ಬುಧವಾರ, ಫೆಬ್ರವರಿ 24, 2021
24 °C

ಇತಿಹಾಸಕ್ಕೆ ಸಾಕ್ಷಿ ನಿಡಗಲ್ ದುರ್ಗ

ಲಕ್ಷ್ಮೀಕಾಂತ್ ಎಲ್.ವಿ. Updated:

ಅಕ್ಷರ ಗಾತ್ರ : | |

ಇತಿಹಾಸಕ್ಕೆ ಸಾಕ್ಷಿ ನಿಡಗಲ್ ದುರ್ಗ

ವಾರದ ವಿರಾಮಕ್ಕೆ ವಿಹಾರ ಮಾಡುವ ಮನಸ್ಸು ಮಾಡಿದ ನಮ್ಮ ನೆರವಿಗೆ ಬಂದದ್ದು ಮನಮೋಹಕ ಚಾರಣ ತಾಣ ತುಮಕೂರು ಜಿಲ್ಲೆಯ ನಿಡಗಲ್ ದುರ್ಗ.ಮಧುಗಿರಿಯಿಂದ ಬೆಳಿಗ್ಗೆ 8.30ಕ್ಕೆ ಹೊರಟು 11ಗಂಟೆ ಸುಮಾರಿಗೆ ಗಡಿಪ್ರದೇಶವಾದ ಪಾವಗಡ ತಾಲ್ಲೂಕಿನ ಲಿಂಗದಹಳ್ಳಿ ತಲುಪಿದೆವು. ಅಲ್ಲಿಂದ ನಾಲ್ಕು ಜನರ ನಮ್ಮ ತಂಡ ಎರಡು ಬೈಕ್‌ಗಳನ್ನೇರಿ ನಿಡಗಲ್ ಕಡೆ ಪ್ರಯಾಣ ಬೆಳೆಸಿದೆವು. ಆಗೊಮ್ಮೆ ಈಗೊಮ್ಮೆ ಬೀಳುತ್ತಿದ್ದ ಸೋನೆ ಮಳೆಯಲ್ಲಿ ನೆನೆಯುತ್ತಾ, ಪ್ರಕೃತಿ ಸವಿ ಸವಿಯುತ್ತಾ ಬೆಟ್ಟದ ಹತ್ತಿರ ತಲುಪಿದೆವು. ಅಲ್ಲಿಂದಲೇ ನವಿಲುಗಳ ಉಲಿ ತೇಲಿ ಬರುತ್ತಿತ್ತು.ಬೆಟ್ಟದ ತಪ್ಪಲಿನಿಂದ ಶುರುವಾಯಿತು ನಮ್ಮ ಚಾರಣ. ಮಳೆ ಉಂಡ ನೆಲ ಹಸಿರು ಉಕ್ಕಿಸುತ್ತಿತ್ತು. ನೋಡುತ್ತಾ ಅಲ್ಲಿಯೇ ಇದ್ದುಬಿಡಬೇಕೆನಿಸುವಷ್ಟು ಆನಂದ. ಸ್ವಲ್ಪ ಮುಂದೆ ಸಾಗುತ್ತಿರುವಾಗಲೇ ನಮಗೆ ಕಂಡದ್ದು ಮೂರು ದೇವಾಲಯಗಳು. ದೇವರಿಗೆ ನಮಸ್ಕರಿಸಿ ಚಾರಣ ಆರಂಭಿಸಿದೆವು. ಸ್ಥಳೀಯ ಗೆಳೆಯರೂ ಇದ್ದುದರಿಂದ ಚಾರಣ ಇನ್ನಷ್ಟು ಬಿರುಸುಗೊಂಡಿತು.ದುರ್ಗದ ತುದಿ ತಲುಪಿದಾಗ ಸುಯ್ಯೆಂದು ಬೀಸುವ ತಂಗಾಳಿ ಜೊತೆಗೆ ನಮ್ಮನ್ನು ಸ್ವಾಗತಿಸಿದ್ದು ಶಿಥಿಲಾವಸ್ಥೆಯಲ್ಲಿರುವ ಕಲ್ಲಿನ ಕೋಟೆಯ ಗೋಡೆಗಳು. ಜೊತೆಗೆ ಅಲ್ಲಿಯೇ ಇದ್ದಂತಹ ನೀರಿನ ಹೊಂಡ. ವರ್ಷಪೂರ್ತಿ ನೀರಿರುವ ಈ ಹೊಂಡ ಆಗಿನ ಕಾಲದಲ್ಲಿ ನೀರಿನ ಒರತೆಯಾಗಿತ್ತು ಎನಿಸುತ್ತದೆ.ಆ ಹೊಂಡದ ನೀರನ್ನು ಕುಡಿದು ದಣಿವಾರಿಸಿಕೊಂಡು ತಂದಿದ್ದ ತಿಂಡಿಯನ್ನು ತಿಂದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದೆವು. ನಂತರ ಬೆಟ್ಟದ ತುದಿಯಲ್ಲಿನ ಪ್ರದೇಶವನ್ನೆಲ್ಲಾ ವೀಕ್ಷಿಸುತ್ತಾ ಹೊರಟ ನಮಗೆ ಎಲ್ಲೆಡೆ ಕಂಡಿದ್ದು ಕಲ್ಲಿನ ಕೋಟೆಯ ಅವಶೇಷಗಳು.ಸಂರಕ್ಷಣೆಯಿಲ್ಲದ ಎರಡು ಉಕ್ಕಿನ ಫಿರಂಗಿಗಳು ಅನಾಥವಾಗಿ ಬಿದ್ದಿದ್ದವು. ಅಲ್ಲಿಂದ ಕಾಣಿಸುವ ಸುತ್ತಲಿನ ವಿಹಂಗಮ ನೋಟ, ಸಣ್ಣ ಸಣ್ಣ ಚೌಕಟ್ಟುಗಳಂತೆ ಕಾಣುವ ಹೊಲಗಳು ಮನತಣಿಸಿದವು.ಇತಿಹಾಸ ಕೆದಕಿದಾಗ: ಪಾವಗಡ ತಾಲ್ಲೂಕಿನ ಗಡಿಪ್ರದೇಶದಲ್ಲಿ ಕಣಶಿಲೆಯ ಬೆಟ್ಟಗಳ ಸಾಲಿನಲ್ಲಿ ಇರುವ ಈ ಭವ್ಯ ನಿಡಗಲ್ ಬೆಟ್ಟವು ಸಮುದ್ರ ಮಟ್ಟದಿಂದ 322 ಅಡಿ ಎತ್ತರವಿದೆ.  ಈ ಗಿರಿಯು ಕಡಿದಾಗಿದ್ದು ಒಂದು ಅಖಂಡ ಶಿಲೆಯನ್ನು ಹೊಂದಿದೆ.ಈ ಭೀಮಾಕೃತಿಯ ಏಕಶಿಲೆಯ ನಿಲುವಿನಿಂದಾಗಿ ನಿಡಗಲ್ಲು ಎಂಬ ಹೆಸರು ಬಂದಿದೆ.  ಪ್ರಾಚೀನ ಕಾಲದಲ್ಲಿ ಇದೊಂದು ಜನಭರಿತಪ್ರದೇಶವಾಗಿತ್ತೆಂದು ಅಲ್ಲಿ ದೊರಕಿರುವ ಪ್ರಾಚೀನ ಅವಶೇಷಗಳು ತಿಳಿಸುತ್ತವೆ.ಇಂತಹ ಕೋಟೆ ನಿರ್ಮಿಸಿದ ಕೀರ್ತಿ ಅಲ್ಲಿ ಮೊದಲು ಆಳ್ವಿಕೆ ಮಾಡಿದ ನೊಳಂಬ ಪಲ್ಲವರಿಗೆ ಸಲ್ಲುತ್ತದೆ. ಅವರಿಂದ ನಿರ್ಮಿತವಾದ ಕೋಟೆ ಕಾಲಕಾಲಕ್ಕೆ ವಿಸ್ತಾರವಾಗಿ ವಿಜಯನಗರದ ಕಾಲದಲ್ಲಿ ಬಲವಾದ ಕೋಟೆಯಾಗಿ ಮಾರ್ಪಟ್ಟಿತು. ಇಂತಹ ಕೋಟೆಯೊಳಗೆ ಇಂದಿಗೂ ಅನೇಕ ಅವಶೇಷಗಳನ್ನು ನೋಡಬಹುದು.ನಿಡಗಲ್ ಹಿಂದೆ ಒಂದು ಪಾಳೆಯ ಪಟ್ಟವಾಗಿತ್ತು. ನಿಡಗಲ್‌ಗೆ ರಕ್ಷಣೆಯಾಗಿ ಹಲವು ಸುತ್ತು ಹಾಗೂ ಸಾಲು ಸಾಲು ಕೋಟೆ ಗೋಡೆಗಳಿವೆ. ಇದಕ್ಕೆ ಮಾತನೂರು ಬಾಗಿಲು, ಸಿಂಗಾರದ ಬಾಗಿಲು, ಸಿಂಹಲಯ್ಯನ ಬಾಗಿಲು, ದಿಡ್ಡಿ ಬಾಗಿಲು ಎಂಬ ದ್ವಾರಗಳಿಗೆ.ನೊಳಂಬರು, ಚೋಳರು ಹಾಗೂ ಚಾಲುಕ್ಯರ ಪ್ರತಿನಿಧಿಗಳು ಹಾಗೂ ಸಾಮಂತರ ವಶದಲ್ಲಿದ್ದ ದುರ್ಗವನ್ನು ಹೊಯ್ಸಳರ ದೊರೆ ಇಮ್ಮಡಿ ಬಲ್ಲಾಳ ತನ್ನ ಕೈವಶ ಮಾಡಿಕೊಂಡ.  ವಿಜಯನಗರದ ಅರಸರ ಕಾಲದಲ್ಲಿ ತಿಪ್ಪರಾಜನ ವಂಶಸ್ಥರು ಪಾಳೆಯಗಾರರಾಗಿ ಆಳಿದರು.

ನಂತರ 1761ರಲ್ಲಿ ಇದು ಹೈದರ್ ಆಲಿಯ ವಶವಾಯಿತು ಎನ್ನುತ್ತದೆ ಇತಿಹಾಸ. ಈ ದುರ್ಗವನ್ನು ಅಷ್ಟ ಗಣಪತಿ, ಅಷ್ಟ ದುರ್ಗೆಯರು ಹಾಗೂ ಅಷ್ಟ ಭೈರವರು ರಕ್ಷಿಸುತ್ತಿದ್ದರು ಎಂದು ಶಾಸನಗಳಲ್ಲಿ ಉಲ್ಲೇಖವಿದೆ.ಇಲ್ಲಿರುವ ರಾಮತೀರ್ಥದಲ್ಲಿ ಭಕ್ತರು ಮಿಂದು ದೇವರ ದರ್ಶನ ಮಾಡುತ್ತಾರೆ. ಶ್ರೀರಾಮನು ವನವಾಸ ಕಾಲದಲ್ಲಿ ಇಲ್ಲಿಗೆ ಬಂದಿದ್ದನೆಂದು ಹೇಳಲಾಗುತ್ತದೆ. ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಕಷ್ಟಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆ.ಪಾವಗಡದಿಂದ ನಿಡಗಲ್ ಬೆಟ್ಟಕ್ಕೆ ರಸ್ತೆ ಇದೆ. ಅರಣ್ಯ ಇಲಾಖೆಯ ವಸತಿ ಗೃಹವಿದೆ. ಸುಂದರ ಗುಡ್ಡ ಪ್ರದೇಶ ಹಾಗೂ ಅರಣ್ಯವನ್ನು ಹೊಂದಿರುವ ಇಲ್ಲಿ ವನ್ಯಜೀವಿಗಳನ್ನೂ ನೋಡಬಹುದು. ನವಿಲುಗಳು ಹೇರಳವಾಗಿವೆ.ಜೈನ ಧರ್ಮಕ್ಕೆ ಪ್ರಾಶಸ್ತ್ಯ

ಮುಖ್ಯವಾದ ಅಂಶವೇನೆಂದರೆ ನಿಡಗಲ್ ಜೈನರ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ನಿಡಗಲ್‌ನ ಪ್ರಾಚೀನ ಜೈನ ಬಸದಿಯ ಪುನರ್‌ನವೀಕರಣ ಕಾರ್ಯ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ನಿಡಗಲ್ ಅರಸರು ಅನೇಕ ಧರ್ಮಗಳಿಗೆ ಆಸರೆ ಒದಗಿಸಿದ್ದು, ಪ್ರಮುಖವಾಗಿ ಶೈವ ಹಾಗೂ ಬ್ರಾಹ್ಮಣ ಮತ್ತು ಜೈನ ಸಂಪ್ರದಾಯಗಳು ಅತಿ ಹೆಚ್ಚು ಪ್ರಭಾವ ಹೊಂದಿದ್ದವು ಎಂಬುದಕ್ಕೆ ಅನೇಕ ಪುರಾವೆಗಳು ದೊರೆತಿವೆ.ದೇವಾಲಯಗಳು ಕಾಲನ ದಾಳಿಗೆ ತುತ್ತಾಗಿ ಕೆಲವು ಹಾಳಾಗಿದ್ದರೆ, ಮತ್ತೆ ಕೆಲವು ಸ್ಮಾರಕಗಳು ನಿಧಿಗಳ್ಳರ ದುರಾಸೆಗೆ ಸಿಕ್ಕಿ ಬುಡಮೇಲೂ ಆಗಿವೆ. ಜೈನ ಧರ್ಮಕ್ಕೆ ನಿಡಗಲ್‌ನ ಅರಸರು ಹೆಚ್ಚಿನ ಪ್ರೋತ್ಸಾಹ ನೀಡಿದ್ದರು ಎಂದು ಇತಿಹಾಸ ಹೇಳುತ್ತದೆ.ಇಷ್ಟೆಲ್ಲಾ ಇತಿಹಾಸ ಇರುವುದರಿಂದಲೇ ಏನೋ ನಿಡಗಲ್ ಬೆಟ್ಟದಲ್ಲಿ ನಿಧಿಗಳ್ಳರ ಹಾವಳಿ ಹೆಚ್ಚಾಗಿದೆ. ಅದಕ್ಕೆ ಸಾಕ್ಷಿಯೆಂಬಂತೆ ಅಲ್ಲಲ್ಲಿ ವೀರಗಲ್ಲುಗಳು, ಶಾಸನಗಳ ಬಳಿ ತೋಡಿರುವ ಹಳ್ಳಗಳು ಕಾಣುತ್ತವೆ. ಬಹುಶಃ ನಿಧಿಯ ಆಸೆಗಾಗಿ ಕಳ್ಳರು ಅಲ್ಲಿನ ಪ್ರಾಚೀನ ವಸ್ತುಗಳನ್ನು ಭಗ್ನಗೊಳಿಸಿರಬಹುದು.ಸ್ಥಳೀಯ ಸ್ನೇಹಿತರು ಹೇಳುವ ಪ್ರಕಾರ ಅಮಾವಾಸ್ಯೆ ಹುಣ್ಣೆಮೆಯಂದು ನಿಧಿಗಳ್ಳರ ಹಾವಳಿ ಹೆಚ್ಚಾಗಿರುತ್ತದಂತೆ. ಈ ಐತಿಹಾಸಿಕ ನಿಡಗಲ್ ದುರ್ಗದಿಂದ ಚಿತ್ರದುರ್ಗಕ್ಕೆ ಸುರಂಗ ಮಾರ್ಗವಿತ್ತೆಂದು ಹೇಳಲಾಗುತ್ತದೆ. ಅದಕ್ಕೆ ಸಾಕ್ಷಿಯಾಗಿ ಅಲ್ಲೊಂದು ಸುರಂಗ ಮಾರ್ಗವೂ ಇದೆ.ಶ್ರಾವಣ ಮಾಸದಲ್ಲಿ ಇಲ್ಲಿನ ದೇವಾಲಯಕ್ಕೆ ಭಕ್ತರ ದಂಡೇ ಆಗಮಿಸುತ್ತದೆ. ಇಂತಹ ಇತಿಹಾಸ ಪ್ರಸಿದ್ಧ ನಿಡಗಲ್ ದುರ್ಗದ ಬಗ್ಗೆ ಪ್ರವಾಸೋದ್ಯಮ ಇಲಾಖೆ ಗಮನ ಹರಿಸದೇ ಇರುವುದು ಬೇಸರದ ಸಂಗತಿ.ಪ್ರವಾಸಿಗರಿಗಿಷ್ಟು ಮಾಹಿತಿ: ಇನ್ನು ನಿಡಗಲ್ ದುರ್ಗದಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಅರಣ್ಯ ಇಲಾಖೆಯ ವಸತಿಗೃಹವಿದೆ. ಅರಣ್ಯ ಇಲಾಖೆಯಲ್ಲಿ ಸಂಪರ್ಕಿಸಿ ಕ್ಯಾಂಪ್ ಮಾಡಿಯೂ ಉಳಿಯಬಹುದು.

ಊಟ ಉಪಹಾರಕ್ಕೆ ಮಾತ್ರ ಜೊತೆಯಲ್ಲಿಯೇ ಒಯ್ಯುವುದು ಉತ್ತಮ. ಆದರೆ ಜೊತೆಯಲ್ಲಿ ಒಯ್ದ ಉಪಹಾರ, ನೀರಿನ ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಎಸೆದು ಪ್ರಕೃತಿಯ ನಿಸರ್ಗ ಸೌಂದರ್ಯವನ್ನು ಹಾಳು ಮಾಡದಿದ್ದರೆ ಈ ಚೆಲುವು ಇನ್ನಷ್ಟು ಮೆರಗು ಪಡೆಯುವುದರಲ್ಲಿ ಸಂದೇಹವೇ ಇಲ್ಲ.ಹೋಗುವುದು ಹೇಗೆ: ಬೆಂಗಳೂರಿನಿಂದ ಹೋಗುವುದಾದರೆ ಮಧುಗಿರಿ-ಪಾವಗಡದ ಮಾರ್ಗವಾಗಿ ಸುಮಾರು 180 ಕಿ.ಮೀ. ಸಾಗಿದರೆ ಸಿಗುತ್ತದೆ ನಿಡಗಲ್ ದುರ್ಗ. ತುಮಕೂರಿನಿಂದ ಹೋಗುವುದಾದರೆ ಮಧುಗಿರಿಯ ಮೂಲಕ ಸುಮಾರು 120 ಕಿ.ಮೀ ಸಾಗಬೇಕು. ಖಾಸಗಿ ವಾಹನಗಳಲ್ಲಿ ಹೋಗುವುದು ಅನುಕೂಲ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.