ಶುಕ್ರವಾರ, ಏಪ್ರಿಲ್ 3, 2020
19 °C

ಇನ್ನು ಶಾಲೆಯಲ್ಲಿ ವೃತ್ತಿ ಶಿಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ನಮ್ಮ ದೇಶದಲ್ಲಿ ಒಂದೆಡೆ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನೊಂದೆಡೆ ನಿರುದ್ಯೋಗದ ಕೂಗಿನ ಆರ್ಭಟವೂ ಪ್ರಬಲವಾಗುತ್ತಿದೆ. ಒಂದು ಅಂದಾಜಿನ ಪ್ರಕಾರ 8 ಕೋಟಿ ದುಡಿಯುವ ವಯಸ್ಸಿನ ಯುವಕರಿಗೆ ಉದ್ಯೋಗ ಕೌಶಲವೇ ಗೊತ್ತಿಲ್ಲ.ಸರ್ವ ಶಿಕ್ಷಣ ಅಭಿಯಾನ, ಗುಣಮಟ್ಟದ ಶಿಕ್ಷಣ, ಇನ್ನೊಂದು ಮತ್ತೊಂದು ಎಂದು ಸರ್ಕಾರಗಳು ಕೋಟಿಗಟ್ಟಲೆ ಹಣ ಚೆಲ್ಲಿದರೂ ಅಕ್ಷರವನ್ನು ಮಾತ್ರ ಕಲಿತ ವಿದ್ಯಾವಂತರು ಉದ್ಯೋಗ ಮಾರುಕಟ್ಟೆಯಲ್ಲಿ ಏಕೆ ಕಂಗಾಲಾಗುತ್ತಿದ್ದಾರೆ ? ಎಂಬ ಪ್ರಶ್ನೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ.2020ರ ವೇಳೆಗೆ ದೇಶದಲ್ಲಿ ದುಡಿಯುವ ವಯಸ್ಸಿನ ಯುವ ಜನರ ಸಂಖ್ಯೆ 12 ಕೋಟಿ ತಲುಪಲಿದೆ. ಇದು ಜಾಗತಿಕ ಮಟ್ಟದಲ್ಲಿ ದುಡಿಯುವ ವರ್ಗದ ಪ್ರಮಾಣದ ಶೇ.28 ರಷ್ಟು. ಸಮೀಪದ ಸ್ಪರ್ಧಿ ಚೀನಾ ದೇಶ್ದ್ದದು ಕೇವಲ ಶೇ.5ರಷ್ಟು ಮಾತ್ರ. ಹೀಗಾಗಿಯೇ ದೇಶದ ದುಡಿಯುವ ವರ್ಗಕ್ಕೆ ವೃತ್ತಿ ಕೌಶಲಗಳು ಅಗತ್ಯವಿವೆ. ಶಾಲಾ ಹಂತದಲ್ಲಿಯೇ ವೃತ್ತಿಪರ ಶಿಕ್ಷಣವು ಹಲವು ಸಕಾರಾತ್ಮಕ ಬೆಳವಣಿಗೆಗೆ ನಾಂದಿಯಾಗಲಿದೆ ಎನ್ನಲಾಗುತ್ತಿದೆ.

ಹರಿಯಾಣದ ಪ್ರಯೋಗಈ ಹಿನ್ನೆಲೆಯಲ್ಲಿ ಹರಿಯಾಣ ರಾಜ್ಯ ಕೈಗೊಂಡಿರುವ ವೃತ್ತಿ ಶಿಕ್ಷಣ ಪ್ರಯೋಗ ಎಲ್ಲರ ಗಮನ ಸೆಳೆಯುತ್ತಿದೆ. ವಾರದಲ್ಲಿ 6 ತರಗತಿಗಳನ್ನು ಭವಿಷ್ಯ ಬೆಳಗಿಸುವ ಕೌಶಲ ವೃದ್ಧಿಗೆ ಮೀಸಲಿಟ್ಟಿರುವುದು ವಿಶೇಷ. ಈ ತರಗತಿಗಳಲ್ಲಿ ಕಂಪ್ಯೂಟರ್ ತರಬೇತಿ, ಲೆಕ್ಕಪತ್ರ ನಿರ್ವಹಣೆ, ಹಣ್ಣು ಸಂರಕ್ಷಣೆ, ಬೇಕರಿ, ಚಾಕಲೇಟ್ ಮತ್ತು ಸಿಹಿ ತಿಂಡಿ ತಯಾರಿಕೆ, ಎಲೆಕ್ಟ್ರಾನಿಕ್ಸ್ ಯಂತ್ರಗಳ ಕಾರ್ಯ ನಿರ್ವಹಣೆ, ಆಟೊಮೊಬೈಲ್ ರಿಪೇರಿಯ ಮೂಲ ತತ್ವಗಳು, ಹೊಲಿಗೆ, ಮುದ್ರಣ ತಂತ್ರಜ್ಞಾನ ಕುರಿತು ತರಬೇತಿ ನೀಡಲಾಗುತ್ತಿದೆ.ಈ ಬೆಳವಣಿಗೆಯನ್ನು ಅತ್ಯಂತ ಎಚ್ಚರದಿಂದ ಗಮನಿಸುತ್ತಿರುವ ರಾಜ್ಯ ಸರ್ಕಾರವೂ 2012ರ ಶೈಕ್ಷಣಿಕ ವರ್ಷದಿಂದ 9ನೇ ತರಗತಿಗೆ ವೃತ್ತಿ ಶಿಕ್ಷಣವನ್ನು ಪಠ್ಯದ ಭಾಗವಾಗಿಸಲು ಸನ್ನದ್ಧವಾಗಿದೆ. ನಮ್ಮ ರಾಜ್ಯದ ಕೈಗಾರಿಕಾ ವಲಯ ಬಹುಹಿಂದಿನಿಂದಲೂ ಸರ್ಕಾರದ ಮುಂದೆ ಇಂಥ ಪ್ರಸ್ತಾವವನ್ನು ಇಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.ವೃತ್ತಿಶಿಕ್ಷಣ ಪಠ್ಯದಲ್ಲಿ ಏನೇನಿವೆ?

ರಾಜ್ಯ ಸರ್ಕಾರದ ಉದ್ದೇಶಿತ ವೃತ್ತಿ ಶಿಕ್ಷಣ ಪಠ್ಯಕ್ರಮದಲ್ಲಿ ಸಂವಹನ ಕಲೆ, ನಡವಳಿಕೆ, ಉದ್ಯೋಗ ಮಾಹಿತಿ, ಬುಕ್ ಬೈಂಡಿಂಗ್, ಟೈಪಿಂಗ್, ಹೊಲಿಗೆ, ಮರಗೆಲಸ ಇತ್ಯಾದಿ ವಿಷಯಗಳು ಸೇರ್ಪಡೆಯಾಗಲಿವೆ.ಉನ್ನತ ಶಿಕ್ಷಣ ಹಾಗೂ ಜೀವನದ ಗುರಿ ನಿರ್ಧರಿಸಿಕೊಳ್ಳಲು ನೆರವಾಗುವುದು, ವೃತ್ತಿ ಶಿಕ್ಷಣದ ಬಗ್ಗೆ ಆಸಕ್ತಿ ಹಾಗೂ ತಿಳಿವಳಿಕೆ ಮೂಡಿಸುವುದು, ಮಾರುಕಟ್ಟೆ ನಿಯಮಗಳ ಮೂಲ ಪರಿಕಲ್ಪನೆಯ ಅರಿವು, ಶ್ರಮ ಸಂಸ್ಕೃತಿಯನ್ನು ಬೆಳೆಸುವುದು ಪ್ರೌಢಶಾಲೆಯಲ್ಲಿ ವೃತ್ತಿ ಶಿಕ್ಷಣ ಜಾರಿ ಮಾಡುವ ಆಶಯಗಳು ರಾಜ್ಯ ಸರ್ಕಾರದ ನಿರ್ಧಾರದಲ್ಲಿ ಪ್ರತಿಫಲಿಸುತ್ತಿವೆ. ವೃತ್ತಿ ಶಿಕ್ಷಣದ ಕ್ರಮಬದ್ಧ ಅನುಷ್ಠಾನದಿಂದ ನಿರುದ್ಯೋಗ ಸಮಸ್ಯೆ ಶೇ.50ರಷ್ಟು ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.ಕಾಲಕಾಲಕ್ಕೆ ಅಪ್‌ಡೇಟ್ ಆಗದ ಪಠ್ಯಕ್ರಮದಿಂದ ಈಚಿನ ವರ್ಷಗಳವರೆಗೆ ಅಸ್ತಿತ್ವದಲ್ಲಿದ್ದ ಜೆಓಸಿ (ಜಾಬ್ ಓರಿಯೆಂಟೆಡ್ ಕೋರ್ಸ್) ವಿದ್ಯಾರ್ಥಿಗಳ ವಿಶ್ವಾಸ ಕಳೆದುಕೊಂಡಿತು. ಪ್ರೌಢಶಾಲೆಗಳಲ್ಲಿ ವೃತ್ತಿಶಿಕ್ಷಣ ಪ್ರಾರಂಭಿಸುವ ಸರ್ಕಾರದ ಕ್ರಮ ಶ್ಲಾಘನೀಯ ಎಂಬ ಮಾತುಗಳು ಕೇಳಿಬರುತ್ತಿವೆ.ಆದರೆ ಅದೇ ಉತ್ಸಾಹದಲ್ಲಿ ಶಿಕ್ಷಕರಿಗೆ ಪ್ರಚಲಿತ ವಿದ್ಯಮಾನದ ಸಕಾಲಿಕ ಮಾಹಿತಿ ಮತ್ತು ತರಬೇತಿ ನೀಡಬೇಕು. ವೃತ್ತಿ ಶಿಕ್ಷಣ ಪರಿಕಲ್ಪನೆ ಸೂಕ್ತ ರೀತಿಯಲ್ಲಿ ಜಾರಿಯಾದರೆ ಆಕರ್ಷಣೆ ಕಳೆದುಕೊಳ್ಳುತ್ತಿರುವ ಸರ್ಕಾರಿ ಶಾಲೆಗಳಿಗೆ,  ಇದೇ ಮಕ್ಕಳನ್ನು ಸೆಳೆಯುವ ಸಂಜೀವಿನಿ ಆಗಬಹುದೇನೊ ಎಂಬಂತಹ ವಿಶ್ಲೇಷಣೆ ಶಿಕ್ಷಣ ವಲಯದಲ್ಲಿ ಚಾಲ್ತಿಯಲ್ಲಿದೆ.

 

ಜರ್ಮನಿ, ಫಿನ್‌ಲ್ಯಾಂಡ್...

ಶಾಲಾ ಹಂತದಲ್ಲಿಯೇ ವೃತ್ತಿ ಶಿಕ್ಷಣ ನೀಡುವ ಪದ್ಧತಿ ಈಗಾಗಲೇ ಘಾನಾ, ಜರ್ಮನಿ, ಗ್ರೀಸ್, ಫಿನ್‌ಲ್ಯಾಂಡ್ ದೇಶಗಳಲ್ಲಿ ಜಾರಿಯಾಗಿದೆ. ಫಿನ್‌ಲ್ಯಾಂಡ್ ದೇಶದಲ್ಲಿ ಪ್ರತ್ಯೇಕ ವೃತ್ತಿಪರ ಶಾಲೆಗಳನ್ನೇ ತೆರೆಯಲಾಗಿದೆ.ಜರ್ಮನಿಯಲ್ಲಿ `ಬೆರುಶುಲೆ~ ಎಂಬ ಮಾದರಿ ಶಾಲೆಗಳಲ್ಲಿ ವಾರದಲ್ಲಿ ಒಂದು ದಿನ 45 ನಿಮಿಷ ಅವಧಿಯ ವಿಶೇಷ ವೃತ್ತಿಪರ ತರಬೇತಿ ನೀಡಲಾಗುತ್ತದೆ. ತಮ್ಮ ಆಸಕ್ತಿಯ ಕ್ಷೇತ್ರವನ್ನು ಬಹುಬೇಗನೇ ಗುರುತಿಸಿಕೊಳ್ಳುವ ವಿದ್ಯಾರ್ಥಿಗಳು ಅದೇ ವಿಷಯದಲ್ಲಿ ಉನ್ನತ ವಿದ್ಯಾಭ್ಯಾಸ ನಡೆಸಿ ಪಾರಂಗತರಾಗುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)