ಬುಧವಾರ, ಜೂಲೈ 8, 2020
26 °C

ಇಂದು ಶಾಂತಿಗಾಗಿ ವಯಲಿನ್ ಸಂಗೀತ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಸಿದ್ಧ ವಯಲಿನ್ ವಾದಕ ದಿ. ಪ್ರೊ.ವಿ.ಲಕ್ಷ್ಮೀನಾರಾಯಣ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಬುಧವಾರ ನಗರದಲ್ಲಿ ಏರ್ಪಡಿಸಲಾಗಿರುವ ‘ಶಾಂತಿಗಾಗಿ ವಯಲಿನ್’ ಕಾರ್ಯಕ್ರಮದಲ್ಲಿ ಜಗತ್ಪ್ರಸಿದ್ಧ ವಯಲಿನ್ ವಾದಕರು ಸಂಗೀತ ಸುಧೆ ಹರಿಸಲಿದ್ದಾರೆ.ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಬುಧವಾರ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಮೆರಿಕ, ಅಲ್ಜೀರಿಯ, ರಷ್ಯಾ, ನಾರ್ವೆ ದೇಶಗಳ ಪ್ರತಿಭಾವಂತ ವಯಲಿನ್ ವಾದಕರು, ತಮ್ಮ ತಮ್ಮ ನೆಲದ ಜಾನಪದ ಮತ್ತು ಶಾಸ್ತ್ರೀಯ ಸಂಗೀತ ಪ್ರಕಾರಗಳ ವಿಶೇಷ ಶೈಲಿಯ ಸಂಯೋಜನೆಗಳನ್ನು ನುಡಿಸಲಿದ್ದಾರೆ.‘ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್’ ಸಹಭಾಗಿತ್ವದ ಈ ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ ಅವರ ಪುತ್ರ, ಹೆಸರಾಂತ ವಯಲಿನ್ ವಾದಕ ಎಲ್.ಸುಬ್ರಮಣ್ಯಂ, ಅವರ ಪುತ್ರ ಅಂಬಿ ಸುಬ್ರಮಣ್ಯಂ ಜತೆಗೆ ಅಮೆರಿಕದ ಮಾರ್ಕ್ ಒಕಾನರ್, ನಾರ್ವೆಯ ಕ್ಯಾಥರಿನ್ ಚೆನ್, ರಷ್ಯಾದ ಸರ್ಜಿ ಎರ್ಡೆಂಕೊ, ವ್ಲಾದಿಮರ್ ಬೆಸನೊವ್, ಮೈಕಲ್ ಸವಿಶೆವ್ ಅವರನ್ನು ಒಳಗೊಂಡ ತಂಡ ಜಿಪ್ಸಿ ಬ್ಯಾಂಡ್ ‘ಲೋಯ್ಕಾ’, ಅಲ್ಜೀರಿಯಾದ ಖೇರ್ ಎಡಿನೆ, ಬಾರೋಕ್ ವಾದಕ ಬೆನೆಡಿಕ್ಟ್ ಮೌರ್ಸೆಟ್ ಮೊದಲಾದವರು ವಯಲಿನ್ ವಾದನ ಮಾಡಲಿದ್ದಾರೆ.ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಸುಬ್ರಮಣ್ಯಂ, ‘ಇಪ್ಪತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಲಕ್ಷ್ಮೀನಾರಾಯಣ ಜಾಗತಿಕ ಸಂಗೀತ ಉತ್ಸವದ (ಎಲ್‌ಜಿಎಂಎಫ್) ಭಾಗವಾಗಿ ಜನ್ಮಶತಮಾನೋತ್ಸವ ಆಚರಣೆ ಸಂದರ್ಭ ಬಂದಿದೆ. ಜೀವಮಾನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದ ಇಂತಹ ಅವಕಾಶ ಸಿಕ್ಕಿರುವುದು ನನ್ನ ಸಂತಸವನ್ನು ನೂರ್ಮಡಿಗೊಳಿಸಿದೆ’ ಎಂದು ಹೇಳಿದರು.‘ಗುರುವಾರ ಇದೇ ಭವನದಲ್ಲಿ ‘ಸೌಂಡ್ ಆಫ್ ಇಂಡಿಯಾ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿದ್ವಾನ್ ಸಂಗೀತ ಕಲಾನಿಧಿ ಡಾ.ಆರ್.ಕೆ.ಶ್ರೀಕಂಠನ್ ಅವರನ್ನು ಸನ್ಮಾನಿಸಲಾಗುವುದು. ಜತೆಗೆ ಅವರು ಸಂಗೀತ ಕಚೇರಿ ನಡೆಸಿಕೊಡಲಿದ್ದಾರೆ. ಅವರೊಂದಿಗೆ ಪಿಟೀಲು ಚೌಡಯ್ಯನವರ ಮೊಮ್ಮಗ ಮೈಸೂರು ಚಂದನಕುಮಾರ್ (ಕೊಳಲು), ಡಾ.ಎಂ.ಲಲಿತಾ (ವಯಲಿನ್), ಡಿ.ಶ್ರೀನಿವಾಸ್ (ವೀಣೆ), ಕಾಂಚನ ಸಹೋದರಿಯರು (ಹಾಡುಗಾರಿಕೆ) ಪಾಲ್ಗೊಳ್ಳಲಿದ್ದಾರೆ’ ಎಂದು ಅವರು ತಿಳಿಸಿದರು.ಸಂಗೀತ ಕಛೇರಿ ನೀಡಲು ಅಮೆರಿಕದಿಂದ ಆಗಮಿಸಿರುವ ಮಾರ್ಕ್ ಒಕಾನರ್ ಮತ್ತು ನಾರ್ವೆಯ ಕ್ಯಾಥರಿನ್ ಚೆನ್, ‘ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೇವೆ. ತುಂಬಾ ಖುಷಿಯಾಗುತ್ತಿದೆ’ ಎಂದರು.‘ಸಂಗೀತಕ್ಕೆ ವಿವಿಧ ಭಾಷೆ, ಸಂಸ್ಕೃತಿಗಳ ಜನರನ್ನು ಒಂದುಗೂಡಿಸುವ ಶಕ್ತಿಯಿದೆ. ಶಾಂತಿಯ ಉದ್ದೇಶದಿಂದ ನಡೆಸಲಾಗುತ್ತಿರುವ ಸಂಗೀತ ಕಚೇರಿಯಲ್ಲಿ ಭಾಗಿಯಾಗುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ’ ಎಂದರು.‘ಎಲ್‌ಜಿಎಂಎಫ್’ನ ಕಲಾ ನಿರ್ದೇಶಕಿ ಕವಿತಾ ಕೃಷ್ಣಮೂರ್ತಿ ಸುಬ್ರಮಣ್ಯಂ ಮಾತನಾಡಿ, ‘ಎರಡೂ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶಾವಕಾಶವಿದೆ. ಅಪರೂಪದ ಈ ಕಾರ್ಯಕ್ರಮಕ್ಕೆ ಸಂಗೀತ ಪ್ರೇಮಿಗಳಿಗೆ ಮುಕ್ತ ಸ್ವಾಗತವಿದೆ’ ಎಂದು ಅವರು ತಿಳಿಸಿದರು.ಕಾರ್ಯಾಗಾರ: ಉತ್ಸವಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಸಂಜೆ ಖಾಸಗಿ ಹೋಟೆಲ್‌ನಲ್ಲಿ ವಯಲಿನ್ ಕಲಿಯುತ್ತಿರುವ ವಿದ್ಯಾರ್ಥಿಗಳು ಮತ್ತು ಉದಯೋನ್ಮುಖ ಕಲಾವಿದರಿಗಾಗಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.ಮಾರ್ಕ್ ಒಕಾನರ್, ಕ್ಯಾಥರಿನ್ ಚೆನ್, ಡಾ.ಎಂ.ಲಲಿತಾ ಅವರು ತಮ್ಮದೇ ಆದ ವಿಶಿಷ್ಟ ಶೈಲಿಗಳಲ್ಲಿ ವಯೊಲಿನ್ ನುಡಿಸಿದರಲ್ಲದೇ, ಅನುಭವವನ್ನು ಹಂಚಿಕೊಂಡರು. ಲಲಿತಾ ಅವರು ಪ್ರಾತ್ಯಕ್ಷಿಕೆ ಮೂಲಕ ಕ್ರಿಸ್ತ ಪೂರ್ವ ಕಾಲದಿಂದ ಆರಂಭವಾಗುವ ವಯಲಿನ್ ವಿಕಾಸದ ಕಥೆಯನ್ನು ಪ್ರಸ್ತುತ ಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.