ನಾನು ಈ ಹಿಂದೆ ಢಾಕಾದಲ್ಲಿ ಇದ್ದಾಗ ನನ್ನ ಮಗನನ್ನು ಕಾರಿನಲ್ಲಿ ಪ್ರತಿ ಮಧ್ಯಾಹ್ನ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದೆ. ‘ನಾವು ಹೋಲಿಗೆ ಹೋಗೋಣ’ ಎಂದು ಹಿಂದಿನ ಸೀಟಿನಲ್ಲಿ ಕೂರುತ್ತಿದ್ದ ಮಗ ಹೇಳುತ್ತಿದ್ದ. ಆಗ ಕೇವಲ ಎರಡು ವರ್ಷ ಹಳೆಯದಾಗಿದ್ದ ಹೋಲಿ ಆರ್ಟಿಸನ್ ಬೇಕರಿ ನಮ್ಮ ಪಾಲಿಗೆ ಅಚ್ಚುಮೆಚ್ಚಿನ ಸ್ಥಳವಾಗಿತ್ತು.

ಅಲ್ಲಿ ಸಿಗುತ್ತಿದ್ದ ಕೇಕ್ ತುಂಬಾ ರುಚಿಕರ ಆಗಿರುತ್ತಿತ್ತು. ನಮ್ಮ ಮನೆಗೆ ಹತ್ತಿರದ, ಹುಲ್ಲುಹಾಸು ಇದ್ದ ಸ್ಥಳ ಅದೊಂದೇ ಆಗಿತ್ತು. ಅಲ್ಲಿಗೆ ಹೋಗುವಾಗಲೆಲ್ಲ ನಾವು ಚಿಕ್ಕ ಗಾತ್ರದ ಫುಟ್ಬಾಲ್ ಕೊಂಡೊಯ್ಯುತ್ತಿದ್ದೆವು. ಹತ್ತಿರದ ಕೆರೆಯ ಸೊಳ್ಳೆಗಳು ದಾಳಿ ಇಡಲು ಆರಂಭಿಸುವವರೆಗೆ ಅಲ್ಲಿನ ಹುಲ್ಲುಹಾಸಿನಲ್ಲಿ ಕಾಲ ಕಳೆಯುತ್ತಿದ್ದೆವು.

ಬೇಕರಿ ಆರಂಭವಾದಾಗ ಅಲ್ಲಿ ಸಿಗುತ್ತಿದ್ದದ್ದು ಕೇಕ್ ಮತ್ತು ಪೇಸ್ಟ್ರಿ ಮಾತ್ರ. ನಂತರ ಅಲ್ಲಿ ಸಿಗುತ್ತಿದ್ದ ಬೆಣ್ಣೆ ಸವರಿದ ಬ್ರೆಡ್ಡಿನ ಸುರುಳಿ ಕೊಳ್ಳಲು ಏನಾದರೂ ಅಡ ಇಡಬೇಕಾಗುತ್ತದೆ ಎಂದು ನಾನು, ನನ್ನ ಪತಿ ಹಾಸ್ಯ ಮಾಡುತ್ತಿದ್ದೆವು. ಅಷ್ಟು ದುಬಾರಿ ಆಗಿತ್ತದು. ಆದರೆ, ಅಲ್ಲಿ ಸಿಗುತ್ತಿದ್ದ ಸೂರ್ಯರಶ್ಮಿ, ಬಯಲು ಮತ್ತು ಗುಲ್ಷನ್ ಕೆರೆಯ ನೋಟ ನಮ್ಮನ್ನು ಮತ್ತೆ ಮತ್ತೆ ಅಲ್ಲಿಗೆ ಸೆಳೆಯುತ್ತಿತ್ತು.

ಕುಟುಂಬದ ಸದಸ್ಯರು ಕಾಲ ಕಳೆಯಲು ಉತ್ತಮ ಸ್ಥಳ ಎಂಬ ಹೆಸರು ಸಂಪಾದಿಸಿದ ನಂತರ ಈ ಬೇಕರಿಯವರು ಪಿಜ್ಜಾ, ಇಟಲಿ ಐಸ್‌ಕ್ರೀಂ, ಸ್ಪೇನ್‌ನ ತಿನಿಸುಗಳನ್ನು ಮಾರಲು ಆರಂಭಿಸಿದರು.

ಈ ತಿಂಡಿ–ತಿನಿಸುಗಳು, ಅಲ್ಲಿನ ಹುಲ್ಲುಹಾಸು ಆ ಶುಕ್ರವಾರದ (01/07/2016) ಸಂಜೆ ಅಲ್ಲಿಗೆ ದೊಡ್ಡ ಸಂಖ್ಯೆಯ ಜನರನ್ನು ಸೆಳೆದಿದ್ದವು. ಬಾಂಗ್ಲಾದೇಶಿಯರ ಜೊತೆ ಅಲ್ಲಿ ವಿದೇಶಿಯರೂ ಇದ್ದರು. ರಾತ್ರಿ 8.45ರ ಸುಮಾರಿಗೆ ಅಲ್ಲಿಗೆ ನುಗ್ಗಿದ ಶಸ್ತ್ರಸಜ್ಜಿತ ಉಗ್ರರು, ಊಟ ಮಾಡುತ್ತಿದ್ದ ಇಪ್ಪತ್ತಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡರು.

ಪೊಲೀಸರು ಅಲ್ಲಿಗೆ ತಕ್ಷಣ ಬಂದರು. ಆದರೆ ರೆಸ್ಟೊರೆಂಟ್ ಪ್ರವೇಶಿಸಲು ಯತ್ನಿಸಿದಾಗ ಗುಂಡು, ಗ್ರೆನೇಡುಗಳ ಭಾರಿ ದಾಳಿಯನ್ನು ಅವರು ಎದುರಿಸಬೇಕಾಯಿತು. ಇಬ್ಬರು ಅಧಿಕಾರಿಗಳು ಮೃತಪಟ್ಟರು, ಹಲವರು ಗಾಯಗೊಂಡರು.

ಆ ರಾತ್ರಿ, ಒತ್ತೆಯಾಳುಗಳ ಕುಟುಂಬದ ಸದಸ್ಯರು ತಮ್ಮವರ ಕ್ಷೇಮಕ್ಕಾಗಿ ರೆಸ್ಟೊರೆಂಟ್‌ನ ಹೊರಗಡೆ ಪ್ರಾರ್ಥಿಸುತ್ತಿದ್ದಾಗ, ಗುಂಡಿನ ಮೊರೆತ ಆಗಾಗ ಕೇಳಿಸುತ್ತಿತ್ತು. ಇತ್ತ ಭಯೋತ್ಪಾದಕರು, ಕೊಲ್ಲುವ ಉದ್ದೇಶದಿಂದ ಒತ್ತೆಯಾಳುಗಳ ಪೈಕಿ ವಿದೇಶಿಯರನ್ನು ಮಾತ್ರ ಪ್ರತ್ಯೇಕಿಸುತ್ತಿದ್ದರು.

ಭಯೋತ್ಪಾದಕರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ಆರಂಭವಾಗಿ 12 ಗಂಟೆ ಕಳೆದಿತ್ತು. ಬೆಳಕು ಹರಿಯಲು ಆರಂಭವಾಗಿತ್ತು. ಈ ಹೊತ್ತಿನಲ್ಲಿ ಭದ್ರತಾ ಸಿಬ್ಬಂದಿ ಒತ್ತೆ ಪ್ರಕರಣಕ್ಕೆ ಅಂತ್ಯ ಕಾಣಿಸಿದರು. ರೆಸ್ಟೊರೆಂಟ್ ಒಳಗೆ ಭದ್ರತಾ ಸಿಬ್ಬಂದಿಗೆ 20 ಮೃತದೇಹಗಳು ಸಿಕ್ಕವು. 13 ಒತ್ತೆಯಾಳುಗಳು ಕಂಡರು. ಮೃತರಲ್ಲಿ ಒಂಬತ್ತು ಜನ ಇಟಲಿಯವರು, ಜಪಾನಿನ ಏಳು ಜನ, ಅಮೆರಿಕ ಮತ್ತು ಭಾರತದ ತಲಾ ಒಬ್ಬರು ಮತ್ತು ಬಾಂಗ್ಲಾದೇಶದ ಇಬ್ಬರು ಸೇರಿದ್ದಾರೆ ಎಂಬುದು ಪೊಲೀಸರು ನೀಡಿರುವ ಮಾಹಿತಿ.

ಅಲ್ಲಿ ಅಂದು ನಡೆದಿದ್ದೇನು ಎಂಬ ಬಗ್ಗೆ ವರದಿಗಳು ಇನ್ನೂ ಬರುತ್ತಿವೆ. ಬಾಂಗ್ಲಾದೇಶಿ ಒತ್ತೆಯಾಳುಗಳನ್ನು ಬಿಟ್ಟುಬಿಡಲಾಗುತ್ತದೆ ಎಂದು ಉಗ್ರರು ಭರವಸೆ ನೀಡಿದ್ದರು ಎಂದು ಕೆಲವರು ಹೇಳಿದ್ದಾರೆ. ತಮ್ಮ ಪ್ರಾಣ ಉಳಿಸಿಕೊಳ್ಳಲು ಒತ್ತೆಯಾಳುಗಳು ಕುರ್‌ಆನ್ ಪಠಿಸಬೇಕಿತ್ತು ಎಂಬ ವರದಿಗಳಿವೆ.

ದೂರವಾಣಿ ಕರೆ ಮಾಡಲು ರೆಸ್ಟೊರೆಂಟ್‌ನ ಉದ್ಯಾನಕ್ಕೆ ಹೋಗಿದ್ದ ಇಟಲಿಯ ಉದ್ಯಮಿಯೊಬ್ಬರು ಅಲ್ಲಿನ ಗಿಡಗಳ ಹಿಂದೆ ಅಡಗಿಕೊಂಡರು. ನಂತರ ಅಲ್ಲಿಂದ ತಪ್ಪಿಸಿಕೊಂಡರು. ಆದರೆ, ಒಳಗಡೆಯೇ ಇದ್ದ ಅವರ ಪತ್ನಿ ಉಗ್ರರ ಕೈಯಲ್ಲಿ ಹತರಾದರು ಎಂದು ಭಾರತೀಯ ಪತ್ರಿಕೆಯೊಂದು ವರದಿ ಮಾಡಿದೆ.

ಆದರೆ, ಇಲ್ಲಿ ಫರಾಜ್ ಅಯಾಜ್ ಹುಸೇನ್ ಎಂಬ ಯುವಕ ತೋರಿದ ಧೈರ್ಯ ಇತರರ ಅನುಭವಗಳಿಗಿಂತ ಪ್ರತ್ಯೇಕವಾಗಿ ನಿಲ್ಲುತ್ತದೆ. 20 ವರ್ಷ ವಯಸ್ಸಿನ, ಬಾಂಗ್ಲಾ ಪ್ರಜೆ ಹುಸೇನ್ ಅವರು ಅಲ್ಲಿಗೆ ತರುಷಿ ಜೈನ್ ಮತ್ತು ಅಬಿಂತಾ ಕಬೀರ್ ಜೊತೆ ಊಟ ಮಾಡಲು ಹೋಗಿದ್ದರು. ಕಬೀರ್ ಅಮೆರಿಕದ ಪ್ರಜೆ. ಹುಸೇನ್ ಮತ್ತು ಕಬೀರ್ ಅಮೆರಿಕದ ಅಟ್ಲಾಂಟದ ಎಮೊರಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಭಾರತದ ತರುಷಿ ಜೈನ್, ಬರ್ಕಲಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಅಲ್ಲಿದ್ದ ಕೆಲವರ ಪ್ರಕಾರ, ಹುಸೇನ್ ಅವರು ಬಾಂಗ್ಲಾ ಪ್ರಜೆ ಎಂದು ಗೊತ್ತಾದಾಗ ಅವರನ್ನು ಬಿಟ್ಟುಬಿಡಲು ಉಗ್ರರು ಮುಂದಾದರು. ಆದರೆ, ತಮ್ಮ ಇಬ್ಬರು ಸ್ನೇಹಿತರನ್ನು ಬಿಟ್ಟುಹೋಗಲು ಹುಸೇನ್ ಒಪ್ಪಲಿಲ್ಲ. ಉಗ್ರರನ್ನು ಕೊಂದು ಭದ್ರತಾ ಸಿಬ್ಬಂದಿ ರೆಸ್ಟೊರೆಂಟ್ ಆವರಣ ಪ್ರವೇಶಿಸಿದಾಗ, ಅಲ್ಲಿ ಹುಸೇನ್, ತರುಷಿ ಮತ್ತು ಕಬೀರ್ ಅವರ ಮೃತದೇಹಗಳು ಇದ್ದವು. ಹುಸೇನ್ ಅವರು ಉಗ್ರರ ಜೊತೆ ಕಾದಾಡಿದ್ದ ಗುರುತಾಗಿ ದೇಹದ ಮೇಲೆ ಗಾಯಗಳಿದ್ದವು.

ಒತ್ತೆ ಪ್ರಕರಣ ಅಂತ್ಯಗೊಂಡು ನನ್ನ ಕುಟುಂಬದ ಸದಸ್ಯರಿಗೆ ಭಾವುಕವಾಗಿ ಕೆಲವು ಕರೆಗಳನ್ನು ಮಾಡಿದ ನಂತರ ಹಾಗೂ ಎಸ್‌ಎಂಎಸ್ ಸಂದೇಶ ಕಳುಹಿಸಿದ ಬಳಿಕ ನಾವು ನಮ್ಮ ರಾಜಧಾನಿಯಲ್ಲಿ ನಡೆದ ಹತ್ಯಾಕಾಂಡದ ಬಗ್ಗೆ ಆಲೋಚಿಸಿದೆವು. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಆಗಿರುವ ನಷ್ಟ ಊಹೆಗೆ ನಿಲುಕದ್ದು, ಸರಿಪಡಿಸಲಾಗದ್ದು.

ಇತರರ ಪಾಲಿಗೆ ಇದ್ದದ್ದು, ಅಂದರೆ ನಮಗೆ, ಹೊಸದೊಂದು ಜಗತ್ತಿಗೆ ಹೊಂದಿಕೊಳ್ಳುವುದು ಹೇಗೆ ಎಂಬ ಚಿಂತೆ. ನಮ್ಮ ನಗರ, ನಮ್ಮ ದೇಶ ಇನ್ನು ಮುಂದೆ ಮೊದಲಿನಂತೆ ಇರುವುದಿಲ್ಲ ಎಂಬುದು ನಮಗೆ ಗೊತ್ತಿದೆ. ಅಧಿಕಾರದಲ್ಲಿ ಇರುವವರು ನೀಡುವ ಭರವಸೆಗಳು ತೀರಾ ಅಲ್ಪ ಎಂಬುದು ಗೊತ್ತಿದೆ.

ಈ ಕೊಲೆಗಡುಕ ಭಯೋತ್ಪಾದಕರ ಎದುರು, ಕಳೆದ ತಿಂಗಳು ಪೊಲೀಸರು ನಡೆಸಿದ, ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆ ಎನ್ನಲಾದ 11 ಸಾವಿರಕ್ಕೂ ಹೆಚ್ಚು ಜನರ ಬಂಧನ ನಿರ್ವೀರ್ಯದ ಕೆಲಸ ಎಂಬಂತೆ ಕಾಣಿಸುತ್ತದೆ. ಈಗ ಎದುರಾಗಿರುವ ಅಪಾಯವನ್ನು ಎದುರಿಸಲು ಸರ್ಕಾರವು ವಿರೋಧ ಪಕ್ಷಗಳ ಜೊತೆ ರಾಜಿಗೆ ಮುಂದಾಗುತ್ತದೆ ಎಂದು ಆಶಿಸುತ್ತೇವೆ.

ಆದರೆ ಢಾಕಾ ಈಗ ಎದುರಿಸುತ್ತಿರುವ ಸ್ಥಿತಿಯು ನಿರಂಕುಶ ಪ್ರಭುತ್ವವನ್ನು ಇನ್ನಷ್ಟು ಉದ್ರೇಕಿಸಲು, ಕಣ್ಗಾವಲನ್ನು ತೀವ್ರವಾಗಿಸಲು ಕಾರಣವಾಗುತ್ತದೆ ಎಂಬ ಭೀತಿ ನಮಗಿದೆ.

ಉಗ್ರರು ಬಡತನ ಅಥವಾ ದುರ್ಬಲ ಕುಟುಂಬಗಳ ಹಿನ್ನೆಲೆಯಿಂದ ಬಂದವರಲ್ಲ ಎಂಬುದನ್ನು ವರದಿಗಳು ಹೇಳುತ್ತಿವೆ. ಅವರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿದ್ದರು, ಸ್ಥಿತಿವಂತ ಕುಟುಂಬಗಳಿಂದ ಬಂದಿದ್ದರು. ಆ ರೆಸ್ಟೊರೆಂಟ್‌ನಲ್ಲಿ ಇದ್ದ ಕೆಲವರ ಜೊತೆ ಸ್ನೇಹ ಸಂಪಾದಿಸಬಲ್ಲವರಾಗಿದ್ದರು. ಈ ಕೊಲೆಗಡುಕರಿಗೆ ಜೀವನದಲ್ಲಿ ಎಲ್ಲವೂ ಸಿಕ್ಕಿತ್ತು. ಆದರೂ ಅವರು ಎಲ್ಲ ನೈತಿಕ ಮೌಲ್ಯಗಳನ್ನು ಬದಿಗಿಟ್ಟು ಇಂಥ ಮಾರ್ಗ ತುಳಿದರು.

ನಾವು ಈಗ ಈ ತೀರ್ಮಾನಕ್ಕೆ ಬರಬಹುದು: ನಮ್ಮ ದೇಶದ ಬಗ್ಗೆ ನಾವು ಬಹುಕಾಲದಿಂದ ಕೇಳಿಸಿಕೊಂಡು ಬಂದಿರುವ ಕತೆ ಸತ್ಯವಾಗಿರಲಿಕ್ಕಿಲ್ಲ. ಬರಹಗಾರರು, ಬ್ಲಾಗರ್‌ಗಳು, ಪ್ರಕಾಶಕರು, ಸಲಿಂಗಕಾಮಿಗಳ ಹಕ್ಕುಗಳ ಪರ ಹೋರಾಡುವವರು, ಹಿಂದೂ ಅರ್ಚಕರು ಮತ್ತು ವಿದೇಶಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ನಡೆದ ಕೊಲೆಗಳನ್ನು ಮುಂದಿಟ್ಟುಕೊಂಡು ಬಾಂಗ್ಲಾದೇಶವನ್ನು ಉಗ್ರಗಾಮಿಗಳು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎನ್ನಲು ಸಾಧ್ಯವಿಲ್ಲ ಎಂಬ ಮಾತುಗಳನ್ನು ನಾನು ಮತ್ತು ನನ್ನ ಕೆಲವು ಬಾಂಗ್ಲಾದೇಶಿ ಸ್ನೇಹಿತರು ನಂಬಬೇಕಿತ್ತು.

ಕಾಲ ಕಳೆದಂತೆ ಪರಿಸ್ಥಿತಿ ಸಹಜವಾಗುತ್ತದೆ ಎಂದು ನಾವು ನಂಬಿದ್ದೆವು. ಬಾಂಗ್ಲಾದೇಶವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿ, ಜಾತ್ಯತೀತ ಸಂವಿಧಾನ ನಂಬಿ, ಸಾಮಾಜಿಕ ನ್ಯಾಯ, ಬಹುತ್ವದ ಪರಂಪರೆಯಲ್ಲಿ ಮುಂದುವರಿಯಲಿದೆ ಎಂದು ನಂಬಿದ್ದೆವು.

ಶ್ರೀಮಂತರು ದೊಡ್ಡ ಗೇಟುಗಳನ್ನು ನಿರ್ಮಿಸಿಕೊಂಡು ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಾರೆ. ಬೇರೆ ಬೇರೆ ದೇಶಗಳು ತಮ್ಮ ಪ್ರಜೆಗಳು ಬಾಂಗ್ಲಾದೇಶಕ್ಕೆ ಭೇಟಿ ನೀಡದಂತೆ ಎಚ್ಚರಿಕೆ ನೀಡುತ್ತವೆ ಹಾಗೂ ತಮ್ಮ ರಾಯಭಾರ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುತ್ತವೆ ಮತ್ತು ಅಮೆರಿಕವು ತನ್ನ ಡ್ರೋನ್ ಬಳಸಿ ಉಗ್ರರ ಮೇಲೆ ದಾಳಿ ನಡೆಸುವಂತಹ ಸ್ಥಿತಿ ಬರುತ್ತದೆ ಎಂಬುದನ್ನು ನಾವು ನಂಬಲಿಲ್ಲ.

ಈ ಹಂತದಲ್ಲಿ ನಾನು ಕಾಳಜಿ, ಸಂತಾಪ ವ್ಯಕ್ತಪಡಿಸುತ್ತಿರುವುದು ನನ್ನ ನಗರದ ಬಗ್ಗೆ, ನನ್ನ ಮಗ ಫುಟ್ಬಾಲ್ ಆಡುವುದನ್ನು ಕಲಿತ ರೆಸ್ಟೊರೆಂಟ್‌ನಲ್ಲಿ ನಡೆದ ಘರ್ಷಣೆಯಲ್ಲಿ ಜೀವ ಕಳೆದುಕೊಂಡವರಿಗೆ, ಕ್ರೂರವಾಗಿ ಕೊಲೆಗೀಡಾದ ನನ್ನ ಪ್ರೌಢಶಾಲೆಯ ಮೂವರು ಮಕ್ಕಳಿಗಾಗಿ ಮಾತ್ರ. ನನ್ನ ದೇಶದ ಮೂಲಭೂತ ಸಂಗತಿಗಳ ಬಗ್ಗೆ ನನಗೆ ಮುಂದೊಂದು ದಿನ ಅರಿವಾಗಬಹುದು. ಆದರೆ ಈಗ ನಾನು, ನಾವು ಕಳೆದುಕೊಂಡಿರುವ ಸಂಗತಿಗಳ ಬಗ್ಗೆ ಮರುಗಬಲ್ಲೆ, ಅಷ್ಟೆ.

(ಲೇಖಕಿ ಕಾದಂಬರಿಕಾರ್ತಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.