ಭಾನುವಾರ, ಮೇ 22, 2022
22 °C
ಕ್ರಿಕೆಟ್: ಮೊದಲ ಪಂದ್ಯದಲ್ಲಿ ಕೆಎಸ್‌ಸಿಎ ಇಲೆವೆನ್‌ಗೆ ಜಾರ್ಖಂಡ್ ಸವಾಲು

ಇಂದಿನಿಂದ ಶಫಿ ದಾರಾಷ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಹತ್ವದ ಟೂರ್ನಿ ಎನಿಸಿರುವ ಅಖಿಲ ಭಾರತ ಆಹ್ವಾನಿತ ಶಫಿ ದಾರಾಷ ಟೂರ್ನಿ ಬುಧವಾರದಿಂದ ಬೆಂಗಳೂರು ಹಾಗೂ ಮೈಸೂರಿನಲ್ಲಿ ಆರಂಭವಾಗಲಿದೆ.ಬೆಂಗಳೂರಿನಲ್ಲಿ ಚಿನ್ನಸ್ವಾಮಿ, ಆದಿತ್ಯ ಗ್ಲೋಬಲ್, ಬಿಜಿಎಸ್, ಆಲೂರು ಕ್ರೀಡಾಂಗಣಗಳಲ್ಲಿ, ಮೈಸೂರಿನಲ್ಲಿ ಗಂಗೋತ್ರಿ ಗ್ಲೇಡ್ಸ್ ಮತ್ತು ಎಸ್‌ಜೆಸಿಇ ಎಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. 16 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳಂತೆ ನಾಲ್ಕು ಗುಂಪುಗಳನ್ನು ವಿಂಗಡಿಸಲಾಗಿದ್ದು, ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಸೆಮಿಫೈನಲ್ ಪ್ರವೇಶಿಸಲಿದೆ.ಮೊದಲ ಪಂದ್ಯಗಳು ಜುಲೈ 17ರಿಂದ 20ರ ವರೆಗೆ ನಡೆಯಲಿವೆ. ಚಾಂಪಿಯನ್ ತಂಡ ನಾಲ್ಕು ಲಕ್ಷ ರೂಪಾಯಿ, ರನ್ನರ್ ಅಪ್ ಪಡೆದ ತಂಡ 2 ಲಕ್ಷ ಹಾಗೂ ಸೆಮಿಫೈನಲ್‌ನಲ್ಲಿ ಸೋಲು ಕಂಡ ತಂಡಗಳಿಗೂ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ಲಭಿಸಲಿದೆ.ಹೋದ ಋತುವಿನ ಕರ್ನಾಟಕ ರಣಜಿ ತಂಡದಲ್ಲಿದ್ದ ಆಟಗಾರರೇ ಕೆಎಸ್‌ಸಿಎ ಇಲೆವೆನ್ ತಂಡದಲ್ಲಿದ್ದಾರೆ. ಹಿಂದಿನ ಟೂರ್ನಿಗಳಲ್ಲಿ ಆಡಿದ ಅನುಭವ ಅವರಿಗೆ ಇಲ್ಲಿ ನೆರವಾಗಬಹುದು. ಮುಂಬರುವ ರಣಜಿ ಋತುವಿಗೆ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ಶಫಿ ದಾರಾಷ ವೇದಿಕೆಯಾಗಿದೆ. ಕೆಎಸ್‌ಸಿಎ ಇಲೆವೆನ್ ತಂಡವನ್ನು ಮುನ್ನಡೆಸುತ್ತಿರುವ ವಿಕೆಟ್ ಕೀಪರ್ ಸಿ.ಎಂ. ಗೌತಮ್ ಮುಂದೆ ಹೊಸ ಸವಾಲಿದೆ. ಏಕೆಂದರೆ, ಅವರು ಈ ಟೂರ್ನಿಯಲ್ಲಿ ನಾಯಕರಾಗಿರುವುದು ಇದೇ ಮೊದಲು.2012-13ರ ರಣಜಿ ಟೂರ್ನಿಯಲ್ಲಿ ಅವರು 117.87ರ ಸರಾಸರಿಯಲ್ಲಿ ಒಟ್ಟು 943 ರನ್ ಕಲೆ ಹಾಕಿದ್ದರು. ಇದು ಹೋದ ವರ್ಷದ ವೈಯಕ್ತಿಕ ಒಟ್ಟು ಗರಿಷ್ಠ ಮೊತ್ತವಾಗಿದೆ. ಬಲಗೈ ಬ್ಯಾಟ್ಸ್‌ಮನ್ ಗೌತಮ್ ತಮ್ಮ ಲಯವನ್ನು ಉಳಿಸಿಕೊಂಡಿದ್ದು, ತಮ್ಮ ನಾಯಕತ್ವದಲ್ಲಿನ ತಂಡವನ್ನು ಹೇಗೆ ಮುನ್ನಡೆಸುವರು ಎನ್ನುವ ಕುತೂಹಲವಿದೆ.ಅನುಭವಿ ರಾಬಿನ್ ಉತ್ತಪ್ಪ, ಸ್ಟುವರ್ಟ್ ಬಿನ್ನಿ, ಗಣೇಶ್ ಸತೀಶ್, ಅಮಿತ್ ವರ್ಮ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ಈ ತಂಡದಲ್ಲಿದ್ದಾರೆ. ವೇಗಿ ಅಭಿಮನ್ಯು ಮಿಥುನ್, ತಾವಾಡಿದ ಮೊದಲ ರಣಜಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಮಂಡ್ಯದ ಎಚ್.ಎಸ್. ಶರತ್ ಬೌಲಿಂಗ್ ವಿಭಾಗದ ಬಲ ಎನಿಸಿದ್ದಾರೆ. ಸ್ಪಿನ್ನರ್‌ಗಳಾದ ಕೆ. ಗೌತಮ್ ಹಾಗೂ ಕೆ.ಪಿ. ಅಪ್ಪಣ್ಣ ನಡುವೆ ಅಂತಿಮ ಹನ್ನೊಂದರಲ್ಲಿ ಸ್ಥಾನ ಗಳಿಸಲು ಪೈಪೋಟಿ ಇದೆ.ಕೆಎಸ್‌ಸಿಎ ಇಲೆವೆನ್ ತನ್ನ ಮೊದಲ ಪಂದ್ಯದಲ್ಲಿ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ತಂಡವನ್ನು ಎದುರಿಸಲಿದೆ. ಗೆಲುವಿನ ಆರಂಭ ಪಡೆಯಬೇಕು ಎನ್ನುವ ಲೆಕ್ಕಾಚಾರದಿಂದ ನಾಯಕ ಸಿ.ಎಂ. ಗೌತಮ್ ಬಳಗದ ಆಟಗಾರರು ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು.ನಂತರ `ಪ್ರಜಾವಾಣಿ' ಜೊತೆ ಮಾತನಾಡಿದ ಸಿ.ಎಂ. ಗೌತಮ್ `ರಣಜಿ ಟೂರ್ನಿಗೆ ಸಜ್ಜಾಗಲು ಇದು ಅತ್ಯುತ್ತಮ ಅವಕಾಶ. ಈ ಸಲದ ರಣಜಿಯಲ್ಲಿ ಕರ್ನಾಟಕದ ಮೊದಲ ಪಂದ್ಯ ಜಾರ್ಖಂಡ್ ಎದುರು ನಡೆಯಲಿದೆ. ಜಾರ್ಖಂಡ್ ಎದುರು ಒಮ್ಮೆಯೂ ಆಡಿಲ್ಲ. ಆದ್ದರಿಂದ ಎದುರಾಳಿ ಆಟಗಾರರ ಬಗ್ಗೆ ತಿಳಿದುಕೊಳ್ಳಲು ಶಫಿ ದಾರಾಷ ಉತ್ತಮ ವೇದಿಕೆಯಾಗಿದೆ' ಎಂದು ನುಡಿದರು.ತಂಡದ ಸ್ಪಿನ್ ಬೌಲಿಂಗ್ ಕುರಿತು ಪ್ರಶ್ನಿಸಿದಾಗ `ರಣಜಿ ವೇಳೆಗೆ ಕರ್ನಾಟಕ ತಂಡದ ಸ್ಪಿನ್ ವಿಭಾಗವನ್ನು ಬಲಗೊಳಿಸಲು ನಮಗೆ ಮಹತ್ವದ ಅವಕಾಶ ಲಭಿಸಿದೆ. ಶಫಿ ದಾರಾಷ ಟೂರ್ನಿಯಲ್ಲಿ ಸ್ಪಿನ್ ವಿಭಾಗಕ್ಕೆ ಒತ್ತು ನೀಡಲು ನಿರ್ಧರಿಸಿದ್ದೇವೆ. ಈ ಕುರಿತು ಸ್ಪಿನ್ನರ್‌ಗಳ ಜೊತೆ ಮಾತನಾಡಿದ್ದೇನೆ' ಎಂದು ಅವರು ತಿಳಿಸಿದರು.ಈ ಸಲದ ಟೂರ್ನಿಯಲ್ಲಿ ಅಲ್ಪ ಬದಲಾವಣೆಗಳನ್ನು ಮಾಡಲಾಗಿದೆ. ಮೊದಲ ಇನಿಂಗ್ಸ್ ಪ್ರತಿ ತಂಡಕ್ಕೆ ಗರಿಷ್ಠ 120 ಓವರ್. ಎರಡನೇ ಇನಿಂಗ್ಸ್ ಗರಿಷ್ಠ 60 ಓವರ್‌ಗಳನ್ನು ನಿಗದಿ ಮಾಡಲಾಗಿದೆ. 120 ಓವರ್‌ಗಳ ಒಳಗೆ ತಂಡ ಆಲ್‌ಔಟ್ ಆದರೆ, ಎರಡನೇ ಇನಿಂಗ್ಸ್‌ನ ಬ್ಯಾಟಿಂಗ್ ಆರಂಭಿಸಬಹುದು. ಆರೂವರೆ ಗಂಟೆ ದಿನದಾಟ ನಡೆಯಲಿದೆ. ನಾಲ್ಕು ಕೆಎಸ್‌ಸಿಎ ತಂಡಗಳು ಹಾಗೂ 12 ಹೊರ ರಾಜ್ಯಗಳ ತಂಡಗಳು ಈ ಟೂರ್ನಿಯಲ್ಲಿ ಪೈಪೋಟಿ ನಡೆಸಲಿವೆ. ಕಳೆದ ವರ್ಷ ಬಾಂಗ್ಲಾದೇಶ `ಎ' ತಂಡವೂ ಈ ಟೂರ್ನಿಯಲ್ಲಿ ಆಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.