ಶನಿವಾರ, ಮೇ 8, 2021
27 °C

ಇಲ್ಲಿ ನೀರಿನ ವ್ಯಾಪಾರ ಬಲು ಜೋರು!

ಪ್ರಜಾವಾಣಿ ವಾರ್ತೆ / ವಿಶೇಷ ವರದಿ / ಮಹದೇವ್ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

ಸಂತೇಮರಹಳ್ಳಿ: ಗ್ರಾಮದಾದ್ಯಂತ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿ ತಲೆದೋರಿದೆ. ಗ್ರಾಮದಲ್ಲಿ ಈಗ ಲಭ್ಯವಿರುವ ಕೊಳವೆಬಾವಿಗಳಲ್ಲೂ ಅಂತರ್ಜಲ ಮಟ್ಟ ಕುಸಿದಿದೆ. ಪರಿಣಾಮ ದಿನನಿತ್ಯ ಹಣ ಕೊಟ್ಟು ನೀರು ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಬೇಸಿಗೆ ಆರಂಭದಿಂದಲೇ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತ ಬಂತು. ಬೇಸಿಗೆ ಮುಗಿಯುವವರೆಗೂ ಹನಿ ನೀರಿಗೂ ಪರದಾಡುವಂತಾಯಿತು. ಈಗ ಮಳೆಗಾಲ ಆರಂಭವಾದರೂ ನೀರಿಗೆ ಪರದಾಟ ತಪ್ಪಿಲ್ಲ. ಹೋಬಳಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಮಳೆ ಸುರಿದಿಲ್ಲ. ಇದರಿಂದ ಅಂತರ್ಜಲದ ಪ್ರಮಾಣ ಏರಿಕೆಯಾಗಿಲ್ಲ. ಗ್ರಾಮದ ಯಾವುದೇ ಜಲಮೂಲದಲ್ಲೂ ನೀರು ಸಿಗುತ್ತಿಲ್ಲ. 500 ಅಡಿವರೆಗೆ ಕೊಳವೆಬಾವಿ ಕೊರೆದರೂ ನೀರು ದೊರೆಯುತ್ತಿಲ್ಲ. ಇದರಿಂದ ಗ್ರಾಮಸ್ಥರು ತತ್ತರಿಸಿಹೋಗಿದ್ದಾರೆ.ಗ್ರಾಮದಲ್ಲಿ 9.5 ಸಾವಿರ ಜನಸಂಖ್ಯೆ ಇದೆ. ಇರುವ 3 ಓವರ್‌ಹೆಡ್ ಟ್ಯಾಂಕ್‌ಗೆ 3 ಕೊಳವೆಬಾವಿಗಳಿಂದ ನೀರು ತುಂಬಿಸಲಾಗುತ್ತಿತ್ತು. 1 ಕೊಳವೆಬಾವಿ ಅಂತರ್ಜಲದ ಸಮಸ್ಯೆಯಿಂದ ಬತ್ತಿಹೋಗಿದೆ. ಬಸ್‌ನಿಲ್ದಾಣ, ಜನತಾ ಬಡಾವಣೆ, ತಾಲ್ಲೂಕು ಪಂಚಾಯಿತಿ ವಸತಿಗೃಹ, ಪೊಲೀಸ್ ವಸತಿಗೃಹಗಳಿಗೆ ಸೇರಿದ ನಿವಾಸಿಗಳಿಗೆ ಸಂಪೂರ್ಣವಾಗಿ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ಉಳಿದ 2 ಕೊಳವೆಬಾವಿಗಳಲ್ಲಿ ಸಾಧಾರಣವಾಗಿ ನೀರು ತುಂಬಿಸಲಾಗುತ್ತಿದ್ದರೂ ನಿವಾಸಿಗಳಿಗೆ ಅಗತ್ಯದಷ್ಟು ನೀರು ದೊರೆಯುತ್ತಿಲ್ಲ. ಕಿರು ನೀರು ಸರಬರಾಜು ಘಟಕಕ್ಕೆ ಸೇರಿದ 16 ತೊಂಬೆಗಳಿವೆ. 5 ಕೊಳವೆಬಾವಿಗಳಲ್ಲಿ ಈ ತೊಂಬೆಗಳಿಗೆ ನೀರು ತುಂಬಿಸಲಾಗುತ್ತಿತ್ತು. 2 ಕೊಳವೆಬಾವಿಗಳಲ್ಲಿ ನೀರು ಬತ್ತಿಹೋಗಿದೆ. ಇದರಿಂದ 6 ತೊಂಬೆಗಳು ನೀರು ಕಾಣದೇ ಬಾಯಾರಿ ನಿಂತಿವೆ. ಉಳಿದ 3 ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ 10 ತೊಂಬೆಗಳಿಗೆ ಸಾಧಾರಣವಾಗಿ ನೀರು ತುಂಬಿಸಲಾಗುತ್ತಿದೆ.31 ಕೈಪಂಪುಗಳೂ ವ್ಯರ್ಥ

ಗ್ರಾಮದಲ್ಲಿ ಅಳವಡಿಸಿರುವ 31 ಕೈಪಂಪುಗಳಲ್ಲಿ 17 ಮಾತ್ರ ಉಪಯೋಗಕ್ಕೆ ಬರುತ್ತಿವೆ. ಇವುಗಳಲ್ಲೂ ನೀರು ಪಡೆಯಲು ಹರಸಹಾಸ ಪಡೆಯಬೇಕಾಗಿದೆ. ಇದರಿಂದ ಗೂಡ್ಸ್ ಆಟೊಗಳು ಈಗ ನೀರು ಸರಬರಾಜು ಮಾಡಲು ಉಪಯೋಗವಾಗುತ್ತಿವೆ.ತೋಟದ ಪಂಪ್‌ಸೆಟ್‌ಗಳಿಂದ ಗೂಡ್ಸ್ ರಿಕ್ಷಾಗಳಲ್ಲಿ  ನೀರು ತುಂಬಿಕೊಂಡು ಮನೆ ಮನೆಗಳಿಗೆ ಸಾಗಿಸಲಾಗುತ್ತಿದೆ. 1 ಸಾವಿರ ಲೀಟರ್ ನೀರಿಗೆ ಬಾಡಿಗೆ ಸೇರಿ ರೂ 150 ಕೊಡಬೇಕು. ಇದರಲ್ಲಿ ತೋಟದ ಮಾಲೀಕರಿಗೆ ರೂ 50 ಪ್ರತಿ ಟ್ಯಾಂಕಿಗೆ ಸಿಗುತ್ತದೆ. ಗ್ರಾಮದಲ್ಲಿ ಈಗ ನೀರು ಮಾರಾಟವೇ ದೊಡ್ಡ ವ್ಯಾಪಾರದಂತಾಗಿದೆ.ತಿ.ನರಸೀಪುರದಿಂದ ಚಾಮರಾಜನಗರಕ್ಕೆ ಹಾದು ಹೋಗಿರುವ ಕಾವೇರಿ ಮುಖ್ಯ ಪೈಪ್‌ಲೈನಿನಿಂದ ಸೋರಿಕೆಯಾದ ನೀರನ್ನು ಮನೆ ಕಟ್ಟುವ ಮತ್ತು ಇತರ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಕೆಲಸಕ್ಕೂ ರಿಕ್ಷಾಗಳನ್ನು ಬಳಸಲಾಗುತ್ತಿದೆ.ಈಗ ಶಾಲೆ, ಕಾಲೆಜುಗಳು ಆರಂಭವಾಗಿವೆ. ನೀರಿನ ಸಮಸ್ಯೆ ಅಲ್ಲೂ ತಲೆದೋರಲಿದೆ. ಮಕ್ಕಳು, ಮಹಿಳೆಯರಾದಿಯಾಗಿ ಮನೆಯ ಎಲ್ಲ ಸದಸ್ಯರೂ ನೀರಿಗಾಗಿ ಬಕಪಕ್ಷಿಯಂತೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂಬುದು ಗ್ರಾಮಸ್ಥರ ದೂರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.