ಮಂಗಳವಾರ, ಮೇ 18, 2021
31 °C

ಇನ್ನೂ ಕಾಡುತ್ತಿದೆ ಆಘಾತ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): 2001ರಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟ ಭಾರತೀಯರ ಕುಟುಂಬಗಳು ಇನ್ನೂ ಆ ಆಘಾತದಿಂದ ಹೊರ ಬಂದಿಲ್ಲ.ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ ದಾಳಿಯಲ್ಲಿ ಸತ್ತ ಮೂರು ಸಾವಿರ ಜನರ ಪೈಕಿ ನ್ಯೂಜರ್ಸಿಯ ನಿವಾಸಿ ಅರ್ಜುನ್ ಮೀರ್‌ಪುರಿ ಅವರ 30 ವರ್ಷದ ಮಗ ರಾಜೇಶ್ ಸಹ ಒಬ್ಬರು.`ನನ್ನ ಮಗ ವಿಶ್ವ ವಾಣಿಜ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿರಲಿಲ್ಲ. ಬದಲಾಗಿ ಅಲ್ಲಿ ನಡೆಯುತ್ತಿದ್ದ ವಾಣಿಜ್ಯ ಪ್ರದರ್ಶನವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ. 9/11 ನಮ್ಮ ಜೀವನದ ಅತ್ಯಂತ ಕರಾಳ ದಿನಗಳಲ್ಲಿ ಒಂದು~ ಎಂದು ಮೀರ್‌ಪುರಿ ಅಂದಿನ ಕರಾಳ ದಿನವನ್ನು ಸ್ಮರಿಸುತ್ತಾರೆ.`ಘಟನೆ ನಡೆದು ದಶಕ ಉರುಳಿದ್ದರೂ ಸಹ ಮಗನನ್ನು ಕಳೆದುಕೊಂಡ ನೋವು ಕಡಿಮೆ ಆಗಿಲ್ಲ~ ಎಂದು ಮರುಗುತ್ತಾರೆ.`ಅಂದಿನ ಘಟನೆ ಅತ್ಯಂತ ಘೋರವಾದದ್ದು, ಅದು ನಡೆಯಬಾರದಿತ್ತು. ನಾವಿನ್ನೂ ಸಂಕಷ್ಟದಲ್ಲಿ ಇದ್ದೇವೆ. ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದೇವೆ~ ಎನ್ನುತ್ತಾರೆ. ತಮ್ಮ ಮಗನ ಸಾವಿನ ಹತ್ತನೇ ವಾರ್ಷಿಕೋತ್ಸವ ಅಂಗವಾಗಿ ಮೀರ್‌ಪುರಿ ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ವೈದ್ಯ ಡಾ.ಜಾನ್ ಮಥಾಯ್ ತಮ್ಮ ಕಿರಿಯ ಸಹೋದರನನ್ನು ಕಳೆದುಕೊಂಡಿದ್ದಾರೆ. ಘಟನೆ ನಡೆದು ದಶಕ ಗತಿಸಿದರೂ ಸಹ ಅವರು ತಮ್ಮ ವೇದನೆಯಿಂದ ಹೊರಬಂದಿಲ್ಲ.ವಾಣಿಜ್ಯ ಕಟ್ಟಡದಲ್ಲಿ ಸಭೆಯೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ತಂತ್ರಜ್ಞ ಜೋಸೆಫ್ ತಮ್ಮ ಪತ್ನಿ ತೆರೇಸಾ ಜತೆ ಕೊನೆಯದಾಗಿ ಮಾತನಾಡಿ, ಕಟ್ಟಡದಲ್ಲಿ ಹೊಗೆ ಬರುತ್ತಿದೆ. ಹೊರ ಹೋಗಲು ನೀಡುವ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದಿದ್ದರು. ಅವರು ಕಟ್ಟಡದಿಂದ ಹೊರ ಬರಲು ಸಾಧ್ಯವಾಗಲೇ ಇಲ್ಲ. ಈ ದುಃಖ ಪತ್ನಿಯನ್ನು ಇನ್ನೂ ಕಾಡುತ್ತಿದೆ.ಅಟಾರ್ನಿ ಉಮಾಂಗ್ ಶಾಸ್ತ್ರಿ ತಮ್ಮ ಸಹೋದರ ನೇಲ್‌ನನ್ನು ಕಳೆದುಕೊಂಡರು. ಕೇವಲ ಮೂರು ತಿಂಗಳ ಮೊದಲು ಅವರು ಮದುವೆಯಾಗಿದ್ದರು.ಈಗ ಅವರ ಕುಟುಂಬ ನೇಲ್ ಜಿ.ಶಾಸ್ತ್ರಿ ಫೌಂಡೇಷನ್ ಸ್ಥಾಪಿಸಿದೆ. ಇದರ ಉದ್ದೇಶ ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವುದು. ಇದುವರೆಗೆ 95 ಸಾವಿರ ಡಾಲರ್ ಹಣವನ್ನು ವಿವಿಧ ಸಂಘ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.