ಶನಿವಾರ, ಜೂನ್ 19, 2021
27 °C

ಇರಾನ್: ಮಾತುಕತೆಗೆ ಬಲಾಢ್ಯ ರಾಷ್ಟ್ರಗಳ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆಹರಾನ್ (ಎಪಿ): ಇರಾನ್ ಪರಮಾಣು ಕಾರ್ಯಕ್ರಮ ವಿವಾದ ಕುರಿತು ಮಾತುಕತೆ ಮೂಲಕ ಮಾರ್ಗೋಪಾಯ ಕಂಡುಕೊಳ್ಳುವ ಪ್ರಯತ್ನಕ್ಕೆ ವಿಶ್ವದ ಬಲಾಢ್ಯ ರಾಷ್ಟ್ರಗಳು ಸಮ್ಮತಿಸಿವೆ. ಆದರೆ, ಹೊಸ ಸುತ್ತಿನ ಮಾತುಕತೆಯು ಎಲ್ಲಿ ಮತ್ತು ಯಾವಾಗ ನಡೆಯಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ಮಧ್ಯೆ, ಇರಾನ್ ಕೂಡ ತನ್ನ ಪರಮಾಣು ಘಟಕಗಳಿಗೆ ವಿಶ್ವಸಂಸ್ಥೆ ಪರಿವೀಕ್ಷಕರಿಗೆ ಭೇಟಿ ನೀಡಲು ಅವಕಾಶ ಮಾಡಿಕೊಡುವುದಾಗಿ ಹೇಳಿದೆ.  ಈ ಹಿಂದೆ ಇರಾನ್‌ಗೆ ಭೇಟಿ ನೀಡಿದ್ದ ಪರಿವೀಕ್ಷಕರ ತಂಡಕ್ಕೆ ಕೆಲವು ಪರಮಾಣು ಘಟಕಗಳಿಗೆ ಭೇಟಿ ನಿರಾಕರಿಸಲಾಗಿತ್ತು.ಅಮೆರಿಕ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು, ಅಧ್ಯಕ್ಷ  ಒಬಾಮ ಅವರನ್ನು ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ಈ 2 ಮಹತ್ವದ ಬೆಳವಣಿಗೆಗಳು ನಡೆದಿವೆ. `ಇರಾನ್ ಮೇಲೆ ಸೇನಾ ಕಾರ್ಯಾಚರಣೆಗೆ ಇಳಿಯುವ ಮೊದಲು ರಾಜತಾಂತ್ರಿಕ ಮಾರ್ಗದಲ್ಲೇ ಮಾತುಕತೆ ನಡೆಸಲು ಇನ್ನೂ ಅವಕಾಶ ಇದೆ. ಇರಾನನ್ನು  ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂಬುದು ನಮ್ಮ ನೀತಿಯಲ್ಲ. ಬದಲಿಗೆ ಆ ರಾಷ್ಟ್ರವು ಅಣ್ವಸ್ತ್ರ ಹೊಂದುವುದಕ್ಕೆ ನಮ್ಮ ವಿರೋಧ ಇದೆ~ ಎಂದು ಬರಾಕ್ ಒಬಾಮ ತಿಳಿಸಿದ್ದಾರೆ.ವಿಶ್ವಸಂಸ್ಥೆ ಭದ್ರತಾ ಮಂಡಳಿ ಮತ್ತು ಜರ್ಮನಿಯು ಇರಾನ್ ಜೊತೆಗೆ ಹೊಸದಾಗಿ ಮಾತುಕತೆ ನಡೆಸಲು ಒಪ್ಪಿವೆ ಎಂದು ಐರೋಪ್ಯ ಒಕ್ಕೂಟದ ವಿದೇಶಾಂಗ ನೀತಿ ವಿಭಾಗದ ಮುಖ್ಯಸ್ಥ ಕ್ಯಾಥರಿನ್ ಆ್ಯಸ್ಟನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸುಮಾರು ಒಂದು ವರ್ಷದಿಂದೀಚೆಗೆ ಇರಾನ್ ಜೊತೆಗೆ ವಿಶ್ವದ ಬಲಾಢ್ಯ ರಾಷ್ಟ್ರಗಳ ಸಂಬಂಧ ಹಳಸಿತ್ತು. ಇರಾನ್ ಸಂವರ್ಧಿತ ಯುರೇನಿಯಂ ತಯಾರಿಕಾ ಘಟಕಗಳನ್ನು ಮುಚ್ಚುವಂತೆ ಬಲಾಢ್ಯ ರಾಷ್ಟ್ರಗಳು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಆ ರಾಷ್ಟ್ರದೊಂದಿಗೆ ಮಾತುಕತೆ ಕೂಡ ಸ್ಥಗಿತಗೊಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.