ಮಂಗಳವಾರ, ಮೇ 11, 2021
27 °C

ಇಂಡೊನೇಷ್ಯಾ ಭೂಕಂಪನ: ಐವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಕಾರ್ತ/ ಬಂದಾ ಏಸೇ (ಎಎಫ್‌ಪಿ): ಇಂಡೊನೇಷ್ಯಾದ ಸುಮಾತ್ರ ದ್ವೀಪದಲ್ಲಿ ಬುಧವಾರ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಐದು ಮಂದಿ ಸಾವನ್ನಪ್ಪಿದ್ದು, ಕನಿಷ್ಠ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇಬ್ಬರು ಹೃದಯಾಘಾತದಿಂದ ಹಾಗೂ ಮೂವರು ಆಘಾತದಿಂದ ಸಾವಿಗೀಡಾಗಿರಬಹುದು ಎಂದು ಊಹಿಸಲಾಗಿದೆ. ಈ ನಡುವೆ, ದ್ವೀಪದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.`2004ರ ಭೀಕರ ಸುನಾಮಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಬಂದಾ ಏಸೇ ಪ್ರಾಂತ್ಯದಲ್ಲೇ ಈ ಬಾರಿಯೂ ಅನಾಹುತಗಳು ಸಂಭವಿಸಿವೆ. ಭೂಕಂಪನದ ವೇಳೆ ಮರದಿಂದ ಬಿದ್ದು ಮಗುವೊಂದು ತೀವ್ರವಾಗಿ ಗಾಯಗೊಂಡಿದೆ~ ಎಂದು ರಾಷ್ಟ್ರೀಯ ಉಪಶಮನ ಸಂಸ್ಥೆಯ ವಕ್ತಾರ ಸುಟೊಪೊ ಪರ್ವೊ ನುಗ್ರೊಹೊ ತಿಳಿಸಿದ್ದಾರೆ.ಅಸಹಜ ಬೆಳವಣಿಗೆ: ಇಂಡೊನೇಷ್ಯಾ ಭೂಕಂಪನದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ವಿಜ್ಞಾನಿಗಳು, ಸಾಮಾನ್ಯವಾಗಿ ಇಂತಹ ಕಂಪನಗಳು ಇಷ್ಟು ಪ್ರಬಲವಾಗಿ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭೂಮಿಯ ಒಳಗಿನ ಚಿಪ್ಪುಗಳು ಪರಸ್ಪರ ತಿಕ್ಕಾಡುವುದರಿಂದ ಭೂಕಂಪನಗಳು ಸಂಭವಿಸುತ್ತವೆ.

 

2004ರಲ್ಲಿ 9.1ರಷ್ಟು ತೀವ್ರತೆಯ ಭೂಕಂಪನ ಹಾಗೂ ಕಳೆದ ವರ್ಷ ಜಪಾನ್‌ನಲ್ಲಿ 9ರಷ್ಟು ತೀವ್ರತೆಯ ಭೂಕಂಪನಗಳಿಗೆ ಇದೇ ಕಾರಣವಾಗಿತ್ತು. ಆದರೆ ಬುಧವಾರದ ಇಂಡೊನೇಷ್ಯಾದಲ್ಲಿ ಕಾಣಿಸಿಕೊಂಡ ಭೂಕಂಪನ ತೀರಾ ಅಪರೂಪದ್ದಾಗಿದ್ದು, ಭೂಮಿಯ ಒಳಗೆ ಶಿಲಾಹಾಸುಗಳು ಅಡ್ಡಡ್ಡ ಚಲಿಸಿರುವುದೇ ಕಾರಣವಾಗಿದೆ. ಇದೊಂದು ಅಸಹಜ ಬೆಳವಣಿಗೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.ಎಚ್ಚರಿಕೆಯ ಪರಿಣಾಮ: ಇಂಡೊನೇಷ್ಯಾದಲ್ಲಿನ ಪ್ರಬಲ ಭೂಕಂಪ ಜನರಲ್ಲಿ ಭೀತಿಯನ್ನು ಹುಟ್ಟಿಸಿದರೂ, 8 ವರ್ಷಗಳ ಹಿಂದಿನ ಭೀಕರ ಸುನಾಮಿ ಬಳಿಕ ಎಚ್ಚೆತ್ತು ಕೈಗೊಂಡ ಮುಂಜಾಗ್ರತೆ ಮತ್ತು ತೆರವು ಕಾರ್ಯಗಳಿಂದಾಗಿ ಅಷ್ಟೇನೂ ಹಾನಿ ಸಂಭವಿಸಲಿಲ್ಲ ಎಂದು ಪರಿಣತರು ತಿಳಿಸಿದ್ದಾರೆ.ಇಂಡೊನೇಷ್ಯಾ 2008ರಲ್ಲಿ 130 ದಶಲಕ್ಷ ಡಾಲರ್ ಮೌಲ್ಯದ ಸುನಾಮಿ ಎಚ್ಚರಿಕಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿತ್ತು. ಇದು ಅನಾಹುತ ತಡೆಗೆ ಸಾಕಷ್ಟು ನೆರವು ನೀಡಿತು ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.