ಭಾನುವಾರ, ಮೇ 22, 2022
28 °C

ಇಂತಹ ದುರಂತ ತಪ್ಪಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಕಾರ್ಮಿಕರು ಸಾವಿಗೀಡಾಗುವುದು ಬೆಂಗಳೂರಿನಲ್ಲಿ ಹೊಸತಲ್ಲ. ಪ್ರತಿ ಸಲ ಈ ಬಗೆಯ ದುರಂತ ಸಂಭವಿಸಿದಾಗ ಜನಪ್ರತಿನಿಧಿಗಳು ಭೇಟಿ ನೀಡಿ ಕಟ್ಟಡದ ಒಡೆಯರ ಬೇಜವಾಬ್ದಾರಿತನವನ್ನು ನಿಂದಿಸುತ್ತಾರೆ. ಕಾನೂನು ಕ್ರಮಕ್ಕೆ ಒಳಪಡಿಸುವ ಮಾತಾಡುತ್ತಾರೆ. ಮೃತರ ಸಂಬಂಧಿಕರಿಗೆ ಒಂದು ಲಕ್ಷ ರೂಪಾಯಿ ಪರಿಹಾರದ ಮೊತ್ತ, ಗಾಯಗೊಂಡವರಿಗೆ ಚಿಕಿತ್ಸಾ ವೆಚ್ಚದ ಭರವಸೆ ನೀಡಿ ನಿರ್ಗಮಿಸುತ್ತಾರೆ. ಮತ್ತೊಂದು ಇಂಥದ್ದೇ ದುರಂತ ಸಂಭವಿಸುವವರೆಗೆ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಸುರಕ್ಷತೆಯ ಕ್ರಮಗಳ ಬಗ್ಗೆಯಾಗಲೀ, ಕಾರ್ಮಿಕರನ್ನು ರಕ್ಷಣೆಯ ವ್ಯವಸ್ಥೆ ಇಲ್ಲದೆ ದುಡಿಸಿಕೊಳ್ಳುವ ಬಗ್ಗೆಯಾಗಲೀ ಸರ್ಕಾರದ ಇಲಾಖೆಗಳ ವತಿಯಿಂದ ಯಾವ ಕ್ರಮದ ಮಾತೂ ಕೇಳಿಬರುವುದಿಲ್ಲ. ಮಹಾನಗರಪಾಲಿಕೆ ವ್ಯಾಪ್ತಿಯ ಕಳಪೆ ಕಾಮಗಾರಿಯ ಕಾರಣ ಕಾಂಪೌಂಡ್ ಕುಸಿದು ವಿದ್ಯಾರ್ಥಿನಿ ಸಂಜನಾಸಿಂಗ್ ಮೃತಪಟ್ಟ ಘಟನೆಗೆ ಹೊಣೆಯಾದವರ ವಿರುದ್ಧ ಕೂಡ ಇನ್ನೂ ಯಾವ ಕ್ರಮವನ್ನೂ ಕೈಗೊಳ್ಳದ ಸರ್ಕಾರದಿಂದ ಇಂಥ ಯಾವ ಪ್ರಕರಣದಲ್ಲಾದರೂ ನ್ಯಾಯ ಸಿಗುತ್ತದೆ ಎಂದು ನಿರೀಕ್ಷಿಸಬಹುದೇ? ಬನ್ನೇರುಘಟ್ಟ ರಸ್ತೆಯ ಚತ್ತೇಕೆರೆ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋಡೌನ್ ಕಟ್ಟಡದ ಗೋಡೆ ಕುಸಿದು ಬಿಹಾರದಿಂದ ಬಂದಿದ್ದ ಐದು ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟ ದುರ್ಘಟನೆಯಲ್ಲಿ ಕೂಡ ತಪ್ಪು ಮಾಡಿದವರು ಕಾನೂನು ಪ್ರಕಾರ ಶಿಕ್ಷೆಗೆ ಒಳಗಾಗುತ್ತಾರೆ ಎಂಬ ವಿಶ್ವಾಸ ಮೂಡುತ್ತಿಲ್ಲ.ಗೋಡೌನ್ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಮಂಟಪ ಗ್ರಾಮಪಂಚಾಯತ್‌ನಿಂದ ಅನುಮತಿಯನ್ನೇ ಕೊಟ್ಟಿರಲಿಲ್ಲ ಎಂಬ ಸಮಜಾಯಿಶಿ ಪಂಚಾಯತ್‌ನ ಹೊಣೆಯನ್ನು ತಪ್ಪಿಸುವುದಿಲ್ಲ. ಸ್ಥಳೀಯ ಆಡಳಿತ ಸಿಬ್ಬಂದಿಯ ಗಮನಕ್ಕೆ ಬಾರದೆ ಗೋಡೌನ್‌ನಂತಹ ದೊಡ್ಡ ಕಟ್ಟಡವನ್ನು ನಿರ್ಮಿಸುವುದು ಸಾಧ್ಯವಿಲ್ಲ. ಇಂಥ ಅಕ್ರಮಗಳಲ್ಲಿ ಗುತ್ತಿಗೆದಾರರು ಇಲ್ಲವೆ ಕಟ್ಟಡ ಮಾಲೀಕರೊಂದಿಗೆ ಸರ್ಕಾರಿ ಸಿಬ್ಬಂದಿಯೂ ಕೈ ಜೋಡಿಸುವುದರಿಂದಲೇ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಲಾಗಿದೆ. ಅನುಮತಿ ಪಡೆಯದೆಯೇ ನಿರ್ಮಿಸುತ್ತಿದ್ದ ಈ ಪ್ರಕರಣದಲ್ಲಿ ಗುಣಮಟ್ಟದ ಸಿಮೆಂಟ್, ಕಬ್ಬಿಣ ಮೊದಲಾದವನ್ನು ಬಳಸುವ ಬಗೆಗಿನ ತಪಾಸಣೆಯ ಪ್ರಶ್ನೆಯೇ ಉದ್ಭವಿಸದು. ಕಾರ್ಮಿಕ ಇಲಾಖೆಯ ಸಿಬ್ಬಂದಿ ಕಟ್ಟಡ ಕಾಮಗಾರಿಗಳು ನಡೆಯುತ್ತಿರುವ ಕಡೆ ಸುರಕ್ಷತಾ ಕ್ರಮಗಳ ಕುರಿತಾಗಿ ಅನಿರೀಕ್ಷಿತ ತಪಾಸಣೆ ನಡೆಸುವ ಕ್ರಮ ತೆಗೆದುಕೊಳ್ಳದಿದ್ದರೆ ಇಂಥ ಅವಘಡಗಳು ಆಗುತ್ತಲೇ ಇರುತ್ತವೆ. ಖಾಸಗಿಯಾಗಿ ನಿರ್ಮಿಸುತ್ತಿರುವ ಕಟ್ಟಡಗಳ ಗುಣಮಟ್ಟದ ಬಗ್ಗೆಯೂ ತಪಾಸಣೆ ನಡೆಸುವ ವ್ಯವಸ್ಥೆ ಬರಬೇಕು. ಇಲ್ಲದಿದ್ದರೆ ಸ್ವಂತದ ಕಟ್ಟಡವನ್ನೂ ಕಳಪೆ ಸಾಮಗ್ರಿಗಳಿಂದಲೇ ನಿರ್ಮಿಸಿ ಬಾಡಿಗೆಗೆ ಬಿಡುವ ಧನದಾಹಿಗಳಿಂದ ಅಮಾಯಕ ಕಾರ್ಮಿಕರು ದುರಂತಕ್ಕೆ ಈಡಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಚತ್ತೇಕೆರೆ ಪಾಳ್ಯದಲ್ಲಿ ಆಗಿರುವ ದುರಂತಕ್ಕೆ ಕಟ್ಟಡದ ಮಾಲೀಕರು, ಗುತ್ತಿಗೆದಾರರಷ್ಟೇ ಅಲ್ಲದೆ, ಅಕ್ರಮ ಕಟ್ಟಡ ತಲೆ ಎತ್ತಲು ಅವಕಾಶ ಮಾಡಿಕೊಟ್ಟ ಸ್ಥಳೀಯ ಗ್ರಾಮಪಂಚಾಯತ್ ಆಡಳಿತವನ್ನೂ ಹೊಣೆಯಾಗಿಸಿ ಕಾನೂನು ಕ್ರಮ ಜರುಗಿಸುವುದು ನಾಗರಿಕ ಸರ್ಕಾರದ ಕರ್ತವ್ಯ. ಸಾಂತ್ವನದ ಮೊಸಳೆ ಕಣ್ಣೀರು ಸುರಿಸಿ ಪರಿಹಾರ ಹಣದ ಭರವಸೆಯಷ್ಟನ್ನೇ ನೀಡಿ ಸುಮ್ಮನಾದರೆ ಇಂಥ ಘಟನೆಗಳು ಮರುಕಳಿಸುವುದು ನಿಶ್ಚಿತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.