ಬುಧವಾರ, ಮೇ 25, 2022
23 °C

ಇಟಲಿ ಪ್ರಧಾನಿ ವಿರುದ್ಧ ಮಹಿಳೆಯರ ರ್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಮ್ (ಐಎಎನ್‌ಎಸ್): ಹಲವು ವೇಶ್ಯಾವಾಟಿಕೆ ಹಗರಣಗಳಲ್ಲಿ ಶಾಮೀಲಾಗಿರುವ ಇಟಲಿಯ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ಅವರು ಮಹಿಳೆಯರ ಘನತೆಗೆ ಮಸಿ ಬಳಿಯುತ್ತಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಹಸ್ರಾರು ಮಹಿಳೆಯರು ಭಾನುವಾರ ದೇಶದ ಹಲವೆಡೆ ಪ್ರತಿಭಟನಾ ರ್ಯಾಲಿಗಳನ್ನು ನಡೆಸಿದರು.ರೋಮ್ ಮಾತ್ರವಲ್ಲದೇ, ಬರಿ, ಟ್ರಿಸ್ಟೆ, ವೆನಿಸ್‌ಗಳಲ್ಲೂ ಇಂತಹ ರ್ಯಾಲಿಗಳು ನಡೆದಿವೆ. ಈ ರ್ಯಾಲಿಗಳಲ್ಲಿ ಪುರುಷರು ಸಹ ಪಾಲ್ಗೊಂಡಿದ್ದರು. ಟೋಕಿಯೊದ ಇಟಲಿ ಕಾನ್ಸುಲೇಟ್ ಕಚೇರಿ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ ಸುಮಾರು 100 ಮಂದಿ ಮಹಿಳೆಯರನ್ನು ಬಂಧಿಸಲಾಯಿತು.ನಟಿಯರಾದ ಫ್ರಾನ್ಸೇಕಾ ಮತ್ತು ಕ್ರಿಸ್ಟಿನಾ ಮೊಮೆಸಿನಿ ಅವರ ಮುಂದಾಳತ್ವದಲ್ಲಿ ಈ ರ್ಯಾಲಿಗಳು ನಡೆದಿವೆ. ಲೈಂಗಿಕ ಪ್ರಚೋದನೆಗೆ ಕಾರಣವಾಗುವ ಪ್ರಧಾನಿ ಅವರ ಹೇಳಿಕೆಗಳಿಂದ ಸಮಾಜಕ್ಕೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.ಉದ್ಯೋಗದಲ್ಲಿ ಮಹಿಳಾ ತಾರತಮ್ಯ ನೀತಿ ಮುಂದುವರಿದಿದೆ. ಹಗಲು ಹೊತ್ತಿನ ನರ್ಸರಿಗಳು, ಮನೆಕೆಲಸದವರು ಮತ್ತು ಅರೆಕಾಲಿಕ ಉದ್ಯೋಗಗಳ ಕೊರತೆಯಿಂದ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ದೂರಿದ್ದಾರೆ.ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮಹಿಳೆಯರನ್ನು ಪುಸಲಾಯಿಸುವ ಹೇಳಿಕೆಯನ್ನು ಸೋಮವಾರ ಬೆರ್ಲುಸ್ಕೋನಿ ನೀಡಿದ್ದು, ಮಹಿಳೆಯರು ಪುರುಷರಿಗಿಂತ ಹೆಚ್ಚು ಚುರುಕು ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಾರೆ ಎಂದು ಹೊಗಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.