದ ಮುಖದ ಮೇಲೆ ಆ್ಯಸಿಡ್ ಹಾಕಿದ. ಅಲ್ಲಿಂದ ಬದುಕು ನಿಜಕ್ಕೂ ನರಕವಾಯಿತು.ಸಮಾಜದಲ್ಲಿ ಕೀಳಾಗಿ ಕಂಡವರೇ ಹೆಚ್ಚು. ಹೀಯಾಳಿಸಿದವರೇ ಎಲ್ಲ. ಆದರೆ, ಬದುಕು ಮುಂದೆ ಸಾಗಬೇಕಿತ್ತಲ್ಲಾ. ಆಗಿನ್ನೂ ದ್ವಿತೀಯ ಪಿಯುಸಿ ಮುಗಿದಿತ್ತು. ಕಣ್ಣ ತುಂಬಾ ಕನಸುಗಳಿದ್ದವು. ಆದರೆ, ನನ್ನ ಕಣ್ಣುಗಳ ದೃಷ್ಟಿಯನ್ನೇ ಕಳೆದುಕೊಂಡಿದ್ದೆ. ನಡೆಯಲು ಬಾರದ ಸ್ಥಿತಿಯನ್ನು ತಲುಪಿದ್ದೆ.ಅಲ್ಲಿಂದ ಮುಂದೆ ಎನೇಬಲ್ ಇಂಡಿಯಾ ಎಂಬ ಸಂಸ್ಥೆ ಕುರುಡರಿಗೆ ನೀಡುವ ಒಂದೂವರೆ ವರ್ಷದ ಕಂಪ್ಯೂಟರ್ ತರಬೇತಿ ಪಡೆದುಕೊಂಡೆ. ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆ ಬರೆದೆ. ನಂತರ, ಕೇಂದ್ರ ಸರ್ಕಾರದ ಇಲಾಖೆಯಲ್ಲಿ ನೌಕರಿ ಸಿಕ್ಕಿತು. ಈಗ ನಾನು ಏನೇ ನೌಕರಿ ಮಾಡಿದರೂ ಹಿಂದಿನ ಮುಖವಂತೂ ನನಗೆ ಸಿಗುವುದಿಲ್ಲ. ನನ್ನ ಮುಖ ನೋಡಿ ಅಪ್ಪ-ಅಮ್ಮ, ಅಜ್ಜಿ ಎಲ್ಲರೂ ನೊಂದುಕೊಳ್ಳುತ್ತಾರೆ. ಆದರೆ, ಅವರೆಲ್ಲರೂ ಬದುಕಲು ನನಗೆ ಪ್ರೋತ್ಸಾಹ ನೀಡಿದ್ದಾರೆ.ಏನೂ ತಪ್ಪು ಮಾಡಿರದ ನಾವು ಜೀವನಪೂರ್ತಿ ಶಿಕ್ಷೆ ಅನುಭವಿಸುತ್ತೇವೆ. ಅದೇ ರೀತಿ ದಾಳಿ ಮಾಡುವವರಿಗೆ ಸಾಯುವ ತನಕವೂ ಶಿಕ್ಷೆಯಾಗಬೇಕು. ಆ್ಯಸಿಡ್ ಮಾರಾಟವನ್ನು ನಿಲ್ಲಿಸಬೇಕು ಎಂದು ಹೇಳುತ್ತಾರೆ. ಆದರೆ ಅದರ ಉಪಯೋಗ ಅವರವರ ಮನಃಸ್ಥಿತಿಗೆ ಸಂಬಂಧಿಸಿದ್ದು.ಏಕೆಂದರೆ, ಚಾಕು ನಮ್ಮ ಸಾಕಷ್ಟು ಕೆಲಸಗಳಿಗೆ ನೆರವಾಗುತ್ತದೆ. ಆದರೆ ಅದರಿಂದ ಕೊಲೆಯನ್ನು ಬೇಕಾದರೂ ಮಾಡಬಹುದಲ್ಲವೇ?ಮುಂದೆ ಬಿ.ಕಾಂ ಮಾಡಬೇಕೆಂಬ ಆಸೆಯಿದೆ. ಆದರೆ, ಬದುಕು ಮುಂದೆ ಹೇಗೋ ಏನೋ ತಿಳಿದಿಲ್ಲ.

 

ಸೈಯದ್ ರೆಹಮತ್ ಉನ್ನೀಸಾ

ಅನೇಕ ಕನಸುಗಳನ್ನು ಹೊತ್ತು ಮುಂದೆ ಸಾಗುತ್ತಿದ್ದ ನನ್ನ ಬದುಕಿನಲ್ಲಿ ಹೂವುಗಳೇ ಅರಳುತ್ತವೆ ಅಂದುಕೊಂಡಿದ್ದೆ. ಆದರೆ, ಹದಿಮೂರು ವರ್ಷ ಒಟ್ಟಿಗೆ ಜೀವನ ನಡೆಸಿದ ಗಂಡ ನಾನೇ ನಂಬಲಾಗದಂತೆ, ಆ್ಯಸಿಡ್ ಹಾಕಿ ನನ್ನ ದೇಹವನ್ನೇ ಸುಟ್ಟು ಬಿಟ್ಟ. ಆದರೆ, ಅವನಿಗೆ ಈಗ ಏನೂ ಶಿಕ್ಷೆಯಾಗಿಲ್ಲ. ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ. ಅವನಿಗೆ ಶಿಕ್ಷೆ ಕೊಡಿಸಲೇಬೇಕು ಎಂಬ ಹಠವಿದೆ.ಎಂಜಿನಿಯರಿಂಗ್ ಪದವಿ ಮುಗಿಸಿದ್ದೇನೆ. ಒಂದು ವರ್ಷ ಫ್ಯಾಶನ್ ಡಿಸೈನಿಂಗ್ ಡಿಪ್ಲೊಮಾ ಮಾಡಿದ್ದೇನೆ. ಬದುಕುವ ಮನಸ್ಸಿದೆ. ಯಾವುದಕ್ಕೂ ಕಡಿಮೆಯಿಲ್ಲ ಎನ್ನುವಂತೆ ಅವನ ಮುಂದೆ ಛಲದಿಂದ ಬದುಕಿ ಸಾಧಿಸಬೇಕು ಎಂಬ ಕಾರಣಕ್ಕೆ ಹೆಚ್ಚು ಓದಿದ್ದು. ನಮ್ಮ ಮೇಲೆ ದೌರ್ಜನ್ಯವಾಗಿದೆ ಎಂದು ಸಾರುತ್ತಾ ಕುಳಿತುಕೊಂಡರೆ ನಮಗೆ ಭಿಕ್ಷೆ, ಅನುಕಂಪ ದೊರೆಯುತ್ತದೆ. ನಮಗೆ ಯಾರ ಅನುಕಂಪವೂ ಬೇಡ. ಬದುಕುವ ಹಕ್ಕು ಕೊಡಿ ಸಾಕು.ಎಂ.ಜಿ.ಶಾಂತಿ


`ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದೆ. ಗಂಡನಿಗೆ ಹಣ ಮಾತ್ರ ಬೇಕಿತ್ತು. ನೀಡುವಷ್ಟು ನೀಡಿದೆ. ಆದರೆ, ಇಬ್ಬರು ಮಕ್ಕಳನ್ನು ಸಾಕಬೇಕಿತ್ತು. ಕೊನೆಗೆ ಹಣ ನೀಡುವುದಕ್ಕೆ ಆಗದು ಎಂದಾಗ ಮೈಮೇಲೆ ಆ್ಯಸಿಡ್ ಸುರಿದ. ಬದುಕಿನ ಬವಣೆ ಅಂದಿನಿಂದ ಆರಂಭವಾಯಿತು. ಶಸ್ತ್ರಚಿಕಿತ್ಸೆಗೆ ಸ್ವಂತ ಮನೆ ಮಾರಬೇಕಾಯಿತು. ಚಿಕ್ಕ ಮಕ್ಕಳು ಬೇರೆ. ಅವರ ಪೋಷಣೆ ಮಾಡುವುದು ಹೇಗೆ ಎಂಬ ಯೋಚನೆಯಲ್ಲಿ ಬದುಕು ನಲುಗಿ ಹೋಯಿತು.ನನ್ನ ಗಂಡನಿಗೆ ಆರು ವರ್ಷ ಶಿಕ್ಷೆಯಾಗಿತ್ತು. ಈಗ ಶಿಕ್ಷೆ ಮುಗಿಸಿ ಹೊರಗೆ ಬಂದಿದ್ದಾನೆ. ಆದರೆ, ನನ್ನ ಬದುಕು ಮೂಲಭೂತ ಸೌಕರ್ಯಗಳಿಲ್ಲದೆ, ನರಳುತ್ತಿದೆ. ಇರಲು ಮನೆಯಿಲ್ಲ. ಹೊಟ್ಟೆ ಹೊರೆಯಲು ಕೆಲಸವಿಲ್ಲ. ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಮಗೆ ಒಂದು ಅಟೆಂಡರ್ ಕೆಲಸವನ್ನಾದರೂ ಕೊಡಿ ಸಾಕು, ನಮ್ಮ ಬದುಕನ್ನು ಸುಂದರವಾಗಿ ಹೆಣೆದುಕೊಳ್ಳುತ್ತೇವೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.