ಗುರುವಾರ , ಜೂಲೈ 9, 2020
24 °C

ಇಂಗ್ಲಿಷ್ ಆಟಗಾರರ ಕನಸು ಜೀವಂತ

ಕೆ.ಓಂಕಾರ ಮೂರ್ತಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಗ್ಲಿಷ್ ಆಟಗಾರರ ಕನಸು ಜೀವಂತ

ಚೆನ್ನೈ: ಪ್ರತಿ ಸುರಂಗದ ಅಂತ್ಯದಲ್ಲಿ ಬೆಳಕಿರುತ್ತದೆ. ದುರ್ಬಲ ತಂಡಗಳು ನೀಡಿದ ಶಾಕ್‌ನಿಂದ ಕಂಗೆಟ್ಟಿದ್ದ ಇಂಗ್ಲಿಷ್ ಆಟಗಾರರ ಪಾಲಿಗೆ ಇದು ಅಕ್ಷರಶ: ನಿಜವಾಯಿತು. ಐರ್ಲೆಂಡ್ ಹಾಗೂ ಬಾಂಗ್ಲಾದೇಶದ ಎದುರು ಸೋಲು ಕಂಡಿದ್ದ ಈ ತಂಡದವರಿಗೆ ಸುರಂಗ ಮಾರ್ಗದಲ್ಲಿ ದೀರ್ಘ ಕಾಲದ ಪ್ರಯಾಣ ಮಾಡಿ ಹೊರಬಂದ ಅನುಭವ! ಅದಕ್ಕೆ ಕಾರಣ ವೆಸ್ಟ್‌ಇಂಡೀಸ್ ಎದುರು ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ಲಭಿಸಿದ ಗೆಲುವು.ಮತ್ತೊಂದು ರೋಚಕ ಕ್ಷಣಗಳಿಗೆ ಕಾರಣವಾದ ಪಂದ್ಯದಲ್ಲಿ 18 ರನ್‌ಗಳ ಗೆಲುವು ದಾಖಲಿಸಿದ ಇಂಗ್ಲೆಂಡ್ ತಂಡದವರು ತಮ್ಮ ಕ್ವಾರ್ಟರ್ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ.ಅಕಸ್ಮಾತ್ ಈ ಪಂದ್ಯ ಸೋತಿದ್ದರೆ ಆ್ಯಂಡ್ರ್ಯೂ ಸ್ಟ್ರಾಸ್ ಬಳಗದವರು ಶುಕ್ರವಾರ ಬೆಳಿಗ್ಗೆಯ ಮೊದಲ ವಿಮಾನ ಹಿಡಿದು ಲಂಡನ್‌ಗೆ ತೆರಳಬೇಕಿತ್ತು. ಆದರೆ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಮೊದಲ ಪಂದ್ಯ ಆಡಿದ ಆಫ್ ಸ್ಪಿನ್ನರ್ ಜೇಮ್ಸ್ ಟ್ರೆಡ್‌ವೆಲ್ ಅದನ್ನು ತಪ್ಪಿಸಿದರು. ಕಾರಣ ಪ್ರಮುಖ ನಾಲ್ಕು ವಿಕೆಟ್ ಪಡೆದ ಅವರು ಗೆಲುವಿನ ರೂವಾರಿ ಎನಿಸಿದರು.ಇಂಗ್ಲೆಂಡ್ ತಂಡದ ಈ ಗೆಲುವಿನಿಂದಾಗಿ ‘ಬಿ’ ಗುಂಪಿನಿಂದ ಕ್ವಾರ್ಟರ್ ಫೈನಲ್ ತಲುಪುವ ಭಾರತ, ವೆಸ್ಟ್‌ಇಂಡೀಸ್ ಹಾಗೂ ಬಾಂಗ್ಲಾದೇಶ ತಂಡಗಳ ಹಾದಿ ಇನ್ನೂ ಮುಕ್ತವಾಗಿದೆ. ಈ ಗುಂಪಿನಿಂದ ದಕ್ಷಿಣ ಆಫ್ರಿಕಾ ಮಾತ್ರ ಸದ್ಯ ನಾಕ್‌ಔಟ್ ಹಂತ ತಲುಪಿದೆ. ಆದರೆ ಕ್ಷಣ ಕ್ಷಣಕ್ಕೆ ಕುತೂಹಲ ಕೆರಳಿಸುತ್ತಾ ಹೋದ ಈ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 244 ರನ್‌ಗಳ ಗುರಿಯನ್ನು ಮುಟ್ಟಲು ಕೆರಿಬಿಯನ್ ನಾಡಿನ ಪಡೆಗೆ ಸಾಧ್ಯವೇ ಆಗಲಿಲ್ಲ. 44.4 ಓವರ್‌ಗಳಲ್ಲಿ 225 ರನ್‌ಗಳಿಗೆ ಅವರು ಆಲ್‌ಔಟ್ ಆದರು.ವಿಂಡೀಸ್ ಒಂದು ಹಂತದಲ್ಲಿ 41.1 ಓವರ್‌ಗಳಲ್ಲಿ 6 ವಿಕೆಟ್‌ಗೆ 222 ರನ್ ಗಳಿಸಿ ಗೆಲುವಿನ ಹಾದಿ ಹಿಡಿದಿತ್ತು. ಆದರೆ ಈ ಹಂತದಲ್ಲಿ ಅಪಾಯ ಹುಟ್ಟಿಸಿದ್ದ ಆ್ಯಂಡ್ರೆ ರಸೆಲ್ (49; 46 ಎಸೆತ, 2 ಬೌಂಡರಿ, 3 ಸಿಕ್ಸರ್) ಅವರನ್ನು ಟ್ರೆಡ್‌ವೆಲ್ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಅಲ್ಲಿಗೆ ಈ ಪಂದ್ಯದಲ್ಲಿ ವಿಂಡೀಸ್ ತಂಡದ ಕಥೆ ಮುಗಿಯಿತು. ಮೂರು ರನ್ ಸೇರಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳು ಪತನವಾದವು.118 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗಲೇ ವಿಂಡೀಸ್ ಆಟಗಾರರು ಗೆಲುವಿನ ಆಸೆ ಬಿಟ್ಟಿದ್ದರು. ಆದರೆ ರಸೆಲ್ ಅದ್ಭುತ ಇನಿಂಗ್ಸ್ ಕಟ್ಟಿ ಕೊಂಚ ಭರವಸೆ ಮೂಡಿಸಿದರು. ಅವರಿಗೆ ಅತ್ಯುತ್ತಮ ಸಾಥ್ ನೀಡಿದ್ದು ರಮಾನರೇಶ್ ಸರವಣ.ನಿಧಾನವಾಗಿ ಆಡುತ್ತಾ ರಸೆಲ್‌ಗೆ ಹೆಚ್ಚು ಸ್ಟ್ರೈಕ್ ನೀಡುತ್ತಿದ್ದರು. ಈ ಜೋಡಿ  ಏಳನೇ ವಿಕೆಟ್‌ಗೆ ಅಮೂಲ್ಯ 72 ರನ್ ಸೇರಿಸಿತು.ಗ್ರೇಮ್ ಸ್ವಾನ್ ಬೌಲಿಂಗ್‌ನಲ್ಲಿ ಒಮ್ಮೆ ರಸೆಲ್ ಎತ್ತಿದ ಚೆಂಡನ್ನು ಜೊನಾಥನ್ ಟ್ರಾಟ್ ಕ್ಯಾಚ್ ಪಡೆದರಾದರೂ ಅವರ ಭುಜ ಬೌಂಡರಿ ಗೆರೆಗೆ ತಾಗಿತ್ತು. ಹಾಗಾಗಿ ಆರು ರನ್‌ಗಳು ಬಂದವು. ಆದರೆ  ತಂಡದ ಮೊತ್ತಕ್ಕೆ 18 ರನ್ ಸೇರಿಸುವಷ್ಟರಲ್ಲಿ ರಸೆಲ್ ವಿಕೆಟ್ ಬಿದ್ದ ಕಾರಣ ಇದೇನು ಹೆಚ್ಚು ಆತಂಕಕ್ಕೆ ಕಾರಣವಾಗಲಿಲ್ಲ.ಇದಕ್ಕೂ ಮುನ್ನ ಕ್ರಿಸ್ ಗೇಲ್ ಸ್ವಲ್ಪ ಹೊತ್ತು ಅಬ್ಬರಿಸಿದರು. ಟಿಮ್ ಬ್ರೆಸ್ನನ್ ಹಾಕಿದ ಮೂರನೇ ಓವರ್‌ನಲ್ಲಿ ಅವರು ನಾಲ್ಕು ಬೌಂಡರಿ ಗಳಿಸಿ ವಿಂಡೀಸ್ ತಂಡಕ್ಕೆ ಅದ್ಭುತ ಆರಂಭ ದೊರಕಿಸಿಕೊಟ್ಟರು. ಆ ಓವರ್‌ನಲ್ಲಿ 18 ರನ್ ಬಂದವು. ನಂತರ ಕ್ರಿಸ್ ಟ್ರೆಮ್ಲೆಟ್ ಹಾಕಿದ ಓವರ್‌ನಲ್ಲಿ ಒಂದು ಸಿಕ್ಸರ್ ಹಾಗೂ ಮೂರು ಬೌಂಡರಿ ಸೇರಿದಂತೆ ಮತ್ತೆ 18 ರನ್ ಬಂದವು.ಕೆರಿಬಿಯನ್ ದೈತ್ಯ ಗೇಲ್ (43; 21 ಎಸೆತ, 8 ಬೌಂಡರಿ, 1 ಸಿಕ್ಸರ್) ಆಟಕ್ಕೆ ಕ್ರೀಡಾಂಗಣವೇ ನಡುಗಿ ಹೋಯಿತು. ಹಾಗಾಗಿ 29 ಎಸೆತಗಳಲ್ಲಿ ವಿಂಡೀಸ್ 50 ರನ್‌ಗಳ ಗೆರೆ ದಾಟಿತು. ಗೇಲ್ ವಿಕೆಟ್ ಪತನದ ಬಳಿಕ ನಾಯಕ ಡೆರೆನ್ ಸ್ಯಾಮಿ (41; 29 ಎಸೆತ, 2 ಬೌಂ, 3 ಸಿಕ್ಸ್) ಕೆಲ ಕಾಲ ಅಬ್ಬರಿಸಿದರು.ಒತ್ತಡದಲ್ಲಿ ಕಣಕ್ಕಿಳಿದ ಇಂಗ್ಲೆಂಡ್: ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಒತ್ತಡವನ್ನು ಹೊತ್ತುಕೊಂಡೇ ಇಂಗ್ಲಿಷ್ ಆಟಗಾರರು ಗುರುವಾರ ಮಧ್ಯಾಹ್ನ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಸೋತರೆ ನಮ್ಮ ಕಥೆ ಮುಗಿಯಲಿದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು.ಹಾಗಾಗಿಯೇ ಟಾಸ್ ಗೆದ್ದ ನಾಯಕ ಸ್ಟ್ರಾಸ್ ಮೊದಲು ಬ್ಯಾಟ್ ಮಾಡಲು ಹಿಂದೆ ಮುಂದೆ ನೋಡಲಿಲ್ಲ. ಅಂದುಕೊಂಡಂತೆ ಉತ್ತಮ ಆರಂಭವೇನೊ ಲಭಿಸಿತು. ಸ್ಟ್ರಾಸ್ ಸಿಕ್ಸರ್ ಎತ್ತಿ ತುಂಬಾ ಹುರುಪಿನಲ್ಲಿದ್ದರು. ಆದರೆ ಅವರ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಆ್ಯಂಡ್ರೆ ರಸೆಲ್ ಬೌಲಿಂಗ್‌ನಲ್ಲಿ ಕ್ರಿಸ್ ಗೇಲ್ ಅವರು ಮಿಡ್ ವಿಕೆಟ್‌ನಲ್ಲಿ ಸ್ಟ್ರಾಸ್ ನೀಡಿದ ಕ್ಯಾಚ್ ಪಡೆದ ರೀತಿ ಅಮೋಘವಾಗಿತ್ತು.ಜೊನಾಥನ್ ಟ್ರಾಟ್ ಆಟ ಮಜಾ ನೀಡಿತು. ಕಾರಣ ಅವರು ತಾವು ಎದುರಿಸಿದ ಮೊದಲ 9 ಎಸೆತಗಳಲ್ಲಿ ಆರನ್ನು ಬೌಂಡರಿ ಬಾರಿಸಿದರು. ಈ ಕಾರಣ 104 ಎಸೆತಗಳಲ್ಲಿ ಈ ತಂಡ ನೂರು ರನ್‌ಗಳ ಗೆರೆ ದಾಟಿತು. ಇಂಗ್ಲೆಂಡ್ ಒಂದು ಹಂತದಲ್ಲಿ 121 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿಯೇ ಇತ್ತು. ರನ್‌ರೇಟ್ ಕೂಡ ಚೆನ್ನಾಗಿತ್ತು.ಆದರೆ ಪದಾರ್ಪಣೆ ಮಾಡಿದ ಲೆಗ್ ಸ್ಪಿನ್ನರ್ ದೇವೇಂದ್ರ ಬಿಶೂ ಬೌಲಿಂಗ್ ಶುರು ಮಾಡಿದಾಗಿನಿಂದ ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳು ಕಕ್ಕಾಬಿಕ್ಕಿಯಾದರು. ಬಿಶೂ ತಮ್ಮ ಮೊದಲ ಓವರ್‌ನಲ್ಲಿ ಮೂರು ರನ್ ಕೊಟ್ಟರು. ಬಳಿಕ ಅಪಾಯಕಾರಿಯಾಗಿದ್ದ ಟ್ರಾಟ್ (47; 38 ಎಸೆತ, 7 ಬೌಂಡರಿ) ಅವರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಇದು ಅವರಿಗೆ ಲಭಿಸಿದ ಮೊದಲ ವಿಕೆಟ್ ಕೂಡ.ಅಲ್ಲಿಂದ ಇಂಗ್ಲಿಷರ ಪತನ ಶುರುವಾಯಿತು. 151 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿದರು. 30 ರನ್‌ಗಳ ಅಂತರದಲ್ಲಿ ಪ್ರಮುಖ ನಾಲ್ಕು ವಿಕೆಟ್ ಬಿದ್ದವು. ಕೆರಿಬಿಯನ್ ನಾಡಿನ ವೇಗಿ ರಸೆಲ್ ದುಬಾರಿ ಎನಿಸಿದರೂ ನಾಲ್ಕು ವಿಕೆಟ್ ಕಿತ್ತು ಗಮನ ಸೆಳೆದರು. ಅವರಿಗೆ ಅತ್ಯುತ್ತಮ ಸಾಥ್ ನೀಡಿದ ಬಿಶೂ ಮೂರು ವಿಕೆಟ್ ಕಬಳಿಸಿದರು. ಟ್ರಾಟ್‌ಗೆ ಹಾಕಿದ ಎಸೆತಗಳನ್ನು ಹೊರತುಪಡಿಸಿದರೆ ವಿಂಡೀಸ್ ಬೌಲಿಂಗ್ ಅದ್ಭುತ. ಕೊನೆಯಲ್ಲಿ ಲ್ಯೂಕ್ ರೈಟ್ (44; 57 ಎಸೆತ, 5 ಬೌಂಡರಿ) ಕೊಂಚ ಹೊತ್ತು ಗುಡುಗಿದರು. ಆದರೆ  ಒಂದು ಅರ್ಧ ಶತಕದ ಜೊತೆಯಾಟ ಕೂಡ ಮೂಡಿಬರಲಿಲ್ಲ. ಹಾಗಾಗಿ ಇಂಗ್ಲೆಂಡ್ 48.4 ಓವರ್‌ಗಳಲ್ಲಿ 243 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.ವಿಂಡೀಸ್‌ನ ರಮಾನರೇಶ್ ಸರವಣ ಬೌಂಡರಿ ಗೆರೆ ಬಳಿ ಬಂದಾಗಲೆಲ್ಲಾ ಚೆನ್ನೈನ ಪ್ರೇಕ್ಷಕರು ಜೋರಾಗಿ ಕೂಗುತ್ತಿದ್ದರು.ಸರವಣ ಎಂಬ ಅವರ ತಮಿಳರ ಹೆಸರು ಇದಕ್ಕೆ ಕಾರಣ ಇರಬಹುದು!  ಇಂಗ್ಲೆಂಡ್ ಆಟಗಾರರ ಬ್ಯಾಟಿಂಗ್ ಈ ತಂಡದವನ್ನು ಹಿಂಬಾಲಿಸುತ್ತಿರುವ ಸಾವಿರಕ್ಕೂ ಅಧಿಕ ಮಂದಿ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತು. ಆದರೆ ಕೊನೆಯಲ್ಲಿ ಲಭಿಸಿದ ಗೆಲುವು ಅವರಿಗೆ ಕೊಂಚ ಸಮಾಧಾನ ಉಂಟು ಮಾಡಿತು.ಸ್ನಾಯು ಸೆಳೆತಕ್ಕೆ ಒಳಗಾಗಿರುವ ವೇಗಿ ಅಜ್ಮಲ್ ಶಹ್ಜಾದ್ ಕಣಕ್ಕಿಳಿಯಲಿಲ್ಲ. ಅವರು ಈ ವಿಶ್ವಕಪ್ ಟೂರ್ನಿಯ ಉಳಿದ ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಅವರ ಬದಲಿಗೆ ಮತ್ತೊಬ್ಬ ಆಟಗಾರರನ್ನು ಸೇರಿಸಿಕೊಳ್ಳಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಐಸಿಸಿಯನ್ನು ಕೋರುವ ನಿರೀಕ್ಷೆ ಇದೆ. ಇಂಗ್ಲೆಂಡ್ ತಂಡದ ಲೀಗ್ ಹಂತದ ಪಂದ್ಯಗಳು ಮುಗಿದಿದ್ದು ಒಟ್ಟು ಏಳು ಪಾಯಿಂಟ್ ಹೊಂದಿದೆ. ಲೀಗ್‌ನ ಉಳಿದ ಪಂದ್ಯಗಳ ಫಲಿತಾಂಶದ ಮೇಲೆ ಈ ತಂಡದ ಕ್ವಾರ್ಟರ್ ಫೈನಲ್ ಪ್ರವೇಶ ನಿರ್ಧಾರವಾಗಲಿದೆ.ಸ್ಕೋರ್ ವಿವರ

ಇಂಗ್ಲೆಂಡ್ 48.4 ಓವರ್‌ಗಳಲ್ಲಿ 243

ಆ್ಯಂಡ್ರ್ಯೂ ಸ್ಟ್ರಾಸ್ ಸಿ ಕ್ರಿಸ್ ಗೇಲ್ ಬಿ ಆ್ಯಂಡ್ರೆ ರಸೆಲ್  31

ಮ್ಯಾಟ್ ಪ್ರಿಯೋರ್ ಬಿ ಆ್ಯಂಡ್ರೆ ರಸೆಲ್  21

ಜೊನಾಥನ್ ಟ್ರಾಟ್ ಸಿ ಕ್ರಿಸ್ ಗೇಲ್ ಬಿ ದೇವೇಂದ್ರ ಬಿಶೂ  47

ಇಯಾನ್ ಬೆಲ್ ಬಿ ಕೆಮರ್ ರೋಚ್  27

ಎಯೋನ್ ಮೊರ್ಗನ್ ಸಿ ಡೆವೋನ್ ಥಾಮಸ್ ಬಿ ದೇವೇಂದ್ರ ಬಿಶೂ  07

ರವಿ ಬೋಪಾರ ಬಿ ಆ್ಯಂಡ್ರೆ ರಸೆಲ್  04

ಲ್ಯೂಕ್ ರೈಟ್ ಸಿ ಆ್ಯಂಡ್ರೆ ರಸೆಲ್ ಬಿ ದೇವೇಂದ್ರ ಬಿಶೂ  44

ಜೇಮ್ಸ್ ಟ್ರೆಡ್‌ವೆಲ್ ರನ್‌ಔಟ್ (ಥಾಮಸ್/ಪೊಲಾರ್ಡ್)  09

ಟಿಮ್ ಬ್ರೆಸ್ನನ್ ಔಟಾಗದೆ  20

ಗ್ರೇಮ್ ಸ್ವಾನ್ ಬಿ ಆ್ಯಂಡ್ರೆ ರಸೆಲ್  08

ಕ್ರಿಸ್ ಟ್ರೆಮ್ಲೆಟ್ ಸಿ ಡೆವೋನ್ ಥಾಮಸ್ ಬಿ ಕೆಮರ್ ರೋಚ್  03

ಇತರೆ (ಬೈ-1, ಲೆಗ್‌ಬೈ-4, ವೈಡ್-15, ನೋಬಾಲ್-2)  22

ವಿಕೆಟ್‌ಪತನ: 1-48 (ಪ್ರಿಯೋರ್; 9.1); 2-79 (ಸ್ಟ್ರಾಸ್; 11.5); 3-121 (ಟ್ರಾಟ್; 21.6); 4-134 (ಬೆಲ್; 26.1); 5-134 (ಮೊರ್ಗನ್; 27.2); 6-151 (ಬೋಪಾರ; 32.2); 7-192 (ಟ್ರೆಡ್‌ವೆಲ್; 39.2); 8-216 (ರೈಟ್; 43.4); 9-238 (ಸ್ವಾನ್; 47.1); 10-243 (ಟ್ರೆಮ್ಲೆಟ್; 48.4).

ಬೌಲಿಂಗ್: ಕೆಮರ್ ರೋಚ್ 9.4-2-34-2 (ವೈಡ್-1, ನೋಬಾಲ್-2), ಸುಲೈಮಾನ್ ಬೆನ್ 10-0-56-0 (ವೈಡ್ಸ್-6), ಆ್ಯಂಡ್ರೆ ರಸೆಲ್ 8-0-49-4 (ವೈಡ್ಸ್-7), ಡೆರೆನ್ ಸ್ಯಾಮಿ 3-0-28-0, ದೇವೇಂದ್ರ ಬಿಶೂ 10-0-34-3, ಕಿರೋನ್ ಪೊಲಾರ್ಡ್ 8-0-37-0 (ವೈಡ್-1).

ವೆಸ್ಟ್‌ಇಂಡೀಸ್ 44.4 ಓವರ್‌ಗಳಲ್ಲಿ 225

ಡೆವೋನ್ ಸ್ಮಿತ್ ಸ್ಟಂಪ್ಡ್ ಮ್ಯಾಟ್ ಪ್ರಿಯೋರ್ ಬಿ ಜೇಮ್ಸ್ ಟ್ರೆಡ್‌ವೆಲ್  10

ಕ್ರಿಸ್ ಗೇಲ್ ಎಲ್‌ಬಿಡಬ್ಲ್ಯು ಬಿ ಜೇಮ್ಸ್ ಟ್ರೆಡ್‌ವೆಲ್  43

ಡೆರೆನ್ ಸ್ಯಾಮಿ ಬಿ ರವಿ ಬೋಪಾರ  41

ಡೆರೆನ್ ಬ್ರಾವೊ ಸಿ ಆ್ಯಂಡ್ರ್ಯೂ ಸ್ಟ್ರಾಸ್ ಬಿ ಜೇಮ್ಸ್ ಟ್ರೆಡ್‌ವೆಲ್  05

ಡೆವೋನ್ ಥಾಮಸ್ ಬಿ ರವಿ ಬೋಪಾರ  09

ರಮಾನರೇಶ್ ಸರವಣ ಸಿ ಇಯಾನ್ ಬೆಲ್ ಬಿ ಗ್ರೇಮ್ ಸ್ವಾನ್  31

ಕಿರೋನ್ ಪೊಲಾರ್ಡ್ ಎಲ್‌ಬಿಡಬ್ಲ್ಯು ಬಿ ಗ್ರೇಮ್ ಸ್ವಾನ್  24

ಆ್ಯಂಡ್ರೆ ರಸೆಲ್ ಎಲ್‌ಬಿಡಬ್ಲ್ಯು ಬಿ ಜೇಮ್ಸ್ ಟ್ರೆಡ್‌ವೆಲ್  49

ಸುಲೈಮಾನ್ ಬೆನ್ ರನ್‌ಔಟ್ (ಟ್ರಾಟ್/ಪ್ರಿಯೋರ್)  02

ಕೆಮರ್ ರೋಚ್ ಸಿ ಕ್ರಿಸ್ ಟ್ರೆಮ್ಲೆಟ್ ಬಿ ಗ್ರೇಮ್ ಸ್ವಾನ್  00

ದೇವೇಂದ್ರ ಬಿಶೂ ಔಟಾಗದೆ  00

ಇತರೆ (ಲೆಗ್‌ಬೈ-8, ವೈಡ್-3)  11

ವಿಕೆಟ್ ಪತನ: 1-58 (ಗೇಲ್; 6.5); 2-67 (ಸ್ಮಿತ್; 8.6); 3-91 (ಬ್ರಾವೊ; 12.6); 4-113 (ಸ್ಯಾಮಿ; 17.1); 5-118 (ಥಾಮಸ್; 19.4); 6-150 (ಪೊಲಾರ್ಡ್; 27.4); 7-222 (ರಸೆಲ್; 41.2); 8-223 (ಸರವಣ; 43.1); 9-223 (ರೋಚ್; 43.3); 10-225 (ಬೆನ್; 44.4).

ಬೌಲಿಂಗ್: ಟಿಮ್ ಬ್ರೆಸ್ನನ್ 7-1-46-0, ಗ್ರೇಮ್ ಸ್ವಾನ್ 10-1-36-3 (ವೈಡ್-1), ಕ್ರಿಸ್ ಟ್ರೆಮ್ಲೆಟ್ 5-0-47-0 (ವೈಡ್-1), ಜೇಮ್ಸ್ ಟ್ರೆಡ್‌ವೆಲ್ 10-2-48-4 (ವೈಡ್-1), ರವಿ ಬೋಪಾರ 8.4-2-22-2, ಲ್ಯೂಕ್ ರೈಟ್ 4-0-18-0

ಫಲಿತಾಂಶ: ಇಂಗ್ಲೆಂಡ್‌ಗೆ 18 ರನ್‌ಗಳ ಜಯ.

ಪಂದ್ಯ ಪುರುಷೋತ್ತಮ: ಜೇಮ್ಸ್ ಟ್ರೆಡ್‌ವೆಲ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.