ಮಂಗಳವಾರ, ಏಪ್ರಿಲ್ 13, 2021
28 °C

ಇರುವುದನ್ನು ಸರಿಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಳು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವುದನ್ನು ವೈದ್ಯಕೀಯ ಸಚಿವ ಎಸ್. ಎ. ರಾಮದಾಸ್ ಸರ್ಕಾರದ ದೊಡ್ಡ ಸಾಧನೆ ಎಂಬಂತೆ ಘೋಷಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲುಎಚ್‌ಒ) ಮಾನದಂಡದ ಪ್ರಕಾರ 1000 ಜನಸಂಖ್ಯೆಗೆ ಒಬ್ಬ ವೈದ್ಯರು ಇರಬೇಕು. ಆದರೆ ನಮ್ಮ ದೇಶದಲ್ಲಿ 2000 ಜನಸಂಖ್ಯೆಗೆ ಒಬ್ಬ ವೈದ್ಯರಿದ್ದಾರೆ.ಕರ್ನಾಟಕದ ಸ್ಥಿತಿ ಇದಕ್ಕಿಂತ ಭಿನ್ನ ಇಲ್ಲ. ಇವರಲ್ಲಿಯೂ ಹೆಚ್ಚಿನವರು ದುಬಾರಿ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಖಾಸಗಿ ವೈದ್ಯರು. ಕಡಿಮೆ ವೆಚ್ಚದ ಮತ್ತು ಉತ್ತಮ ಆರೋಗ್ಯ ಸೇವೆ  ಬಡವರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಂದ ದೂರವೇ ಉಳಿದಿದೆ.ಈ ಕೊರತೆಯನ್ನು ತುಂಬಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರ ಹಲವಾರು ಸಮಿತಿಗಳನ್ನು ನೇಮಿಸಿ ವರದಿಗಳನ್ನೂ ಪಡೆದುಕೊಂಡಿದೆ. 2028ರ ಹೊತ್ತಿಗೆ ಡಬ್ಲುಎಚ್‌ಒ ಮಾನದಂಡವನ್ನು ತಲುಪುವುದು ಸರ್ಕಾರದ ಗುರಿ. ಕಳೆದೆರಡು ಪಂಚವಾರ್ಷಿಕ ಯೋಜನೆಗಳು ಕೂಡಾ ಹೆಚ್ಚಿನ ಸಂಖ್ಯೆಯ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಸಲಹೆ ನೀಡಿವೆ.ಕರ್ನಾಟಕದ ಸ್ಥಿತಿ ಭಿನ್ನವಾಗಿದೆ.  ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದರೂ ವೈದ್ಯಕೀಯ ಕಾಲೇಜುಗಳು ಮಾತ್ರ ಸಾಕಷ್ಟು ಸಂಖ್ಯೆಯಲ್ಲಿವೆ. ಕನಿಷ್ಠ 25 ಲಕ್ಷ ಜನಸಂಖ್ಯೆಗೆ ಒಂದು ವೈದ್ಯಕೀಯ ಕಾಲೇಜು ಇರಬೇಕು ಎನ್ನುವುದು ಯೋಜನಾ ಆಯೋಗದ ತಜ್ಞರ ತಂಡದ ಶಿಫಾರಸು.ಆದರೆ ಕರ್ನಾಟಕದಲ್ಲಿ ಹದಿನಾರು ಲಕ್ಷ ಜನಸಂಖ್ಯೆಗೆ ಒಂದು ವೈದ್ಯಕೀಯ ಕಾಲೇಜು ಇದೆ. ಈಗ ಇರುವ 41 ಕಾಲೇಜುಗಳಿಂದ ಪ್ರತಿವರ್ಷ ಸುಮಾರು ಆರು ಸಾವಿರ ವೈದ್ಯರು ಹೊರಬರುತ್ತಿದ್ದಾರೆ. ಹೀಗಿದ್ದಾಗ ರಾಜ್ಯಕ್ಕೆ ಇನ್ನಷ್ಟು ವೈದ್ಯಕೀಯ ಕಾಲೇಜುಗಳ ಅಗತ್ಯ ಇದೆಯೇ?ಐದು ವರ್ಷಗಳ ಹಿಂದೆ ಆಗಿನ ಸರ್ಕಾರ ಹೊಸದಾಗಿ ಹತ್ತು ವೈದ್ಯಕೀಯ ಕಾಲೇಜುಗಳನ್ನು ಅತೀ ಉತ್ಸಾಹದಿಂದ ಪ್ರಾರಂಭಿಸಿತ್ತು. ಆದರೆ ಈ ಕಾಲೇಜುಗಳ ಪರಿಶೀಲನೆ ನಡೆಸಿದ ಭಾರತೀಯ ವೈದ್ಯಕೀಯ ಶಿಕ್ಷಣ ಮಂಡಳಿ ಮೂಲಸೌಲಭ್ಯ ಮತ್ತು ಪ್ರಾಧ್ಯಾಪಕರ ಕೊರತೆಯ ಕಾರಣ ನೀಡಿ ಅವುಗಳ ಮಾನ್ಯತೆಯನ್ನೇ ರದ್ದುಪಡಿಸಲು ಶಿಫಾರಸು ಮಾಡಿತ್ತು. ಅದರ ನಂತರದ ದಿನಗಳಲ್ಲಿಯೂ ಪರಿಸ್ಥಿತಿ ಸುಧಾರಿಸಿಲ್ಲ.

 

ಕಟ್ಟಡಗಳು, ತಜ್ಞರು, ಪ್ರಾಧ್ಯಾಪಕರು ಮತ್ತು ಆಸ್ಪತ್ರೆಗಳ ಕೊರತೆ ಈಗಲೂ ಇದೆ.  ಅತ್ಯವಸರದಿಂದ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡಲು ಹೊರಟಿರುವ ವೈದ್ಯಕೀಯ ಸಚಿವರು ಈ ಬಗ್ಗೆ ಯೋಚನೆ ಮಾಡಿದ್ದಾರೆಯೇ? ಹೊಸ ಕಾಲೇಜುಗಳಿಗೆ ಜಮೀನನ್ನು ಒದಗಿಸಬಹುದು, ಕಟ್ಟಡಗಳನ್ನೂ ಕಟ್ಟಿಬಿಡಬಹುದು.ಆದರೆ ಪ್ರಾಧ್ಯಾಪಕರನ್ನು ಎಲ್ಲಿಂದ ತರುತ್ತೀರಿ? ಖಾಸಗಿಯಾಗಿ ಕೈತುಂಬಾ ಸಂಪಾದನೆ ಮಾಡುತ್ತಿರುವ ವೈದ್ಯರು ಅಷ್ಟೇನು ದುಡ್ಡಿಲ್ಲದ ಪ್ರಾಧ್ಯಾಪಕ ವೃತ್ತಿಯನ್ನು ಇಷ್ಟಪಡುತ್ತಿಲ್ಲ. ಇದರಿಂದಾಗಿ ಬಹಳಷ್ಟು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನುಭವಿ ಪ್ರಾಧ್ಯಾಪಕರ ಕೊರತೆ ಇದೆ.

 

ಶಿಕ್ಷಣದ ಗುಣಮಟ್ಟದ ಮೇಲೆ ಇದು ಪರಿಣಾಮ ಬೀರುತ್ತಿದೆ. ಸರ್ಕಾರ ಹೊಸ ಕಾಲೇಜುಗಳನ್ನು ಸ್ಥಾಪಿಸುವ ಮೊದಲು ಈಗಿರುವ ಕಾಲೇಜುಗಳಿಗೆ ಮೂಲಸೌಕರ್ಯ ಮತ್ತು ಉತ್ತಮ ಬೋಧನಾ ಸಿಬ್ಬಂದಿಯನ್ನು ಒದಗಿಸುವ ಕೆಲಸ ಮಾಡಬೇಕು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.