ಭಾನುವಾರ, ಜೂಲೈ 12, 2020
23 °C

ಇರ್ವತ್ತೂರಿನಲ್ಲಿ ಅನಂತ ನೆನಪು...

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

ಇರ್ವತ್ತೂರಿನಲ್ಲಿ ಅನಂತ ನೆನಪು...

ಕಾರ್ಕಳ ಇರ್ವತ್ತೂರು ಪೈ ಕುಟುಂಬ ಬಹಳ ದೊಡ್ಡ ಕುಟುಂಬ. ಮೂಲ ಕಸುಬು ಕೃಷಿ. ಮೂಲಮನೆ ಕೊಂಕಣೇರುಬೆಟ್ಟುವಿನಲ್ಲಿದೆ. ಅಂಕಲ್ ಪೈ ಹುಟ್ಟಿದ್ದು ಇದೇ ಮನೆಯಲ್ಲಿ. ಕುಟುಂಬ ವಿಸ್ತಾರವಾದಂತೆ ಹಿಡುವಳಿ ಸಾಲದೇ ಬಹುತೇಕ ಎಲ್ಲರೂ ಉದ್ಯೋಗ ಅರಸಿ ಮುಂಬೈಗೆ ಪ್ರಯಾಣ ಬೆಳೆಸಿದರು. ಲಕ್ಷ್ಮಣ ಪೈ ಕುಟುಂಬದ ಹಿರಿಯರು. ಅವರ ತಮ್ಮ ವೆಂಕಟರಾಯ ಪೈ. ಅವರ ಮಗನೇ ‘ಅಮರಚಿತ್ರ ಕಥಾ’ದ ರೂವಾರಿ ಅನಂತ ಪೈ. ಅನಂತ ಪೈಗೆ ಇಬ್ಬರು ಸಹೋದರಿಯರು. ಅವರಲ್ಲಿ ಒಬ್ಬರು ಈಗಲೂ ಮುಂಬಯಿಯಲಿದ್ದಾರೆ.ಸೆ.17, 1929ರಲ್ಲಿ ಕಾರ್ಕಳ ಇರ್ವತ್ತೂರಿನಲ್ಲಿ ಜನಿಸಿದ್ದ ಅನಂತ ಪೈ ಎರಡನೇ ವಯಸ್ಸಿನಲ್ಲಿಯೇ ಅಪ್ಪ-ಅಮ್ಮನನ್ನು ಕಳೆದುಕೊಂಡರು. ಕೆಲ ಕಾಲ ತಮ್ಮ ಮಾವನ ಮನೆಯಲ್ಲಿ ವಾಸಮಾಡಿ ಕಾರ್ಕಳದಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದರು. ಕರಾವಳಿಯ ಬಹುತೇಕರು ಉದ್ಯೋಗ ನಿಮಿತ್ತ ಮುಂಬಯಿ ದಾರಿ ಹಿಡಿಯುತ್ತಿದ್ದ ಆ ದಿನಗಳಲ್ಲಿ, ಇವರು ಕೂಡ ತಮ್ಮ ಸಂಬಂಧಿಗಳೊಂದಿಗೆ ಮುಂಬಯಿಗೆ ತೆರಳಿದರು.‘ಅನಂತ ಪೈ ಮಕ್ಕಳಿಗೆಲ್ಲ ಪ್ರೀತಿಯ ‘ಅಂಕಲ್ ಪೈ’ ಆಗಿದ್ದರು. ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು ಕೋಲ್ಕತ್ತಾದಲ್ಲಿ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಕಾರಣಾಂತರದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಉದ್ಯೋಗ ಬಿಟ್ಟರು. ಸೂಟು, ಬೂಟು ತ್ಯಜಿಸಿದರು. ಜುಬ್ಬಾ, ಪೈಜಾಮ ಹಾಕಲು ಶುರು ಮಾಡಿದ್ದು ಅಷ್ಟೇ ಅಲ್ಲ, ವಿನೋಬಾ ಭಾವೆಯವರ ‘ಸರ್ವೋದಯ’ ಚಳವಳಿಯಲ್ಲಿ ಸೇರ್ಪಡೆಯಾದರು. ಕೊನೆಗೆ ಅವರ ಕಸಿನ್ ಬ್ರದರ್ ಐ.ಸದಾನಂದ ಪೈಯವರ ಸಹಕಾರ ಪ್ರೋತ್ಸಾಹದಿಂದ ದಿಲ್ಲಿಯಲ್ಲಿ 1954ರಲ್ಲಿ ‘ಮಾನವ’ ಎಂಬ ಪ್ರಕಾಶನ ಸಂಸ್ಥೆ ಸ್ಥಾಪಿಸಿದರು. ಹಾಗೇ ಆಧ್ಯಾತ್ಮಿಕ ಕೃತಿಗಳ ಪ್ರಕಟಣೆ ಪ್ರಾರಂಭ ಮಾಡಿದರು...’ಅಮರ ಚಿತ್ರಕಥೆಗಳ ಮೂಲಕ ಅಮರರಾದ ತಮ್ಮ ಚಿಕ್ಕಪ್ಪ ಅನಂತ ಪೈ (ನಿಧನ: ಫೆ.25) ಅವರನ್ನು ನೆನಪಿಸಿಕೊಂಡು ಹೀಗೆ ಮಾತನಾಡಿದವರು ಕಾರ್ಕಳದ ಐ.ರವೀಂದ್ರನಾಥ್ ಪೈ. ಕಾರ್ಕಳದ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಮುಖ್ಯ ಪ್ರಬಂಧಕರಾಗಿರುವ ಅವರು ಅಂಕಲ್ ಪೈ ಕುಟುಂಬದ ಸದಸ್ಯರು.ಇರ್ವತ್ತೂರು ಲಕ್ಷ್ಮಣ ಪೈ, ಅಂಕಲ್‌ರ ದೊಡ್ಡಪ್ಪ ಹಾಗೂ ಇರ್ವತ್ತೂರು ಪೈ ಕುಟುಂಬದ ಹಿರಿಯರು. ಲಕ್ಷ್ಮಣ ಪೈ ಅಲ್ಲಿಂದ ಕಾರ್ಕಳದ ಸಾಲ್ಮರಕ್ಕೆ ಬಂದು ಅಲ್ಲಿ ಮನೆಮಾಡಿದರು. ಆಗ ಬ್ರಿಟಿಷರು ಆಳುತ್ತಿದ್ದ ಕಾಲ. ಇವರ ಮನೆಯ ಬಳಿ ಟೋಲ್‌ಗೇಟ್ ಇತ್ತು. ಜತೆಗೊಂದು ಪೋಸ್ಟ್‌ಆಫೀಸು. ಹೀಗಾಗಿ ಇವೆರಡನ್ನೂ ಅವರು ನಿಭಾಯಿಸುತ್ತಿದರು. ಅಪ್ಪ-ಅಮ್ಮ ತೀರಿಕೊಂಡ ಮೇಲೆ ಕೆಲವು ವರ್ಷ ಅಂಕಲ್ ಪೈ ದೊಡ್ಡಪ್ಪನ ಮನೆಯಲ್ಲಿ ವಾಸ ಮಾಡಿದರು. ಈ ಮನೆ ಈಗಲೂ ಇಲ್ಲಿದೆ. ಲಕ್ಷ್ಮಣ ಪೈ ಪುತ್ರ ದೇವರಾಯ ಪೈ ಹಾಗೂ ಅವರ ಪತ್ನಿ ರತ್ನಾ ಪೈ (78) ಈಗ ಅವರ ಕುಟುಂಬದಲ್ಲಿನ ಹಿರಿಯ ವ್ಯಕ್ತಿ. ಅವರ ಮಗ ರವೀಂದ್ರನಾಥ್ ಪೈ ಈಗ ನಮ್ಮೊಂದಿಗೆ ‘ಅಂಕಲ್ ಪೈ’ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡವರು.ಕಾರ್ಕಳದಿಂದ ತೆರಳಿದ ಮೇಲೆ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಮುಂಬಯಿಯ ಮಾಹಿಮ್‌ನ ‘ಓರಿಯಂಟ್ ಸ್ಕೂಲ್’ನಲ್ಲಿ ಅನಂತ ಪೈ ಓದಿದರು. ಮುಂಬೈ ವಿವಿಯಲ್ಲಿ ಕೆಮಿಸ್ಟ್ರಿ, ಫಿಸಿಕ್ಸ್ ಮತ್ತು ಕೆಮಿಕಲ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಕೋಲ್ಕತ್ತಾದಲ್ಲಿ ಕೆಲ ಕಾಲ ಕೆಲಸವನ್ನೂ ಮಾಡಿದ್ದರು. ‘ನಮ್ಮೆಲ್ಲರ ಮನೆ ಭಾಷೆ ಕೊಂಕಣಿ. ಅಂಕಲ್ ಪೈಗೆ ಕಥೆ ಹೇಳುವ ಕ್ರಮ ಅಭ್ಯಾಸವಾಗಲು ನಮ್ಮ ಮನೆಯೇ ಕಾರಣ. ಆ ಕಾಲದಲ್ಲಿ ನಮ್ಮ ಅಜ್ಜನ ಸಹೋದರಿಯೊ ಬ್ಬರು ಅದ್ಭುತವಾಗಿ ಪೌರಾಣಿಕ, ಐತಿಹಾಸಿಕ ಕಥೆಗಳನ್ನು ಹೇಳುತ್ತಿದ್ದರು. ಬಹುಶಃ ಅದು ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿರಬಹುದು. ಸರಳವಾಗಿ ಕಥೆ ಹೇಳುವ ವಿಧಾನ ಅವರಿಗೆ ಬಲು ಪ್ರಿಯ. ಕನ್ನಡ, ಇಂಗ್ಲಿಷ್‌ನೊಂದಿಗೆ ಹಿಂದಿಯಲ್ಲಿಯೂ ಪೈ ಅಂಕಲ್‌ಗೆ ಪ್ರಾವೀಣ್ಯ ಇತ್ತು. ಅವರು ಪ್ರಾರಂಭದಲ್ಲಿ ಕನ್ನಡದಲ್ಲಿಯೂ ಬರೆದಿದ್ದರು.’

 ತಮ್ಮ ಬಳಿ ಹಿಂದಿ ಕಲಿಯಲು ಬಂದ ಲತಾ ಮೀರ್‌ಚಂದಾನಿ ಎಂಬವರನ್ನು ಇಷ್ಟಪಟ್ಟು ಅಂಕಲ್ ಪೈ ಮದುವೆಯಾದರು.ಬಳಿಕ ಪತ್ನಿಯ ಸಹಕಾರದಿಂದ ಅವರ ಚಿಕ್ಕಪ್ಪ ಮೀರ್ ಚಂದಾನಿಯವರ ‘ಇಂಡಿಯಾ ಬುಕ್‌ಹೋಮ್’ಗೆ ಪ್ರವೇಶ ಪಡೆದರು. ಅಲ್ಲಿಂದ ಪುಟಾಣಿಗಳಿಗಾಗಿ ಕಾರ್ಟೂನ್ ಹಾಗೂ ಧಾರ್ಮಿಕ ಕೃತಿಗಳ ವಿಭಾಗ ಪ್ರಾರಂಭ ಮಾಡಿದರು. 1969ರಲ್ಲಿ ‘ರಂಗ ರೇಖಾ’ ಫೀಚರ್ಸ್‌- ಮೊದಲ ಕಾಮಿಕ್ ಮತ್ತು ಕಾರ್ಟೂನ್ ಸಿಂಡಿಕೇಟ್ ಪ್ರಾರಂಭ ಮಾಡಿದರು. ಮೊದಲ ಕೃತಿಯಾಗಿ ‘ಕೃಷ್ಣ’ ಮೂಡಿಬಂತು. ಆ ಕೃತಿ ಜಗತ್ತಿನಲ್ಲಿಯೇ ಅತ್ಯಧಿಕ ಪ್ರಸಾರವಾಗಿದ್ದು ಇತಿಹಾಸ. 1980ರಲ್ಲಿ ಅವರು ಮಕ್ಕಳ ಪತ್ರಿಕೆ ‘ಟಿಂಕಲ್’ ಪ್ರಾರಂಭಿಸಿದರು’ ಎಂದು ರವೀಂದ್ರನಾಥರು ನೆನಪಿಸಿಕೊಂಡರು.‘ಅಂಕಲ್ ಕೊನೆಯದಾಗಿ ಬಂದಿದ್ದು ಈಗ ಸುಮಾರು 10-15 ವರ್ಷಗಳ ಹಿಂದೆ. ಇಲ್ಲಿಗೆ ಬಂದಾಗಲೆಲ್ಲ ಎಲ್ಲ ಕಡೆಯಿಂದ ಮಕ್ಕಳನ್ನು ಕರೆಯಿಸಿ ಸಂತೋಷ ಪಡುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಆದರೆ ಮಕ್ಕಳು ಅಂದ್ರೆ ಅಂಕಲ್‌ಗೆ ತುಂಬಾ ಇಷ್ಟ. ಅವರು ಒಬ್ಬ ಉತ್ತಮ ಕಾರ್ಟೂನಿಸ್ಟ್ ಕೂಡ. ಭಾರಿ ಶಿಸ್ತಿನ ಮನುಷ್ಯ. ಸಮಯ ಪ್ರಜ್ಞೆ ಬಹಳ. ಯಾವುದೇ ಸಭೆ, ಸಮಾರಂಭಕ್ಕೆ ಆಮಂತ್ರಿಸಿದಾಗ ಸಮಯ ಪಾಲನೆ ಮಾಡದೇ ಇದ್ದರೆ ಅಲ್ಲಿಂದ ಎದ್ದು ನಡೆಯುವಂತಹ ನಿಷ್ಠುರ ವ್ಯಕ್ತಿತ್ವ ಅವರದ್ದಾಗಿತ್ತು’ ಎನ್ನುತ್ತಾರೆ.ತಂದೆ-ತಾಯಿಯನ್ನು ಬಾಲ್ಯದಲ್ಲಿಯೇ ಕಳೆದುಕೊಂಡಿದ್ದ ಅವರು ಪ್ರಾಥಮಿಕ ಅಭ್ಯಾಸವನ್ನು ಕಾರ್ಕಳದಲ್ಲಿ ಪೂರೈಸಿ ಬಳಿಕ ಸುಮಾರು 12ನೇ ವಯಸ್ಸಿಗೆ ಇಲ್ಲಿಂದ ಮುಂಬೈಗೆ ಹೋಗಿದ್ದರು. ನಂತರ ಅಲ್ಲಿಯೇ ಸಂಪೂರ್ಣ ಜೀವನ ಕಳೆದರು. ಅಪರೂಪಕ್ಕೆ ಕಾರ್ಕಳಕ್ಕೆ ಬರುತ್ತಿದ್ದರು. ಬಂದಾಗ ನಮ್ಮ ಮನೆಯಲ್ಲಿ ವಾಸ ಮಾಡುತ್ತಿದ್ದರು ಎಂದು ಅವರನ್ನು ನೆನಪಿಸಿಕೊಂಡವರು ಕಾರ್ಕಳದ ಮೂಲ ಮನೆಯಲ್ಲಿ ವಾಸವಾಗಿರುವ ರತ್ನಾ.ಡಿ.ಪೈ. ‘ನಮ್ಮ ಚಿಕ್ಕಪ್ಪ ಕಾಮಿಕ್ಸ್ ಕ್ಷೇತ್ರದಲ್ಲಿ ಇಷ್ಟೊಂದು ಸಾಧನೆ ಮಾಡಿದ್ರು ಸಿಗಬೇಕಾದ ದೊಡ್ಡ ಪ್ರಶಸ್ತಿಗಳು ಅವರಿಗೆ ಬರಲಿಲ್ಲ. ಕಾರಣ, ಅವರು ಮುಂಬಯಿಯಲ್ಲಿ ಬಾಳ ಠಾಕ್ರೆಯವರಿಗೆ ಆಪ್ತಮಿತ್ರರಾಗಿದ್ದರು. ಹೀಗಾಗಿ ಸರ್ಕಾರದಿಂದ ಅವರಿಗೆ ಯಾವುದೇ ದೊಡ್ಡ ಪ್ರಶಸ್ತಿಯೂ ಸಿಗಲಿಲ್ಲ’ ಎಂದು ರವೀಂದ್ರನಾಥ್ ಹೇಳುತ್ತಾರೆ.ಪೈ ಕುಟುಂಬದ ಈಗಿನ ತಲೆಮಾರಿನ ಮಕ್ಕಳಿಗೆ ಕೂಡ ಪೈಗಳ ಅಮರ ಚಿತ್ರಕತೆ ತುಂಬಾ ಇಷ್ಟ. ಆದರೆ ಮುಂಬಯಿಯಲ್ಲಿ ಅಂಕಲ್ ಪೈ ಇರುತ್ತಿದ್ದ ಕಾರಣ ಅಷ್ಟಾಗಿ ಅವರ ಪರಿಚಯ ಮಾತ್ರ ಮಕ್ಕಳಿಗೆ ಸಿಗಲಿಲ್ಲ. ಅವರು ಊರಿಗೆ ಬರುವುದು ಕೂಡ ಕಡಿಮೆಯಾಗಿದ್ದರಿಂದ ಈ ಭಾಗದ ಪೈ ಕುಟುಂಬಗಳಿಗೆ ಅವರ ಒಡನಾಟ ಕಡಿಮೆ. ಹೀಗಾಗಿ ಅವರೊಂದಿಗೆ ಮಾತುಕತೆಯಿಟ್ಟುಕೊಂಡವರು ಇಲ್ಲಿ ವಿರಳ. ಒಂದರ್ಥದಲ್ಲಿ ಅಂಕಲ್ ಪೈ ನಿಧನರಾದ ಬಳಿಕವೇ ಈ ಪರಿಸರದಲ್ಲಿ ಸುದ್ದಿಯಾದದ್ದು ಹೆಚ್ಚು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.