ಮಂಗಳವಾರ, ಮೇ 17, 2022
25 °C

ಇಂದಿನಿಂದ ಅಡ್ವಾಣಿ ರಥಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಿನಿಂದ ಅಡ್ವಾಣಿ ರಥಯಾತ್ರೆ

ನವದೆಹಲಿ (ಪಿಟಿಐ): `ಯುಪಿಎ ನಾಯಕತ್ವದ ಕೊರತೆ ಎದುರಿಸುತ್ತಿದೆ. ಆದ ಕಾರಣ ಜನ ಈ ಸರ್ಕಾರದ ವಿರುದ್ಧ ಅಸಮಾಧಾನ ತಾಳಿದ್ದಾರೆ~ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೋಮವಾರ ದೂರಿದ್ದಾರೆ.

ಮಂಗಳವಾರದಿಂದ ತಾವು ಕೈಗೊಳ್ಳಲಿರುವ ರಥಯಾತ್ರೆಯಲ್ಲಿ ಭ್ರಷ್ಟಾಚಾರ ಹಾಗೂ ಕಪ್ಪುಹಣದ ಪಿಡುಗನ್ನು ಪ್ರಮುಖವಾಗಿ ಪ್ರಸ್ತಾಪಿಸುವುದಾಗಿ ಅವರು ಹೇಳಿದ್ದಾರೆ.ಉತ್ತಮ ಹಾಗೂ ಪಾರದರ್ಶಕ ಆಡಳಿತದ ಕೊರತೆಯಿಂದ ಜನ ಬೇಸತ್ತಿದ್ದಾರೆ. ಹಾಗಾಗಿ ಯಾತ್ರೆಯಲ್ಲಿ ಈ ಅಂಶವನ್ನೂ ಚರ್ಚೆಗೆ ತೆಗೆದುಕೊಳ್ಳಲಾಗುತ್ತದೆ. ಯುಪಿಎ ಸರ್ಕಾರದ ಆಡಳಿತ ವೈಖರಿ ಹಾಗೂ ರಾಜಕೀಯದಲ್ಲಿ ನೈತಿಕತೆ ಕುಸಿದಿದೆ ಎಂದು ಅಡ್ವಾಣಿ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಭ್ರಷ್ಟಾಚಾರ ಹಾಗೂ ಕಪ್ಪುಹಣದ ಬಗ್ಗೆ ನಾಗರಿಕ ಸಮಾಜ ಅರಿವು ಮೂಡಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪ್ರಜಾಪ್ರಭುತ್ವದ ಆರೋಗ್ಯವು ರಾಜಕೀಯ ಪಕ್ಷಗಳನ್ನು ಅವಲಂಬಿಸಿರುತ್ತದೆ ಎಂದರು.ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಭಾನುವಾರ ತಾವು ಮಾತನಾಡಿ ಭಿನ್ನಾಭಿಪ್ರಾಯ ಶಮನ ಮಾಡಿಕೊಂಡ ಬಗ್ಗೆ ಬಂದ ವರದಿಗಳನ್ನು ಅಲ್ಲಗಳೆದ ಅಡ್ವಾಣಿ, `ನನಗೆ ಈ ಸುದ್ದಿ ಕೇಳಿ ಅಚ್ಚರಿಯಾಯಿತು. ಕಳೆದ 2-3 ದಿನಗಳಿಂದ ನಾನು ಮೋದಿ ಅವರ ಜತೆ ಮಾತನಾಡಿಯೇ ಇಲ್ಲ. ಸತ್ಯಾಸತ್ಯತೆ ಅರಿತು ವರದಿ ಮಾಡುವಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ~ ಎಂದರು.`ಪ್ರಧಾನಿ ಅಭ್ಯರ್ಥಿ ಸಕಾಲದಲ್ಲಿ ನಿರ್ಧಾರ~


ಬಿಜೆಪಿ ಪ್ರಧಾನಿ ಅಭ್ಯರ್ಥಿ ಕುರಿತು ಸಕಾಲದಲ್ಲಿ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅಡ್ವಾಣಿ ಹೇಳಿದ್ದಾರೆ.

ಚುನಾವಣೆ ಬಂದಾಗ ಈ ಕುರಿತು ಆಲೋಚಿಸಲಾಗುತ್ತದೆ. ಆದರೆ ಈಗ ಈ ವಿಷಯ ಚರ್ಚಿಸುವುದು ಸೂಕ್ತವಲ್ಲ. ಚುನಾವಣೆಗೆ ಇನ್ನೂ ಮೂರು ವರ್ಷಗಳು ಇವೆ. ಆದರೆ ಸರ್ಕಾರದ ಈಗಿನ ಕಾರ್ಯವೈಖರಿ ನೋಡಿದರೆ ಚುನಾವಣೆ ಯಾವಾಗ ಬೇಕಾದರೂ ಸಂಭವಿಸಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  ಬಿಜೆಪಿಯಲ್ಲಿ ಪ್ರಧಾನಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ, ಕಾಲ ಸನ್ನಿಹಿತವಾದಾಗ ಪಕ್ಷ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು. ಪ್ರಧಾನಿ ಹುದ್ದೆಗೂ ತಮ್ಮ ಯಾತ್ರೆಗೂ ಸಂಬಂಧ ಕಲ್ಪಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, `ನಾನು ಆರ್‌ಎಸ್‌ಎಸ್, ಜನಸಂಘ, ಬಿಜೆಪಿ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ದೇಶದಿಂದ ಉಪಕೃತನಾಗಿದ್ದೇನೆ. ಇದು ಪ್ರಧಾನಿ ಪಟ್ಟಕ್ಕಿಂತ ಮಿಗಿಲಾದದ್ದು ಎಂದು ಪುನರುಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.